ಒಳಸುಳಿ
ಎಡೆಬಿಡದೆ ಕಾಡುವೆ
ಬಿಡುಗಡೆಯೇ ಇಲ್ಲವೆ?
ನಡುನಡುವೆ ತೂರುವೆ
ನುಡಿಗೊಡದೆ ಓಡುವೆ
ಕಳ್ಳತನದಿ ನುಸುಳುವೆ
ಮಳ್ಳತನದಿ ಒಳಸುಳಿವೆ
ಹಳ್ಳ ಹಿಡಿದಿದೆ ಮನವು
ಸಿಳ್ಳೆ ಹಾಕಿದೆ ತನುವು
ದಾರಿಗಾಣದು ನೆಲವು
ಓರೆ ನೋಟದ ಜಲವು
ಬರಿದೊ ಬರಿದೀ ಒಲವು
ಮರೆವ ಮೂಸದ ಬಲವು
ನೊರೆ ನೊರೆಯು ಕಡಲು
ತೊರೆಯಲರಿಯದು ಒಡಲು
ಹರೆಯ ಮೀಂಗೊಡ ಸಿಡಿಲು
ಮೊರೆಯ ಜೇಂಗೊಡ ಮಡಿಲು
ತರಿದು ತಿನ್ನುವೆ ಸುರಿದು
ಇರಿದು ಇಣುಕುವೆ ತಿರಿದು
ಉರಿದು ಹೋಗುವೆ ಹರಿದು
ಅರಿವಿನೊರತೆಯು ಬರಿದು
–ನೀ.ಶ್ರೀಶೈಲ