ಲಿಂಗಾಯತರಿಗೆ ಲಿಂಗಾಯತರೇ ಶತ್ರುಗಳೇ ?
ಲಿಂಗಾಯತ ಸಮಾಜದಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಹಾಗೆ ಇಲ್ಲ. ಶ್ರೀಮಂತರು ರಾಜಕಾರಣಿಗಳು ಮಠಾಧೀಶರು ಬಸವಣ್ಣನವರನ್ನು ತಮ್ಮ ಬದುಕಿಗೆ ಬೇಕಾದ ಸರಕು ಸಾಗಾಣಿಕೆಯಾಗಿದ್ದಾನೆ, ಶರಣ ತತ್ವವನ್ನು ಜಾಗತಿಕ ಮಟ್ಟದಲ್ಲಿ ಕರೆದೊಯ್ಯುವದನ್ನು ಬಿಟ್ಟು ವ್ಯಕ್ತಿಗತ ಪ್ರತಿಷ್ಠೆ ಅಹಂಕಾರಗಳನ್ನೇ ಮುಂದಿಟ್ಟು ಕೊಂಡು ಕಚ್ಚಾಡುವ ಬಸವ ಭಕ್ತರ ನಡೆ ಸಂಪೂರ್ಣ ಸೋಜಿಗ. ಪ್ರಜಾಸತ್ತಾತ್ಮಕವಾದ ಸಂಸತ್ತಿನ ಪರಿಕಲ್ಪನೆಯಲ್ಲಿ ಬಾಳಿ ಬದುಕಿ ಉತ್ತಮ ನಿದರ್ಶನ ಸ್ಥಾಪನೆಗೊಳಿಸಿದ ಶರಣರ ನಡೆ ಎಲ್ಲಿ ಹೆಜ್ಜೆ ಹೆಜ್ಜೆಗೂ ಅವನ ತತ್ವವನ್ನು ನಾವು ನಮ್ಮ ಅನಕೂಲಕ್ಕೆ ತಕ್ಕಂತೆ ಬಳಸುತ್ತೀದ್ದೇವೆ ನಾವೆಲ್ಲಿ ಎಂಬುದೇ ದುರ್ದೈವ.
ಬಸವಣ್ಣ ಯಾರನ್ನು ಅಪ್ಪಿಕೊಂಡಿದ್ದನೋ ಅವರನ್ನು ನಾವು ದೂರ ಇಟ್ಟಿದ್ದೇವೆ ,ಯಾವ ಪೌರೋಹಿತ್ಯ ವ್ಯವಸ್ಥೆಯನ್ನು ಸಂಪೂರ್ಣ ತಳ್ಳಿ ಹಾಕಿದ್ದನೋ ಅಂತಹ ವ್ಯವಸ್ಥೆಯನ್ನು ಮರು ಹುಟ್ಟು ಹಾಕಿ ವೇದ ಆಗಮ ಶಾಸ್ತ್ರ ಹೇಳುವ ಬಸವ ಪರಂಪರೆಯ ಮಠ ಈಗ ಚಾಲನೆಯಲ್ಲಿವೆ .
ಬಡವರ ಮಧ್ಯಮ ವರ್ಗದವರ ತೆರಿಗೆ ಹಣವನ್ನು ಮಠ ಆಶ್ರಮ ಗುಡಿ ಚರ್ಚ್ ಮಸೀದೆಗಳಿಗೆ ಸರಕಾರ ಅನುದಾನ ಕೊಡುವುದು ನಿಲ್ಲಬೇಕು. ಆಣೆಕಟ್ಟು ಆಸ್ಪತ್ರೆ ಶಾಲೆಗೆ ಹಣ ಕೊಡಬೇಕು. ಬಸವಣ್ಣನವರ ಮೂರ್ತಿಗೆ ನೂರು ಕೋಟಿ ಐನೂರು ಕೋಟಿ ಹಣವನ್ನು ಸಂಗ್ರಹಿಸಿ ವ್ಯರ್ಥ ಮಾಡುವದ್ದಕ್ಕಿಂತ ಅಂತಹ ಹಣವನ್ನು ಗ್ರಾಮೀಣ ಅಭಿವೃದ್ಧಿ ಸೋಲಾರ ಕೊಳವೆ ಭಾವಿ ಆಣೆಕಟ್ಟು ಆಸ್ಪತ್ರೆಗೆ ವಿನಿಯೋಗಿಸಬೇಕು.
*ಅವೈದಿಕ ಹಿಂದುಯೇತರ ಧರ್ಮದ ಹೋರಾಟ ನಡೆದಿದೆ ,ರಾಜಕೀಯ ಪಕ್ಷಗಳು ಲಿಂಗಾಯತರ ನ್ಯಾಯಯುತ ಮತ್ತು ಕಾನೂನು ಸಮ್ಮತ ಬೇಡಿಕೆಯನ್ನು ತಿರಸ್ಕರಿಸಿವೆ.* ಯಾವುದೇ ರಾಜಕೀಯ ಪಕ್ಷಗಳಿಗೆ ಲಿಂಗಾಯತ ಸ್ವತಂತ್ರ ಧರ್ಮವನ್ನಾಗಿ ಪರಿಗಣಿಸಬೇಕೆಂಬ ಇಚ್ಛೆ ಇಲ್ಲ ಜೊತೆಗೆ ಲಿಂಗಾಯತ ಸಂಘಟನೆಗಳಲ್ಲಿ ಸಾಮ್ಯತೆ ಏಕತೆ ಒಕ್ಕಟ್ಟು ಇಲ್ಲ . ನಾನು ಮಾಡಬಲ್ಲೆ ಎಂಬುದು ಆತ್ಮ ವಿಶ್ವಾಸ ,ಆದರೆ ನಾನು ಮಾತ್ರ ಮಾಡಬಲ್ಲೆ ಅಥವಾ ನಾನೇ ಮಾಡಬಲ್ಲೆ ಎಂಬುದು ಅಹಂಕಾರ. ಹೀಗಾಗಿ ಮನುಷ್ಯ ಸಂಬಂಧಗಳು ಇಂತಹ ಅಹಂಕಾರದಿಂದ ಸಾಯುತ್ತವೆ.
*ಲಿಂಗಾಯತರಿಗೆ ಲಿಂಗಾಯತರೇ ಶತ್ರುಗಳೇ ?* ಬರಿ ಘೋಷಣೆ ಭಾಷಣ ಲೇಖನದಿಂದ ಸ್ವತಂತ್ರ ಧರ್ಮವು ದೊರೆಯುವದಿಲ್ಲ.ಇದು ಶಬ್ದದ ಲಜ್ಜೆ ಶಬ್ದದ ಸೂತಕ ಎಂದು ಅಲ್ಲಮರು ಹೇಳಿದ್ದಾರೆ. ಪ್ರಾಮಾಣಿಕ ಎಲ್ಲರನ್ನೂ ಕೂಡಿಸಿಕೊಂಡು ಹೋಗುವ ದಕ್ಷ ನಾಯಕತ್ವದ ಕೊರತೆ ಇದೆ ಅಂತಹ ನಾಯಕರಿಂದ ಮಾತ್ರ ಸಂಘಟನೆ ಸಾಧ್ಯ ,ಇಲ್ಲದಿದ್ದರೆ ಇದು ಚುನಾವಣೆಗೆ ಸೀಮಿತವಾದ ಅರ್ಥವಿರದ ಹೋರಾಟವಾಗುತ್ತದೆ . ಶ್ರೀಮಂತರಿಗೆ ಲಿಂಗಾಯತ ಧರ್ಮ ಸ್ವತಂತ್ರ ಬೇಕಿಲ್ಲ ಬಡವರಿಗೆ ಇದರ ಮಾಹಿತಿ ಇಲ್ಲ ಮಧ್ಯಮ ವರ್ಗದವರಿಗೆ ಶಕ್ತಿ ಇಲ್ಲ. ನರಳುತ್ತದೆ ಹೋರಾಟ ಶ್ರೀಮಂತರ ಕಾಲಿನ ಅಡಿ .
ಲಿಂಗಾಯತ ಧರ್ಮ ಉಳಿದು ಬೆಳೆದರೆ ಮಾತ್ರ ಕನ್ನಡ ಭಾಷೆ ಸಂಸ್ಕೃತಿ ಉಳಿದು ಬೆಳೆದೀತು.* ಇಲ್ಲದಿದ್ದರೆ ಇದು ಕೂಡಾ ರಾಜಕೀಯ ಚದುರಂಗದಾಟವಾಗುತ್ತದೆ. ಬಸವಣ್ಣ ಜಗವು ಕಂಡ ಶ್ರೇಷ್ಠ ದಾರ್ಶನಿಕ ಆದರೆ ಆತನ ಹಿಂಬಾಲಕರು ಪ್ರಬಲ ಬಸವ ತತ್ವ ನಿಷ್ಠರಲ್ಲ.
ಮುಂದೊಂದು ದಿನ ಇಂತಹ ಸುಂದರ ಕ್ಷಣ ಬರಬಹುದೆಂಬ ಭರವಸೆಯೊಂದಿಗೆ ಬದುಕೋಣ
ಶರಣಾರ್ಥಿ
-ಡಾ ಶಶಿಕಾಂತ ಪಟ್ಟಣ ರಾಮದುರ್ಗ
9552002338