ಮಾತು ಕುತ್ತಾಗದೆ,ಮುತ್ತಾದರೆ ಜೀವನ ಸೊಗಸು

 

ಮಾತು ಕುತ್ತಾಗದೆ,ಮುತ್ತಾದರೆ ಜೀವನ ಸೊಗಸು”.


ಮಾತು ಮನುಷ್ಯನಿಗೆ ದೇವರು ಕೊಟ್ಟ ಸುಂದರ ವರ.ಮಾತು ಮನುಷ್ಯನಿಗೆ ಅಭಿವ್ಯಕ್ತಿಯ ಉತ್ತಮ ಮಾಧ್ಯಮ.ಅರಿತು ಮಾತನಾಡಿದರೆ ಬದುಕು ಬಂಗಾರ.ಮರೆತು ಮಾತನಾಡಿದರ ಬದುಕು ಸಂಕಷ್ಟದ ಬೀಡು.ಸದಾ ಯೋಚಿಸಿಯೇ ಮಾತನಾಡುವದೆ ಒಳಿತು.ಮಾತು ಬೆಳ್ಳಿ ಮೌನ ಬಂಗಾರ ಉಕ್ತಿ ನೆನಪಿನಲ್ಲಿ ಇದ್ದರೆ ಚೆನ್ನ.

ಮನದ ಮಾತಿಗೆ ಮೌನ ಬೇಲಿಯಾದರೆ ಜೀವನ ಸೊಗಸು.ಆದರೆ ಕೆಲವು ಸಂದರ್ಭಗಳಲ್ಲಿ ಮಾತು ಆಡಲೇಬೇಕು ಅಲ್ಲವೆ.ಕೈಗೆ ಸಿಗದ,ಕಣ್ಣಿಗೆ ಕಾಣದ ನಮ್ಮ ಮನಸ್ಸು ಮನಬಂದಂತೆ ಮಾತನಾಡಿ ಎದುರಿದ್ದವರನ್ನ ಘಾಸಿಗೊಳಿಸುವುದುಂಟು.ಅದಕ್ಕೆ ಇರಬೇಕು ನಮ್ಮ ಹಿರಿಯರು ಮನಸ್ಸೆಂಬುದು ಮಾಯೆ,ಮನಸ್ಸು ಮರ್ಕಟ ಎಂದು ಹೇಳಿರುವದು.ಮನುಷ್ಯನ ಹತ್ತು ಹಲವು ಸಮಸ್ಯೆಗಳಿಗೆ ಅವನು ಮನಸ್ಸಿಗೆ ದಾಸನಾಗಿರುವದೇ ಕಾರಣ.
ಮನುಷ್ಯ ತನ್ನ ಮನಸ್ಸಿನ ದಾಸ್ಯತನದಿಂದ ಹೊರಬಂದು ಅದನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡರೆ ಖಂಡಿತ ಜೀವನದಲ್ಲಿನ ನೂರಾರು ಸಮಸ್ಯೆಗಳಿಗೆ ಉತ್ತರ ಹುಡುಕಬಹುದು ಅಲ್ಲದೆ ಇತರರನ್ನು ಸಮಸ್ಯೆಯ ಸುಳಿಯಿಂದ ದೂರ ಮಾಡಬಹುದು.ಬೆಲ್ಲ ಇರದಿದ್ದರೂ ಬೆಲ್ಲದಂಥ ಮಾತುಗಳು ಇರಬೇಕು. ಅದೂ ಬಿಟ್ಟು “ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು” ಅನ್ನೊ ಹಾಗೆ ಆಗಬಾರದು.
” ಛೇ,ಅವರು ಹಾಗೆ ಮಾತನಾಡಿದ್ದು,ನನ್ನ ಮನಸ್ಸಿಗೆ ಆಘಾತವಾಯಿತು, ಎಂದು ಕೊರಗಿದರೆ ಏನು ಪ್ರಯೋಜನ.ಅವರ ಮಾತನ್ನು ನಮ್ಮ ಮನಸ್ಸಿಗೆ ಬಂದಂತೆ ತಿಳಿದು ನಮ್ಮನ್ನು ನಾವೇ ಘಾಸಿಗೊಳಿಸುತ್ತೆವೆ. ಸುತ್ತಮುತ್ತಲಿನ ಆಗುಹೋಗುಗಳನ್ನು ವಿಶಾಲ ಹೃದಯದಿಂದಲೇ ಸ್ವೀಕರಿಸುತ್ತ ಅದಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದಾಗ ಮಾತ್ರ ಎಲ್ಲರೊಂದಿಗೆ ಸಂತೋಷವಾಗಿರಬಹುದು.

ವದನದಲಿ ಮಂದಹಾಸವಿರಲಿ……
ಕಪಟವಿಲ್ಲದೆ ಸ್ವಚ್ಛ ಮಾತುಗಳನ್ನಾಡುವಾಗ ಮುಖದಲ್ಲಿ ಗಂಭೀರ,ಆಕರ್ಷಕ  ನಗು ಇದ್ದರೆ ಅಂಥವರ ಮಾತು ಕೇಳಿಸಿಕೊಳ್ಳಲು ಮನಸ್ಸು ಹಾತೊರೆಯುತ್ತದೆ.ನಮ್ಮ ಮಾತನ್ನು ಇನ್ನೊಬ್ಬರು ಸರಿಯಾಗಿ ಆಲಿಸಲು ಮುಗುಳ್ನಗೆಯ ಲೇಪ ಉಪಯೋಗವಾಗುತ್ತದೆ. ಆಗ ಅವರು ಸಹಜವಾಗಿಯೇ ಮಂದಹಾಸದೊಂದಿಗೆ ಉಲ್ಲಾಸಕರ ಮಾತುಗಳನ್ನೆ ಆಡುತ್ತಾರೆ. ಆದ್ದರಿಂದ ನಾವಾಡುವ ಮಾತಿನ ಪೀಠಿಕೆಗೆ ನಿಷ್ಕಪಟ ನಗೆಯ ಹೊಳಪಿರಲಿ.

ಮಾತು ಮುತ್ತಾಗಿರಲಿ……
ಬೇರೆಯರು ನಮ್ಮ ಬಗ್ಗೆ ಸದಾ ಒಳ್ಳೆಯ ಮಾತುಗಳನ್ನೆ ಆಡಲಿ ಎಂದೂ ಸಲ್ಲದ ಒಲ್ಲದ ಮಾತು ಆಡಬಾರದೆಂದರೆ ಮೊದಲು ನಾವು ಉತ್ತಮ ಮಾತುಗಳನ್ನಾಡುವದನ್ನು ಕಲಿಯಬೇಕು. ಮುತ್ತಿನಂಥ ಮಾತನಾಡುವದನ್ನು ಕಲಿತರೆ, ಬೇರೆಯವರ ವಜ್ರದಂತ ಕಠಿಣ ಮಾತುಗಳಿಗೂ ಎದೆಯೊಡ್ಡಿ ನಿಲ್ಲುವ ಶಕ್ತಿ ಬರುತ್ತದೆ.ಮಾತು ಮಾತಿಗೆ ನಿಂದಿಸುವ ನಮ್ಮ ಗುಣವನ್ನು ಮೊದಲು ಬಿಟ್ಟುಬಿಡಬೇಕು. ಮಾತು ಮನಸ್ಸಿನ ಕನ್ನಡಿಯೆಂಬುದನ್ನು ಅರಿಯಬೇಕು.ನಾವು ಏನು ಮಾತಾಡುತ್ತೆವೆಯೋ ಹೇಗೆ ಮಾತಾಡುತ್ತೆವೆಯೋ ಅದೇ ನಮಗೆ ಮರಳಿ ಬರುತ್ತದೆ.ಕಾರಣ ನಮ್ಮ ಮಾತು ಮೂಲೋಕ ಗೆಲ್ಲುವಂತಿರಬೇಕು.ನಾವಾಡುವ ಮಾತು ಹೀಗಿರಲಿ ಗೆಳೆಯಾ ಮೌನದ ಮೊಗ್ಗೆಯೊಡೆದು ಬರಲಿ.ಎದುರಿದ್ದವರನ್ನು ಶೀತಲಗೊಳಿಸುವಂತಿರಲಿ.”ಮಾತೇ ಮುತ್ತು,ಮಾತೇ ಮೃತ್ಯು” ಎಂಬುದನ್ನು ಮನಸ್ಸಿನ ಪರದೆಯಲ್ಲಿ ನೆನಪಿರಬೇಕು. ಮಾತೆಂಬುದು ಜ್ಯೊತಿರ್ಲಿಂಗ ಹಾಗೂ ನುಡಿದರೆ ಮುತ್ತಿನಹಾರದಂತಿರಬೇಕು ಎಂಬ ಶರಣರ ವಚನಗಳು ಸದಾ ನೆನಪಿಸಿಕೊಳ್ಳುತಿರಬೇಕು. ಒಟ್ಟಿನಲ್ಲಿ ನಾವು ಮನಸ್ಸಿನ ಗುಲಾಮರಾಗುವ ಬದಲು ಮನಸ್ಸನ್ನೆ ನಮ್ಮ ಹಿಡಿತದಲ್ಲಿಟ್ಟುಕೊಂಡರೆ ಜೀವನ ಆನಂದಮಯವಾಗಿರುತ್ತದೆ.ನಿರಾತಂಕವಾಗಿರುತ್ತದೆ.

ಜಯಶ್ರೀ ಭ.ಭಂಡಾರಿ.
ಬಾದಾಮಿ

Don`t copy text!