ವಚನ ಮಂಥನ
ಸರ್ವಕಾಲಕ್ಕೂ ಸಲ್ಲುವ ವಚನ ಸಾಹಿತ್ಯ
ಕನ್ನಡ ನಾಡಿನ ಪ್ರಪ್ರಥಮ ಪ್ರಜಾಸಾಹಿತ್ಯ ಎನಿಸಿದ ವಚನ ಸಾಹಿತ್ಯ ನಮ್ಮ ನಾಡಿನ ಅಮೂಲ್ಯ ಆಸ್ತಿ. ಇದಕ್ಕೆ ೮೦೦ ವರ್ಷಗಳ ಇತಿಹಾಸವಿದೆ.ಜನಸಾಮಾನ್ಯರ ಸ್ವಾನುಭವದಿಂದ ರಚನೆಗೊಂಡ ವಚನ ಸಾಹಿತ್ಯ ಜನಸಾಮಾನ್ಯರ ಧ್ವನಿಯಾಗಿದೆ.ಸಮಾಜದಲ್ಲಿ ಮನೆಮಾಡಿದ್ದ ವಿಷಮ ಸ್ಥಿತಿಯನ್ನು ನಾಶಗೊಳಿಸಿ ಸಮಸ್ಥಿತಿಯನ್ನು ತರಲು ಕಲ್ಯಾಣದ ಶರಣರು ಹೋರಾಡಿದ ಈ ಆಂದೋಲನ ನಮ್ಮ ದೇಶದ ಇತಿಹಾಸದಲ್ಲಿಯೇ ಒಂದು ವಿಶಿಷ್ಟ ಘಟನೆ.ಆ ಘಟನೆಯ ಪ್ರತಿಫಲವೆ ವಚನ ಸಾಹಿತ್ಯ.
*ವಚನ ಸಾಹಿತ್ಯ*
ವಚನ ಎಂದರೆ ಸಾಮಾನ್ಯವಾಗಿ ಗದ್ಯ ಪದ್ಯಗಳ ನಡುವಿನ ಸಾಹಿತ್ಯ ಪ್ರಕಾರ ಎಂಬ ಮಾತಿದೆ.ಇದು ಓದಿದರೆ ಗದ್ಯ, ಹಾಡಿದರೆ ಪದ್ಯ ಎನಿಸುತ್ತದೆ. ಆದರೆ ನಿಜವಾದ ಅರ್ಥದಲ್ಲಿ ವಚನ ಎಂಬುದು ಪ್ರತಿಜ್ಞೆ, ಆತ್ಮಸಾಕ್ಷಿಯ ಮಾತು ಎನಿಸುತ್ತದೆ. ನಡೆದಂತೆ ನುಡಿದವರ ಆತ್ಮಸಾಕ್ಷಿಯ ವಾಣಿಯೇ ವಚನ. ವಚನ ಎಂಬುದು ಆಚಾರ್ಯರ ಸಾಹಿತ್ಯವಲ್ಲ.ಇದು ಅನುಭಾವಿಗಳ ಸಾಹಿತ್ಯ. ಶರಣರು ತಮ್ಮ ವಿಚಾರಗಳನ್ನು ಬರೆದು ಅವುಗಳಿಗೆ ಸಂವಿಧಾನಾತ್ಮಕ ಮುದ್ರೆ ಒತ್ತಲಿಲ್ಲ.ಬದಲಾಗಿ ಅನುಭಾವಿಗಳು ತಮ್ಮ ಚಿಂತನೆಯನ್ನು ಹೃದಯದಿಂದ ಹೃದಯಕ್ಕೆ ಮುಟ್ಟುವಂತೆ ಬಿಡಿ ಬಿಡಿಯಾದ ಮಾತುಗಳಲ್ಲಿ ಹೇಳಿದ್ದಾರೆ.
*ವಚನ ಸಾಹಿತ್ಯದ ಹುಟ್ಟು*
ಜಾತಿಬೇಧ ಪದ್ಧತಿಗಳು ಸಮಾಜವನ್ನು ವಿನಾಶದತ್ತ ಒಯ್ಯುತ್ತಿದ್ದ ಕ್ಲಿಷ್ಟ ಸಂದರ್ಭದಲ್ಲಿ ಸಮಾಜಕ್ಕೆ ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ,ಸಮಾಜವನು ಸರಿದಾರಿಗೆ ಕೊಂಡೊಯ್ಯುವ ದಾರ್ಶನಿಕರ,ಅನುಭಾವಿಗಳ,ಮಾರ್ಗದರ್ಶಕರ ಅನಿವಾರ್ಯತೆ ಸೃಷ್ಟಿಯಾಗಿತ್ತು.ಇಂತಹ ಸಂಕಷ್ಟ ಸಂದರ್ಭದಲ್ಲಿ ಉದಯಿಸಿದ್ದೆ ವಚನ ಸಾಹಿತ್ಯ ಎಂಬ ಬೆಳಕು. ೧೨ ನೇ ಶತಮಾನದಲ್ಲಿ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ವರ್ಗ ತಾರತಮ್ಯ, ಜಾತಿ ತಾರತಮ್ಯ, ಲಿಂಗ ತಾರತಮ್ಯ, ಮೂಢನಂಬಿಕೆಗಳು,ಅನಾಚಾರಗಳು ವಿಕೋಪದ ಹಂತವನ್ನು ತಲುಪಿದ್ದವು.ಸಾಮಾನ್ಯ ಜನ ಅವುಗಳ ಸುಳಿಯಲ್ಲಿ ಸಿಕ್ಕು ನರಳುತ್ತಿದ್ದರು.ಆಗ ಇವೆಲ್ಲವುಗಳನ್ನು ನಿವಾರಿಸಲು ಅವುಗಳಿಂದ ಜನರನ್ನು ಬಿಡುಗಡೆಗೊಳಿಸಲು ಅವುಗಳ ವಿರುದ್ಧ ಹುಟ್ಟಿಕೊಂಡಿದ್ದೆ ವಚನ ಸಾಹಿತ್ಯ.
ವಚನ ಸಾಹತ್ಯ ಹುಟ್ಟಿಕೊಂಡದ್ದು ಸಾಮಾಜಿಕ ನ್ಯಾಯ ಸ್ಥಾಪನೆಗಾಗಿ. ಇಲ್ಲಿ ರಾಜಸತ್ತೆ ಮತ್ತು ಮತಸತ್ತೆ ಗಳಿಂದ ಜನರು ಅನ್ಯಾಯ, ಶೋಷಣೆಗೆ ಒಳಗಾದಾಗ ಸಮಾಜದ ವಿವಿಧ ಸ್ತರಗಳ ಜನತೆ ಅವುಗಳ ವಿರುದ್ಧ ಬಂಡೆದ್ದರು.ಇಲ್ಲಿ ದೀನರು,ದಲಿತರು,ಮಹಿಳೆಯರು ಬೀದಿಗಿಳಿದು ಆಂದೋಲನ ನಡೆಸಿದರು. ಅವರೆಲ್ಲರ ಆಂದೋಲನದ ಪ್ರತಿಫಲವೆ ವಚನ ಸಾಹಿತ್ಯ.ಈ ವಚನ ಸಾಹಿತ್ಯವನ್ನು ಎಲ್ಲಾ ಜಾತಿಯವರು ಮಾಧ್ಯಮವನ್ನಾಗಿ ಮಾಡಿಕೊಂಡು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದರಿಂದ ವಚನ ಸಾಹಿತ್ಯ ಎಂಬುದು ಚಳುವಳಿಯ ರೂಪ ಪಡೆಯಿತು. ಇದು ಸಮಾಜದ ಎಲ್ಲ ಸ್ತರಗಳ ಅಸಮಾನತೆಯನ್ನು ಬದಲಿಸಲು ಮಾಡಿದ ಪ್ರಯತ್ನವಾಗಿದೆ. ಇದು ಸ್ಥಾವರ ಸಮಾಜವನ್ನು ತಿರಸ್ಕರಿಸಿ ಜಂಗಮ ಸಮಾಜಕ್ಕೆ ಆದ್ಯತೆ ನೀಡಿತು.ಸಮಾಜ ನಂಬಿದ ಬಹುದೊಡ್ಡ ಮಾನವೀಯ ಮೌಲ್ಯಗಳಾದ ಕಾಯಕ ಮತ್ತು ದಾಸೋಹದ ಮೂಲಕ ಸಮಾಜೋತ್ಪನ್ನಗಳ ಸಮಪಾಲು ಸಿದ್ಧಾಂತವನ್ನು ಮಂಡಿಸುವ ಚಳವಳಿ ಆಗಿದ್ದರಿಂದ ಸಾಹಿತ್ಯದಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆಯಿತು.
*ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಚಳುವಳಿ*-
ಸಾಮಾಜಿಕ ಸಮಾನತೆಯನ್ನು ಸ್ಥಾಪಿಸುವ ಉದ್ದೇಶದಿಂದ ಹುಟ್ಟಿದ ವಚನಸಾಹಿತ್ಯ ಈಗ ಜನ್ಮ ತಳೆದು ೮ ಶತಮಾನ ಗಳಿಗಿಂತಲೂ ಹೆಚ್ಚು ಸಮಯ ಸಂದಿದೆ. ವಚನ ಸಾಹಿತ್ಯದ ಈ ಕಾಲಘಟ್ಟವನ್ನು ವೈಚಾರಿಕ ಚಳುವಳಿ, ಸುಧಾರಣಾ ಚಳುವಳಿ, ಕಾಯಕ ಜೀವಿಗಳ ಚಳುವಳಿ ಎಂದು ನಾನಾ ಹೆಸರುಗಳಿಂದ ಕರೆಯುತ್ತಾರೆ. ಇವೆಲ್ಲ ಹೆಸರುಗಳಿಗಿಂತ ಇದನ್ನು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಚಳುವಳಿ ಎಂದು ಕರೆಯುವುದು ಹೆಚ್ಚು ಸೂಕ್ತ ಎನಿಸುತ್ತದೆ.ಎಕೆಂದರೆ ವಚನ ಸಾಹಿತ್ಯ ತನ್ನಲ್ಲಿ ಅಳವಡಿಸಿಕೊಂಡಿರುವುದು ಮಾನವೀಯ ಮೌಲ್ಯಗಳನ್ನು. ಶರಣರು ಮಾನವೀಯ ಗುಣಗಳ ಮೂಲಕ ಸಮಾಜವನ್ನು ಬದಲಾಯಿಸುವ, ಸಮಾಜದ ಸಮಸ್ಯೆಗಳಿಗೆ ಪರಿಹಾರ ತೋರುವ ಪ್ರಯತ್ನ ಮಾಡಿದರು. ಆ ಮಾನವೀಯ ಮೌಲ್ಯಗಳೇ ವಚನ ಸಾಹಿತ್ಯದ ಜೀವಾಳ ಆಗಿದ್ದವು.ಶರಣರ ಈ ಜೀವನ ಮೌಲ್ಯಗಳು ಒಂದು ಕಾಲಕ್ಕೆ ಸೀಮಿತವಾಗಿರದೆ ಅವು ಸಾರ್ವಕಾಲಿಕ ಸತ್ಯವನ್ನು ರೂಢಿಸಿಕೊಂಡಿವೆ.ಜೊತೆಗೆ ಪ್ರಸ್ತುತ ಸನ್ನಿವೇಶಕ್ಕೆ, ಸಮಕಾಲೀನ ಸಮಸ್ಯೆಗಳಿಗೆಲ್ಲ ವಚನ ಸಾಹಿತ್ಯದಲ್ಲಿ ಸಿದ್ಧ ಉತ್ತರವಿರುವದು .ಹಾಗಾಗಿಯೇ ವಚನ ಸಾಹಿತ್ಯವು ಸಮಕಾಲಿನ ಸಮಸ್ಯೆಗಳಿಗೆ ಸಿದ್ಧೌಷದ ಎಂದು ಗುರುತಿಸಲ್ಪಡುತ್ತದೆ.ಮಾನವೀಯ ಮೌಲ್ಯಗಳ ಆಗರವಾಗಿರುವದರಿಂದ ಮತ್ತು ಸರ್ವಕಾಲಕ್ಕು ಸಲ್ಲುವ ಅಂಶಗಳನ್ನು ತನ್ನಲ್ಲಿ ಅಳವಡಿಸಿಕೊಂಡಿರುವದರಿಂದ ವಚನ ಸಾಹಿತ್ಯ ಇನ್ನೂ ಜೀವಂತವಾಗಿದೆ,ಅದರ ತತ್ವಗಳೆಲ್ಲ ಇಂದಿಗೂ ನಿತ್ಯ ನೂತನವಾಗಿವೆ.
*ವಚನ ಸಾಹಿತ್ಯದ ಇಂದಿನ ಅಗತ್ಯತೆ*
ವಚನಕಾರರು ಸಮಾಜದಲ್ಲಿನ ರಾಜಪ್ರಭುತ್ವ,ಅಂಧಾನುಕರಣೆ, ಕಂದಾಚಾರಗಳು,ಮೌಢ್ಯಗಳು,ಸ್ತ್ರೀ ಅಸಮಾನತೆ, ವೃತ್ತಿ ತಾರತಮ್ಯ,ವರ್ಗಬೇಧ,ಭಾಷಾ ವೈಷಮ್ಯಗಳು,ಹಲವು ಧರ್ಮಗಳ ಆರಾಧನೆ, ಧರ್ಮ ಧರ್ಮಗಳ ಕಚ್ಚಾಟ ಮುಂತಾದವುಗಳನ್ನು ಸರಿಪಡಿಸಿದರು.ಈ ಸಮಸ್ಯೆಗಳು ಇಂದು ಸಹ ಇವೆ.ಇಂದು ಸಮಾಜದಲ್ಲಿ ಅನಾಚಾರ,ದುರಾಚಾರ, ಅತ್ಯಾಚಾರ, ಭೃಷ್ಟಾಚಾರ ಹೆಚ್ಚಾಗಿ ಸಾಮಾಜಿಕ ಜೀವನ ವಿನಾಶದತ್ತ ಮುಖಮಾಡಿದೆ.ಇವು ಸಮಾಜದಿಂದ ತೊಲಗಬೇಕಾದರೆ ಜನತೆ ವಚನಕಾರರ ನಡೆನುಡಿ ಆದರ್ಶಗಳನ್ನು ಮೈಗೂಡಿಸಿಕೊಳ್ಳುವದು ಅತ್ಯಗತ್ಯ.
ಸಮಾಜದ ಜಾತಿವ್ಯವಸ್ಥೆ, ಲಿಂಗತಾರತಮ್ಯ ನಿವಾರಿಸಲು ಸರ್ಕಾರ ಜಾತಿ ಮೀಸಲಾತಿ, ಮಹಿಳಾ ಮೀಸಲಾತಿ ಮುಂತಾದ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ. ಆದರೆ ಇವೆಲ್ಲ ಕಾನೂನಿನಲ್ಲಿ ಮಾತ್ರ ಸಾಧ್ಯವಾಗಿವೆ.ಜಾತಿ ಮೀಸಲಾತಿ ಇಂದ ಹಿಂದುಳಿದವರು ಉದ್ಯೋಗ,ಶಿಕ್ಷಣದಲ್ಲಿ ಮೀಸಲಾತಿ ಪಡೆದಿರಬಹುದು. ಆದರೆ ಸಮಾಜದಲ್ಲಿ ನಿಕೃಷ್ಟ ಭಾವನೆಯಿಂದ ಕಾಣುವ ಪರಂಪರೆ ಮುಂದುವರೆದಿದೆ. ಮಹಿಳೆಯರಿಗೆ ಮೀಸಲಾತಿ ಸಿಕ್ಕರು ಅವರ ಮೇಲಿನ ಶೋಷಣೆ, ಅತ್ಯಾಚಾರಗಳ ಪ್ರಮಾಣ ಹೆಚ್ಚಾಗಿದೆ. ಸರ್ಕಾರದಲ್ಲಿ ಭೃಷ್ಟಾಚಾರ ತಾಂಡವಾಡುತ್ತಿದೆ.ಇವೆಲ್ಲ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ಉತ್ತರವಿದೆ.
ಸಮಾಜದಲ್ಲಿರುವ ಈ ಅನಿಷ್ಟಗಳು ನಿವಾರಣೆ ಆಗಬೇಕಾದರೆ ನಮ್ಮಲ್ಲಿ ಮಾನವೀಯತೆಯ ಗುಣಗಳು ಸಾಕಾರಗೊಳ್ಳಬೇಕು.ಕಾನೂನಿನಿಂದ ಆಗದ ಇಂತಹ ಕೆಲಸ ಕೇವಲ ಮನುಷ್ಯತ್ವ,ಮಾನವೀಯತೆ ಗುಣಗಳಿಂದ ಮಾತ್ರ ಸಾಧ್ಯವಾಗುತ್ತದೆ. ಅಂತಹ ಮಾನವೀಯ ಗುಣಗಳ ಆಗರ ವಚನ ಸಾಹಿತ್ಯ.ವಚನಗಳಲ್ಲಿ ಮನುಷ್ಯ ಬದಕುವ ರೀತಿ, ಸಮಾಜದ ಅಂಕುಡೊಂಕು ತಿದ್ದುವ ಪ್ರಯತ್ನಗಳಿವೆ.ವಚನಕಾರರು ಯಾರು ಸಮಾಜಕ್ಕೆ ಬುದ್ದಿ ಹೇಳುವ ಪ್ರಯತ್ನ ಮಾಡಲಿಲ್ಲ. ಬದಲಾಗಿ ತಮ್ಮನ್ನು ತಾವು ಸುಧಾರಿಸಿಕೊಂಡು ಆ ಮೂಲಕ ಸಮಾಜಕ್ಕೆ ಮಾದರಿಯಾದರು.ನುಡಿದಂತೆ ನಡೆದಿದ್ದರಿಂದ ಅವರ ಮೌಲ್ಯಗಳು ಆದರ್ಶವಾಗಿವೆ.
*ವಚನ ಸಾಹಿತ್ಯ ಮುಂದೆ?*
ವಿಜ್ಞಾನದ ವಿಧ್ವಂಸಕ ಮುಖವನ್ನು ನಾವು ಇಂದು ನೋಡುತ್ತಿದ್ದೆವೆ.ವಿಜ್ಞಾನದಿಂದ ಮನುಷ್ಯ ಯಾಂತ್ರಿಕ ಜೀವನವನ್ನು ರೂಢಿಸಿಕೊಂಡು ಯಂತ್ರದಂತೆ ಜೀವಿಸುತ್ತಿದ್ದಾನೆ.ಮಾನವೀಯತೆಯನ್ನು ಕಳೆದುಕೊಂಡು ಕ್ರೂರ ಮೃಗದಂತೆ ವರ್ತಿಸುತ್ತಿದ್ದಾನೆ.ತಾನು ತನ್ನವರು ಎಂಬ ಬಾಂಧವ್ಯವನ್ನು ಮರೆತಿದ್ದಾನೆ.ಇದರಿಂದ ಸಮಾಜದ ನಡುವೆ ಬಿರುಕುಗಳು ಮೂಡುತ್ತಿವೆ. ಕಾಲ ಮುಂದುವರಿದಂತೆ ಈ ಯಾಂತ್ರಿಕ ಜೀವನದ ಅವಲಂಬನೆ ಹೆಚ್ಚಿ ಮನುಷ್ಯ ಮತ್ತಷ್ಟು ಮಾನವೀಯತೆ ಕಳೆದುಕೊಂಡು ಯಾಂತ್ರೀಕರಣಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಇದರಿಂದಾಗಿ ಸಾಮಾಜಿಕ ಸಮಸ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ಉದ್ಭವಿಸುತ್ತವೆ. ಮುಂದೆ ಉದ್ಭವಿಸುವ ಸಮಸ್ಯೆಗಳಿಗೆಲ್ಲ ವಚನ ಸಾಹಿತ್ಯದಲ್ಲಿ ಉತ್ತರ ಇದೆ.ವಚನ ಸಾಹಿತ್ಯದಲ್ಲಿನ ಶರಣರು ಹೇಳಿದ ನಡೆನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮುಂದೆ ಬರುವ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯ.ಹಾಗಾಗಿ ಭವಿಷ್ಯಕ್ಕು ವಚನ ಸಾಹಿತ್ಯ ಅತ್ಯಗತ್ಯವಾಗಿದೆ.
ನಮ್ಮ ಹಿರಿಯರು ವಚನಗಳನ್ನು ತಮ್ಮ ಸಂಸ್ಕೃತಿಯ ಮೌಲ್ಯಗಳನ್ನಾಗಿ ಅಳವಡಿಸಿಕೊಂಡು ಆಚರಿಸಿಕೊಂಡು ಬಂದಿದ್ದಾರೆ. ನಾವು ಇವುಗಳನ್ನು ಜೀವನದಲ್ಲಿ ಮೌಲ್ಯಗಳನ್ನಾಗಿ ಅಳವಡಿಸಿಕೊಳ್ಳಬೇಕು. ಕೇವಲ ಆಚರಣೆಗಳಾಗದೆ ಅವು ಬದುಕಿನ ರೀತಿಗಳಾಗಬೇಕು.ಅಂದಾಗ ವಚನ ಸಾಹಿತ್ಯ ಉಳಿಯುದರೊಂದಿಗೆ ನಾವು ಉಳಿಯಲು ಸಾಧ್ಯ.
–ಡಾ.ರಾಜೇಶ್ವರಿ ಶೀಲವಂತ ಬೀಳಗಿ
—————————————————————
ಕ್ಣಣ ಕ್ಷಣದ ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏