ಶರಣೆ ಸತ್ಯಕ್ಕ
ಹನ್ನೆರಡನೆ ಶತಮಾನದ ಶ್ರೇಷ್ಠ ವಚನಕಾರ್ತಿ, ನಿಷ್ಠುರ ಅಭಿವ್ಯಕ್ತಿಗೆ ಹೆಸರಾದವಳು ಶರಣೆ ಸತ್ಯಕ್ಕ. ಹೆಸರಿಗೆ ತಕ್ಕಂತೆ ಪ್ರಾಮಾಣಿಕ ಸತ್ಯ ಸಾಧಕಿ. ಆಧ್ಯಾತ್ಮ ಸಾಧನೆಗೈದ ಶಿವಶರಣೆ. ವಚನ ಚಳುವಳಿಯ ಆಶಯವನ್ನು ನಿರ್ದಿಷ್ಠ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿ ವಚನಗಳ ಮೂಲಕ ಸಮಾಜವನ್ನು ಎಚ್ಚರಿಸಿದವಳು. ನಡೆ ನುಡಿಯಲ್ಲಿ ಸಾಮರಸ್ಯ ಸಾಧಿಸಿ ಶರಣ ಚಳುವಳಿಯಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಂಡಿದ್ದಳು.
ಸತ್ಯಕ್ಕ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಸಮೀಪವಿರುವ ಜಂಬೂರಿನವಳು. ಆರಾಧ್ಯ ದೈವ ಜಂಬುಕೇಶ್ವರ. ಅವಳ ಅಂಕಿತನಾಮ ಶಂಭುಜಕ್ಕೇಶ್ವರ. ಶಿವಭಕ್ತರ ಮನೆಯ ಅಂಗಳದ ಕಸ ಗೂಡಿಸುವ ಕಾಯಕ ಅವಳದಾಗಿತ್ತು. ತನ್ನ ಕಾಯಕದ ಬಗ್ಗೆ ಅಪಾರ ಗೌರವ ಮತ್ತು ಶ್ರದ್ಧೆಯನ್ನು ಹೊಂದಿದ್ದಳು. ಅವಳ ಕಾಲ 1160 ಎಂದು ಊಹಿಸಲಾಗಿದೆ. ಸತ್ಯಕ್ಕನ 27 ವಚನಗಳು ಲಭ್ಯವಾಗಿವೆ. ಸತ್ಯಕ್ಕನ ಉಲ್ಲೇಖ ಹರಿಹರನ ಲಿಂಗಾರ್ಚನೆಯ ರಗಳೆ, ಬೈರವೇಶ್ವರ ಕಾವ್ಯ ಶಿವತತ್ವ ಚಿಂತಾಮಣಿ, ಚೆನ್ನಬಸವ ಪುರಾಣ, ಪಾಲ್ಕುರಿಕೆ ಸೊಮೇಶ್ವರ ಪುರಾಣ, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ, ಅಲ್ಲದೇ ಜನಪದ ಗೀತೆಗಳಲ್ಲೂ ಉಲ್ಲೇಖ ದೊರೆಯುತ್ತದೆ. ಸತ್ಯಕ್ಕ ನಿಷ್ಠಾಭಕ್ತಿಗೆ ಪ್ರಸಿದ್ಧಳಾಗಿದ್ದಳೆಂದು ತಿಳಿದುಬರುತ್ತದೆ. ಶಿವನಲ್ಲದೆ ಅನ್ಯದೈವದ ಶಬ್ದವ ಕೇಳುವುದಿಲ್ಲ ಎಂಬುದು ಅವಳ ಅಚಲ ನಿರ್ಧಾರವಾಗಿತ್ತು. ಲಿಂಗ ಸಮಾನತೆಗೆ ಬೆಲೆಕೊಟ್ಟವರು ವಚನಕಾರರು ಅಂತೆಯೇ ಸತ್ಯಕ್ಕನೂ ಕೂಡ ಹೆಣ್ಣು ಗಂಡು ಎನ್ನುವದು ಜೈವಿಕ ಭಿನ್ನತೆ ಮಾತ್ರ ಎನ್ನುತ್ತಾಳೆ. ಅವಳ ಈ ವಚನ –
ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ ಅದು ಜಗದ ದಾಹೆ ಬಲ್ಲವರ ನೀತಿಯಲ್ಲ ಏತರ ಹಣ್ಣಾದರೂ ಮಧುರವೇ ಕಾರಣ ಅಂದವಿಲ್ಲದ ಕುಸುಮಕ್ಕೆ ವಾಸನೆಯೆ ಕಾರಣ ಇದರಂದವ ನೀನೇ ಬಲ್ಲೆ ಶಂಭು ಜಕ್ಕೇಶ್ವರಾ
ಹೆಣ್ಣನ್ನು ಕೀಳಾಗಿ ಕಾಣುವ ಅಗತ್ಯವಿಲ್ಲವೆಂಬುದನ್ನು ಅನೇಕ ಶಿವಶರಣರು ಹೇಳಿದ್ದರೂ, ಹಣ್ಣಿಗೆ ರುಚಿ, ಹೂವಿಗೆ ಸುವಾಸನೆ ಮುಖ್ಯವಾಗುವಂತೆ ಹೆಣ್ಣು ಗಂಡಿನ ವಿಚಾರದಲ್ಲೂ ತನ್ನದೆ ಆದ ವಿಶೇಷತೆ ಇರುತ್ತದೆ ಎಂದು ತಿಳಿಸಿದ ಸತ್ಯಕ್ಕನ ಈ ನಿಲುವು ಮತ್ತು ಚಿಂತನೆ ವಿಶೇಷವಾದದ್ದು.
ಆಸೆ ಎಂಬುದು ಎಲ್ಲರ ಮನಸ್ಸಿನಲ್ಲೂ ಉಂಟು. ಇದು ಎಲ್ಲ ಕಾಲದಲ್ಲೂ ಕಂಡು ಬರುತ್ತದೆ. ಆ ಭೃಷ್ಟಾಚಾರದ ಕರಾಳ ಸ್ವರೂಪವನ್ನು ನಾವು ನೋಡುತ್ತಲೆ ಬಂದಿದ್ದೇವೆ. ಆದರೆ ಹನ್ನೆರಡನೇ ಶತಮಾನದ ಶರಣರು ಇದನ್ನು ಅಲ್ಲಗಳೆದಿದ್ದಾರೆ. ಅದರಲ್ಲೂ ಸತ್ಯಕ್ಕನ ಈ ವಚನದಲ್ಲಿ ಅವಳ ಸ್ವಭಾವ ತಿಳಿದುಬರುತ್ತದೆ.
ಲಂಚ ವಂಚನಕ್ಕೆ ಕೈಯಾನದಭಾಷೆ ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದಡೆ ಕೈಮುಟ್ಟಿ ಎತ್ತಿದೆನಾದಡೆ ಅಯ್ಯ ನಿಮ್ಮಾಣೆ ನಿಮ್ಮ ಪ್ರಮಥರಾಣೆ ನೀವಿಕ್ಕಿದ ಭಿಕ್ಷೆಯೊಳಗಿಪ್ಪೆನಯ್ಯಾ ಶಂಭು ಜಕ್ಕೇಶ್ವರ ದೇವಯ್ಯಾ ನಿಮ್ಮಾಣೆ.
ಇದು 900 ವರ್ಷಗಳ ಹಿಂದೆ ಹೇಳಿದ ವಚನ. ಇಂದಿಗೂ ಅವಶ್ಯಕವಿರುವ ಮೌಲ್ಯವನ್ನು ಎತ್ತಿ ಹಿಡಿದಿದೆ. ರಾಜಕೀಯ, ಸಾಮಾಜಿಕ, ಸ್ಥಿತ್ಯಂತರಗಳು ಕಲುಷಿತಗೊಂಡ ಇಂದಿನ ದಿನಗಳಲ್ಲಿ ಈ ಉನ್ನತ ವಿಚಾರಗಳು ದಾರಿದೀಪವಾಗಬಲ್ಲವು. ಭೃಷ್ಟಾಚಾರ ಒಂದು ಸಾಮಾಜಿಕ ರೋಗವಾಗಿ ಹರಡಿರುವ ಸಂದರ್ಭದಲ್ಲಿ ಸತ್ಯಕ್ಕನ ವಚನ ನಮ್ಮನ್ನು ಎಚ್ಚರಗೊಳಿಸುತ್ತದೆ.
ಸತ್ಯಕ್ಕ ಕಸಗೂಡಿಸುವಾಗ, ಯಾರದೋ ಮನೆಗೆಲಸ ಮಾಡುವಾಗ ಎಷ್ಟೊಂದು ಪ್ರಾಮಾಣಿಕತೆಯಿಂದ ಬದುಕಿದವಳು. ದಾರಿಯಲ್ಲಿ ಏನೇ ಬಿದ್ದರೂ ಅದನ್ನು ಕೈಯಿಂದ ಮುಟ್ಟಿದರೆ ನನ್ನನ್ನು ನರಕದಲ್ಲಿ ಅದ್ದಿ ನೀನೆದ್ದು ಹೋಗ ಎನ್ನುವ ಸತ್ಯ ನಿಷ್ಠುರತೆ ಅವಳದು. ಕೊಟ್ಟ ಭಿಕ್ಷೆಯಲ್ಲಿ ತೃಪ್ತಿಯಿಂದ ಬದುಕುವೆ ಎಂಬ ಸಮಾಧಾನ ತೋರುತ್ತಾಳೆ.
ಭಕ್ತಿ ಎಂಬುದು ಅಂತರAಗಕ್ಕೆ ಸಂಬಂಧಿಸಿದ್ದು ಬಹಿರಂಗದ ಆಡಂಬರದ ಭಕ್ತಿ ಭಕ್ತಿಯಲ್ಲ ಎನ್ನುವ ಸತ್ಯಕ್ಕ ಅರ್ಚನೆ, ಪೂಜೆ ನೇಮವಲ್ಲ ಮಂತ್ರ ತಂತ್ರ ನೇಮವಲ್ಲ. ಧೂಪ ದೀಪಾರತಿ ನೇಮವಲ್ಲ ಪರಧನ ಪರಸ್ತ್ರೀ ಪರದೈವಗಳಿಗೆ ಆಸೆ ಪಡದೇ ಇದ್ದರೆ ಸಾಕು ಅದೇ ನೇಮ ಎನ್ನುತ್ತಾಳೆ. ಅಲ್ಲದೆ ಪೌರಾಣಿಕ ಕಥೆಗಳನ್ನು ನಂಬಲಾರಳು. ವೈಚಾರಿಕ ಪ್ರಜ್ಞೆ ಮುಖ್ಯ ಎಂಬುದನ್ನು ಸತ್ಯಕ್ಕನ ಅನೇಕ ವಚನಗಳಲ್ಲಿ ನೋಡುತ್ತೇವೆ.
ಸತ್ಯಕ್ಕ ಶಿವನೊಂದಿಗೆ ತುಂಬಾ ಸಲುಗೆಯಿಂದ ಮಾತನಾಡಬಲ್ಲಳು, ಪ್ರಶ್ನಿಸಬಲ್ಲಳು ಅವಳ ಮುಗ್ಧ ಭಕ್ತಿ, ನಿಷ್ಠುರ ಪ್ರಶ್ನೆಯನ್ನು ಎತ್ತಿ ತೋರಿಸುವ ವಚನ ಹೀಗಿದೆ –
ಏಕೆನ್ನ ಬಾರದ ಭವಂಗಳಲ್ಲಿ ಬರಿಸಿದೆ? ಏಕೆನ್ನ ಘೋರ ಸಂಸಾರದಲ್ಲಿರಿಸಿದೆ? ಏಕೆನೆಗೆ ಕರುಣಿಸಲೊಲ್ಲದೆ ಕಾಡಿಹೆ? ಏಕೆ ಹೇಳಾ ಎನ್ನ ಲಿಂಗವೆ? ಅನು ಮಾಡಿದ ತಪ್ಪೇನು? ಸಾಕಲಾಗದೆಂದು ಅಕ್ಕೊತ್ತಿ ನೂಕಿದಡೆ ಏಕೆ ನಾ ನಿಮ್ಮ ಬಿಡುವೆ ಶಂಭು ಜಕ್ಕೇಶ್ವರಾ.
ಏಕೆ ನನ್ನ ಬಾರದ ಭವಂಗಗಳಲ್ಲಿ ಏಕೆ ನನ್ನ ಘೋರ ಸಂಸಾರದಲ್ಲಿರಿಸಿದೆ ನಾ ಮಾಡಿದ ತಪ್ಪಾದರೂ ಏನು ಎಂಬ ಪ್ರಶ್ನೆ ಸತ್ಯಕ್ಕನಿಗೆ ಸಹಜವಾಗಿ ಬಂದಿದೆ. ಶುದ್ಧ ಭಕ್ತಿಗೆ ಹೆಸರಾದ ಸತ್ಯಕ್ಕ ತನ್ನ ಆರಾಧ್ಯ ದೇವರೊಂದಿಗೆ ಮಾತನಾಡುತ್ತಾ ಎಂತಹ ತೊಂದರೆ ಕೊಟ್ಟರೂ ನಿಮ್ಮನ್ನು ಬಿಡುವುದಿಲ್ಲ ಎಂಬ ಭರವಸೆ ಮತ್ತು ಸ್ವಸಾಂತ್ವನದ ನಡೆ ಇಲ್ಲಿ ಕಂಡು ಬರುತ್ತದೆ.
ಹನ್ನೆರಡನೆ ಶತಮಾನದ ಪ್ರತಿಯೊಬ್ಬ ಶಿವಶರಣರು ತಮ್ಮ ಸಮಕಾಲೀನ ಶರಣರನ್ನು ಸ್ಮರಿಸುವ ವಿನಯವನ್ನು ತೋರಿಸುತ್ತಾರೆ. ಸತ್ಯಕ್ಕನೂ ಕೂಡ ತಾನು ವಿಶ್ವಾಸದಿಂದ ನಂಬಿದ ಬಿಲ್ಲಮರಾಯ, ಗೊಲ್ಲಾಳರಾಯ, ಕೆಂಭಾವಿ ಬೋಗಣ್ಣ, ಬಳ್ಳೇಶ್ವರ ಮಲ್ಲಯ್ಯ, ದಾಸ ದುಗ್ಗಳೆಯರು, ಮರುಳ ಶಂಕರದೇವ ಹೀಗೆ ಅನೇಕ ಶರಣರ ಶ್ರೀಪಾದಕ್ಕೆ ನಮೋ ಎನ್ನುವೆ ಎಂಬ ವಿನಯ ತೋರಿದ್ದಾಳೆ. ಅವಳು ಮನೆಗೆಲಸ ಮತ್ತು ಕಸ ಗೂಡಿಸುವ ಕಾಯಕ ಮಾಡುತ್ತಿದ್ದರೂ ವಚನದಲ್ಲಿ ಬಳಸುವ ಪದಗಳು ಮತ್ತು ಭಾಷಾ ಪ್ರೌಢಿಮೆ ನೋಡಿದರೆ ಅವಳು ವಿದ್ಯಾವಂತೆಯಾಗಿದ್ದಂತೆ ತೋರುತ್ತದೆ. ವಚನಗಳು ಕಡಿಮೆಯಾಗಿದ್ದರೂ ಪರಿಣಾಮದ ದೃಷ್ಟಿಯಿಂದ ವೈಚಾರಿಕತೆಯ ದೃಷ್ಟಿಯಿಂದ ನೋಡಿದಾಗ ಅವರ ಆಧ್ಯಾತ್ಮದ ತುಡಿತ ಮತ್ತು ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ.
-ಡಾ.ಶರಣಮ್ಮ ಗೊರೇಬಾಳ
ಪ್ರಾಂಶುಪಾಲರು
ವಿದ್ಯಾರಣ್ಯ ಪದವಿ ಪೂರ್ವ ಕಾಲೇಜ, ಧಾರವಾಡ