ಎಡೆಮಠದ ನಾಗಿದೇವಯ್ಯ ಮತ್ತು ಪುಣ್ಯಸ್ತ್ರೀ ಮಸಣಮ್ಮ
ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶಃ ಯಾವ ಶತಮಾನದಲ್ಲಿಯೂ ಕಂಡಿರಲಿಲ್ಲ ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿರುವುದು ಕಂಡುಬರುತ್ತದೆ. ಕನ್ನಡ ಸಾಹಿತ್ಯದ ಪರ್ವಕಾಲ “ವಚನ ಸಾಹಿತ್ಯ ಕಾಲ”ಹಾಗಾಗಿ ಕರ್ನಾಟಕ ಸಾಹಿತ್ಯ ಚರಿತ್ರೆಯಲ್ಲಿ 12 ನೆ ಶತಮಾನಕ್ಕೆ ವಿಶಿಷ್ಟ ಸ್ಥಾನವಿದೆ.
ಬಸವಣ್ಣನವರ ನೇತೃತ್ವದಲ್ಲಿ ನಡೆದ ವಿಚಾರ ಕ್ರಾಂತಿಯಲ್ಲಿ ಭಾಗವಹಿಸಿದವರಲ್ಲಿ ಅನೇಕ ವಚನಕಾರ್ತಿಯರೂ ಇದ್ದಾರೆ. ಇವರು ಒಂದೋ ಅಥವಾ ಎರಡು ವಚನಗಳನ್ನು ಬರೆದಿದ್ದರೂ ವಚನಕಾರರ ಧಾರ್ಮಿಕ, ಸಾಮಾಜಿಕ ಆಂದೋಲನದ ಧೋರಣೆಗಳಿಗೆ ತಕ್ಕ ಪ್ರತಿಕ್ರಿಯೆಯನ್ನು ಸೂಚಿಸಿರುವುದು ಗಮನೀಯವಾದುದು. ಇಂತಹ ಕೆಲವು ಹೆಚ್ಚು ಚರ್ಚಿತವಾಗದ ವಚನಕಾರ್ತಿಯರ ವ್ಯಕ್ತಿತ್ವವನ್ನು ಅವರ ವಚನ ಮುಖೇನವೇ ಗುರುತಿಸುವ ಕೆಲಸ ಮಾಡಬಹುದು.
ಬಸವಣ್ಣನವರ ನೇತೃತ್ವದಲ್ಲಿ ಕರ್ನಾಟಕದ ಕಲ್ಯಾಣದಲ್ಲಿ ನಡೆದ ವಿಚಾರಕ್ರಾಂತಿಯಿಂದ ಪ್ರಭಾವಿತವಾದದ್ದು ಕೇವಲ ಕನ್ನಡ ಜನತೆ ಮಾತ್ರವಲ್ಲ. ಅದರಿಂದಾಜೆ ಈ ಚಳುವಳಿ ಬದುಕನ್ನು ಕುರಿತಂತಹ ತನ್ನ ಧನಾತ್ಮಕ ನಿಲುವುಗಳ ಕಾರಣದಿಂದ ಕರ್ನಾಟಕದಿಂದ ಆಚೆಗೂ ವ್ಯಾಪಿಸಿಕೊಂಡಿತು. ಭಾರತ ದೇಶಾದ್ಯಂತ ಹೊರ ರಾಜ್ಯಗಳಿಂದಲೂ ಭಕ್ತರು ತಂಡೋಪತಂಡವಾಗಿ ಕಲ್ಯಾಣಕ್ಕೆ ಆಗಮಿಸಿ ಈ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ದೂರದ ಕಾಶ್ಮೀರದಿಂದ ಮೊಳಿಗೆಯ ಮಹಾದೇವ ಹಾಗೂ ಮಹಾದೇವಿ ದಂಪತಿಗಳು ಬಂದರೆ, ಗುಜರಾತದಿಂದ ಆದಯ್ಯ ಹಾಗೂ ಪದ್ಮಾವತಿಯರು ಬರುತ್ತಾರೆ. ಒಟ್ಟು ಚಳುವಳಿಯ ಧ್ಯೆಯೋದ್ದೇಶ ಧೋರಣೆಗಳಿಗೆ ಮಾರು ಹೋಗಿ ಕನ್ನಡ ನಾಡಿನ ಗಡಿಯಾಚೆಗೂ ಇದರ ವ್ಯಾಪ್ತಿ ವಿಸ್ತರಿಸಲ್ಪಟ್ಟಿತ್ತು.
ಪ್ರಸ್ತುತ ಮಸಣಮ್ಮ ಶರಣೆಯ ಬಗ್ಗೆ ಹೇಳಬೇಕೆಂದರೆ ಮಸಣಮ್ಮ ಎಂಬ ಇಬ್ಬರು ಶರಣೆಯರನ್ನು ಕಾಣುತ್ತೇವೆ. ಒಬ್ಬಳು ಗಣೇಶ ಮಸಣಯ್ಯಗಳ ಪುಣ್ಯಸ್ತ್ರೀ ಮಸಣಮ್ಮ ಅಕ್ಕಲಕೋಟೆ ತಾಲೂಕಿನ ಕರ್ಜಗಿಯವಳು. ಅವಳ 10 ವಚನಗಳು ದೊರಕಿರುವನ್ನು ನೆನಪಿಸಿಕೊಳ್ಳಬಹುದು. ಮತ್ತೋರ್ವ ಶರಣೆ ಎಡೆಮಠದ ನಾಗಿದೇವಯ್ಯ ಪುಣ್ಯಸ್ತ್ರೀ ಮಸಣಮ್ಮ.
ಪ್ರಸ್ತುತ ನಾಗಿದೇವಯ್ಯ ಹಾಗೂ ಮಸಣಮ್ಮವರ ಬಗ್ಗೆ ವಿವರವಾಗಿ ಅರಿಯೋಣ
ವಚನಕಾರ್ತಿ ಮಸಣಮ್ಮಳು ಚೋಳಮಂಡಲದ ಕಾಂಚಿನಗರದ ಎಡೆಮಠದ ನಾಗಿದೇವಯ್ಯ ಎಂಬುವರ ಧರ್ಮಪತ್ನಿ. ತಮಿಳುನಾಡಿನ ‘ಕಂಚಿಪಟ್ಟಣ’ದಿಂದ ಗಂಡನೊಂದಿಗೆ ಕರ್ನಾಟಕಕ್ಕೆ, ಕಲ್ಯಾಣ ಪಟ್ಟಣಕ್ಕೆ ಬಂದಳು. ಬಸವಣ್ಣನ ಒಡನಾಡಿಯಾಗಿ ‘ಚಿಮ್ಮಲಿಗೆ’ಯಲ್ಲಿ ನೆಲೆಸಿ ಅಲ್ಲಿನ ಸ್ವಾಮೀಜಿಗಳಾದ ನಿಜಗುಣರಿಂದ ನಿಜೋಪದೇಶ ಪಡೆದು ಪತಿಯೊಂದಿಗೆ ಧರ್ಮ ಪ್ರಚಾರದ ಕಾರ್ಯದಲ್ಲಿ ತೊಡಗಿ ಕೊಂಡಿದ್ದವಳು. ವ್ರತಹೀನರಿಗೆ ಶಿವಬೋಧೆ ಲಭಿಸದು, ವ್ರತಾಚರಣೆ ಎಲ್ಲರಿಗೂ ದಕ್ಕದೆಂಬ ನಿಲುವು ಆಕೆಯದು. ಈಕೆಯ ವಚನಗಳ ಅಂಕಿತ “ನಿಜಗುಣೇಶ್ವರಲಿಂಗ”.
ಈಕೆಯ ವಿವರಗಳು ಹೆಚ್ಚು ತಿಳಿದುಬಂದಿಲ್ಲ. ಈ ಶರಣೆ ಭಕ್ತನಾದ ಎಡೆಮಠದ ನಾಗಿದೇವಯ್ಯಗಳ ಪತ್ನಿ. ನಾಗಿದೇವಯ್ಯಗಳ ವಿವರಗಳೂ ನಮಗೆ ಅಷ್ಟಾಗಿ ತಿಳಿಯುವುದಿಲ್ಲ.
ಮಸಣಮ್ಮನ ಒಂದೇ ಒಂದು ವಚನ ನಮಗೆ ದೊರಕುತ್ತದೆ. ವ್ರತನಿಷ್ಠ ಶರಣೆಯರ ಸಾಲಿನಲ್ಲಿ ಈಕೆ ನಿಲ್ಲುತ್ತಾಳೆ. ಲಿಂಗಾಯತ ಧರ್ಮವನ್ನು ಅತ್ಯಂತ ಭಕ್ತಿಭಾವದಿಂದ ಸ್ವೀಕರಿಸಿರುವ ಈಕೆ, ಭಕ್ತ ಮತ್ತು ಭವಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಪ್ರಯತ್ನ ಮಾಡುತ್ತಾಳೆ. ಈಕೆಯ ವಚನದಲ್ಲಿ ಮುಖ್ಯವಾಗಿ ಆಚಾರ, ನೀತಿ, ವ್ರತ, ನಿಷ್ಠೆ – ಇವುಗಳ ಬಗೆಗೆ ತುಂಬು ನಂಬಿಕೆ ಹಾಗೂ ಗೌರವಗಳಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.
ಕಾಗೆಯ ನಾಯ ತಿಂದವರಿಲ್ಲ
ವ್ರತಭ್ರಷ್ಟನ ಕೂಡಿದವರಿಲ್ಲ
ನಾಯಿಗೆ ನಾರಂಗವಕ್ಕುವುದೆ?
ಲೋಕದ ನರಂಗೆ ವ್ರತವಕ್ಕುವುದೆ ಶಿವಬೀಜಕಲ್ಲದೆ ?
ನೀವೇ ಸಾಕ್ಷಿ ನಿಜಗುಣೇಶ್ವರಲಿಂಗದಲ್ಲಿ.
ವ್ರತ ಅನ್ನುವುದು ಒಂದು ಕಟ್ಟುಪಾಡು, ಇದನ್ನು ಬಾಯಿಯಲ್ಲಿ ಹೇಳುತ್ತಾ ನಡೆಯಲ್ಲಿ ಇಲ್ಲದವರು ವಚನಕಾರ್ತಿಯರ ಕಣ್ಣಿಗೆ ಬಹಳ ಬೇಗನೇ ತುತ್ತಾಗಿದ್ದಾರೆ. ಇದುವರೆಗೆ ಬಹುವಿಧದಲ್ಲಿ ಚರ್ಚಿತವಾಗಿರುವ ಮೇಲ್ಪಂಕ್ತಿ ವಚನಕಾರರಿಗಿಂತ ಭಿನ್ನವಾಗಿ ಈ ಅಲಕ್ಷಿತ ವಚನಕಾರ್ತಿಯರ ನುಡಿಗಳಿವೆ ಸಾಕಷ್ಟು ಸಾಮ್ಯತೆ ಎದ್ದು ಕಂಡರೂ ಅಂತರಾಳಕ್ಕೆ ಇಳಿದಂತೆಲ್ಲಾ ಸಾಕಷ್ಟು ಭಿನ್ನತೆಗಳು ಕಾಣುತ್ತಾ ಸಾಗುತ್ತವೆ. ಲಿಂಗ, ಜಾತಿ ಮತ್ತು ಧರ್ಮದ ನೆಲೆಯಲ್ಲಿ ಏಕಕಾಲಕ್ಕೆ ಶೋಷಣೆಗೆ ಒಳಗಾಗುವ ಮಹಿಳೆಯರ ಕೈಗೆ ಅಸ್ತ್ರದೋಪಾದಿಯಲ್ಲಿ ಅಕ್ಷರ ಸಿಕ್ಕಿದರೆ ಯಾವ ರೀತಿಯಲ್ಲಿ ತನ್ನ ನಿಲುವುಗಳನ್ನು ದಾಖಲಿಸಬಲ್ಲರೆಂಬುದಕ್ಕೆ ಈ ಅಲಕ್ಷಿತ ಮಹಿಳೆಯರ ವಚನಗಳೇ ಸಾಕ್ಷಿ. ಹಾಗಾಗಿಯೇ ಇವರ ವಚನಗಳಲ್ಲಿ ಸಹಜವೆನಿಸುವಷ್ಟು ಸಿಟ್ಟಿದೆ., ನೋವಿದೆ, ಆಕ್ರೋಶವಿದೆ ಅಸಹನೆಯಿದೆ ಮತ್ತು ತನ್ನದೇ ಸತ್ಯ ಮಾರ್ಗದ ಪ್ರತಿಪಾದನೆಯಿದೆ. ಇದನ್ನು ಹೇಳಲಿಕ್ಕೆ ಅವರಿಗೆ ತನ್ನ ಸುತ್ತಮುತ್ತಲಿನ ಬದುಕೇ ಸರಕಾಗಿದೆ. ತಾವು ಹೇಳುವದನ್ನು ನಿಖರವಾಗಿ ಹೇಳುತ್ತಾ ಅದು ಹೇಗೆ ಪ್ರಾಯೋಗಿಕವಾಗಿಯೂ ನೆರವೇರಬೇಕೆಂಬುದರ ಬಗ್ಗೆ ಸ್ಪಷ್ಟ ನುಡಿಯನ್ನೂ ತಾಳುತ್ತಾರೆ. ಎಲ್ಲಿ ನೋವಿರುತ್ತದೆಯೋ, ಎಲ್ಲಿ ಶೋಷಣೆಗೆ ಒಳಗಾದ ಮನಸ್ಸುಗಳಿರುತ್ತವೆಯೋ ಅಲ್ಲಿ ಸಿಟ್ಟಿನ ನುಡಿಗಳಿರುತ್ತವೆ ಮತ್ತು ತನಗೆ ವಿರುದ್ಧವಾದ ಎಲ್ಲ ಸಂಗತಿಗಳನ್ನು ವಿಡಂಬನೆಯ ಮೂಲಕ ಧೂರೀಕರಿಸುವ ಸ್ವಭಾವವೂ ಇರುತ್ತದೆ. ಈ ಎಲ್ಲ ಅಂಶಗಳು ಶರಣೆ ಮಸಣಮ್ಮನ ವಚನಗಳಲ್ಲಿ ಎದ್ದು ಕಾಣುತ್ತವೆ. ಇದೆಲ್ಲದರ ಜೊತೆಗೆ ಬೈಗುಳದ ಪರಿಭಾಷೆಯೂ ಇವರಲ್ಲಿ ಹೆಚ್ಚು ಕಂಡುಬರುತ್ತದೆ. ಬೈಗುಳದಲ್ಲಿ ಅಶ್ಲಿಲತೆಯ ಸೊಂಕಿಲ್ಲ ಅದೊಂದು ರೀತಿಯಲ್ಲಿ ತಿದ್ದಿ ತೀಡುವ ಕ್ರಮದಲ್ಲಯೇ ಇರುತ್ತದೆ. ಇದು ಜನತೆಯನ್ನು ಪ್ರೀತಿಸುವ ಮತ್ತು ಎಲ್ಲರನ್ನು ನನ್ನವರೆನ್ನುವ ಭಾವನೆಯಿದ್ದರೆ ಮಾತ್ರ ಸಾಧ್ಯ.
ಬಹಳ ಮುಖ್ಯವಾಗಿ ಈಕೆ ವ್ರತ, ಪೂಜೆ, ನಿಯಮಗಳು ನಿಷ್ಠಾವಂತ ಭಕ್ತನಿಗೆ ಮಾತ್ರ ಸಲ್ಲವಂತಹವು. ವ್ರತ, ಆಚಾರಗಳು ಭ್ರಷ್ಟನಿಗೆ, ಭವಿಗೆ ಸಲ್ಲುವಂತಹದಲ್ಲ ಎನ್ನುತ್ತಾಳೆ. ನಿಜವಾದ ಭಕ್ತ ಮಾತ್ರ ಶಿವ ಪ್ರೀತಿ (ಶಿವ ಪ್ರೀತಿ ಎಂದರೆ ಚೈತನ್ಯದ ಸ್ವರೂಪ ನಿರಾಕಾರ ರೂಪ), ಶಿವಸಾಯುಜ್ಯವನ್ನು ಗಳಿಸಿಕೊಳ್ಳಲು ಸಾಧ್ಯವೇ ಹೊರತು ಎಲ್ಲರೂ ಅಲ್ಲ. ಈ ವಿಚಾರವನ್ನು ತಿಳಿಸುವ ಸಲುವಾಗಿಯೇ ಆಕೆ ನಾಯಿ ಹಾಗೂ ನಾರಂಗಗಳ ಹೋಲಿಕೆಯನ್ನು ಮಾಡುತ್ತಾಳೆ. ವ್ರತಕ್ಕೆ ವಿಶೇಷ ಮಹತ್ವ ಕೊಡುವ ಇತರ ಅನೇಕ ವಚನಕಾರ್ತಿಯರಿದ್ದಾರೆ. ಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗ ಎನ್ನುವ ಅಕ್ಕಮ್ಮನಂತವರು ಶೀಲ, ಆಚಾರ, ವ್ರತಗಳ ಮಹತ್ವವನ್ನು ಕುರಿತು ಮಾತನಾಡುತ್ತಾರೆ. ಆದರೆ ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಶರಣೆ ಮಸಣಮ್ಮ ಕಾಯಕದ ಬಗೆಗೆ ಎನೂ ಮಾತನಾಡುವದಿಲ್ಲ ಈಕೆ ಹಾಗೂ ಈಕೆಯ ಪತಿ ಎಡೆಮಠದ ನಾಗಿದೇವಯ್ಯನವರು ಯಾವ ಕಾಯಕವನ್ನು ಕೈಗೊಂಡಿದ್ದರೋ ತಿಳಿಯದು.
ಶಿವಭಕ್ತನಿಗೆ ಮಾತ್ರ ವ್ರತ ಸಲ್ಲುವಂತಹದೇ ಹೊರತು ಸಾಮಾನ್ಯನಿಗಲ್ಲ ಎಂಬುದು ಈಕೆಯ ನಿಲುವು. ವಿಶೇಷವಾದ ಸಾಹಿತ್ಯಿಕ ಮೌಲ್ಯಗಳು ಎದ್ದು ಕಾಣುವ ತೆರದಲ್ಲಿಲ್ಲದಿದ್ದರೂ ಆಕೆಯ ಉಪಮೆಗಳು ಸಾದೃಶ್ಯಗಳು ಜಡ ಗದ್ಯಲಯದಿಂದ ಈ ವಚನವನ್ನು ಭಿನ್ನವಾಗಿಸುತ್ತವೆ.
ಲೋಕದಲ್ಲಿ ಯಾರೂ ಕಾಗೆ ಅಥವಾ ನಾಯಿಯನ್ನು ತಿಂದವರು ಇಲ್ಲವೇ ಇಲ್ಲ ಅಂತೆಯೇ ವ್ರತಭ್ರಷ್ಟನ ಸಹವಾಸವನ್ನು ಯಾರೂ ಮಾಡಲಾರರು. ಇವರಿಬ್ಬರೂ ಒಂದರ್ಥದಲ್ಲಿ ನಿಷ್ಪ್ರಯೋಜಕರೇ. ವ್ರತಭ್ರಷ್ಟತೆಯನ್ನು ಸಿದ್ಧಿಮಾಡಿಕೊಂಡಿರುವವರನ್ನು ಆಕೆ ಸರಾಸಗಟಾಗಿ ನಿರಾಕರಿಸಿಬಿಡುತ್ತಾಳೆ. ಅವರನ್ನು ತುಂಬು ಕಂಠದಿಂದಲೇ ನಿಂದಿಸುತ್ತಾಳೆ. ಆಕೆ “ನಾಯಿಗೆ ನಾರಂಗವಕ್ಕುವುದೆ? ಎಂಬ ಪ್ರಶ್ನೆಯನ್ನು ಹಾಕುತ್ತ ಅಜ್ಞಾನಿ ಮತ್ತು ಪರತತ್ವಗಳಿಗೆ ನಾಯಿ ಹಾಗೂ ನಾರಂಗಗಳನ್ನು ಹೋಲಿಸಲು ಪ್ರಯತ್ನಿಸುತ್ತಾಳೆ. ಮುಂದೆ ಆಕೆ ವ್ರತದ ಮಹತ್ವವನ್ನು ಕುರಿತು ಹೇಳುಕೊಳ್ಳುತ್ತಾಳೆ. ವ್ರತವಿರುವುದು ಶಿವಬೀಜಕ್ಕಲ್ಲದೆ ಮತ್ತಾವುದಕ್ಕೆ ಎನ್ನುತ್ತ ತನ್ನ ವ್ರತನಿಷ್ಟೆಯನ್ನು ವ್ಯಕ್ತಪಡಿಸುತ್ತಾಳೆ. ಮುಖ್ಯವಾಗಿ ವ್ರತ ಅದರ ಆಚರಣೆಗೆ ಈಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದಂತೆ ಕಂಡರೂ ವ್ರತವೆಂಬುದು ಬದುಕಿನ ಶಿಸ್ತಿನ ಒಂದು ಭಾಗವೆಂಬಂತೆ ಪರಿಭಾವಿಸಿರುವುದು ನಮಗೆ ಮುಖ್ಯವಾಗುತ್ತದೆ.
ಇದೇ ರೀತಿಯ ವ್ರತಭ್ರಷ್ಟತೆಯ ಬಗ್ಗೆ ಶರಣೆ ಕಾಮವ್ವನ ವಚನವೂ ಸಹ ಇದೆ.ಉದಾಹರಣೆಗೆ,
ಎನ್ನ ಕರಣಂಗಳ ಲಿಂಗದಲ್ಲಿ ಕಟ್ಟುವೆ
ಗುರು ಲಿಂಗ ಜಂಗಮರ ಕಾಲ ಕಟ್ಟುವೆ
ವ್ರತಭ್ರಷ್ಟರ ನಿಟ್ಟೊರಸುವೆ
ಸುಟ್ಟು ತುರತುರನೆ ತೂರುವೆ
ನಿರ್ಭೀತಿ ನಿಜಲಿಂಗದಲ್ಲಿ!
ಶರಣೆ ಕಾಲಕಣ್ಣಿ ಕಾಮವ್ವ ಈಕೆಯ ಕೆಲವು ವಚನಗಳಲ್ಲಿ ಕರಣೇಂದ್ರಿಯಗಳನ್ನು ಲಿಂಗದಲ್ಲಿ ಕಟ್ಟುವ ನಿಷ್ಠೆ, ಗುರು-ಲಿಂಗ-ಜಂಗಮರ ಕಾಲ ಕಟ್ಟುವ ಶ್ರದ್ಧೆ, ಹೆಣ್ಣು-ಗಂಡೆಂಬ ಭೇಧವಿಲ್ಲದೆ ತನು ಮನಗಳ ಪಾವಿತ್ರತೆಯನ್ನು ಎತ್ತಿ ಹಿಡಿಯುವ ಪ್ರಾಮಾಣಿಕತೆ, . ವ್ರತಭ್ರಷ್ಟರ ನಿಟ್ಟೊರಸುವೆ ಎನ್ನುವ ಭಾವದಲ್ಲಿ ಆಕ್ರೋಶವಿದೆ. ಡಾಂಬಿಕ ಭಕ್ತರ ಬಗೆಗಿರುವ ರೊಚ್ಚು ದಂಗು ಬಡಿಸುತ್ತದೆ
ಅದೇ ರೀತಿ ವ್ರತಹೀನರ ಬಗ್ಗೆ ಬಸವಯ್ಯನವರ ಧರ್ಮಪತ್ನಿ ಕಾಳವ್ವೆ ಅವರ ವಚನವನ್ನು ಸಹ ಇಲ್ಲಿ ಉದಾಹರಿಸಬಹುದು
ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ
ಮಾತ ತಪ್ಪಿ ನುಡಿಯಲು ಬಾಯಿಗೆ ಮೂಲ
ವ್ರತಹೀನನ ನೆರೆವುದು ನರಕಕ್ಕೆ ಮೂಲ
ಕರ್ಮಹರ ಕಾಳೇಶ್ವರಾ!
ಬಸವಯ್ಯನವರ ಧರ್ಮಪತ್ನಿ ಕಾಳವ್ವೆ ವಚನದಲ್ಲಿ ಕಾಯಕಕ್ಕಿಂತಲೂ ವ್ರತಕ್ಕೆ ಹೆಚ್ಚು ಒತ್ತುಕೊಟ್ಟದು ಕಂಡು ಬರುತ್ತದೆ. ಕೈತಪ್ಪಿ ಕೆತ್ತಲು ಕಾಲಿಗೆ ಮೂಲ, ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ, ವ್ರತಹೀನನ ನೆರೆಯಲು ನರಕಕ್ಕೆ ಮೂಲ’ ಎನ್ನುವಲ್ಲಿ ಕಾಯಕ-ನುಡಿ-ವ್ರತ ಇವುಗಳನ್ನು ಎಚ್ಚರಿಕೆಯಿಂದ ಪಾಲಿಸಬೇಕು ಎಂಬುದನ್ನು ಒತ್ತಿ ಹೇಳಿದ್ದಾಳೆ.
ಸಿದ್ದಬುದ್ದಯನವರ ಧರ್ಮಪತ್ನಿ ಕಾಳವ್ವೆಯ ವಚನದಲ್ಲಿಯೂ ಸಹ ವ್ರಹೀನರ ಬಗ್ಗೆ ವಿವರ ಇದೆ. ಉದಾಹರಣೆಗೆ
ವ್ರತಭ್ರಷ್ಟನ, ಲಿಂಗಬಾಹ್ಯನ ಕಂಡಡೆ
ಸತ್ತ ನಾಯ, ಕಾಗೆಯ ಕಂಡಂತೆ.
ಅವರೊಡನೆ ನುಡಿಯಲಾಗದು ಬಿಮೇಶ್ವರಾ.
ವ್ರತಭ್ರಷ್ಟರನ್ನು ಮತ್ತು ಲಿಂಗಬಾಹ್ಯರನ್ನು ಟೀಕಿಸುತ್ತಾಳೆ. ಗಣಾಚಾರದ ನಿಷ್ಠುರತೆ ಇಲ್ಲಿ ಎದ್ದು ಕಾಣುತ್ತದೆ.
ಅದೇ ರೀತಿ ಕುಂಬಾರ ಗುಂಡಯ್ಯನವರ ಪುಣ್ಯಸ್ತ್ರೀ ಶರಣೆ_ಕೇತಲದೇವಿವರು ವ್ರತಹೀನನ ಬೆರೆಯಲಾಗದು ಎಂಬ ವಚನವನ್ನು ಸಹ ಉದಹರಿಸಬಹುದು
ಹದ ಮಣ್ಣಲ್ಲದೆ ಮಡಕೆಯಾಗಲಾರದು.
ವ್ರತಹೀನನ ಬೆರೆಯಲಾಗದು.
ಬೆರೆದಡೆ ನರಕ ತಪ್ಪದು.
ನಾನೊ ಬಲ್ಲೆನಾಗಿ ಕುಂಭೇಶ್ವರಾ.
–ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ
ಕೇತಲದೇವಿ ಕುಂಬಾರ ಕಾಯಕದ ಅನುಭವದ ಮೂಲಕವೇ ಅನುಭಾವವನ್ನು ಉಸುರುತ್ತಾಳೆ.
‘ಹದ ಮಣ್ಣಲ್ಲದೆ ಮಡಕೆಯಾಗಲಾರದು’ ಎಂಬುದು ಅವಳ ಅನುಭವದ ಮಾತು. ಮಡಕೆ ತಯಾರಿಸಲು ಯೋಗ್ಯವಾದ ಮಣ್ಣು ಬೇಕು. ಆ ಮಣ್ಣನ್ನು ಸೋಸಿ ಸೋಸಿ ನುಣುಪುಗೊಳಿಸಬೇಕು. ಅದರಲ್ಲಿ ಮಣ್ಣಲ್ಲದೇ ಬೇರೆ ಯಾವುದೇ ಕಸ ಕಡ್ಡಿ ಹರಳುಗಳು ಇರಬಾರದು. ಅಂಥ ಮೃದು ಮಣ್ಣನ್ನು ನೀರಲ್ಲಿ ಕಲಿಸಿ ತುಳಿದು ತುಳಿದು ಹದಗೊಳಿಸಬೇಕು. ಆಗ ನೈಸರ್ಗಿಕ ಸಂಪನ್ಮೂಲವಾದ ಆ ಮಣ್ಣು ಹೀಗೆ ಮಡಕೆ ಮಾಡಲು ಬೇಕಾದ ಸಿದ್ಧವಸ್ತುವಾಗುವುದು. ಈ ರೀತಿ ಪ್ರತಿಯೊಬ್ಬನೂ ನೈಸರ್ಗಿಕ ಸಂಪನ್ಮೂಲವಾಗಿದ್ದಾನೆ. ಸಂಸ್ಕಾರದ ಮೂಲಕ ಆತ ಹದಗೊಳ್ಳಬೇಕು. ಆಗ ಅವನು ಅನುಭಾವ ತುಂಬಿದ ಘಟವಾಗುವನು. (ಮಡಕೆಗೂ ಶರೀರಕ್ಕೂ ಘಟ ಎನ್ನುತ್ತಾರೆ.)
ಶರೀರವು ಅನುಭಾವ ತುಂಬುವ ಘಟವಾಗಬೇಕಾದರೆ ನಾವು ಎಲ್ಲ ರೀತಿಯ ದೌರ್ಬಲ್ಯಗಳಿಂದ ಮುಕ್ತರಾಗಬೇಕು. ವ್ರತವೆಂದರೆ ಪವಿತ್ರವಾಗಿ ಬದುಕುವ ಪ್ರತಿಜ್ಞೆ ಮಾಡುವುದು ಮತ್ತು ಹಾಗೆ ಬದುಕುವುದು. ವ್ರತಾಚರಣೆಯಿಂದ ನಮ್ಮ ಮನಸ್ಸನ್ನು ಸೋಸಿ ಸೋಸಿ ಶುದ್ಧಗೊಳಿಸಿಕೊಳ್ಳಬೇಕು. ಅದನ್ನು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಹದಕ್ಕೆ ತರಬೇಕು. ಆಗ ಕಾಯವು ಪ್ರಸಾದಕಾಯವಾಗುವುದು. ಅದುವೇ ಅನುಭಾವದ ಘಟ. ಪ್ರಸಾದ ಕಾಯದವರು ಬದುಕಿನಲ್ಲಿ ಅಂಥವರ ಜೊತೆಯೇ ಬೆರೆಯಬೇಕು. ಈ ಕಾರಣದಿಂದ ವ್ರತಹೀನನನ್ನು ಬೆರೆಯಲಾಗದು. ಹಾಗೆ ಹೋದರೆ ಬದುಕು ನರಕವಾಗುವುದು. ಈ ಕಾರಣದಿಂದಲೇ ತಾನು ಪವಿತ್ರವಾದ ಶರಣರ ಸಂಕುಲ ಬಿಟ್ಟು ಬೇರೆಲ್ಲಿಯೂ ಹೋಗುವುದಿಲ್ಲ ಎಂದು ಸೂಚಿಸುತ್ತಾಳೆ.
ಅದೇ ರೀತಿ ಕೊಟ್ಟಣದ ಸೋಮವ್ವ ರ ವಚನವನ್ನು ಸಹ ಉದಾಹರಣೆಯಾಗಿ ನೋಡಬಹುದು
ಹದ ತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ
ವ್ರತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ
ಅರಿಯದುದು ಹೋಗಲಿ ಅರಿದು ಬೆರೆದೆನಾದೊಡೆ
ಕಾದಕತ್ತಿಯಲಿ ಕಿವಿಯ ಕೊಯ್ವರಯ್ಯಾ!
ಒಲ್ಲೆಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರ
ಹೀಗೆ ಉದಾಹರಣೆ ನೀಡುತ್ತಾ ಹೋದರೆ ಅನೇಕ ಶರಣೆಯರು ವ್ರತಹೀನರ, ವ್ರತಭ್ರಷ್ಟರ ಬಗ್ಗೆ ವಚನಗಳಲ್ಲಿ ವಿಡಂಬನೆ ಮಾಡಿರುವದನ್ನು ಕಾಣಬಹುದು. ಎಡೆಮಠದ ನಾಗಿದೇವಯ್ಯ ನವರ ಪುಣ್ಯಸ್ತ್ರೀ ಮಸಣಮ್ಮ ಅವರ ಒಂದು ವಚನ ಮಾತ್ರ ಸಿಕ್ಕರೂ ಅದು ಅದ್ಭುತ ಒಳಾರ್ಥವನ್ನು ಹೊಂದಿದೆ..
–ಡಾ.ದಾನಮ್ಮ ಝಳಕಿ