ಬಾದಾಮಿ ಬನಶಂಕರಿ…..
ಉತ್ತರ ಕರ್ನಾಟಕದ ಪ್ರಸಿದ್ಧ ದೇವಾಲಯ. ಈ ದೇವಸ್ಥಾನವು ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲೂಕಿನ ಚೋಳಚಗುಡ್ಡದಲ್ಲಿದೆ. ಬನಶಂಕರಿ ದೇವಿಯು ಪಾರ್ವತಿ ರೂಪ ಹಾಗೂ ಶಕ್ತಿ ಪೀಠ.
ಪುರಾಣಗಳ ಪ್ರಕಾರ ಹಿಂದೆ ಈ ಕ್ಷೇತ್ರವು ತಿಲಕಾರಣ್ಯ ಎಂಬ ಘೋರ ಅರಣ್ಯ ಪ್ರದೇಶವಾಗಿತ್ತಂತೆ. ಇಲ್ಲಿ ದುರ್ಗಾಮಾಸುರ ಎಂಬ ರಾಕ್ಷಸ ಇಲ್ಲಿರುವ ಋಷಿ ಮುನಿಗಳಿಗೆ, ಜನರಿಗೆ ತುಂಬಾ ತೊಂದ್ರೆ ಮಾಡುತ್ತಿದ್ದನಂತೆ. ಋಷಿಗಳು ತಮ್ಮನ್ನು ರಕ್ಷಿಸಿಕೊಳ್ಳಲು ಯಜ್ಞ ಮಾಡುವಾಗ….. ಸರಸ್ವತಿ. ಲಕ್ಷ್ಮಿ ರೂಪವನ್ನು ಏಕೀಕರಿಸಿಕೊಂಡು ಬನಶಂಕರಿ ಉದ್ಭವಿಸಿಳಂತೆ. ಮುಂದೆ ರಾಕ್ಷಸನನ್ನು ವಧೆ ಮಾಡಿ ಭಕ್ತರ ಕೋರಿಕೆಯಂತೆ ಇಲ್ಲಿಯೇ ನೆಲಸಿಳಂತೆ.
ಬನಶಂಕರಿಗೆ ಶಾಕಾಂಬರಿ ಕೂಡ ಎನ್ನಲಾಗುತ್ತದೆ ಇದರ ಹಿಂದೆ ಕೂಡ ಸ್ವಾರಸ್ಯಕರ ಕಥೆ ಇದೆ. ಇಲ್ಲಿ ಕ್ಷಾಮ ಉಂಟಾಗಿ ಜನಗಳಿಗೆ ತುಂಬಾ ತೊಂದ್ರೆ ಉಂಟಾಗುತ್ತದೆ. ಆಗ ದೇವಿ ಜನರ ನೀರಿನ ದಾಹ ತೀರಿಸಿ. ತನ್ನ ದೇಹದ ಶಾಖದಿಂದ ತರಕಾರಿ ಸೃಷ್ಟಿಸಿ ಜನರ ಹಸಿವನ್ನು ನೀಗಿಸುತ್ತಾಳಂತೆ. ದೇಹದ ಶಾಖ ದಿಂದ ಆಹಾರ ಸೃಷ್ಟಿಸಿದ ದೇವಿ ಮುಂದೆ ಶಾಕಾಂಬರಿ ಎಂದು ಹೆಸರು ಪಡೆಯುತ್ತಾಳೆ.
ಸಿಂಹವಾಹಿನಿಗೆ ಅನೇಕ ಹೆಸರು. ಇವಳು ಕಲ್ಯಾಣಿ ಚಾಲುಕ್ಯರ ಕುಲದೇವತೆ. ಕಲ್ಯಾಣಿ ಚಾಲುಕ್ಯರ ಮೊದಲನೇ ಅರಸು ಜಗದೇಕ ಮಲ್ಲರು ಕ್ರಿ. ಶ 603ರಲ್ಲಿ ಈ ದೇವಸ್ಥಾನ ಕಟ್ಟಿಸಿ ದೇವಿಯನ್ನು ಪ್ರತಿಷ್ಠಾಪಿಸಿದ್ದರೆಂದು ಇಲ್ಲಿರುವ ಶಾಸನಗಳಿಂದ ತಿಳಿದು ಬರುತ್ತದೆ.
ಈಗ ಇರುವ ದೇವಸ್ಥಾನವನ್ನು ಪರಶುರಾಮ್ ಎನ್ನುವ ಮರಾಠಿ ದಂಡನಾಯಕ ಪುನರನಿರ್ಮಾಣ ಮಾಡಿದ್ದಾರೆ. ದೇವಿ ವಿಗ್ರಹ ಕಪ್ಪು ಶಿಲೆಯಲ್ಲಿದೆ. ದೇವಾಲಯದ ಎದುರಿಗೆ ಹರಿದ್ರಾ ತೀರ್ಥ ಎನ್ನುವ ದೊಡ್ಡ ಹಾಗೂ ಆಕರ್ಷಕ ಕಲ್ಯಾಣಿ ಎಲ್ಲರ ಮನ ಸೆಳೆಯುತ್ತದೆ. ದೇವಿ ರಾಹುಗ್ರಹದ ಪ್ರಿಯ ದೇವತೆ. ಹಾಗಾಗಿ ರಾಹು ಕಾಲದಲ್ಲಿ ನಿಂಬೆಹಣ್ಣಿನ ದೀಪ ಬೆಳಗಿದರೆ ರಾಹು ದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ.
ಬನಶಂಕರಿ ಜಾತ್ರೆ ಬನದ ಹುಣ್ಣಿಮೆಯoದು ನಡೆಯುತ್ತದೆ. ರಥೋತ್ಸವ ಕೂಡ ಜರಗುತ್ತದೆ. ಆ ಸಮಯದಲ್ಲಿ ಪಲ್ಯದ ಹಬ್ಬ ಎಂದು ದೇವಿಗೆ 108 ತರಕಾರಿಗಳಿಂದ ವಿವಿಧ ಖಾದ್ಯ ನೈವೇದ್ಯ ಮಾಡುತ್ತಾರೆ. ಈ ಜಾತ್ರೆಗೆ 200 ವರ್ಷಗಳ ಇತಿಹಾಸವಿದೆ.
ಈ ಜಾತ್ರೆಯ ಇನ್ನೊಂದು ವಿಶೇಷ ಎಂದ್ರೆ ಹರಿದ್ರಾ ತೀರ್ಥದಲ್ಲಿ ನಡೆಯುವ ತೆಪ್ಪೋತ್ಸವ. ಇಲ್ಲಿ ಹರಕೆ ಮಾಡಿಕೊಂಡ ಭಕ್ತರು ತಮ್ಮ ನವಜಾತ ಶಿಶುವನ್ನು ಬಾಳೆದಿಂಡಿ ನಿಂದ ಮಾಡಿದ ತೆಪ್ಪದಲ್ಲಿ ಮಲಗಿಸಿ ಕಲ್ಯಾಣಿ ಪ್ರದಕ್ಷಿಣೆ ಮಾಡಿಸುತ್ತಾರೆ.
ಬಾದಾಮಿ ಬನಶಂಕರಿ ಜಾತ್ರೆ ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆ. ದೇವಿ ಶರಣು ಬಂದ ಭಕ್ತರ ಇಷ್ಟಾರ್ಥ ಈಡೇರಿಸುತ್ತಾಳೆ ಎಂಬ ನಂಬಿಕೆ ಶ್ರದ್ಧೆ ಇದೆ. ನವರಾತ್ರಿಯ ಒಂಬತ್ತು ದಿನ ವಿವಿಧ ಅಲಂಕಾರ ದೊಂದಿಗೆ ದೇವಿಯನ್ನು ಪೂಜಿಸುತ್ತಾರೆ. ದೇವಿಯ ಕೃಪಾಕಟಾಕ್ಷ ಎಲ್ಲರಿಗೂ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.
ಇಲ್ಲಿ ದೇವಸ್ಥಾನದ ಹೊರೆಗೆ ಮಾರುವ ಜೋಳದ ರೊಟ್ಟಿ. ಪಲ್ಯ ಸವಿಯಲೇ ಬೇಕು. ಸುತ್ತ ಮುತ್ತಲಿನ ರೈತಾಪಿ ಹೆಣ್ಣು ಮಕ್ಕಳು ಬುಟ್ಟಿಯಲ್ಲಿ ರೊಟ್ಟಿ, ಪಲ್ಯ, ವಿವಿಧ ಚಟ್ನಿ ಪುಡಿಗಳು ಹಾಗೂ ಮಣ್ಣಿನ ಕುಡಿಕೆಯಲ್ಲಿ ಮೊಸರು. ಮಜ್ಜಿಗೆ ಮಾರುತ್ತಾರೆ. ಇದರ ಸವಿ ಅಲ್ಲಿ ಹೋಗಿಯೇ ನೋಡಬೇಕು.
ಬದಾಮಿ ಬನಶಂಕರಿ ದೇವಿ ಭಕ್ತರ ಇಷ್ಟಾರ್ಥ ನೆರವೇರಿಸುತ್ತ ಇಲ್ಲಿನ ಆರಾಧ್ಯ ದೈವವಾಗಿದ್ದಾಳೆ.
✍️ಶ್ರೀಮತಿ. ವಿದ್ಯಾ. ಹುಂಡೇಕರ