ಆಧುನಿಕ ಜೀವನ ಚಕ್ರ

ಆಧುನಿಕ ಜೀವನ ಚಕ್ರ”

ಮೂಡಣದಿ ಸೂರ್ಯನು ಉದಯಿಸಲು
ಮಡದಿ ಎಚ್ಚರಿಸಿದಳು ಪತಿರಾಯನನು
ಒಲ್ಲದ ಮನಸ್ಸಿನಿಂದ ಎದ್ದು ತಣ್ಣೀರಲಿ ಮಿಂದು
ಗಡಿಯಾರವ ನೋಡಲು ವಾಯು ವೇಗದಲ್ಲಿ ಚಲಿಸುತ್ತಿರುವುದು ಸಮಯವು
ಮೀರಿತು ಎಂಬುದನ್ನರಿತು
ಉದರವ ಪೊರೆಯಲು ಕಾರ್ಯವನರಸಿ ಓಡುತಿಹನು ಹಾದಿಯಲ್ಲಿ ಓಡುತಿಹನು

ಯಾಂತ್ರಿಕ ಯುಗದ ಈ ದಿನಗಳಲಿ
ಮುಂಜಾನೆಯ ಕೂಳಿಲ್ಲ, ಉಣ್ಣಲು ಊಟವಿದ್ದರೂ ಸಮಯವಿಲ್ಲ,
ಬಸ್ಸೋ, ಆಟೋ, ಕಾರನ್ನೋ ಹತ್ತಿ
ಒತ್ತಡದಿಂದಲೇ ತವಕಿಸುವ ಮನಸ್ಸು
ತಲುಪಿತು ಆಗಲೆ ದುಡಿಯುವ ತಾಣವ

ಮಾಲಿಕ ಕೊಟ್ಟ ಕೆಲಸವ ಮಾಡುತಿರಲು ರಿಂಗಣಿಸಿತು ಜಂಗಮವಾಣಿಯು
ಕೈಗೆತ್ತಿ ನೋಡಲು ಮಡದಿಯ ಕರೆಯ ಸ್ವೀಕರಿಸಿ ಕಿವಿಗಿಡಲು ಮಡದಿಯು ಬಿಚ್ಚಿಟ್ಟಲು ಜೀವದ ಜಂಜಾಟದ ಕಡತವನು

ಮಡದಿಯ ಮಾತಿಗೆ ಸಾಂತ್ವಾನ ಹೇಳಲಾಗದೆ
ಕರೆಯನು ನಿಲ್ಲಿಸಿಹನಲ್ಲಿಗೆ
ಕಾಯಕ ಮಾಡುತ ಪತ್ನಿಯ ಮಾತನು ನೆನಪಿಸಿ ಗೊಂದಲದಲ್ಲಿ ಸಿಲುಕಿತು ಪತಿಯ ಮನವು
ಎಷ್ಟು ಯೋಚಿಸಿದರು ಉತ್ತರ ಹೊಳೆಯಲಿಲ್ಲ ಪರಿಹಾರವು ಸಿಗದಾಯಿತು
ಜೀವನದ ಸಮಸ್ಯೆಗಳ ಸುಳಿಯಲ್ಲಿ
ಸಿಲುಕಿ ದುರ್ಭರ ಜೀವನವ ನಡೆಸುತಿಹನು
ಆಧುನಿಕ ದಿನದ ಮನುಜ.

ಮಾಸ್ತಿಬಾಬು
ಅಧ್ಯಾಪಕರು, ಲೇಖಕರು, ಸಾಹಿತಿಗಳು
ಐರಾ ಅಕಾಡೆಮಿ, ಬೆಂಗಳೂರು.

Don`t copy text!