ಆನೆಯದೆ ತಾನುಳಿದ ಪರಿಯಾ ನೋಡಾ ಎಂದ ಮೋಳಿಗೆ ಮಾರಯ್ಯ.
ಭಾರತದ ಇತಿಹಾಸದ ಪುಟದಲಿ ಕರ್ನಾಟಕದ 12ನೇ ಶತಮಾನದ ವಚನ ಚಳುವಳಿ ವೈಚಾರಿಕ ಕ್ರಾಂತಿಯನ್ನೆ ಮೊಳಗಿಸಿದ ಕಾಲ,
ಮನದ ಮೈಲಿಗೆಯನ್ನು ಕಳೆಯ ಬಂದ ವಚನ ಸಾಹಿತ್ಯದಲಿ ಹಲವು ದೇಶ ಹಲವು ರಾಜ್ಯಗಳಿಂದ ಬಂದ ಶಿವಶರಣರು ,ಶಿವಶರಣೆಯರು ತಮ್ಮ ಕುಲ ಕಸುಬು ಕಾಯಕ ವ್ರೃತ್ತಿಯಿಂದ ಜಗತ್ತಿಗೆ ದಾಸೋಹ ಮತ್ತು ಕಾಯಕದ ಪರಿಕಲ್ಪನೆಯನು ವಚನಗಳ ಮುಖಾಂತರ ನಡೆದು ತೋರಿಸಿದವರು.ನುಡಿದು ತೋರಿಸಿದವರು.
ಬಸವವಾದಿ ಶರಣರಲ್ಲಿ ಅಂತಹ ಒಬ್ಬ ಶಿವಶರಣ ಹಾಗೂ ವಚನಕಾರ, ಇವರದು ಕಟ್ಟಿಗೆ ಮಾರುವ ಕಾಯಕ ಮೊದಲಿಗೆ ಕಾಶ್ಮೀರ ದೇಶದ ಮಾಂಡವ್ಯಪುರದ ರಾಜನಾಗಿದ್ದನೆಂದು ಅನಂತರ ಬಸವಣ್ಣನವರ ವಿಚಾರಗಳ ಆಕರ್ಷಣೆಗೊಳಗಾಗಿ ರಾಜ್ಯಬಿಟ್ಟು ತನ್ನ ಹೆಂಡತಿ ಗಂಗಾದೇವಿ(ಮಹಾದೇವಿ)ಯೊಂದಿಗೆ ಕಲ್ಯಾಣಕ್ಕೆ ಬಂದವರು.
ಇವರ ವಚನಗಳಲ್ಲಿ ಆಧ್ಯಾತ್ಮಿಕ ನಿಲುವಿನ ಅನುಭವದ ಅನುಭಾವಮ್ರೃತ,ಸಾಮಾಜಿಕ ಕಳಕಳಿಯು,ಸಾಹಿತ್ಯದ ಸೊಗಡು ಇವರ ವಚನಗಳ ಕಂಡು ಬರುತ್ತದೆ,
ಬಸವಣ್ಣನವರ ಪ್ರಭಾವದಿಂದ ಮಹಾರಾಜನೊಬ್ಬ ಶಿವಶರಣನಾಗಿ ,ಎಲ್ಲ ಶರಣರಿಗೆ, ಶರಣಿಯರಿಗೂ ಮಾದರಿಯಾದವರು ಮೋಳಿಗೆ ಮಾರಯ್ಯನವರು,ಇವರ ಗದ್ದಿಗೆ ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ 12 ಕಿ.ಮೀದೂರದಲ್ಲಿರುವ ಮೊಳಕೇರಿ ಎಂಬ ಗ್ರಾಮದಲ್ಲಿದೆ.ಇವರು ಶತಾಯುಷಿಗಳಾಗಿ ಬದುಕಿದ್ರು ಎಂದು ಅವರ ವಚನವೊಂದರಿಂದ ತಿಳಿದು ಬರುತ್ತದೆ. ಅವರ ಒಂದು ವಚನ ನೋಡಿ,
ಇರುವೆ ಆನೆಯ ನುಂಗಿತ್ತು
ಹೊಟ್ಟೆಗೆಯ್ದದೆ ಮಿಕ್ಕವರ ನುಂಗಿತ್ತು
ಮತ್ತೊಂದು ಗಜ ಒತ್ತಿ ಬರಲಾಗಿ ಕಚ್ಚಿತ್ತು
ಕಚ್ಚಿದ ವಿಷತಾಗಿ ಮತ್ತನಾಗಿ ಬಿದ್ದಿತ್ತು
ನಾಗಾಲಡಿಯಾಗಿ ಆನೆಯದೆ ತಾನುಳಿದ
ಪರಿಯಾ ನೋಡಾ
ಈ ವಸ್ತುವನ್ನೆಂಬೆ ನಿಃಕಳಂಕ ಮಲ್ಲಿಕಾರ್ಜುನ.
ವಚನಕಾರ ಮೋಳಿಗೆ ಮಾರಯ್ಯನವರ ಈ ವಚನದಲ್ಲಿ ಆದ್ಯಾತ್ಮಿಕವಾದ ವಿಡಂಬನೆ,ವೈಚಾರಿಕ ಅರಿವಿನ ಅರಹುವನ್ನು ತಿಳಿಯಬಹುದಾಗಿದೆ.
ಶರಣರು ತಮ್ಮ ಕಾಯಕದಿಂದ ಅನುಭವದ ಮೂಸಿಯಿಂದ,ನಡೆನುಡಿಯ ಶುದ್ಧತೆ ತನುಮನದ ಶುದ್ಧತೆಯನ್ನು ಎತ್ತಿಹಿಡಿದವರು,ಅವರು ಕೇವಲ ನುಡಿಯಲಿಲ್ಲ ನುಡಿದಂತೆ ನಡೆದರು. ಸುಮಾರು ಎಂಟುನೂರು ವರ್ಷಗಳ
ಹಿಂದಿನ ಈ ವಚನ ಪ್ರಸ್ತುತ ಇಂದಿಗೂ ಇಂದಿನ ವ್ಯವಸ್ಥಯಲ್ಲೂ ಸಹ ಅನ್ವಯವಾಗುತ್ತದೆ. ,ವಚನಗಳು ಸಾರ್ವಕಾಲಿಕವಾದವುಗಳು. ಇಂದಿನ ಪ್ರಸ್ತುತ ವ್ಯವಸ್ಥೆಯಲ್ಲಿ ಧಾರ್ಮಿಕ,ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ,ಆರ್ಥಿಕ,ಮತ್ತಿತರ ಕ್ಷೇತ್ರಗಳಲ್ಲಿ ಆಗುವ ವಿಪ್ಲವತೆಯನ್ನು,ಸಣ್ಣದನ್ನೆ ದೊಡ್ಡದು ಮಾಡುವ,ಅಥವಾ ದೊಡ್ಡದನ್ನೆ ನುಂಗಿ ನೀರ ಕುಡಿಯುವ, ಸ್ವಾರ್ಥಕ್ಕಾಗಿ ಏನೆಲ್ಲಾ ಮಾಡಿದಕ್ಕಿಸಿಕೊಳ್ಳುತ್ತಾರೆ ಎನ್ನುವದಕ್ಕೆ ಬೆಡಗಿನ ವಚನಕಾರ ಮೋಳಿಗೆ ಮಾರಯ್ಯನವರ ಈ ವಚನದ ಸಾಲುಗಳು ವಿಮರ್ಶಾತ್ಮಕ ದ್ರೃಷ್ಟಿಯಿಂದ ಕೈಗನ್ನಡಿ ಹಿಡಿದಂತಿವೆ.
ಇರುವೆ ಆನೆಯ ನುಂಗಿತ್ತು.
ಗಾತ್ರದಲ್ಲಿ ಚಿಕ್ಕದಾದ ಇರುವೆ ಬಹುದೊಡ್ಡ ಪ್ರಾಣಿ ಆನೆಯನ್ನು ನುಂಗಿತ್ತು ಎಂದರೆ ನಂಬಲು ಸಾಧ್ಯವೆ? ಇಲ್ಲಿ ವಿಚಾರ ಮಾಡಬೇಕಾದ ತರ್ಕಿಸಬೇಕಾದ ನಮ್ಮೊಳಗಿನ ನಮ್ಮನ್ನು ಅರಿಯಲು ಈ ಸಾಲುಗಳು ಮಾರ್ಮಿಕವಾಗಿವೆ,,
ಆನೆ ತಾಕತ್ತಿನ ಬಲಶಾಲಿಯ ಸಂಕೇತ ಅದೇರೀತಿ ಇರುವೆಯು ಸಹ ಶಕ್ತಿಶಾಲಿ ಒಂದೊಂದು ಸಲ ಎನ್ನುವದಕ್ಕೆ ,ಇರುವೆ ಬಲಹೀನ ಸಂಕೇತವಾದರೂ ಇರುವೆಗಳ ಒಗ್ಗಟ್ಟಿನ ಶಿಸ್ತುಮಯದ ಅವುಗಳ ಜೀವನ ಶೈಲಿ,ಇರುವೆಗಳ ಸಹಕಾರ ಬುದ್ಧಿಯನ್ನು ಬಹುಸೂಕ್ಷ್ಮವಾಗಿ ಗಮನಿಸಿದ್ದಾರೆ.
ದುಡಿಯದೆ ದರ್ಪದಿಂದ ದುಡಿಯುವವರನ್ನು ಕಸಿದು ತಿನ್ನುವಪರಿಯನ್ನು ವೈಚಾರಿಕವಾಗಿ ಪರಾಮರ್ಶಿಸಿದ್ದಾರೆ
ಸಮಾಜದಲ್ಲಿ ತಾಕತ್ತು ಇದ್ದವರು ತಾಕತ್ತು ಇಲ್ಲದವರನ್ನು ಹೇಗೆ ದುಡಿಸಿಕೊಳ್ಳುತ್ತಾರೆ ಅಸಾಹಕರನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ಹೇಗೆ ರಿಂಗ್ ಮಾಸ್ಟರ್ ತರಹ ಆಟ ಆಡಿಸುತ್ತಾರೆ ಎನ್ನುವ ವೈಚಾರಿಕ ನುಡಿಗಳು.
ಇರುವೆ ಎನೊ ಶಕ್ತಿಶಾಲಿ ಅಲ್ಲ ಆದರೆ ಒಂದೊಂದು ಸಲ ಇರುವೆ ಸಹ ಹೇಗೆ ಶಕ್ತಿ ಸಾಮರ್ಥ್ಯ ತೋರಿಸುತ್ತದೆ ಎಂದರೆ ಬಲಾಡ್ಯವಾದ ಆನೆಯ ಸೊಂಡಿಲಿನಲ್ಲಿ ಇರುವೆ ಹೋದರೆ ಆನೆಯ ಪ್ರಾಣಕ್ಕೆ ಗಂಡಾಂತರಕಾರಿ ಆದ್ದರಿಂದ ಆನೆ ಸೊಂಡಿಲು ಮೇಲೆ ಮಾಡಿಯೆ ಮಲಗುತ್ತದೆ, ಕಾರ್ಮಿಕ ಮತ್ತು ಶ್ರೀಮಂತರ ನಡುವೆ ಅಕ್ಷರಸ್ಥ ಮತ್ತು ಅನಕ್ಷರಸ್ಪರ ನಡುವೆ ಮಹಿಳೆ ಮತ್ತು ಪುರುಷರ ನಡುವೆ,ಮೇಲ್ಜಾತಿ ಮತ್ತು ಕೆಳಜಾತಿಯವರ ಮಧ್ಯದಲ್ಲಿ ಆಗುವ ದರ್ಪ ದಬ್ಬಾಳಿಕೆಯನ್ನು ಮತ್ತು ಇದರ ವೈರುದ್ಯದ ಬಗ್ಗೆ ತಿಳಿಯಾದ ನಿಗೂಢತೆಯನ್ನು ಎಚ್ಚರಿಸಿದ್ದಾರೆ..
ತತ್ವಪದಕಾರ ಸಂತ ಶಿಶುನಾಳ ಷರೀಪರು ಸಹ ವಚನಕಾರರ ಇಂತಹದೆ ಪದ ನೋಡಬಹುದು,ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ.ಆಡು ಆನೆಯ ನುಂಗಿ, ಗೋಡೆ ಸುಣ್ಣವ ನುಂಗಿ,,,
ಎನ್ನುವಂತಹದು ಸಹ ಸಾಮ್ಯತೆಯನ್ನು ತೋರಿಸುತ್ತದೆ. ,ವಚನಕಾರರ ಪ್ರಭಾವ ಇವರ ಮೇಲು ಸಹ ಆಗಿದ್ದು ಕಂಡುಬರುತ್ತದೆ.
ಹೊಟ್ಟೆಗೆಯ್ದದೆ ಮಿಕ್ಕವರ ನುಂಗಿತ್ತು,,,,
ಬೇಕಾದುದಕ್ಕಿಂತ ಹೆಚ್ಚಿಗೆ ಬೇಕು ಎನ್ನುವ ಅತಿ ಆಸೆಯ ಗತಿಗೇಡಿತನ ಆಸೆಯೆಂಬ ಆಮಿಷಕ್ಕೆ ನುಂಗಿ ನೀರು ಕುಡಿದು ಭೂಮಿಯಲ್ಲಿರುವ ಎಲ್ಲವನ್ನು ಕಬಳಿಸಿ ಆಕಾಶಕ್ಕೆ ಕೈಹಾಕಿರುವ ಮಾನವನ ಮೀತಿ ಮೀರಿದ ಆಸೆಗೆ,ಮದದ ಅಂತ್ಯಕ್ಕೆ ಪ್ರಾಣಿಗಳಿಂದ ಉದಾಹರಿಸಿದ್ದು ಕಾಣಬಹುದಾಗಿದೆ.
ಮತ್ತೊಂದು ಗಜ ಒತ್ತಿ ಬರಲಾಗಿ ಕಚ್ಚಿತ್ತು,,,,,
ಮತ್ತೊಂದು ಆನೆ ದರ್ಪದಿಂದ ಬರಲು,,,,,
ಅಹಂಕಾರ ಸರಿಯಲ್ಲ ಮದದಿಂದ ಮೆರೆಯಬಾರದು,ಶಕ್ತಿಶಾಲಿ ಇದ್ದಮಾತ್ರಕ್ಕೆ ಸಣ್ಣ ಪ್ರಾಣಿಯನ್ನು ತುಳಿಯಬಾರದು ಎನ್ನುವದಕ್ಕೆ ಆನೆ ಮತ್ತು ಇರುವೆಯ ಕಲ್ಪನೆ ಬದುಕನ್ನು ಹಸನಾಗಿಸಲು ಆಧ್ಯಾತ್ಮಿಕ ಪರಿಕಲ್ಫನೆಯ ಅರಿವು ತುಂಬಲು ಈ ವಚನ ತಿಳಿಸುತ್ತದೆ.
ಚಿಕ್ಕವರಿರಲಿ ದೊಡ್ಡವರಿರಲಿ ಅಹಂಕಾರ ಇರಬಾರದು,ಮದ ಏರಿದರೆ ನಮ್ಮ ಅಹಂಕಾರವು ನಮ್ಮನ್ನೆ ಸುಡುವಂತೆ ಅಮಲೇರಿ ಸೊಕ್ಕಿದ ಮದಿಸಿದ ಆನೆಗೆ ಆದ ಶಾಸ್ತಿ ,ನಾಲ್ಕು ಕಾಲು ಮೇಲೇರಿ ದೇಹ ಕೆಳಗೆ ಆನೆಗೆ ಆದ ಸ್ಥಿತಿಯನ್ನು ಪರಿಯನ್ನು ನೋಡಾ ನಿಃಕಳಂಕ ಮಲ್ಲಿಕಾರ್ಜುನ ಎನ್ನುತ್ತಾರೆ.
ಆಸೆ ಇರಬೇಕು ಆದರೆ ದುರಾಸೆ ಇರಬಾರದು, ಆದಕ್ಕಾಗಿಯೇ ಅಲ್ಲವೆ ಬುಧ್ಧನು ಸಹ ಹೇಳಿದ್ದು ,ಆಸೆಯೆ ದುಃಖಕ್ಕೆ ಮೂಲ ಅಂತ.
ಆಸೆಯೆಂಬುದು ಅರಸಂಗಲ್ಲದೆ ಶಿವಶರಣರಿಗಲ್ಲ,ಈಸಕ್ಕಿ ಆಸೆನಿಮಗೇಕಯ್ಯ ಎನ್ನುವ ಆಯ್ದಕ್ಕಿ ಲಕ್ಕಮ್ಮನ ವಚನವು ಸಹ ಅತಿ ಆಸೆಯ ವಿರುದ್ಧ ಹೇಳಿಲ್ಲವೆ.
ಒಟ್ಟಿನಲ್ಲಿ ಸಮಾನತೆಯನ್ನು ಎತ್ತಿ ಹಿಡಿಯುವ ಮತ್ತು ಮದ,ಅಹಂಕಾರ ಅಪಾಯಕಾರಿ ಎನ್ನುವದನ್ನು ಮೋಳಿಗೆ ಮಾರಯ್ಯನವರ ಈ ವಚನದಲ್ಲಿ ಕಾಣಬಹುದಾಗಿದೆ..
–ಲಲಿತಾ ಪ್ರಭು ಅಂಗಡಿ
ಮುಂಬಯಿ.