ಮಲ್ಲಿಯ ನೋವು ಕೇಳು ಮಲ್ಲಿಗೆ

ಮಲ್ಲಿಯ ನೋವು ಕೇಳು ಮಲ್ಲಿಗೆ

ದಿನದಿನವೂ ದಿಟ್ಟಿಸಿ ನೋಡುತ್ತಾ
ಮುಗುಳು ಮೊಗ್ಗಾಗುವುದ ಕಾಯ್ದೆ
ಹಸಿರೆಲೆ ನಡುವೆ ಉಸಿರು ಬಿರಿದು
ಅಲ್ಲಲ್ಲಿ ಚೂಪಾದ ಮಲ್ಲಿಗೆ ಮೊಗ್ಗುಗಳು

ಕಾಂಪೌಂಡ್ ಗೋಡೆಗೆ ಕುಂಡದಲ್ಲಿ
ಏನೇನೂ ಕೇಳದೆ ನೀರಿಗೆ ಒಲಿದು
ಸುಡುವ ಬಿಸಿಲಿನ ಬೇಗೆಗೆ ನಲಿದು
ಏಳು ಸುತ್ತಿನ ಮಲ್ಲಿಗೆ ಅರಳಿತಲ್ಲಾ.

ನೀರು ಹಾಕುವಾಗೊಮ್ಮೆ ಮುದದಿ
ಮಾತಾಡಿ ಮನದ ನೋವು ಮರೆತು
ಹೇ ಮಲ್ಲಿಗೆ ನಿನ್ನ ಧ್ಯಾನಸ್ಥ ಸ್ಥಿತಿ ಕೊಡು
ಹಂಗಿಲ್ಲದೆ ಅರಳುವ ಸುಕೋಮಲೆಯೇ

ದೇವನಿಗೂ ಸೈ ಮುಡಿಗೂ ಸೈ ನೀನು
ನಿಶ್ಚಲತೆಯ ಪರಿ ಕಂಡು ದಂಗಾಗುವೆ
ಆ ನಿನ್ನ ತನ್ಮಯತೆಯು ಬೇಕಿದೆ ಮಲ್ಲಿಗೆ
ಬೆಳ್ಮುಗಿಲ ಬೆಳಕಲಿ ಘಮಿಸಿ ಚೆಲ್ವ ಚೆಲ್ಲುವೆ

ಬಿಳಿಯ ಬಣ್ಣವು ಶಾಂತಿಯ ಪ್ರತೀಕ
ಆ ನಿನ್ನ ಪ್ರಶಾಂತ ಪ್ರೇಮ ಕಲಿಸು ಬಾ
ಜಂಜಡದ ನೋವುಗಳ ನೀಗು ಮಲ್ಲಿಗೆ
ತಲ್ಲಣಿಸಿದ ಹೃದಯಕೆ ತವರಾಗುವೆಯಾ.

ಮನಸಿನ  ಹುಸಿಯಾದ  ಆಶೆಗಳು
ಅತಿಯಾದ ಯೋಚನೆಗೆ ಕಂಗೆಟ್ಟು
ನಿನ್ನ ಬಾಗಿಲಿಗೆ ಬಂದಿರುವೆ ಮಲ್ಲಿಗೆ
ನಿನ್ನಂತಾಗುವ ದಾರಿಯ ಹೇಳು ಸಖಿ

ನಂಬಿಕೆ ಇಂಬು ಕಳೆದುಕೊಂಡಿದೆ
ಮಾತು ಮೌನವಾಗಿ ನರಳಿ ಅಳುತ್ತಿದೆ
ತಾಳ್ಮೆಯು ತಗಾದೆ ತೆಗೆದಿದೆ ಮಲ್ಲಿಗೆ
ನನ್ನದಾವುದು ಈಗ ನನ್ನದಾಗಿ ಉಳಿದಿಲ್ಲ.

ಬದುಕಿನ ಪ್ರತಿ ಕ್ಷಣವು ಹಂಗಿಸುತಿದೆ
ಎದೆಯ ಭಾರ ಹೆಚ್ಚಾಗಿ ಹುಚ್ಚಾಗಿದೆ
ಒಂಟಿ ಭಾವ ಹೆದರಿಸಿ ನಗುತಿದೆ ಮಲ್ಲಿಗೆ.
ಅದಮ್ಯ ಚೇತನ ನೀಡಿ ಹರಿಸು ಕರುಣಿಸು

ಜಯಶ್ರೀ ಭ ಭಂಡಾರಿ.
ಬಾದಾಮಿ..

Don`t copy text!