ಶೀಲ ಮತ್ತು ಅಶ್ಲೀಲ ನಡುವಿನ ಗೋಡೆಯನ್ನು ಕೆಡುವಿದ ವಿವಾದಿತ ಮಲಯಾಳಂ ಮತ್ತು ಇಂಗ್ಲೀಷ್ ಲೇಖಕಿ ಕಮಲಾದಾಸ್..!

ಶೀಲ ಮತ್ತು ಅಶ್ಲೀಲ ನಡುವಿನ ಗೋಡೆಯನ್ನು ಕೆಡುವಿದ ವಿವಾದಿತ ಮಲಯಾಳಂ ಮತ್ತು ಇಂಗ್ಲೀಷ್ ಲೇಖಕಿ ಕಮಲಾದಾಸ್..! 

ಕಮಲಾದಾಸ್ ರೆಂದರೆ ನಮ್ಮ ಕನ್ನಡದ ಲೇಖಕಿ ಕಮಲಾ ಹೆಮ್ಮಿಗೆಯವರಿಗೆ ಅದೆಂತದೋ ಪ್ರೀತಿ. ಈ ಲೇಖಕಿ ಕಮಲಾ ಹೆಮ್ಮಿಗೆಯವರ ಬಹುತೇಕ ಕೃತಿಗಳಲ್ಲಿ ಇದೇ ಕಮಲಾದಾಸ್ ರ ನೆರಳನ್ನು ಕಾಣಬಹುದು ಎಂಬ ಅಭಿಪ್ರಾಯ ನನ್ನದು.
ಈ ಕಮಲಾ ಹೆಮ್ಮಿಗೆಯವರ ಪ್ರತಿ ಕೃತಿಗಳಲ್ಲೂ ನಾನು ಇದೇ ಕಮಲಾದಾಸ್ ರ ಛಾಪನ್ನು ಕಂಡಿದ್ದೇನೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹೀಗೆ ಹೇಳುತ್ತಲೇ ಈ ಕಮಲಾದಾಸ್ ರ ಜನ್ಮದಿನವಾದ ಮಾರ್ಚ್ ೩೧‌ ರಂದು ಈ ಕಮಲಾದಾಸ್ ರ ಬಗೆಗೆ ಒಂದಿಷ್ಟು ಮಾಹಿತಿ ನೋಡೋಣ.

ಕಮಲಾದಾಸ್ ಮಲಯಾಳಂ ಭಾಷೆಯ ಲೇಖಕಿ. ಸಾಹಿತ್ಯವನ್ನು ಬರೆಯಲು ಆರಂಭಿಸಿ ‘ಮಾಧವಿಕುಟ್ಟಿ’ ಎಂಬ ಕಾವ್ಯ ನಾಮದಿಂದ ಕಮಲಾದಾಸ್ ಕತೆಗಳನ್ನು, ಕಾದಂಬರಿಗಳನ್ನು ರಚಿಸಿದರು.

ಮಲಯಾಳಂ ಸಾಹಿತ್ಯ ಜಗತ್ತಿನಲ್ಲಿ ಕತೆ, ಕಾದಂಬರಿಗಳ ಕ್ಷೇತ್ರ ಬಹಳ ವಿಶಾಲವಾದುದು. ಅತಿ ಭಾವುಕತೆಯತ್ತ ಕಿರುಗತೆಗಳು ಜಾರುತ್ತಿದ್ದ ಕಾಲದಲ್ಲಿ ಮಾಧವಿಕುಟ್ಟಿ ಎಂಬ ಕಾವ್ಯ ನಾಮದಿಂದ ಕಮಲಾದಾಸ್ ಕತೆಗಳನ್ನು ಕಾದಂಬರಿಗಳನ್ನು ರಚಿಸಿದರು.
ವಿವಾದಗಳ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮನ್ನಣೆಯ ಗುರಿಯನ್ನು ತಲುಪುವಷ್ಟರಲ್ಲಿ ಕಮಲಾದಾಸ್ ಸಾಕಷ್ಟು ಮುಳ್ಳುಹಾದಿಗಳನ್ನು ತುಳಿಯಬೇಕಾಯಿತು. ಖ್ಯಾತ ಕತೆಗಾರರಾಗಿದ್ದ ವೈಕ್ಕಂಮಹಮ್ಮದ್ ಬಷೀರ್, ತಗಳಿ ಶಿವಶಂಕರ ಪಿಳ್ಳೈ, ಎಂ.ಟಿ.ವಾಸುದೇವನ್ ನಾಯರ್, ಟಿ. ಪದ್ಮನಾಭನ್ ರವರ ಜೊತೆ ಜೊತೆಗೆ ಕಮಲಾದಾಸ್ ರೂ ಬರೆಯತೊಡಗಿದರು.

ಸೋದರಮಾವ, ತಂದೆ, ತಾಯಿ ಮುಂತಾದವರು ಹೇಳಿದ ದಟ್ಟವಾದ ಜೀವನಾನುಭವಗಳಿಗೆ ಅವರು ಅಕ್ಷರ ರೂಪವನ್ನು ಕೊಟ್ಟರು. ಪ್ರಣಯ, ಪ್ರೀತಿ, ಪ್ರೇಮ, ವಾತ್ಸಲ್ಯ ಹಾಗೂ ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳ ಕುರಿತಾದ ಅವರ ರಚನೆಗಳು ಈಗಲೂ ಪ್ರಸ್ತುತ.
ಕೇರಳದ ಗ್ರಾಮೀಣ ಬದುಕಿನ ಮುಗ್ಧತೆಗಳನ್ನು ಅವರು ತಮ್ಮ ಕತೆಗಳಲ್ಲಿ ಹಿಡಿದಿಟ್ಟಿದ್ದಾರೆ. ನಗರದ ಸಂಘರ್ಷಯುಕ್ತ ಆತಂಕಕಾರಿ ಬದುಕನ್ನು ಮನುಷ್ಯ ಮನಸ್ಸುಗಳ ಸಂಕೀರ್ಣತೆಗಳನ್ನು ಅವರು ತೆರೆದಿಟ್ಟಿದ್ದಾರೆ.

ಬಾಲ್ಯ ಕಾಲವನ್ನು ಕೇರಳ ಮತ್ತು ಕಲ್ಕತ್ತಾದಲ್ಲಿ ಅವರು ಕಳೆದರು. ಮಾತೃಭಾಷೆ ಮಲಯಾಳಂನ್ನು ಮಮೆಯಲ್ಲಿಯೇ ಕಲಿತರು. ಕಲ್ಕತ್ತಾದ ಬದುಕಿನ ಹಿನ್ನೆಲೆಯಲ್ಲಿ ಅವರು ರಚಿಸಿದ `ಸಮ್ಮರ್ ಇನ್ ಕಲ್ಕತ್ತಾ’ ಎಂಬ ಇಂಗ್ಗ್ಲಿಷ್ ಕವನ ಸಂಕಲನದಿಂದ ಅವರು ಜಗತ್ತಿನ ಸಾಹಿತ್ಯಾಸಕ್ತರ ಗಮನ ಸೆಳೆದರು. ಲೈಂಗಿಕತೆಯನ್ನು ಮತ್ತು ಸಲಿಂಗ ಕಾಮವನ್ನು ಹಸಿಹಸಿಯಾಗಿ ಬರೆದ ಆಧುನಿಕ ಲೇಖಕಿಯರಲ್ಲಿ ಕಮಲಾದಾಸ್ ಮೊದಲಿಗರೆಂದು ಸಾಹಿತ್ಯ ತಜ್ಞರ ಅಭಿಪ್ರಾಯವಾಗಿದೆ.

ಅವರು ಬರೆದ ‘ಎಂಡೆಕತ’ (ನನ್ನ ಕತೆ) ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಾಗ ಕೇರಳದ ಸಾಹಿತ್ಯ ಪ್ರಪಂಚ ಅವರನ್ನು ಕಟು ಮಾತುಗಳಿಂದ ಟೀಕಿಸಿತ್ತು. ಅದು ಇಂಗ್ಲಿಷ್ ನಲ್ಲಿ ಬರೆದಾಗ ಪುನಃ ವಿವಾದಗಳಿಗೆ ಸಿಲುಕಿದ್ದರು. ಇವೆರಡು ಪುಸ್ತಕ ರೂಪದಲ್ಲಿ ಹೊರಬಂದಾಗ ಪ್ರತಿಭಟಿಸಿದ ಮಡಿವಂತರೇ ಅದನ್ನು ಕೊಳ್ಳಲು ಮುಗಿಬಿದ್ದರಂತೆ.

ಇವರ `ಮೈಸ್ಟೋರಿ’ ಕೃತಿಯು ಹದಿನೈದು ವಿದೇಶಿ ಭಾಷೆಗಳಿಗೆ ಅನುವಾದಗೊಂಡಿದೆ. ಈ ಕೃತಿ ತನ್ನ ಆತ್ಮ ಕತೆಯೆಂದು ಹೇಳಿ ಕಮಲಾದಾಸ್ ಅದರ ಮಾರಾಟವನ್ನು ಹೆಚ್ಚಿಸಿಕೊಂಡಿದ್ದರು. ಬಹಳ ವರ್ಷಗಳ ನಂತರ `ಮೈಸ್ಟೋರಿ’ ತನ್ನ ಕಲ್ಪನೆಯ ಕೂಸೆಂದೂ, ಹಣಕ್ಕಾಗಿ ಬರೆದೆನೆಂದೂ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದರು‌ ಕಮಲಾದಾಸ್ ರು.

 

ಇಂಗ್ಲಿಷ್ ನಲ್ಲಿ ಕವಿತೆಗಳನ್ನು ಬರೆದು ಹೊಸತೊಂದು ತರಂಗವನ್ನೇ ಜಗತ್ತಿನಾದ್ಯಂತ ಸೃಷ್ಟಿಸಿದ್ದ ಕವಯತ್ರಿ ಕಮಲಾದಾಸ್. `ಕನ್ ಫೆಷನಲ್ ಪೋಯೆಟ್ರಿ’ ಎಂಬ ನವೀನ ಮಾದರಿಯ ಪದ ಸಂಕುಲ, ಶೈಲಿಗಳು, ಹೆಣ್ಣಿನ ಮನಸ್ಸಿನ ಒಳತೋಟಿಯನ್ನು ಅನಾವರಣಗೊಳಿಸಿದೆ..

ಶೀಲ ಮತ್ತು ಅಶ್ಲೀಲಗಳ ನಡುವಿನ ಗೋಡೆಯನ್ನು ಅವರು ತಮ್ಮ ಬರಹಗಳಿಂದ ಕೆಡವಿ ಹಾಕಿದ್ದಾರೆ.`ಕವಿತೆಯೆಂದರೆ ಹಸುಗೂಸಿನಂತೆ’ ಎಂದು ಅವರು ಟಿ ವಿ ಸಂದರ್ಶನದಲ್ಲಿ ಹೇಳಿದ್ದರು.

ಕವಿತೆಗಳನ್ನು ಅವರು ಸತ್ಯಕ್ಕೆ ಹೋಲಿಸುತ್ತಿದ್ದರು. ಸತ್ಯವನ್ನು ತಡೆಯುವುದು ಎಂದರೆ ಹೆರಿಗೆ ನೋವಿನಿಂದ ಬಳಲುತ್ತಿರುವ ಹೆಂಗಸಿಗೆ,`ನೀನು ಹಡೆಯಬಾರದು’ಎನ್ನುವಂತಿರುತ್ತದೆ ಎಂಬುದು ಅವರ ನಿಷ್ಟುರ ಅಭಿಪ್ರಾಯವಾಗಿತ್ತು.

೧೯೯೯ರ ಅಂತ್ಯದಲ್ಲಿ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು. ಗುರುವಾಯೂರ್ ಕೃಷ್ಣನ ಪರಮ ಭಕ್ತೆಯಾಗಿದ್ದ ಕಮಲಾದಾಸ್ ರವರು ಮತಾಂತರಗೊಂಡ ಕೂಡಲೆ ಕಮಲಾದಾಸ್ ‘ಸುರೈಯಾ’ (ನಸುಕಿನ್ ನಕ್ಷತ್ರ) ಎಂದು ಹೆಸರನ್ನು ಬದಲಾಯಿಸಿಕೊಂಡರು.

ನನ್ನ ಕೃಷ್ಣ ನನ್ನ ಜೊತೆಯಲ್ಲೇ ಬಂದು ಮಹಮ್ಮದನಾಗಿದ್ದಾನೆ. ‘ಗುರುವಾಯೂರಿನಲ್ಲಿ ಈಗ ಕೃಷ್ಣ ಇಲ್ಲ.’ ಎಂದು ಹೇಳಿ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದರು.
ಕೇವಲ ಬರವಣಿಗೆಯಲ್ಲಷ್ಟ್ರೇ ಅಲ್ಲ ಸಾರ್ವಜನಿಕ ಬದುಕಿನಲ್ಲಿಯೂ ಅವರು ಹೊಸ ಹಾದಿಯನ್ನು ಹುಡುಕಿದ್ದರು. ೧೯೮೪ರ ಲೋಕಸಭಾ ಚುನಾವಣೆಯಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಆದರೆ ಅವರ ಸಾಹಿತ್ಯದ ಜನಪ್ರಿಯತೆ ಲೋಕಸಭೆ ಪ್ರವೇಶಿಸುವುದಕ್ಕೆ ಸಹಕಾರಿಯಾಗಲಿಲ್ಲ. ತನ್ನ ಪಾಲಿಗೆ ಬಂದ ಕೌಟುಂಬಿಕ ಆಸ್ತಿಯನ್ನು ಅವರು ಕೇರಳ ಸಾಹಿತ್ಯ ಆಕಾಡೆಮಿಗೆ ಬಳುವಳಿಯಾಗಿ ನೀಡಿದ್ದರು. ದೀನದಲಿತರು, ಅನಾಥ ಮಕ್ಕಳೆಂದರೆ ಅವರಿಗೆ ಅತೀವ ಅಕ್ಕರೆ.
ತಮ್ಮ ಮೂವರು ಮಕ್ಕಳ ಜೊತೆಯಲ್ಲಿ ಇಬ್ಬರು ಅನಾಥ ಮಕ್ಕಳನ್ನೂ ದತ್ತು ತೆಗೆದುಕೊಂಡು ಪ್ರೀತಿ, ವಾತ್ಸಲ್ಯಗಳಿಂದ ಬೆಳೆಸಿ ಬದುಕಿನಲ್ಲಿ ಒಳ್ಳೆಯ ಸ್ಥಾನ ದೊರಕಿಸಿಕೊಟ್ಟಿದ್ದರು.

ಭಾರತ ಸರಕಾರ ನೋಬೆಲ್ ಪ್ರಶಸ್ತಿಗೆ ಕಮಲಾದಾಸ್ ಹೆಸರನ್ನು ಶಿಫಾರಸು ಮಾಡಿತ್ತು. ಹ್ಜೈಸ್ಕೂಲ್ ಶಿಕ್ಷಣವನ್ನು ಪೂರೈಸುವ ಮೊದಲೆ‌ (೧೫ನೆ ವಯಸ್ಸಿಗೆ) ಅವರಿಗೆ ಮದುವೆ ಮಾಡಲಾಗಿತ್ತು. ಮುಂಬಯಿ, ಕಲ್ಕತ್ತಾ, ದೆಹಲಿಗಳಲ್ಲಿ ಅವರು ಬದುಕು ಕಂಡಿದ್ದರು.

ಯಾವುದೇ ವಿಶ್ವವಿದ್ಯಾ ಲಯದ ಪದವಿಯನ್ನು ಪಡೆಯದ ಕಮಲಾದಾಸ್ ರ ಕೃತಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪಠ್ಯ ಪುಸ್ತಕಗಳಾಗಿವೆ. ‘ಸಮ್ಮರ್ ಇನ್ ಕಲ್ಕತ್ತಾ’, ಆಲ್ಫಬೆಟ್ ಆಫ್ ಲಸ್ಟ್, `ದಿ ಡಿಸೆಂಡೆನ್ಸ್, ಓಲ್ಡ್ ಪ್ಲೇ ಹೌಸ್’ ಕಲೆಕ್ಟೆದ್ ಪೋಯಮ್ಸ್, ಓನ್ಲಿ ದಿ ಸೋಲ್ ನೋಸ್ ಹೌ ಟು ಸಿಂಗ್, ಮುಂತಾದವುಗಳು ಅವರ ಇಂಗ್ಲಿಷ್ ಕೃತಿಗಳು.

ಮಲಯಾಳಂನಲ್ಲಿ ಅವರು ಒಟ್ಟೂ ೨೪೫ ಕತೆಗಳನ್ನೂ,೧೦೩ ಕವಿತೆಗಳನ್ನೂ, ೧೧ ಕಾದಂಬರಿಗಳನ್ನೂ, ೩ ನಾಟಕಗಳನ್ನೂ, ೨ ಆತ್ಮಕತೆಗಳನ್ನೂ, ೨ ಪ್ರವಾಸ ಕತೆಗಳನ್ನೂ, ೧೫೩ ಲೇಖನಗಳನ್ನೂ ಮತ್ತು ಎಂಟು ಟಿಪ್ಪಣಿಗಳನ್ನೂ ಕಮಲಾದಾಸ್ ಬರೆದಿದ್ದಾರೆ. ಅವರ ಅನೇಕ ಕತೆ, ಕಾದಂಬರಿಗಳು ಚಲನಚಿತ್ರಗಳಾಗಿ ಯಶಸ್ವಿ ಕಂಡಿವೆ.

ಅವರಿಗೆ ದೊರೆತ ಪ್ರಶಸ್ತಿಗಳು ಅನೇಕ. ೧೯೬೩ರಲ್ಲಿ ಪೆನ್ ಅವಾರ್ಡ್,

೧೯೬೪ರಲ್ಲಿ ಏಷ್ಯನ್ ಪೋಯೆಟ್ರಿ ಪ್ರೈಸ್,
೧೯೬೫ರಲ್ಲಿ ಕೇಂಟ್ ಅವಾರ್ದ್,
೧೯೬೭ರಲ್ಲಿ ಕೇರಳ ಸಾಹಿತ್ಯ ಆಕಾಡೆಮಿ ಅವಾರ್ದ್,
೧೯೮೫ರಲ್ಲಿ ಆಶಾನ್ ವರ್ಲ್ಡ್ ಅವಾರ್ಡ್,
೧೯೮೫ರಲ್ಲಿ ಕೆಂದ್ರ ಸಾಹಿತ್ಯ ಆಕಡೆಮಿ ಅವಾರ್ಡ್,
೧೯೮೭ ವರ್ಲ್ಡ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ನಿಂದ ಡಾಕ್ಟರೇಟ್,
೨೦೦೧ರಲ್ಲಿ ಕೇರಳ ಆಕಾಡೆಮು ಫೆಲೊಶಿಪ್, ಇತ್ಯಾದಿಗಳು.

ಇದರ ಜೊತೆಗೆ ರಾಜ್ಯ ಚಲನಚಿತ್ರ ಪ್ರಶಸ್ತಿ,
ವಯಲಾರ್ ರಾಮವರ್ಮ ಪ್ರಶಸ್ತಿಗಳು ಅವರಿಗೆ ಸಂದಿವೆ.

ಕಮಲಾದಾಸ್ ಅವರು ಕೇರಳ ಫೋರೆಸ್ಟ್ ಬೋರ್ಡ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಕೇರಳ ಶಿಶು ಸಂರಕ್ಷಣಾ ಸಮೀತಿಯ ಸದಸ್ಯೆ,
ಸಾಹಿತ್ಯ ಅಕಾದೆಮಿಯ ಉಪಾಧ್ಯಕ್ಷೆ,
ಇಲ್ಲಸ್ತ್ರೇಟೆಡ್ ವೀಕ್ಲಿ ಪತ್ರಿಕೆಯ ಕವನ ವಿಭಾಗದ ಸಂಪಾದಕಿಯಾಗಿಯೂ ಸೇವೆ ಸಲ್ಲಿಸಿದ್ದರು.

ಬದುಕಿನುದ್ದಕ್ಕೂ ವಿವಾದಿತ ಲೇಖಕಿಯಾಗಿದ್ದ ಕಮಲಾದಾಸ್ ಮತಾಂತರಗೊಂಡು ಕೇರಳದಲ್ಲಿ ನೆಲೆಸಿದಾಗ ಬಹಳ ವಿರೋಧವನ್ನು ಎದುರಿಸಬೇಕಾಯಿತು. ಇದರಿಂದ ಬೇಸತ್ತು ಕೇರಳ ತೊರೆದು ತನ್ನ ಕಿರಿಯ ಮಗನೊಂದಿಗೆ ಪೂನಾದಲ್ಲಿ ನೆಲೆಸಿದ್ದರು. ೩೧-೫-೨೦೦೯ರಲ್ಲಿ ಅವರು ನಿಧನರಾದಾಗ ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ಕೇರಳದಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಯಿತು.

ಇಂತಹ ಮಹತ್ವದ ಲೇಖಕಿಯ ಸಮಗ್ರ ಕತೆಗಳೂ ಮತ್ತು ಸಮಗ್ರ ಕಾದಂಬರಿಗಳೂ ಪುಸ್ತಕ ರೂಪದಲ್ಲಿ ಈಗ ಕನ್ನಡಿಗರಿಗೆ ದೊರೆಯುತ್ತಿದೆ.‌
ಕನ್ನಡಕ್ಕೆ ಅನುವಾದಿಸಿದವರು ಕೆ.ಕೆ.ಗಂಗಾಧರರವರು ಕಮಲಾದಾಸ್ ರ ಸಮಗ್ರ ಕಾದಂಬರಿಗಳನ್ನು ಅನುವಾದಿಸಿದವರು.

ಹೀಗಿದೆ ಕಮಲಾದಾಸ್ ರ ಬದುಕು ಮತ್ತು ಬರಹ‌ ಅಂಥ ಹೇಳುತ್ತಲೇ ನನ್ನ ಬರಹವನ್ನು ಮುಗಿಸುತ್ತೇನೆ.
‌‌‌‌‌ ‌ ‌‌‌‌ ‌‌‌
– ಕೆ.ಶಿವು.ಲಕ್ಕಣ್ಣವರ

Don`t copy text!