🌈 ಬಣ್ಣ ಬಣ್ಣದ ಕನಸು 🌈
ಕಾಣುತ್ತಲೇ ಇದ್ದೇನೆ ಪ್ರತಿದಿನ
ಈಡೇರದ ಬಣ್ಣ ಬಣ್ಣದ ಕನಸುಗಳ
ಮುಪ್ಪಿನ ದಿನಗಳ ಕಾಲ
ಮಸುಕಾಯ್ತು ಬಣ್ಣಗಳು…
ತಲೆ ತಿರುಗಿದಂತಾಯ್ತು ಕಣ್ಮುಚ್ಚಿದೆ
ತಿರುಗುತ್ತಿವೆ ಏಳು ಬಣ್ಣಗಳು
ಸುಳಿದಂತಾಯ್ತು ಬಿಳಿಯ ಬಣ್ಣ
ಕಣ್ಬಿಟ್ಟರೆ ಎಲ್ಲಾ ಕಪ್ಪು ಕಪ್ಪು..
ಮನ ನೊಂದು ಹೇಳಿತು
ಬಣ್ಣ ಬಣ್ಣದ ಬದುಕಿನಲ್ಲಿ
ನಿನ್ನನ್ನು ಅರಿಯುವರು ಯಾರು
ಬೇಕಿಲ್ಲ ನೀನು ಮರುಳೇ…
ಬದುಕಿನ ಬಣ್ಣಗಳೆಲ್ಲಾ ಬೆರಕೆ
ರಂಗೇ ಇರದ ಜೀವನ
ಬಣ್ಣವಿಲ್ಲದ ಮಾಸಲು ಬಟ್ಟೆ
ಚಿಂದಿಯಂತಾದ ಗೂಡು..
ಆಗಸದಲ್ಲಿ ತುಂತುರು ಮಳೆ
ಮೂಡಿತ್ತು ದೂರದಿ ಕಾಮನಬಿಲ್ಲು
ಕತ್ತೆತ್ತಿ ಕಣ್ಣರಳಿಸಿ ನೋಡಿದೆ
ನಕ್ಕು ಮಿಂಚಿ ಮರೆಯಾಯ್ತು…
ಗೀತಾ.ಜಿ.ಎಸ್
ಹರಮಘಟ್ಟ.ಶಿವಮೊಗ್ಗ