e- ಸುದ್ದಿ, ಮಾನ್ವಿ:
ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಮಾನ್ವಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಬೆಳಿಗ್ಗೆಯಿಂದಲೇ ಪಟ್ಟಣದ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಕೇಂದ್ರಗಳು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಕಾರ್ಮಿಕರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಪಟ್ಟಣದ ಬಸವ ವೃತ್ತದಲ್ಲಿ ಜಮಾಯಿಸಿದ ಎಐಟಿಯುಸಿ, ಸಿಐಟಿಯು ಹಾಗೂ ಎಐಯುಟಿಯುಸಿ ಸಂಘಟನೆಗಳ ನೂರಾರು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಮೂರು ತಾಸು ಧರಣಿ ಸತ್ಯಾಗ್ರಹ ನಡೆಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಕಾರ್ಮಿಕ ಹಾಗೂ ರಐತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಕುಟುಂಬಗಳಿಗೆ ಪ್ರತಿ ತಿಂಗಳು ರೂ.7,500 ಸಹಾಯ ಧನ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 200ದಿನಗಳ ಕೆಲಸ ನೀಡಬೇಕು. ಉದ್ಯೋಗ ಖಾತರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಕಾರ್ಮಿಕರೆಂದು ಮಾನ್ಯತೆ ನೀಡಬೇಕು. ಶಿಕ್ಷಣ, ಅರೋಗ್ಯ, ವಿದ್ಯುತ್, ದೂರ ಸಂಪರ್ಕ, ರೈಲ್ವೇ, ವಿಮಾ ಹಾಗೂ ಬ್ಯಾಂಕಿಂಗ್ ಸೇರಿದಂತೆ ಸಾರ್ವಜನಿಕ ವಲಯಗಳ ಖಾಸಗೀಕರಣ ಪ್ರಕ್ರಿಯೆ ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರಧಾನ ಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಶಂಶಾಲಂ ಅವರಿಗೆ ಸಲ್ಲಿಸಲಾಯಿತು. ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಎಚ್.ಶರ್ಪುದ್ದೀನ್ ಪೋತ್ನಾಳ, ಸಂಗಯ್ಯ ಸ್ವಾಮಿ ಚಿಂಚರಕಿ, ಚನ್ನಬಸವ ಜಾನೇಕಲ್, ಡಿ.ವೀರನಗೌಡ, ಎಂ.ಬಿ.ಸಿದ್ರಾಮಯ್ಯ ಸ್ವಾಮಿ, ಸಿದ್ದಲಿಂಗಯ್ಯ, ಬಿ.ನಿತ್ಯಾನಂದ, ರುದ್ರಪ್ಪ ನಾಯಕ, ಲಲಿತಾ, ದ್ರಾಕ್ಷಾಯಿಣಿ, ಸುಜಾತ, ನರಸುಬಾಯಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.