ಅಕ್ಕನೆಡೆಗೆ –ವಚನ 25 (ವಾರದ ವಿಶೇಷ ಲೇಖನ)
ಜರೆಯುವವರ ಜೊತೆಗಿದ್ದರೆ
ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ
ಆಗು ಮಾಡ ಬಂದವರಲ್ಲ
ಮನದ ಮೇಲೆ ಬಂದು ನಿಂದು ಜರೆದು ನುಡಿದು
ಪಥವ ತೋರಬಲ್ಲಾತನೇ ಸಂಬಂಧಿ
ಹಾಗಲ್ಲದೆ ಅವರಿಚ್ಛೆಯ ನುಡಿದು ತನ್ನುದರವ ಹೊರೆವ
ಬಚ್ಚಣಿಗಳ ಮೆಚ್ಚುವನೆ ಚೆನ್ನಮಲ್ಲಿಕಾರ್ಜುನ.
ಅಕ್ಕಮಹಾದೇವಿಯ ಜೀವ ಪಯಣದಲಿ ಲೌಕಿಕದ ವ್ಯಾಪಾರ ಕಾಡಿದ್ದನ್ನು ಅಲ್ಲಲ್ಲಿ ಗಮನಿಸಬಹುದು.
‘ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದೊಡೆಂತಯ್ಯಾ’
‘ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು’
‘ಹೆದರದಿರು ಮನವೆ ಬೆದರದಿರು ತನುವೆ ನಿಜವನರಿತು ನಿಶ್ಚಿಂತವಾಗಿರು’
‘ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ
ಎಲವದಮರನ ಇಡುವರೊಬ್ಬರ ಕಾಣೆ’
ಇಂತಹ ಸಾಮಾಜಿಕ ಚಿಂತನೆಯ ಅನೇಕ ವಚನಗಳ ಸಾಲುಗಳು ಲೌಕಿಕ ವ್ಯಾಪಾರವನ್ನು ನೆನಪಿಸುತ್ತವೆ.
ಇದೇ ತರಹದ ಮತ್ತೊಂದು ವಚನ ಮೇಲಿನದು. ಈ ವಚನವು ಧನಿಕರು, ಪುರೋಹಿತರು, ಮನುಷ್ಯ ಸ್ವಭಾವ, ತಪ್ಪು ಮಾಡಿದಾಗ ಬೈದು ತಿಳಿ ಹೇಳುವ ಹಿತೈಷಿಗಳು, ಸಂಬಂಧಿಕರು, ಇಂತಹುದರ ಸುತ್ತ ಆಲೋಚಿಸುವಂತೆ ಮಾಡುತ್ತದೆ.
ಹಣಕ್ಕಾಗಿ ಹಾತೊರೆಯುವ ಮನುಷ್ಯನ ಸಹಜ ಸ್ವಭಾವ ಮತ್ತದರ ಇತಿ ಮತಿಗಳ ಅರ್ಥಪೂರ್ಣ ಚರ್ಚೆ ಈ ವಚನದಲ್ಲಡಗಿದೆ. ‘ಹಣ ನೋಡಿದರೆ ಹೆಣವೂ ಬಾಯಿ ಬಿಡುತ್ತದೆ’, ‘ಮುಖ ನೋಡಿ ಮಣೆ ಹಾಕ್ತಾರಾ’, ‘ದುಡ್ಡಿದ್ದವನೇ ದೊಡ್ಡಪ್ಪ’, ‘ರಾಜ ಇರೋತನಕ ರಾಣಿ ಭೋಗ’ ಮುಂತಾದ ಗಾದೆಗಳು ಹಣ, ಐಶ್ವರ್ಯ, ಸ್ಥಿರಾಸ್ತಿ ನೆಚ್ಚಿಕೊಂಡವರ ಮನಸ್ಥಿತಿಯನ್ನು ಹೇಳುತ್ತದೆ. ಈ ಪ್ರಪಂಚದ ಭೌತಿಕ(Materialistic) ಅನುಭವದ ವಿವರಣೆ ನೀಡುತ್ತದೆ. ಸಮಾಜದಲ್ಲಿ ಹಣ, ಸಂಪತ್ತು, ಆಸ್ತಿಪಾಸ್ತಿಗಳು ನೋಡುವವರ ಕಣ್ಣಿಗೆ ಕುಕ್ಕುವುದು ಸಹಜ. ಅದನ್ನೇ ನೋಡಿ ಜನ ಹತ್ತಿರ ಬರಲು ಪ್ರಯತ್ನಿಸುತ್ತ, ಸ್ನೇಹ ಬೆಳೆಸುತ್ತಾರೆ.
ಸಂಸ್ಕೃತದಲ್ಲಿ ಒಂದು ಮಾತಿದೆ,
‘ನ ವಿದ್ಯಯಾ ನೈವ ಕುಲೇನ ಗೌರವಂ
ಜನಾನುರಾಗೋ ಧನಿಕೇಷು ಸರ್ವದಾ
ಕಪಾಲಿನಾ ಮೌಲಿ ಧೃತಾಪಿ ಜಾಹ್ನವೀ
ಪ್ರಯಾತಿ ರತ್ನಾಕರಮೇವ ಸರ್ವಾದಾ‘
ಅಂದರೆ, ‘ವಿದ್ಯೆ, ಅರಿವು ಪಡೆದರೂ ಮನೆತನಕ್ಕೆ ಹಿರಿಮೆ ತರಲಾರವು. ಎಂದಿಗೂ ಹಣ ಉಳ್ಳವರೇ ಜನರ ಒಲುಮೆಗೆ ಪಾತ್ರರಾಗುತ್ತಾರೆ. ಶಿವನ ತಲೆಯ ಮೇಲೆ ಗಂಗೆ ಇದ್ದರೂ, ಕೊನೆಗೆ ಸೇರುವುದು ಸಾಗರದಲ್ಲಿ. ಅಂದರೆ ಸಮುದ್ರದಲ್ಲಿರುವ ಬೆಲೆ ಬಾಳುವ ಮುತ್ತು ರತ್ನಗಳಲ್ಲಿಯೇ ಗಂಗೆಯು ಲೀನವಾಗುತ್ತಾಳೆ’.
ಈ ವಿವರಣೆಯ ತಾತ್ಪರ್ಯವೆಂದರೆ, ಮನುಷ್ಯನಲ್ಲಿ ಸಹಜವಾಗಿಯೇ ಹಣದ ಆಕರ್ಷಣೆ ಅಡಗಿರುತ್ತದೆ.
ಆದರೆ ಶರಣರ ಆರ್ಥಿಕ ಚಿಂತನೆ ಭಿನ್ನವಾಗಿರುವುದನ್ನು ದಾಸೋಹ ಸಂಸ್ಕೃತಿಯಲ್ಲಿ ಕಾಣುತ್ತೇವೆ. ಅವರು ಹಣಕ್ಕಿಂತ ಹೆಚ್ಚು ಮಹತ್ವವನ್ನು ವಿದ್ಯೆ, ಜ್ಞಾನ ಮತ್ತು ಅನುಭಾವಕ್ಕೆ ನೀಡಿದರು. ಅದಕ್ಕೆ ಉದಾಹರಣೆ ಅಲ್ಲಮನ ಈ ವಚನ.
‘ಭೂಮಿ ನಿನ್ನದಲ್ಲ
ಹೇಮ ನಿನ್ನದಲ್ಲ
ಕಾಮಿನಿ ನಿನ್ನವಳಲ್ಲ
ಅವು ಜಗಕ್ಕಿಕ್ಕಿದ ವಿಧಿ
ನಿನ್ನ ಒಡವೆ ಎಂಬುದು ಜ್ಞಾನರತ್ನ
ಅಂತಪ್ಪ ದಿವ್ಯರತ್ನವ ಕೆಡಗುಡದೆ
ಆ ರತ್ನವ ನೀನು ಅಲಂಕರಿಸಿದೆಯಾದಡೆ
ನಮ್ಮ ಗುಹೇಶ್ವರಲಿಂಗದಲ್ಲಿ ನಿನ್ನಿಂದ
ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೆ’
‘ನೀ ರೊಕ್ಕದ ಮಾರಿ ನೋಡ್ ಬ್ಯಾಡ, ಮನ್ಷಾನ ಮನ್ಸ್ ನೋಡು’ ಎಂದು ಹೇಳುವುದನ್ನು ಕೇಳಿದ್ದೇವೆ. ಹಾಗೆಯೇ ಹಣಕ್ಕಿಂತ ಮುಖ್ಯವಾದುದು ‘ವ್ಯಕ್ತಿ’ ಮತ್ತು ‘ಮನಸು’. ಯಾರು ಹಣದ ಹಿನ್ನೆಲೆ ನೋಡಿ ಬಂದಿರುತ್ತಾರೋ, ಅವರ ಉದ್ದೇಶ ಒಳಿತಾಗಿರಲು ಸಾಧ್ಯವಿಲ್ಲ ಎನ್ನುವುದು ಮೊದಲ ಎರಡು ಸಾಲಿನ ಅರ್ಥ.
ಮನುಷ್ಯನಲ್ಲಿರುವ ಅರಿಷಡ್ವರ್ಗಗಳು ಮನದ ಶಾಂತಿ ಕದಡುವ ಮೂಲಗಳು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಉಪಟಳವ ಮೀರಿ ನಡೆವುದು ಅಷ್ಟೊಂದು ಸುಲಭವಲ್ಲ. ಅವುಗಳಲ್ಲಿ ‘ಮತ್ಸರ’ವು ಇತರರಿಗೆ ಒಳಿತಾಗುವಂತೆ ಚಿಂತಿಸದು ಮತ್ತು ಹಾಗೆ ಬಯಸದು. ಮನುಷ್ಯ ಮನುಷ್ಯನ ನಡುವೆ ಮಾನವೀಯ ಸಂಬಂಧವಿದ್ದರೆ ಮಾತ್ರ ಇತರರನ್ನು ತಿದ್ದಲು ಸಾಧ್ಯ. ನಮ್ಮನ್ನು ನಾವು ತಿದ್ದಿಕೊಳ್ಳುತ್ತ ಇತರರನ್ನು ತಿದ್ದುವುದು ದೊಡ್ಡ ಗುಣ.
ನಮ್ಮವರು ತೊಂದರೆಯಲ್ಲಿದ್ದರೆ, ಹಾನಿಯಾಗುವಂತಿದ್ದರೆ, ನೆರವಾಗಲು ಮುಂದಾಗುವುದು ಮಾನವೀಯತೆ. ಯಾರಿಗೆ ತಿಳಿಯುವುದಿಲ್ಲವೊ ಅವರಿಗೆ ಬೈದು ಹೇಳಿದರೂ ಒಳ್ಳೆಯದು. ಹಾಗೆ ಕಠೋರವಾಗಿ ನಡೆದುಕೊಳ್ಳುವವರೇ ನಿಜವಾದ ಸಂಬಂಧಿಕರು. ಅವರು ಹಿತೈಷಿಗಳು ಎನಿಸಿಕೊಳ್ಳುತ್ತಾರೆ. ‘ಬೈದವರೆನ್ನ ಬಂಧುಗಳೆನ್ನಿ’ ಎನ್ನುವ ಶರಣರ ಮಾತು ಅಕ್ಷರಶಃ ಸತ್ಯ.
ಇದೇ ವಚನವನ್ನು ಇನ್ನೊಂದು ದೃಷ್ಟಿಕೋನದಿಂದ ಗ್ರಹಿಸಬಹುದು. ಪುರೋಹಿತ ಶಾಹಿ ವ್ಯವಸ್ಥೆಯ ಹಿನ್ನೆಲೆಯಲ್ಲಿ ನೋಡ ಬೇಕು. ಪೌರೋಹಿತ್ಯ ಮಾಡುವವರೇ ಬಚ್ಚಣಿಗರು. ತಮ್ಮ ಉದರ ಪೋಷಣೆಗಾಗಿ ಹಗಲಿರುಳು ಆಲೋಚಿಸುವ ಸ್ವಾರ್ಥಿಗಳು. ಸಿರಿವಂತರ ಮನೆಗಳಿಗೆ ಹೋಗಿ ಪೂಜೆಯ ನೆಪದಲ್ಲಿ, ಹಣ ಮತ್ತು ವಸ್ತುಗಳನ್ನು ಪಡೆಯುವ ಹುನ್ನಾರದಲ್ಲಿ ಸದಾ ಇರುತ್ತಾರೆ. ಅಂಥವರನ್ನು ನೋಡಿ ಅಕ್ಕ ಖಂಡಿಸುತ್ತಾಳೆ. ಇನ್ನೊಬ್ಬರಿಂದ ಹಣ ಸೆಳೆಯುತ್ತ, ಮೇಲ್ನೋಟಕ್ಕೆ ದೇವ ಕಾರ್ಯ ಮಾಡುತ್ತ, ಮೈ ಮುರಿದು ದುಡಿಯುವ ಯಾವ ಕಾಯಕವನ್ನೂ ಮಾಡದೆ, ತಮ್ಮ ಸ್ವಾರ್ಥಕ್ಕಾಗಿ, ಸುಖದ ಜೀವನಕ್ಕಾಗಿ ಬದುಕುವವರನ್ನು ಅಕ್ಕ ವಿರೋಧಿಸುತ್ತಾಳೆ.
ಪ್ರಸ್ತುತ ಸಮಾಜದಲ್ಲಿ ಇಂತಹ ಪ್ರಸಂಗಗಳು ಅನೇಕ ಬಾರಿ ಎದುರಾಗುತ್ತವೆ. ಇದೇನು ಹೊಸದಲ್ಲ. ಪ್ರತಿನಿತ್ಯ ಎದುರಾಗುವ ಸಮಸ್ಯೆಗಳನ್ನು ಕೇಳಿದ್ದೇವೆ, ಕಂಡಿದ್ದೇವೆ. ಅಷ್ಟೇ ಅಲ್ಲ ಇಂದಿನ ಬಹಳಷ್ಟು ಮಠ, ಮಂದಿರಗಳು ಗೋಮುಖ ವ್ಯಾಘ್ರಗಳಾಗಿ ಇರುವುದು ವಿಷಾದಕರ. ದೇವರು ಮತ್ತು ನಂಬಿಕೆಯ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡುತ್ತ, ಮೌಢ್ಯತೆಯ ಕಡೆಗೆ ಎಳೆದೊಯ್ಯುತ್ತಿರುವುದು ಸಾಮಾಜಿಕ ಅನ್ಯಾಯ. ಅಕ್ಕನ ಈ ವಚನಕ್ಕೆ ಜನಸಾಮಾನ್ಯರನ್ನು ಜಾಗ್ರತರಾಗಿಸುವ ಶಕ್ತಿಯಿದೆ. ಈ ಜಾಗೃತಿಯ ಸಂದೇಶವನ್ನು ಎಲ್ಲೆಡೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರದಾಗಿದೆ.
–ಸಿಕಾ