ಗುಬ್ಬಿಗೆ……

ಗುಬ್ಬಿಗೆ…….

ಮನೆಯ ಜಂತಿ ಬೋದಿಗೆಗಳಲಿ
ಮರದ ರೆಂಬೆ ಕೊಂಬೆಗಳಲಿ
ಮನೆಯಮಾಡಿ
ಕಿಟಕಿ ಬೆಳಕಿಂಡಿಗಳಿಂದ
ತೂರಿ ಮನೆಯೊಳಗೆ ಹಾರಾಡಿ
ಕಣ್ಣನು ಪಿಳಕಿಸುತ
ಕೊಟ್ಟ ಕಾಳನು ತಿಂದು
ಇಟ್ಟ ನೀರನು ಕುಡಿದು
ಚಿಂವ್ ಗುಟ್ಟುತ್ತಾ ಸುಳಿದಾಡುತಿದ್ದ
ಆ ನಿನ್ನ ದಿನಗಳೀಗ
ನನ್ನ ಮಕ್ಕಳಿಗೆ ಹೇಳುವ
ಸುಂದರವಾದ ಕತೆಯ ವಸ್ತುಗಳು ಮಾತ್ರ.

ಎರಡಿಂಚು ಗಾತ್ರದ ಮೈಯ ಜೀವ
ಎಲ್ಲೆಲ್ಲೂ ದಣಿವರಿಯದೆ ಹಾರಾಡುವ
ಅದಮ್ಯ ಉತ್ಸಾಹ ಅದೆಲ್ಲಿ ಕರಗಿತೋ…..
ನನ್ನ ಮನೆಯಲ್ಲೀಗ ಜಂತಿ ಬೋದಿಗೆಗಳಿಲ್ಲ
ಆದರೇನಂತೆ ಮನೆಯಂಗಳದಲ್ಲಿ
ಮರ ಇದ್ದೇ ಇದೆ……
ಮನೆಯ ಬಾಲ್ಕನಿಯಲ್ಲಿ
ನಿನಗಾಗಿ ಕಾಳು ನೀರುಗಳ
ಪಾತ್ರೆಗಳು ಕಾದು ಕಾದು
ನಿರಾಸೆಗೊಂಡು ಕಳ್ಳ ಬೆಕ್ಕುಗಳ
ದಾಳಿಗೀಡಾಗಿ ಬರಿದಾಗುತ್ತಿವೆ.

ಈಗೀಗ ನಾವು ಪ್ರತಿದಿನವೂ
ನೂರಾರು ದಿನಾಚರಣೆಯಲ್ಲಿದ್ದೇವೆ
ಇಂದು ದಿನಾಚರಣೆಯೂ ಇದೆ
ಅದಕೆಂದೇ ಕಾಣದಂತೆ ಎಲ್ಲೋ
ಕರಗಿದ ನಿನ್ನ ಫೋಟೋವನ್ನು
ಗೂಗಲ್ ನಿಂದ ತೆಗೆದಿರಿಸಿ
ತೋರಿಸಿ ನಿನ್ನ ಬಗ್ಗೆ ಕತೆಯಾಗಿಸಿ,
ಮಕ್ಕಳಿಗೆ ರಸವತ್ತಾಗಿ ಹೇಳಿ
ನಿನ್ನ ದಿನಾಚರಣೆಯನ್ನು
ಆಚರಿಸಿದ್ದೇನೆ….

ಬಾ. …..ಬಾ……ಗುಬ್ಬಿ
ಬಣ್ಣದ ಗುಬ್ಬಿ ಹಣ್ಣನು
ಕೊಡುವೆನು ಬಾ….ಬಾ…..
ತಿಳೀತಲ್ಲ ಆಗ ಹಾಡುತಿದ್ದ ಹಾಡು
ಈಗಲೂ ನಾ ಮರತಿಲ್ಲ…….
ನೀನೀಗ ಇರೋದು ಎಲ್ಲಿ
ಎಂಬುದೂ ತಿಳಿದಿಲ್ಲ…….
ಎಲ್ಲೇ ಇರು,ಹೇಗೋ ಇರು
ಟಿವಿಯಲ್ಲಿ ಸುದ್ದಿಯಾಗಿರೋ
ನಿನ್ನ ದಿನಾಚರಣೆಯನ್ನು
ತಿಳಿದು ಸಂತೋಷವಾಗಿರು.


-ಕೆ.ಶಶಿಕಾಂತ
ಲಿಂಗಸೂಗೂರ

Don`t copy text!