ಮಹಿಳೆಯರಿಗೆ ಶರಣೆಯರ ಸಂದೇಶ
ಭೂತಕಾಲವನ್ನು ಪರಿಕ್ಷಿಸಿದಾಗ ಮೆಲ್ವರ್ಗದವರ ದರ್ಪದ ಆಡಳಿತ ಕೆಳವರ್ಗದವರ ಮೇಲೆ ಅನ್ಯಾಯ, ಅನಾಚಾರ, ದುರ್ನಡತೆ, ದೌರ್ಜನ್ಯ ಈ ತರಹದ ನೆಡೆಸುತ್ತಿರುವಾಗ ಕೆಳವರ್ಗದ ಜನ ಎಷ್ಟೊಂದು ಷೋಷಣೆಗೆ ಒಳಗಾಗುತ್ತಿದ್ದರೆಂಬುದು ನೆನೆಸಿದರೆ ಮೈ ನೆವರೆಳುತ್ತದೆ.
ಎಲ್ಲ ವರ್ಗ ಪಂಗಡಗಳನ್ನು ಕಿತ್ತಿ ಹಾಕಿ ಎಲ್ಲರಿಗೂ ಸಮನಾಗಿ ಅಕ್ಷರ ಜ್ಞಾನ, ಸಾಮಾಜಿಕ ಜ್ಞಾನ ಪಡೆದು ಶಿವಶರಣೆಯರು ನಿರ್ಭೀತಿಯಿಂದ ತಮ್ಮ ಕಾಯಕದ ಜೊತೆಗೆ ಬಿಚ್ಚು ಮನಸ್ಸಿನಿಂದ ಮಾತಾಡುತ್ತ ಬದುಕುವ ಪರಿಯನ್ನು ಕಂಡುಕೊಂಡರು
ಹಡಪದ ಅಪ್ಪಣ್ಣನವರ ಪುಣ್ಯಸ್ತ್ರೀ ಶರಣೆ ಲಿಂಗಮ್ಮ
ಹಡಪದ ಸಮಾಜದ ಶರಣ ಹಡಪದ ಅಪ್ಪಣ್ಣನವರ ಪತ್ನಿ ಶರಣೆ ಲಿಂಗಮ್ಮನವರು ಶ್ರೇಷ್ಠ ವಚನಗಾರ್ತಿಯಾಗಬೇಕೆಂದು ಗುರುತಿಸಿಕೊಂಡವರು. ವಚನಗಳ ಮೂಲಕ ಹೆಣ್ಣುಮಕ್ಕಳಿಗೆ ಪುರುಷ ಸಮಾನವಾದ ಪರಿಸರವನ್ನು ದೊರಕಿಸಿಕೊಡಬೆಕೆಂದು ಆಸೆಪಟ್ಟವರು. ಒಂದು ವೇಳೆ ಅಂತಹ ಪರಿಸರ ಲಭಿಸಿದರೆ ಅದರ ಭಕ್ತಿಯಲ್ಲಿ, ಅಭಿವ್ಯಕ್ತಿಯಲ್ಲಿ ಚಿಂತನೆಗೆ ತೊಡಗಿಕೊಳ್ಳುತ್ತಾರೆ ಎನ್ನುವುದಕ್ಕೆ ಇವರೇ ಉತ್ತಮ ನಿರ್ದರ್ಶನವಾಗುತ್ತಾರೆ. ಶರಣೆಯರು ಕೂಡ ತಮ್ಮ ಬದುಕಿನಲ್ಲಿ ನೊಂದ ಬೆಂದ ಭಾವನೆಗಳನ್ನೆಲ್ಲ ಮತ್ತು ಸಮಾಜಕೆ ಎಚ್ಚರಿಸುವಂತೆ, ಎದುರಿಸುವಂತೆ ವಚನಗಳನ್ನು ರಚಿಸಿದರು.
ಶರಣೆ ಸತ್ಯಕ್ಕ
ಡಾಂಭಿಕ ಗುರುಶಿಷ್ಯರನ್ನು ನೇರವಾಗಿ ವಿಡಂಬಿಸಿರುವ ಸತ್ಯಕ್ಕ ಭವಿಗಳನ್ನು ಟೀಕಿಸಿದ್ದಾಳೆ. ಭವಿಗಳನ್ನು ಈಕೆ ‘ಜಡಜೀವಿಗಳು’, ‘ಹುಟ್ಟಂಧಕರು’, ‘ಭಾಷೆಹೀನರು’, ಎಂದು ವಿಡಂಬಿಸಿದ್ದಾಳೆ. ಶರಣರ ಭವಿಯ ಕಲ್ಪನೆ ಗಮನಿಸುವಂತಿದೆ. ಅಹಂಭಾವದ ಅರಸರನ್ನು, ಅಸಮಾನತೆಯನ್ನು ಬಿತ್ತುವ ಪುರೋಹಿತರನ್ನು, ಕಾಯಕ ಮಾಡದ ಆಲಸಿಗಳನ್ನು ಅವರು ಭವಿಗಳೆಂದು ಕರೆದರು. ಮಹಾದೇವಿಯಕ್ಕನ ಜ್ಞಾನ, ನಿಂಬಿಯಕ್ಕನ ನಿಶ್ಚಯ, ಮುಕ್ತಾಯಕ್ಕನ ಅಕ್ಕರೆ, ಸತ್ಯಕ್ಕನ ಯುಕ್ತಿ…” ಎಂದು ಆದಯ್ಯನ ವಚನಗಳಲ್ಲಿ ಸತ್ಯಕ್ಕನ ಪ್ರಸ್ತಾಪವಿದೆ. ಮಹಾದೇವಿಯಕ್ಕ ಜ್ಞಾನಕ್ಕೆ, ಮುಕ್ತಾಯಕ್ಕ ಅಕ್ಕರೆಗೆ, ಹೆಸರಾಗಿರುವಂತೆ, ಸತ್ಯಕ್ಕ ಯುಕ್ತಿಗೆ ಪ್ರಸಿದ್ಧಳಾಗಿದ್ದಳೆಂದು ತಿಳಿದುಬರುತ್ತದೆ. ಶಕ್ತಿಗಿಂತ ಯುಕ್ತಿ ದೊಡ್ಡದೆಂದು ತಿಳಿದುಕೊಂಡಿದ್ದ ಸತ್ಯಕ್ಕ ಹೊಸ ರೀತಿಯಿಂದ ಚಿಂತಿಸಿದ್ದಾಳೆ; ಭವಿಬಿಜ್ಜಳನಿಗಾನು ಅಂಜುವೆನೆ?” ಎಂಬ ಬಸವಣ್ಣನವರ ವಚನದಲ್ಲಿ ಇದಕ್ಕೆ ಉತ್ತರವಿದೆ. ಸತ್ಯಕ್ಕನೂ ಕೂಡ ಭವಿಗಳನ್ನು ಕುರಿತು ತೀವ್ರವಾದ ವಿಂಡಬನೆ ಮಾಡಿದ್ದಾಳೆ.
ಆಯ್ದಕ್ಕಿ ಲಕ್ಕಮ್ಮ
ಬಡವರಿಗೆ ಬಡತನವೇ ಶಾಪವಲ್ಲ, ಸಿರಿವಂತನಿಗೆ ಶ್ರೀಮಂತಿಕೆ ವರವಲ್ಲ, ಮಾಡುವ ಕಾಯಕದ ಮೂಲಕ ಬಡವ- ಶ್ರೀಮಂತ ಅವಲಂಬಿಸಿರುತ್ತದೆ. ನಮ್ಮ ಅಂತರಾತ್ಮ ಪರಿಶುದ್ಧವಿದ್ದರೆ ಅದುವೇ ನಿಜವಾದ ಶ್ರೀಮಂತಿಕೆ, ಆತನಿಗೆ ಬಡತನದ ಕೊರಗು ಕಾಡುವುದಿಲ್ಲ. ಅಂತರಂಗ ಶುದ್ಧವಿಲ್ಲದೇ ಬಾಹ್ಯದಲ್ಲಿ ಸಂಪತ್ತು ಗ್ರಹಿಸಿ ಶ್ರೀಮಂತ ಎಂದು ಕರೆಯಲು ಸಾಧ್ಯವಿಲ್ಲ. ಮನಸ್ಸು ಪರಿಶುದ್ಧತೆ ಹೊಂದಿರುವನು ಮಾತ್ರ ನಿಜವಾದ ಶ್ರೀಮಂತ, ಆತನಿಗೆ ಯಾವುದೇ ಬಡತನ ಇರುವುದಿಲ್ಲ ಎನ್ನುವುದು ಶರಣೆ ಲಕ್ಕಮ್ಮಳ ಅಭಿಪ್ರಾಯವಾಗಿದೆ.
ಆಯ್ದಕ್ಕಿ ಲಕ್ಕಮ್ಮ ಆತ್ಮೋದ್ಧಾರ, ಲೋಕೊದ್ಧಾರಗಳೆಂಬ ದ್ವಿಮುಖ ಆಶಯ, ಕಾಯಕತತ್ವ, ನಿಶ್ಚಲ ನಿಲುವು, ಜ್ಞಾನದ ಅರಿವು, ಸಮತಾಭಾವ, ಇತರರ ಒಳ್ಳೆತನವನ್ನೇ ಪ್ರಶ್ನಿಸುವ ದಿಟ್ಟತನ, ಅತಿಯಾಸೆ ಒಳ್ಳೆಯದಲ್ಲವೆಂಬ ನಿಲುವು, ಆಕೆಯ ಅಚಲ ಆತ್ಮವಿಶ್ವಾಸ, ನಿರ್ಮಲ ವ್ಯಕ್ತಿತ್ವದ ಅನಾವರಣವಿದೆ. ಸಂದರ್ಭ ಸಮಯವಿದ್ದಾಗಲೆಲ್ಲ ಸಮಾಜಮುಖಿ ಕೆಲಸ ಮಾಡಿದರೆ ಅಂತಹ ಭಕ್ತನ ಅಂಗಳವೇ ಕೈಲಾಸ ಎಂದು ಲಕ್ಕಮ್ಮ ಹೇಳಿದ್ದಾಳೆ.
ಶರಣೆ ಅಮ್ಮುಗೆ ರಾಯಮ್ಮ
ಶರಣೆ ಅಕ್ಕಮ್ಮಳಂತೆ ಈಕೆಯೂ ಆಚಾರಶೀಲೆ. ಸಮಾಜದ ಓರೆಕೋರೆಗಳ ಬಗ್ಗೆ ತೀಕ್ಷ್ಣವಾಗಿ ವಿಮರ್ಶಿಸಿದ್ದಾಳೆ. ಹಲವಾರು ವಚನಗಳಲ್ಲಿ ಆತ್ಮನಿರೀಕ್ಷೆಯೂ ಕಂಡುಬರುತ್ತದೆ. ಅಲ್ಲದೆ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ
ಶರಣೆ ಅಕ್ಕಮಹಾದೇವಿ
ಪರಿಸರವನ್ನೆ ಪ್ರೀತಿಸಿದವರು, ಅದರಲ್ಲಿಯೇ ಬದುಕಿನ ಮೌಲ್ಯ ಕಂಡುಕೊಂಡವರು. ವೀರ ವಿರಾಗಿಣಿ, ಕದಳಿಯ ಕರ್ಪುರ, ಕನ್ನಡದ ಕೋಕಿಲೆ, ಪ್ರಥಮ ಕವಯಿತ್ರಿ, ಸ್ವತಂತ್ರ ವಿಚಾರವಾದಿ, ಅತುಲ ಛಲಗಾರ್ತಿ ಹೀಗೆ ನಾನಾ ವಿಧವಾಗಿ ಸಂಬೋಧಿಸಲ್ಪಟ್ಟ ಅಕ್ಕಮಹಾದೇವಿ ಕನ್ನಡ ನಾಡಿನ ಒಂದು ಅಪೂರ್ವ ಕೊಡುಗೆ.
ಸ್ವಸ್ಥ ಮನದಿಂದ – ಸ್ವಸ್ಥ ಕಾಯ, ಸ್ವಸ್ಥ ಕಾಯದಿಂದ – ಸುವಿಚಾರ, ಸುವಿಚಾರದಿಂದ – ಸದಾಚಾರ, ಸದಾಚಾರದಿಂದ – ಸದ್ಭಾವ, ಸದ್ಭಾವ ನಿರ್ಭಾವವಾಗುವುದೇ ಅಂಗ -ಲಿಂಗ ಹೆದರದಿರು ಮನವೆ ಬೆದರದಿರು ತನುವೆ ನಿಜವನರಿತು ನಿಶ್ಚಿಂತನಾಗಿರು ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ, ಎಲವದ ಮರನ ಇಡುವರೊಬ್ಬರ ಕಾಣಿ ಭಕ್ತಿಯುಳ್ಳವರ ಬೈವರೂಂದು ಕೋಟಿ ನಿಮ್ಮ ಶರಣರ ನುಡಿಯೇ ಎನಗೆ ಗತಿ ಸೋಪಾನ ಚೆನ್ನ ಮಲ್ಲಿಕಾರ್ಜುನ
ಪರಿಸರ, ಜನರ ಮನೋಭಾವ, ಪರಿಸ್ಥಿತಿ ನಮ್ಮನ್ನು ಭಯಕ್ಕೆ ಆತಂಕಕ್ಕೆ ಚಿಂತೆಗೆ ಗುರಿಮಾಡುತ್ತದೆ. ಅದರಲ್ಲೂ ಸಜ್ಜನರಿಗೆ ಒಳ್ಳೆಯವರಿಗೆ ತೊಂದರೆ ಹೆಚ್ಚು. ದುಷ್ಟರಿಗಿಂತ ಸಜ್ಜನರೇ ಪದೇ ಪದೇ ತೊಂದರೆಗೆ ಹೀಯಾಳಿಕೆಗೆ ಮಾನಸಿಕ ಹಿಂಸೆಗೆ ಗುರಿಯಾಗುತ್ತಾರೆ. ಪ್ರಯೋಜನ ಕಾರಿಯಾದ ಫಲಭರಿತ ಮಾವಿನ ಮರಕ್ಕೆ ಜನ ಕಲ್ಲು ಎಸೆಯುತ್ತಾರೆ. ಹಣ್ಣು ಬಿಡದ ಮರಕ್ಕೆ ಯಾರು ಕಲ್ಲು ಎಸೆಯುವುದಿಲ್ಲ. ಅದೇ ರೀತಿಯಲ್ಲಿ ಸಮಾಜದ ವರ್ತನೆ. ಇದನ್ನು ಅರಿತು ಹೆದರಬಾರದು ಬೆದರಬಾರದು. ವಾಸ್ತವವನ್ನು ಅರಿತು ನಿಶ್ಚಿಂತೆ ಮತ್ತು ಸಮಾಧಾನದಿಂದ ಇರಬೇಕು.
–ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ