ಗಜ಼ಲ್

ಗಜ಼ಲ್..

ನಂಬಿ ಕುಳಿತೆ ಕಾದು ನಾನಿಲ್ಲಿ ಇಂಬಾಗಿ ನೀ ಬಾರದೆ ಹೋದೆ
ತುಂಬಿದೆ ರಂಗನು ನನ್ನ ಕನಸುಗಳಲ್ಲಿ ಚಂದಾಗಿ ನೀ ಬಾರದೆ ಹೋದೆ

ಹೋದವೂ ಏಸೊಂದು ಇರುಳುಗಳುರುಳಿ ಗೊತ್ತೇನು ನಿನಗೆ
ಬಳಲಿದೆ ಕನವರಿಸಿ ಕಳೆದ ನೆನಪಿನಲಿ ಗುಂಗಾಗಿ ನೀ ಬಾರದೆ ಹೋದೆ

ಅರಳಿ ಘಮಘಮಿಸಿ ಬಾಡಿವೆ ಪಾರಿಜಾತದ ಹೂಗಳು ನೋಡು
ಬಿಡದೆ ನಿರುಕಿಸಿ ಕಂಗಳೆರಡೂ ಸೋತಿವೆ ಸುಸ್ತಾಗಿ ನೀ ಬಾರದೆ ಹೋದೆ

ಎದೆಯೊಳವಿತ ಪ್ರೀತಿ ಕಳವಳಿಸಿ ಚಡಪಡಿಸಿದೆ ಕಾತರಿಸಿ
ಬಿಸಿಯಪ್ಪುಗೆಗೆ ಹಾತೊರೆದಿವೆ ನಳಿದೋಳ್ಗಳು ಮುಂಬಾಗಿ ನೀ ಬಾರದೆ ಹೋದೆ

ಜೇನು ಸವರಿದ ಮಾತಲಿ ಮರುಳು ಮಾಡಿದೆಯಲ್ಲ ಮೋಡಿಗಾರ
ಒಡೆದ ಕನ್ನಡಿಯಾಗಿದೆ ಬೇಗಂಳ ಮನ ಚೂರಾಗಿ ನೀ ಬಾರದೆ ಹೋದೆ

ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ.

Don`t copy text!