ನನ್ನವ್ವ
ನೋವುಗಳ ಸರತಿ ಸಾಲಲಿ ಬೆಂದರೂ
ನಮಗೆ ಸುಂದರ ಬದುಕು ರೂಪಿಸಿದ
ನಮ್ಮ ಬಾಳಿಗೆ ಭಾಗ್ಯದ ಬೆಳಕಾದ ಶಕ್ತಿ
ನೀನೇ ಜಗತ್ತಿನ ಮಹಾದೇವತೆ ನನ್ನವ್ವ||
ಹರಕು ಚಾಪೆ ,ಹರಿದ ಕೌದಿಯನ್ನೇ
ಪ್ರೀತಿ ಬೆರೆಸಿ ಹಾಸಿ ಹೊದಿಸಿ ಲಾಲಿ ಹಾಡಿ
ಮಲಗಿಸಿದ ಆ ನಿನ್ನ ಮಡಿಲಿಗಿಂತ
ಮಿಗಿಲಾದ ಸ್ವರ್ಗ ಎಲ್ಲಿದೆ ನನ್ನವ್ವ||೧||
ಅಪ್ಪನ ಸಿಡುಕುತನ ,ಕಿತ್ತುಕಾಡುವ ಬಡತನ
ಎಲ್ಲವನ್ನೂ ಎದುರಿಸಿ ವೀರಗಚ್ಛೆ ಹಾಕಿ ನಿಂತು
ಯಾರಿಗೂ ಅಂಜದೇ ಅಳುಕದೇ ಬದುಕಿದ
ಸದಾ ದುಡಿದ ಕಾಯಕಯೋಗಿ ನನ್ನವ್ವ||
ಅಂದಿನ ನಿನ್ನ ಪ್ರತಿಯೊಂದು ನಿಟ್ಟುಸಿರು
ಇಂದಿನ ನನ್ನ ಸಾಧನೆಗೆ ಉಸಿರಾಯಿತವ್ವ
ಮನೆಗೆ ಕಣ್ಣಾಗಿ,ಬಾಳಿಗೆ ಹೊನ್ನಾಗಿ,
ಸಮಾಜಕ್ಕೆ ಮಾದರಿಯ ಮಹಿಳೆಯಾಗಿ
ಬದುಕಿದರೆ ನಿನ್ನಹಾಗೆಯೇ ಬದುಕಬೇಕು ನನ್ನವ್ವ||
–ಮಹಾದೇವಿ ಪಾಟೀಲ
ಶಿಕ್ಷಕಿ ಚಿಕ್ಕೋಡಿ