ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಸುರಪುರದ ಶ್ರೀ ಶ್ರೀನಿವಾಸ ಜಾಲವಾದಿ.
ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನುಪಮ ಕಾರ್ಯವೆಸಗುತ್ತಿರುವ ಇವರ ಹೆಸರನ್ನು ಕೇಳುತ್ತಿದ್ದ ನಾನು , ಮುಖತ: ಭೇಟಿಯಾದದ್ದು 3.2.2023ರಂದು ವಿಜಯಪುರದ ಶ್ರೀಕೃಷ್ಣ ಮಂದಿರದಲ್ಲಿ. ಅವರ ಸಂಬಂಧಿಕರ ಮಕ್ಕಳ ಉಪನಯನ ಕಾರ್ಯಕ್ರಮಕ್ಕೆ ಬರಲು ಆಮಂತ್ರಣವಿತ್ತ ನಿಮಿತ್ತ ಅಲ್ಲಿಗೆ ಹೋಗಿದ್ದೆ. ನಮ್ಮ ಮುಖಾ ಮುಖಿ ಭೇಟಿ ಇಬ್ಬರಿಗೂ ಸಂತಸ ತಂದಿತು. ಭೇಟಿಯಾಗುವವರೆಗೆ ಫೋನ ಸಂದೇಶಗಳೇ ನಮ್ಮನ್ನು ಬೆಸೆದಿದ್ದವು. ಸುಮಾರು ಒಂದು ಗಂಟೆಯ ಮೇಲ್ಪಟ್ಟು ವಿಷಯಗಳ ವಿನಿಮಯ.
ಈ ಭೇಟಿ ನಮ್ಮಿಬ್ಬರನ್ನು ಇನ್ನೂ ಹತ್ತಿರಕ್ಕೆ ಸೇರಿಸಿತು. ಸಾಹಿತ್ಯ ಕೃಷಿಗಳ ಕುರಿತು ಬಹಳಷ್ಟು ಚರ್ಚೆ , ತಮ್ಮ ವೃತ್ತಿಯ ಜತೆಗೆ ಸಾಹಿತ್ಯದಲ್ಲಿ ಬೆಳೆದು ಬಂದದ್ದನ್ನು ವಿವರಿಸಿದರು. ಇದೇ ಸಮಯದಲ್ಲಿ ಅವರ ಜೀವನ ಕುರಿತು ಏನಾದರೂ ಬರೆಯಬೇಕೆಂಬ ಉತ್ಟಟ ಇಚ್ಛೆಯಿಂದ ಈಗ ಬರೆಯಲು ಉಪಕ್ರಮಿಸಿದೆ.
ಇವರ ಜನ್ಮಭೂಮಿ ವಿಜಯಪುರ ಜಿಲ್ಲೆಯಾಗಿದ್ದರೂ “ಸುರಪುರ” ವನ್ನು ತಮ್ಮ ಕರ್ಮಭೂಮಿಯನ್ನಾಗಿ ಆರಿಸಿಕೊಂಡವರು ಇವರು. ಜೀವನ ನಿರ್ವಹಣೆಗಾಗಿ ಶಿಕ್ಷಕ ವೃತ್ತಿಯನ್ನು ಅವಲಂಬಿಸುತ್ತಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀರೆರೆದು ಪೋಷಿಸಿ ಸುರಪುರವನ್ನು ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲರೂ ನೆನೆಸುವಂತೆ ಮಾಡಿದ ಧೀಮಂತ ವ್ಯಕ್ತಿ. ಕವಿಗಳಾಗಿ , ಸಾಹಿತಿಯಾಗಿ , ವಿಡಂಬನಾಕಾರರಾಗಿ , ನಾಟಕ ರಚನೆಕಾರರಾಗಿ, ನಟರಾಗಿ, ನಿರ್ದೇಶಕರಾಗಿ, ಸಂಘಟನಾಕಾರರಾಗಿ, ಅಂಕಣಕಾರರಾಗಿ ಮತ್ತು ಆಕಾಶವಾಣಿ ಕಲಾವಿದರಾಗಿ ಮಿಂಚಿದವರು ಶ್ರೀ ಶ್ರೀನಿವಾಸ ಜಾಲವಾದಿಯವರು.
ಸಾಹಿತ್ಯ ಕ್ಷೇತ್ರದ ಎಲ್ಲ ಆಯಾಮಗಳನ್ನು ಬಲ್ಲ ಇವರು ಅದರ ಪೋಷಕರಾಗಿ ಹೊರಹೊಮ್ಮಿದ ಮೇರು ಸಾಹಿತಿ. ಅಚ್ಚುಕಟ್ಟಾದ ಸೇವೆಯಿಂದ ಎಲ್ಲದರಲ್ಲಿ ಮಾನ್ಯತೆ ಪಡೆದವರು. ಮೇಲಿನ ಎಲ್ಲ ಚಟುವಟಿಕೆಗಳು ಒಬ್ಬರಲ್ಲೇ ಸಮ್ಮಿಳಿತವಿರುವ ವ್ಯಕ್ತಿಗಳು ಸಿಗುವದು ಬಹಳ ಅಪರೂಪ. ಆದರೆ ಇವೆಲ್ಲವನ್ನು ಹೊಂದಿ ಸಾಹಿತ್ಯದಲ್ಲಿ ತಮ್ಮ ಹೆಸರನ್ನು ಮುಂಚೂಣಿಯಲ್ಲಿ ಬರುವಂತೆ ವ್ಯಕ್ತಿತ್ವವನ್ನು ಕಾಯ್ದುಕೊಂಡವರು.
ಕೌಟುಂಬಿಕ ಹಿನ್ನೆಲೆ.
1960ರಲ್ಲಿ ಜನ್ಮ ತಾಳಿದ ಇವರು ತಮ್ಮ ಶಿಕ್ಷಣವನ್ನು ವಿಜಯಪುರದಲ್ಲಿಯೇ ಪಡೆದು ಪದವೀಧರರಾದರು. ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತ ಉಪಪ್ರಾಂಶುಪಾಲರಾಗಿ ಸುರಪುರದಲ್ಲಿ ನಿವೃತ್ತಿ ಹೊಂದಿದರು. ನಿವೃತ್ತಿ ಜೀವನವನ್ನು ಅಲ್ಲಿಯೇ ಸಾಗಿಸುತ್ತಿದ್ದಾರೆ.
ಇವರ ಪತ್ನಿ ಸೌ . ಶಕುಂತಲಾ ಇವರೂ ಸಹ ಸರಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆಯಲ್ಲಿದ್ದಾರೆ. ಬರುವ ಜೂನನಲ್ಲಿ ಅವರು ನಿವೃತ್ತಿ ಹೊಂದಲಿದ್ದಾರೆ. ಸುಂದರವಾದ ಸಂಸಾರ. ಇಬ್ಬರು ಮಕ್ಕಳು ಇಂಜಿನೀಯರ ಪದವೀಧರರಾಗಿ ಬೆಂಗಳೂರಿನಲ್ಲಿ ವಾಸ. ಸುರಪುರದಲ್ಲಿ ಶ್ರೀಶ್ರೀನಿವಾಸ ಅವರು ತಮ್ಮ ತಾಯಿ ಮತ್ತು ಪತ್ನಿಯೊಂದಿಗೆ ಇದ್ದು ಸಾರಸ್ವತ ಲೋಕಕ್ಕೆ ತಮ್ಮ ಅಮೋಘ ಕೊಡುಗೆಯನ್ನು ನೀಡುತ್ತಲಿದ್ದಾರೆ.
ಸಾಧಿಸಿದ ಸಾಧನೆಗಳ ವಿವರ
1. 2016ರಿಂದ 2022ರವರೆಗೆ ಸುರಪುರ ತಾಲೂಕಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಯಶಸ್ವಿ ಕಾರ್ಯ .
2. ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಸುರಪುರದಲ್ಲಿ ಯಶಸ್ವಿಯಾಗಿ ನೆರವೇರಿಸಿದ್ದು ಇವರ ಸಂಘಟನಾ ಚತುರತೆಯನ್ನು ಎತ್ತಿ ತೋರಿಸುತ್ತದೆ. ಮಾಜಿ ಸಚಿವ ರಾಜಾಮದನಗೋಪಾಲ ನಾಯ್ಕ ಹಾಗೂ ಮಾಜಿ ಶಾಸಕ ಶ್ರೀ ರಾಜಾ ವೆಂಕಟಪ್ಪ ನಾಯಕರ ನೇತೃತ್ವದಲ್ಲಿ ಜರುಗಿಸಿದ ಕೀರ್ತಿ ಶ್ರೀಜಾಲವಾದಿ ಅವರದೇ. ಈ ಸಮ್ಮೇಳನದ ಅಧ್ಯಕ್ಷರಾದ ಶ್ರೀರಂಗರಾವ ವನದುರ್ಗ ಅವರಿಂದ ವಿಶೇಷವಾಗಿ ಗೌರವಿಸಲ್ಪಟ್ಟವರು.
3. ಜನೆವರಿ 3,4 2022ರಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಯಶಸ್ವಿ ಉಪನ್ಯಾನ ಕೊಟ್ಟದ್ದು.
4. ಮಾರ್ಚ 26,27 2022ರಲ್ಲಿ 17ನೇ ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸುದೀರ್ಘ ಉಪನ್ಯಾಸ. ಇದು ಇವರ ಘನತೆಯನ್ನು ಬಿಂಬಿಸುತ್ತಿದೆ.
5. ಕಲ್ಯಾಣ ಕರ್ನಾಟಕದಲ್ಲಿ ಕರೋನಾ ಲಾಕ್ ಡೌನ್ ವೇಳೆಯಲ್ಲಿ ಪ್ರಪ್ರಥಮವಾಗಿ ಆನಲೈನ್ ಕವಿಗೋಷ್ಠಿ ಆಯೋಜಿಸಿದ ಕೀರ್ತಿ ಇವರದು.
6. 2021ರಲ್ಲಿ “ಮಿಸ್ಸಳಭಾಜಿ” ಹಾಗೂ ಇತರ ಪ್ರಬಂಧಗಳ ಸಂಕಲನವನ್ನು ಕಲ್ಬುರ್ಗಿಯ ಪ್ರತಿಷ್ಠಿತ ಕನ್ನಡನಾಡು ಲೇಖಕರ ಹಾಗೂ ಓದುಗರ ಸಹಕಾರ ಸಂಘ ಪ್ರಕಾಶನದಿಂದ ಬಿಡುಗಡೆಗೊಳಿಸಿದ್ದು.
7. 2022ರಲ್ಲಿ ಕರ್ನಾಟಕ ಸಾಹಿತ್ಯ ಅಕೆಡಮಿ ಬೆಂಗಳೂರು ಇವರಿಂದ 75 ಪುಸ್ತಕಗಳ ಬಿಡುಗಡೆಯ ಮಹೋತ್ಸವದಲ್ಲಿ ಇವರ “ಸ್ವಾತಂತ್ರ್ಯ ಹೋರಾಟದಲ್ಲಿ ಸುರಪುರ “ ಕನ್ನಡಮತ್ತು ಇಂಗ್ಲೀಷ ಆವೃತ್ತಿಯ ಬಿಡುಗಡೆ.
8. ಸಾಹಿತ್ಯ ಅಕೆಡಮಿ ಹಾಗೂ ಇತರ ಸಂಘ ಸಂಸ್ಥೆಗಳಲ್ಲಿ ನೂರಾರು ಲೇಖನಗಳ ಪ್ರಕಟನೆಯ ಸಾಧನೆ ಎಲ್ಲರೂ ಮೆಚ್ಚುವಂತಹದ್ದು.
9. 10.10.22 ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ (ಬೆಗಳೂರು) ಇದರ ಮಾರ್ಗದರ್ಶಿಗಳಾಗಿ ಮತ್ತು ಸಲಹಾ ಸಮಿತಿ ಸದಸ್ಯರಾಗಿ ಶ್ರೀಮಹೇಶ ಜೋಶಿ ಕ.ಸಾ.ಪ. ಅಧ್ಯಕ್ಷರು ಇವರಿಂದ ನೇಮಕಗೊಂಡಿದ್ದು ಇವರ ನಿಪುಣತೆಯನ್ನು ತಿಳಿಸಿಕೊಡುತ್ತದೆ.
10. ರಾಜಮಾರ್ಗ, ಸಂದರ್ಶನ ವಿಜಯಪುರ ವಾರ್ತಾ ಮತ್ತು ಪ್ರಜಾವಾಣಿ ವರದಿಗಾರರಾಗಿ ಉತ್ತಮ ಕಾರ್ಯ ನಿರ್ವಹಣೆ.
11. ಕರ್ಮವೀರ ವಾರಪತ್ರಿಕೆಯಲ್ಲಿ “ಮಿಸ್ಸಳಭಾಜಿ” ಅಂಕಣ. 1980ರ ದಶಕದಲ್ಲಿ ವಿಜಯಪುರದ ಸ್ಥಳೀಯ ಪತ್ರಿಕೆಗಳ ಉಪಸಂಪಾದಕರಾಗಿಯೂ ಸೇವೆ.
12. ಶ್ರೀಶ್ರೀನಿವಾಸ ತಾವರಗಿರಿ ಇವರು ಹುಟ್ಟು ಹಾಕಿದ “ಕಲಾ ಮಾಧ್ಯಮ” ದಲ್ಲಿಯೂ ಪಾತ್ರವಹಿಸಿದ್ದು. “ ತಿರಗಪ್ಪ” ನಾಟಕವನ್ನು ದೆಹಲಿ, ಮುಂಬಯಿ, ಬೆಂಗಳೂರು ಮತ್ತು ಧಾರವಾಡ ದೂರದರ್ಶನದಿಂದ ಪ್ರಸಾರ. ಮಾಡಿದ ಸಾಧನೆ ಇವರದೇ.
13. ನಿರ್ದೇಶಕ ಶ್ರೀ ಟಿ. ಎಸ್. ರಂಗಾ ಅವರ ನಿರ್ದೇಶನದ “ಮೌನಕ್ರಾಂತಿ”ಗೆ ನಟರಾಗಿ ಹಾಗೂ ಸಹಾಯಕ ನಿರ್ದೇಶಕರಾಗಿ ಕಿರುತೆರೆಯಲ್ಲಿಯೂ ಅಮೋಘ ಸೇವೆ. ಇವರ ಸಾಧನೆಗಳ ಪಟ್ಟಿ ಇನ್ನೂ ಉದ್ದವಿದ್ದು ಎಲ್ಲವನ್ನೂ ಇಲ್ಲಿ ನಮೂದಿಸುವದು ಬಹಳ ಕಷ್ಟದ ಕೆಲಸವೇ.
ಇವರಿಂದ ರಚಿತವಾದ ಕೃತಿಗಳು ಸಾಕಷ್ಟು ಇದ್ದು , ಕೆಲವನ್ನಷ್ಟೇ ತಮ್ಮ ಅವಗಾಹನೆಗೆ ತರಬಯಸುತ್ತೇನೆ.
1. ಕರ್ನಾಟಕದ ಕವಿತೆಗಳು.
2. ಕನಸುಗಳು ಸಾಯುತ್ತಾವೆ.
3. ಮೀಸೆಮಾವ (ವಿಡಂಬನಾತ್ಮಕ ಹಾಸ್ಯ ಸಂಕಲನ).
4. ಸರಪಳಿ (ಕಥಾ ಸಂಕಲನ)
5. “ಸಂತಸ ಅರಳುವ ಸಮಯ” , 56 ಲೇಖಕರನ್ನೊಳಗೊಂಡ ಲಲಿತ ಪ್ರಬಂಧ ಸಂಕಲನ ಸಂಪಾದನೆ.
6. ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ ಸುರಪುರ.
7. ಮಿಸ್ಸಳಭಾಜಿ ಹಾಗೂ ಇತರ ಲಲಿತ ಪ್ರಬಂಧಗಳು.
8. ಸಾಠಕಬರದ ಸುಂದರಿಯರು.
9. ಉರ್ದು ಗಜಲ್ ನ ಅನಭಿಷಿಕ್ತ ದೊರೆ “ತನ್ಹಾ” ತಿಮ್ಮಾಪುರಿ
ಇವೆಲ್ಲ ಕೃತಿಗಳು ಉತ್ತಮ ರಚನೆಯ ಬರಹಗಳಾಗಿವೆ. ಶಬ್ದಗಳ ಜೋಡಣೆ , ವಾಕ್ಯಗಳ ಗಂಭೀರತೆ ಓದುಗರ ಮನವನ್ನು ಸೊರೆಗೊಂಡು ಆಯಾ ಲೋಕಕ್ಕೆ ಕರೆದೊಯ್ದಂತೆ ಭಾಸವಾಗುತ್ತದೆ. ಅಷ್ಟು ಸುಂದರವಾಗಿ ಬರೆಯಲ್ಪಟ್ಟಿವೆ. ವಿಡಂಬನಾತ್ಮಕ ಲೇಖನಗಳು ಓದುಗರ ಮನಸ್ಸನ್ನು ಕದಿಯದೇ ಇರಲಾರವು. ಸಾಠಕಬರದ ಸುಂದರಿಯರು ಇವರ ರಚನೆಗಳಲ್ಲಿ ಮೇಲು ಪಂಕ್ತಿಯಲ್ಲಿದೆ. ಅಲ್ಲಿ ಸೇನಾಪತಿ ಅಫ್ಝಲಖಾನ ಮತ್ತು ಅವನ ಸುಂದರ ಪತ್ನಿಯರ ವರ್ಣನೆಯಿದೆ. ಸುಂದರವಾದ ರಚನೆ ಮತ್ತು ಓದಲೇಬೇಕಾದ ಲೇಖನ. ಸರಪಳಿ ಕಥಾ ಸಂಕಲನ ಉತ್ತಮ ಸಂಕಲನವಾಗಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಸುರಪುರ ಈ ಕೃತಿಯೂ ಗುಣಮಟ್ಟದ ರಚನೆಯಾಗಿದೆ. ಸುರಪುರದ ಗತವೈಭವವನ್ನು ಮತ್ತೆ ನೆನಪಿಗೆ ತರುವಂತಹ ಕುಸುಮವಾಗಿದೆ ಎಂದರೂ ತಪ್ಪಿಲ್ಲ.
ಇದಲ್ಲದೇ ಗಜಲ್ ಗಳ ರಚನೆಯಲ್ಲಿಯೂ ಸಿದ್ಧ ಹಸ್ತರು. ಅನೇಕ ಗಜಲ್ ಗಳನ್ನು ಬರೆದಿದ್ದಾರೆ. ಮತ್ತು ಉರ್ದು ಗಜಲ್ ನ ಅನಭಿಷಿಕ್ತ ದೊರೆ ತನ್ಹಾ ತಿಮ್ಮಾಪುರಿ ಇವರ ಕುರಿತು ಉತ್ತಮ ಲೇಖನವನ್ನು ಬರೆದಿದ್ದಾರೆ. ಶ್ರೀತಿಮ್ಮಾಪುರಿ ಇವರ ಪರಿಚಯ ರಚನೆಗಳು ಮತ್ತು ಅವರು ಬೆಳೆದು ಬಂದ ವಿಷಯಗಳನ್ನು ಓದುಗರ ಮನ ಮುಟ್ಟುವಂತೆ ವಿವರಿಸಿದ್ದಾರೆ. ಇದು 5 ಪುಟಗಳ ಸುದೀರ್ಘ ಬರಹವಾಗಿದೆ.
ಪ್ರಶಸ್ತಿಗಳು ಮತ್ತು ಇತರ
1. ಕರ್ನಾಟಕ ರಕ್ಷಣಾ ವೇದಿಕೆ ಸುರಪುರ ಇವರಿಂದ ಗೌರವ ಸನ್ಮಾನ ಮತ್ತು ಪ್ರಶಸ್ತಿ ಫಲಕ
2. ಜಯಕರ್ನಾಟಕ ಸುರಪುರ ಇವರಿಂದ ಸನ್ಮಾನ ಮತ್ತು ಪ್ರಶಸ್ತಿ 2022ರಲ್ಲಿ
3. ಕನ್ನಡ ಸಾಹಿತ್ಯ ಪರಿಷತ್ತಿನಿಂದ ವರ್ಷದ ವ್ಯಕ್ತಿ ಸನ್ಮಾನ
ಇವು ನನಗೆ ಗೊತ್ತಿದ್ದವು ಮಾತ್ರ. ಇನ್ನೂ ಅನೇಕ ಸನ್ಮಾನ ಪ್ರಶಸ್ತಿ ಗೌರವಗಳಿಗೆ ಇವರು ಭಾಜನರಾಗಿದ್ದಾರೆ.
ಕವಿ, ಸಾಹಿತಿ, ವಿಡಂಬನೆಕಾರ , ನಾಟಕಕಾರ, ಅಂಕಣಕಾರ ಇವರಿಂದ ಮತ್ತಷ್ಟು ಸಾಹಿತ್ಯದ ಸೇವೆಯಾಗಲಿ ಎಂದು ಮನ:ಪೂರ್ವಕವಾಗಿ ಹಾರೈಸುವೆ. ಇನ್ನಷ್ಟು ಕೃತಿಗಳು ಇವರಿಂದ ರಚನೆಗೊಂಡು ಹೊರಬಂದು ಸಾಹಿತ್ಯಕ್ಷೇತ್ರ ಶ್ರೀಮಂತವಾಗಲಿ ಎಂದು ಆಶಿಸುವೆ.
ಇವರನ್ನು ಮತ್ತೊಮ್ಮೆ ಹೃದಯಪೂರ್ವಕವಾಗಿ ಅಭಿನಂದಿಸಿ ನನ್ನ ಈ ಲೇಖನವನ್ನು ಮುಗಿಸುವೆ
-ಕೃಷ್ಣ ನಾರಯಣ ಬಿಡಕರ್, ವಿಜಯಪುರ