ಬಿಸಿಲ ಬೇಗೆಗೆ
ಬಸಿದ ನೆಲದೊಳು
ಹಸಿರು ಚಿಗುರದೆ ಸೊರಗಿದೆ,
ಹಸಿದ ಕೈಗಳು
ಕಸುವ ಕಾಣದೆ
ಕಿಸೆಯ ತಡಕುತ ಮರುಗಿದೆ!!
ಬೊಗಸೆ ನೀರಿಗೆ
ಬಗೆದು ಧರೆಯನು
ಬಗೆಯ ಕಾಣದೆ ಕೊರಗುತ,
ಗಗನ ನೋಡುತ
ದಿಗಿಲು ಗೊಳ್ಳುತ
ಮುಗಿಲ ಬರುವನು
ಕಾಯುತ!!
ಬರವು ಬರೆಯಿತು
ಮರಣ ಕರೆಯಿತು
ಉರುಳಿ ದಿನಗಳು
ಸರಿಯಿತು,
ಗರುವ ಮಾಡಿದ
ನರಗೆ ತಪ್ಪಿನ
ಅರಿವು ಮೂಡಿಸಿ
ನಡೆಯಿತು!!
ಬುದ್ಧಿ ಕಲಿತರು
ಬದ್ಧ ಜನರೂ
ಶುದ್ಧ ಮನದಲಿ ಬೇಡಲು,
ತಿದ್ದಿ ನಡೆಸುವ
ಮುದ್ಧು ಮಾಧವ
ಬಿದ್ದು ಬಳಲಿದ ಸುಜನರ!!