ಅಕ್ಕನ ನಡೆ ವಚನ – 22
ನಿರಾಕರಣೆಯ ತಾದಾತ್ಮಭಾವ
ಮನೆ ಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ
ಬೇಡಿದಡೆ ಇಕ್ಕದಂತೆ ಮಾಡಯ್ಯ
ಇಕ್ಕಿದಡೆ ನೆಲಕ್ಕೆ ಬೀಳುವಂತೆ ಮಾಡಯ್ಯ
ನೆಲಕ್ಕೆ ಬಿದ್ದಡೆ ನಾನೆತ್ತಿಕೊಂಬುದಕ್ಕೆ ಮುನ್ನವೆ
ಸುನಿಯೆತ್ತಿಕೊಂಬಂತೆ ಮಾಡಾ ಚೆನ್ನಮಲ್ಲಿಕಾರ್ಜುನಯ್ಯ.
–ಅಕ್ಕಮಹಾದೇವಿ
‘ಆಧ್ಯಾತ್ಮದ ಜಗತ್ತು ಮಹಿಳೆಯರಿಗೆ ಸಾಧ್ಯವಿಲ್ಲ‘ ಎನ್ನುವ ಸಮಾಜ ವ್ಯವಸ್ಥೆಯ ನಡುವೆ ಅಕ್ಕಮಹಾದೇವಿ ಹೊಸ ದಿಕ್ಕನ್ನು ಹಿಡಿದು ಮುನ್ನಡೆದದ್ದು ವಿಶೇಷ. ಲಿಂಗಮ್ಮ ಮತ್ತು ಓಂಕಾರಶೆಟ್ಟಿಯ ಮಗಳಾಗಿ, ಗುರುಕುಲದ ‘ಗುರು’ ಲಿಂಗದೇವರಲ್ಲಿ ವಿದ್ಯಾಭ್ಯಾಸ ಪಡೆದು, ಬಸವಾದಿ ಶರಣರ ಆಚಾರ ವಿಚಾರಗಳಿಂದ ಆಕರ್ಷಿತಳಾಗಿ, ತನ್ನ ಅನುಭಾವದ ದಾರಿ ಹಿಡಿದು ಕಲ್ಯಾಣದತ್ತ ಸಾಗುತ್ತಾಳೆ. ಹಾಗೆ ಹೋಗುವ ಹಾದಿಯಲ್ಲಿ ಆದ ಅನುಭವವೇ ಮೇಲಿನ ವಚನ.
ಚಿಕ್ಕ ವಯಸ್ಸಿನಲ್ಲೇ ಅಪಾರ ಜ್ಞಾನ, ವೈರಾಗ್ಯ ಪಡೆದ ಶರಣೆ ಅಕ್ಕಮಹಾದೇವಿ. ಮಹಾರಾಜ ಕೌಶಿಕನ ಕಣ್ಣಿಗೆ ಕಾಣಿಸಿಕೊಂಡು, ಅವನ ಅರಮನೆಯಲ್ಲಿ ಕೆಲಕಾಲ ಉಳಿಯುವ ಅನಿವಾರ್ಯತೆ ಎದುರಾಗುತ್ತದೆ. ಅರಮನೆ, ಅಲ್ಲಿಯ ಐಶ್ವರ್ಯ ಯಾವುದೂ ಅವಳನ್ನು ಆಕರ್ಷಿಸುವುದಿಲ್ಲ. ರಾಜನಿಗೆ ಬಹಳ ಜಾಣ್ಮೆಯಿಂದ ಮೂರು ಶರತ್ತುಗಳನ್ನು ವಿಧಿಸುತ್ತಾಳೆ:
೧) ಲಿಂಗಪೂಜೆಯಲ್ಲಿ ಕುಳಿತಾಗ ತನ್ನ ಭಕ್ತಿಗೆ ಭಂಗ ತರಬಾರದು.
೨) ತಾನು ಜಂಗಮ ದಾಸೋಹ ಸೇವೆಯಲ್ಲಿ ನಿರತಳಾದಾಗ ಅಡ್ಡಿಯುಂಟು ಮಾಡಬಾರದು.
೩) ಮಹಾಪುರುಷರು, ಶರಣರೊಂದಿಗೆ ಚರ್ಚಿಸುವಾಗ ಮಧ್ಯೆ ಬಂದು ತೊಂದರೆ ಕೊಡಬಾರದು.
ಈ ಮೂರೂ ಶರತ್ತುಗಳಲ್ಲಿ ರಾಜ ಪರಾಭವನಾದ ಕೂಡಲೆ, ಅರಮನೆಯಿಂದ ಹೊರ ಬರುತ್ತಾಳೆ. ಹಾಗೆ ಹೊರ ಬಂದಾಗ ಆಕೆಗೆ ಕೈ ಬೀಸಿ ಕರೆದದ್ದು ತವರು ಮನೆಯಲ್ಲ, ಗುರು ಲಿಂಗದೇವರ ಗುರುಕುಲವೂ ಅಲ್ಲ, ಕಲ್ಯಾಣದ ಬಸವಾದಿ ಶರಣರು!
ಹನ್ನೆರಡನೇ ಶತಮಾನದಲ್ಲಿ ಯಾವುದೇ ವಾಹನಗಳ ಸೌಕರ್ಯಗಳಿಲ್ಲದೆ, ಕಾಲ್ನಡಿಗೆಯಲ್ಲೇ ಕಲ್ಯಾಣದತ್ತ ಹೊರಟಿದ್ದು ಇತಿಹಾಸ. ಹಸಿವಾದರೆ ಊರೊಳಗೆ ಭಿಕ್ಷೆ ನೀಡುವವರಿದ್ದಾರೆ. ನೀರಡಿಕೆಯಾದರೆ ಕೆರೆ, ಹಳ್ಳ, ಬಾವಿಗಳಿವೆ. ಮಲಗಲು ಹಾಳು ದೇಗುಲಗಳುಂಟು. ಆತ್ಮ ಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನಯ್ಯಾ ನೀನು ನನಗಾಗಿ ಇರುವೆ ಎಂದು ಅಕ್ಕ ಭಾವಿಸುತ್ತಾಳೆ.
ಹೀಗೆ ಹೇಳಿಕೊಳ್ಳುತ್ತ ಬಂದ ಸಂಕಷ್ಟಗಳನ್ನು ಎದುರಿಸುತ್ತ, ಸದಾ ಕಾಡುವ ಹಸಿವು, ನೀರಡಿಕೆಯಂತಹ ಮೂಲಭೂತ ‘ಬೇಕು’ಗಳಿಂದ ಬಿಡುಗಡೆಯೇ ಇರುವುದಿಲ್ಲ. ಅಕ್ಕನಿಗೆ ಕಾಡುವ ಈ ತರಹದ ಅಗ್ನಿ ಪರೀಕ್ಷೆಗಳು ಹೊಸ ಸವಾಲನೊಡ್ಡುತ್ತವೆ. ಆ ಸಂದರ್ಭದಲ್ಲಿ ಮೇಲಿನ ವಚನ ಹೊರಹೊಮ್ಮಿರಬಹುದು.
ದೇವಾಲಯದಲ್ಲಿ ರಾತ್ರಿ ಕಳೆದು, ತೀವ್ರ ಹಸಿವಿನಿಂದ ದಾರಿಯಲ್ಲಿ ಸಿಕ್ಕ ಊರೊಳಗೆ ಹೋಗಿರುತ್ತಾಳೆ. ‘ಮನೆ ಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ’ ಎಂದುಕೊಂಡು, ಒಂದು ಮನೆಯ ಮುಂದೆ ನಿಂತು ಬೇಡುತ್ತಾಳೆ. ಏನೂ ಪ್ರಯೋಜನವಾಗುವುದಿಲ್ಲ. ಮುಂದೆ ಸಾಗುತ್ತಾಳೆ. ಇನ್ನೊಂದು ಮನೆಗೆ ಹೋಗಿ ಬೇಡುತ್ತಾಳೆ. ಆ ಮನೆಯೊಡತಿ ಒಂದಿಷ್ಟು ಆಹಾರ ತಂದು ನೀಡಿದಾಗ, ಅವಳು ಕೊಟ್ಟ ರಭಸಕ್ಕೆ ಅದು ಕೈಯಿಂದ ಜಾರಿ ನೆಲಕ್ಕೆ ಬೀಳುತ್ತದೆ. ಇನ್ನೇನು ಹಾಗೇ ಎತ್ತಿಕೊಳ್ಳಬೇಕು ಎನ್ನುವಷ್ಟರಲ್ಲಿ ಅಲ್ಲೇ ಇದ್ದ ನಾಯಿ ಬಂದು ಲೊಚಲೊಚನೆ ತಿನ್ನಲಾರಂಭಿಸುತ್ತದೆ.
ಆಗ ಅಕ್ಕಮಹಾದೇವಿಗೆ ಈ ಬದುಕಿನಲ್ಲಿ ಹೀಗೇ ಕಷ್ಟಗಳು ಬರುತ್ತಿರಲಿ. ಅದನ್ನು ಎದುರಿಸಿ ಗಟ್ಟಿಯಾಗುವುದೇ ತನ್ನ ಆಯ್ಕೆ ಎನ್ನುವ ಸತ್ಯವನ್ನು ಈ ವಚನದಲ್ಲಿ ಅರುಹುತ್ತಾಳೆ. ಇದು ಆ ದೇವ ಚೆನ್ನಮಲ್ಲಿಕಾರ್ಜುನನ ಆಟವೆಂದು ಸ್ವೀಕರಿಸಿ, ಆಹಾರವೇ ಬೇಡವೆಂದು ನಿರ್ಧರಿಸಿ ಊರ ಹೊರಗಿನ ಅರಳಿಯ ಮರದ ಕೆಳಗೆ ಕುಳಿತು ಬಿಡುತ್ತಾಳೆ.
ಅಕ್ಕಮಹಾದೇವಿಯ ಜೀವನದಲ್ಲಿ ಕಷ್ಟಗಳು ಬಂದಾಗ ಅವಳು ಎದುರಿಸುವ ಪರಿ ಮಾದರಿ. ಏನೇ ಆಘಾತಗಳು ಎದುರಾದರೂ ಆಗಲಿ ಎನ್ನುವ ಧೈರ್ಯ ಮೆಚ್ಚುವಂಥದ್ದು. ಅವಳು ತನ್ನ ಸಂಕಷ್ಟಕ್ಕೆ ತಾನೇ ಹೊಣೆ ಎಂದು ಭಾವಿಸುವುದು, ವಿಭಿನ್ನ ದೃಷ್ಟಿಕೋನ. ಏನೇ ಬಂದರೂ ಬರಲಿ ಎನ್ನುತ್ತ ಯಾರನ್ನೂ ದೂಷಿಸದೆ, ದೂರದೆ ಹಾಗೆ ಮುಂದೆ ಸಾಗುತ್ತಾಳೆ.
ಅಕ್ಕನಂತೆ ನಾವೂ ಆ ದೇವನೊಡ್ಡುವ ಪರೀಕ್ಷೆಗಳಿಗೆ ಗಟ್ಟಿಯಾಗಿ ನಿಲ್ಲುವ ಕಡೆ ಗಮನ ಹರಿಸಿದರೆ ಅಲೌಕಿಕದ ದಾರಿಯಲ್ಲದಿದ್ದರೂ, ಲೌಕಿಕದ ಮಾರ್ಗವನ್ನಾದರೂ ಸರಳಗೊಳಿಸಿಕೊಳ್ಳುತ್ತ ಮುಂದೆ ಸಾಗಬಹುದು.
ನಾವು ‘ನಮ್ಮ ಬದುಕಿನಲ್ಲಿ’, ‘ನಮ್ಮ ಜೀವನದುದ್ದೇಶದಲ್ಲಿ’ ದೃಢವಾಗಿ ನಿಲ್ಲುವ ಪಾಠ ಈ ವಚನದಲ್ಲಿದೆ.
–ಸಿಕಾ