ಕುಡಿಯುವ ಬೇವು ಮತ್ತು ಉಗಾದಿ

ಬಿಸಿಲ ನಾಡಿನ ಬೇವು…

 

ಕುಡಿಯುವ ಬೇವು ಮತ್ತು ಉಗಾದಿ

ಬಿಸಿಲ ನಾಡು ಕಲ್ಯಾಣ ಕರ್ನಾಟಕ ಅನೇಕ ತಿಂಡಿ-ತಿನಿಸು ಹಾಗೂ ಊಟಕ್ಕೆ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಹಾಗಂತ ಇಡೀ ಏಳು ಜಿಲ್ಲೆಗಳಲ್ಲಿ ಒಂದೇ ತೆರನಾದ ಪದ್ಧತಿಯಿಲ್ಲ.

ಬೀದರ,ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಒಂದೊಂದು ರೀತಿಯ ಆಹಾರ ಪದ್ಧತಿ ರೂಢಿಯಲ್ಲಿದೆ. ನೀರಾವರಿ ಪ್ರದೇಶಗಳಾದ ಬಳ್ಳಾರಿ ಹಾಗೂ ರಾಯಚೂರು ಪ್ರದೇಶಗಳ ಪ್ರಧಾನ ಆಹಾರ ಅಕ್ಕಿ ಆದರೆ ಇತರ ಜಿಲ್ಲೆಗಳಲ್ಲಿ ಜೋಳ ಹೆಚ್ಚು ಬಳಸುತ್ತಾರೆ.

ಕೊಪ್ಪಳ, ಬೀದರ, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ರೊಟ್ಟಿ ಮತ್ತು ಚಪಾತಿಯ ಜೊತೆಗೆ ಅನ್ನವಿದೆ ಆದರೆ ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಅನ್ನದ ಜೊತೆಗೆ ರೊಟ್ಟಿ ಆಗಾಗ ಸೇರಿಕೊಳ್ಳುತ್ತದೆ.

ಪ್ರತಿ ಅರವತ್ತು ಕಿಲೋಮೀಟರ್ ಅಂತರದಲ್ಲಿ ಆಹಾರ ಮತ್ತು ಭಾಷೆಯಲ್ಲಿ ವ್ಯತ್ಯಾಸ ಕಾಣುತ್ತೇವೆ,ಅದು ಭಾರತದ ವಿಷಯಕ್ಕೆ ಅಕ್ಷರಶಃ ನಿಜ. ಆಹಾರ, ಉಡುಗೆ ತೊಡುಗೆಗಳಲ್ಲಿ ಅನಂತ ವಿವಿಧತೆ ಮತ್ತು ಅಸಂಖ್ಯ ಹಬ್ಬಗಳು. ಪ್ರತಿ ಹಬ್ಬಗಳಲ್ಲಿ ಊಟದ್ದೇ ಸಡಗರ, ವಿಶೇಷವಾಗಿ ದೇಸಿ ಸಿಹಿಗಳಾದ ಹೋಳಿಗೆ,ಉಂಡಿಗಳದೇ ಕಾರುಬಾರು. ಬಾಲ್ಯದ ದಿನಗಳಲ್ಲಿ ನಮ್ಮೂರು ಕಾರಟಗಿಯಲ್ಲಿ ನಾನು ತಿಂದಷ್ಟು ಸಿಹಿಯನ್ನು ಯಾರೂ ತಿಂದಿಲ್ಲ. ಅದನ್ನು ನಮ್ಮ ಸಮಕಾಲೀನ ಗೆಳೆಯರು ಈಗಲೂ ಗೇಲಿ ಮಾಡುತ್ತಾರೆ. ತಿನ್ನುತ್ತಿದ್ದ ಹೋಳಿಗೆ, ಕರ್ಚಿಕಾಯಿ, ಕೀರು, ಹಾಗೂ ಕುಡಿಯುವ ಬೇವು ಸೇವಿಸಿದ ಲೆಕ್ಕ ಕೇಳಿದರೆ ನೀವ್ಯಾರು ಊಟಕ್ಕೆ ಕರೆಯುವುದಿಲ್ಲ ಬಿಡಿ!

ಡೈಯಟ್ ಎಂಬ ಪದ ನಮ್ಮ ಊರಲ್ಲಿ ಚಲಾವಣೆ ಇಲ್ಲದ ಕಾಲದಲ್ಲಿ ಹುಟ್ಟಿದವನು ನಾನು. ನಮ್ಮ ಇಡೀ ಪರಿವಾರ ಸಿಹಿ ತಿನ್ನಲು ಎತ್ತಿದ ಕೈ ಎಂದು ಅಜ್ಜಿ ಹೇಳಿದ್ದು ಬರೀ ನೆನಪಲ್ಲ. ದೀಪಾವಳಿ ಸಮಯದಲ್ಲಿ ಕರ್ಚಿಕಾಯಿ ತಿಂದದ್ದು ನೆನಪಾದರೆ ಈಗಲೂ ಅಚ್ಚರಿ. ಈಗ ದೇಹ ಸೇರಿದ ಡಯಾಬಿಟಿಸ್ ಡೈಯಟ್ ಹಂತಕ್ಕೆ ತಲುಪಿಸಿದೆ.

ಸಿಹಿ ಮರೆತು ದಶಕವಾಯಿತಾದರೂ ಭಯಂಕರ ನಿಯಂತ್ರಣ ಎಂದೇನು ಇಲ್ಲ. ಸುಗರ್ ಲೆಸ್ ಕಾಫಿ ಇದ್ದರೂ ಆಗಾಗ ಅನಾಹುತ ಸಿಹಿ ತಿನಿಸುಗಳು ದೇಹ ಸೇರಿ ಎಚ್.ಬಿ.ಏ.ಒನ್.ಸಿ ಯ ಲೆಕ್ಕ ತಪ್ಪಿಸುತ್ತವೆ. ನಾನು ಯಾವುದೇ ವಿಷಯಕ್ಕೆ ಅತಿಯಾದ ಶಿಸ್ತನ್ನು ರೂಪಿಸಿಕೊಂಡಿಲ್ಲ,ಆರೋಗ್ಯದ ವಿಷಯದಲ್ಲಿ ಕೂಡ ಅದೇ ಅಶಿಸ್ತು. ಐದು ವರ್ಷಗಳಿಂದ ಡೈಯಟ್ ಪ್ರಜ್ಞೆ ಇದ್ದಾಗ್ಯೂ ಹಬ್ಬದ ದಿನ ಮೈ ಮರೆತು ಬಾಲ್ಯಕ್ಕೆ ಜಾರಿ ಬಿಡುತ್ತೇನೆ.

ಡೈಯಾಬಿಟಿಕ್ ವ್ಯಕ್ತಿಯೊಬ್ಬ ಹೋಟೆಲ್ ಪ್ರವೇಶಿಸಿ ಜಾಮೂನು, ಪೇಡೆ ಪುರಿ,ದೋಸೆ ತಿಂದು ಚಹಾ ಆರ್ಡರ್ ಮಾಡುತ್ತಾನೆ, ‘ಏ ತಮ್ಮಾ ಚಹಾಕ್ಕ ಒಂದ ಕಾಳು ಸಕ್ಕರೆ ಹಾಕಬೇಡ ನಂಗ ಭಯಂಕರ ಶುಗರ್ ಐತಿ’ ಎಂದಾಗ ವೇಟರ್ ಮೂರ್ಛೆ ಹೋಗುವುದೊಂದು ಬಾಕಿ!
ಕೆಲವೊಮ್ಮೆ ನನ್ನ ಸ್ಥಿತಿಯೂ ಹಿಂಗೆಯೇ.

ಇಷ್ಟೆಲ್ಲಾ ಪುರಾಣ ಹೇಳಲು ಇಂದು ನನ್ನ ಎದುರಿಗಿರುವ ‘ಕುಡಿಯುವ ಬೇವು’ ಕಾರಣ. ಈ ಕುಡಿಯುವ ಬೇವು ಇತರ ಪ್ರದೇಶದಲ್ಲಿ ಇಲ್ಲ, ಇದು ಕೇವಲ ಕಲ್ಯಾಣ ಕರ್ನಾಟಕದ ಕೆಲವು ಪ್ರದೇಶಗಳಿಗೆ ಸೀಮಿತ. ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಡ್ರೈ ಫ್ರುಟ್ಸ್, ಉದಾಹರಣೆಗೆ ಗೋಡಂಬಿ,ಉತ್ತತ್ತಿ,ಕೊಬ್ಬರಿ, ಕಲಸಕ್ರಿ ಜಾಜಿಕಾಯಿ,ದ್ರಾಕ್ಷಿ, ಬಾದಾಮಿ, ಕೇರು ಬೀಜಗಳನ್ನು ಕುಟ್ಟಿ ತಯಾರಿಸಿದ ಬೇವಿನ ಎಚ್ಚದ ಜೊತೆಗೆ, ಮಾವು, ಹುಳಿ ಬೆರೆಸಿದ ‘ನೀರ ಬೇವು’ ಅತ್ಯಂತ ಶ್ರೇಷ್ಠ ಪಾನೀಯ.
ಪ್ರತಿ ಉಗಾದಿ ಸಂದರ್ಭದಲ್ಲಿ ದೊಡ್ಡ ಗಡಿಗೆ ತುಂಬಾ ಸಂಗ್ರಹಿಸಿ ಆಗ ಕುಡಿಯುತ್ತಿದ್ದರು. ಆಫ್ ಕೋರ್ಸ್ ಈಗ ಫ್ರಿಟ್ಜ್ ಆ ಸ್ಥಾನ ತುಂಬಿದೆ.
ಇಂದು ಉಗಾದಿ ಹಬ್ಬದಂದು ನನ್ನ ಮನೋನಿಗ್ರಹ ಕಸಿದುಕೊಂಡು, ಒಂದು ಗ್ಲಾಸ್ ಬೇವು ಕುಡಿಯಲು ಕೆಣಕಿದ್ದರಿಂದ ಇಷ್ಟೊಂದು ಬರೆಯಬೇಕಾಯಿತು.

ಬೇವು ಕುಡಿದರೆ ಮಾತ್ರ ಉಗಾದಿ ಆಚರಿಸಿದಂತೆ, ತಮಗೆಲ್ಲ ಉಗಾದಿ ಹಬ್ಬದ ಶುಭಾಶಯಗಳು.

ಸಿದ್ದು ಯಾಪಲಪರವಿ

Don`t copy text!