ಗಝಲ್.
ಸಂಜೆಯ ಹಾಡಿಗೆ ಹೆಜ್ಜೆ ಹಾಕುತ ಚಂದ್ರಾಮ ಬಂದನು ನೋಡು
ಜೀಕುತ ಜೋಲಿ ಹೊಡೆಯುವ ತೆಂಗಿನ ಮರೆಯಲಿ ನಿಂದನು ನೋಡು.
ಆಗಸದ ಚೆಲುವನೆಲ್ಲ ಸೂರೆಗೊಂಡು ನಗುತಿರುವನಲ್ಲವೇ
ಸಾಗುವ ಮೋಡಗಳ ತೆರೆಯಲಿ ಇಣುಕುವೆ ಎಂದನು ನೋಡು.
ಸಾಗರದ ರೌದ್ರ ನರ್ತನ ಪೌರ್ಣಮಿಯ ಬೆಳಕಲಿ ಆನಂದವು.
ಆಗರವು ಮುತ್ತು ರತ್ನಗಳ ಆಳವ ಅಳೆಯುತ ಮಿಂದನು ನೋಡು.
ಚಾಂದನಿಯ ಸೊಬಗು ಚಿನ್ನದ ಬಣ್ಣದ ಜಲದೊಂದಿಗೆ ನರ್ತಿಸುತಿದೆಯಲ್ಲ.
ಸಾಧನೆಯ ಹಾದಿ ಸುಲಭವಲ್ಲ ಎಂಬ ಪಾಠವ ಅರಿತು ನೊಂದನು ನೋಡು
ನೀಲಿ ಬಾನ ಒಡೆಯನ ಮೋಹಕ ಅಲೆದಾಟಕೆ ಜಯಾ ಸೋತಿಹಳು
ಲಾಲಿಯ ಸಂಗೀತದ ಅಲೆಗಳು ಅರಹುವ ಆರ್ಭಟಕ್ಕೆ ಬೆಂದನು ನೋಡು –
–ಜಯಶ್ರೀ ಭ ಭಂಡಾರಿ.ಬಾದಾಮಿ