ಅಕ್ಕನ ಆರಾಧನೆಯ ಅನನ್ಯತೆ

ಅಕ್ಕನೆಡೆಗೆ –ವಚನ – 26 -(ವಿಶೇಷ ವಾರದ ಅಂಕಣ)

ಅಕ್ಕನ ಆರಾಧನೆಯ ಅನನ್ಯತೆ

 

ಅಯ್ಯಾ ನೀನು ಕೇಳಿದಡೆ ಕೇಳು ಕೇಳದಡೆ ಮಾಣು
ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ
ಅಯ್ಯಾ ನೀನು ನೋಡಿದಡೆ ನೋಡು ನೋಡದಡೆ ಮಾಣು
ಆನು ನಿನ್ನ ನೋಡಿ ಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯಾ
ಅಯ್ಯಾ ನೀನು ಮಚ್ಚಿದಡೆ ಮಚ್ಚು ಮಚ್ಚದಡೆ ಮಾಣು
ಆನು ನಿನ್ನನಪ್ಪಿದಲ್ಲದೆ ಸೈರಿಸಲಾರೆನಯ್ಯಾ
ಅಯ್ಯಾ ನೀನು ಒಲಿದಡೆ ಒಲಿ ಒಲಿಯದಡೆ ಮಾಣು
ಆನು ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ ಆನು ನಿಮ್ಮನರ್ಚಿಸಿ ಪೂಜಿಸಿ ಹರುಷದೊಳೋಲಾಡುವೆನಯ್ಯಾ.

ಅಕ್ಕಮಹಾದೇವಿಗೆ ತನ್ನ ವೈರಾಗ್ಯ ಪಥದ ನಿಲುವು ಸ್ಪಷ್ಟವಾಗಿತ್ತು. ಹಾಗೆ ಅವಳಿಗೊಂದು ಹುಡುಕಾಟವೂ ಇತ್ತು. ಈ ವಿಷಯದಲ್ಲಿ ಯಾವುದೇ ಗೊಂದಲವಾಗಲಿ ಅಥವಾ ದ್ವಂದ್ವವಾಗಲಿ ಇರಲಿಲ್ಲ. ಅಧ್ಯಾತ್ಮ ಸಾಧನೆಯ ಗುರಿಯೊಂದನ್ನು ಬಿಟ್ಟರೆ, ಈ ಪ್ರಾಪಂಚಿಕ ಸಂಗತಿಗಳೆಲ್ಲವೂ ಅವಳ ಪಾಲಿಗೆ ಗೌಣ, ನಗಣ್ಯ.

ನಾವು ಸೂಕ್ಷ್ಮವಾಗಿ ಅಕ್ಕನ ಸಮಗ್ರ ವಚನಗಳನ್ನು ಗಮನಿಸಿದಾಗ, ಅವಳು ಉಡುತಡಿಯಲ್ಲಿದ್ದಾಗ, ಅಲ್ಲಿಂದ ಕಲ್ಯಾಣಕ್ಕೆ ಹೋಗುವಾಗ, ಕಲ್ಯಾಣದ ಹೆಬ್ಬಾಗಿಲಿಗೆ ಆಗಮಿಸಿದಾಗ, ಅನೇಕ ಶರಣರ ಮಧ್ಯೆ ಅನುಭವ ಮಂಟಪದಲ್ಲಿ ಪರೀಕ್ಷೆಗೆ ಒಡ್ಡಿಕೊಂಡಾಗ, ಶೂನ್ಯ ಪೀಠದ ಅಲ್ಲಮನೊಂದಿಗಿನ ಸಂವಾದದಲ್ಲಿ ಭಾಗಿಯಾದಾಗ, ಶರಣರ ಪ್ರಭಾವದಲ್ಲಿ ಕಳೆದ ದಿನಗಳು, ಶರಣ ಸಮೂಹ ಕಲ್ಯಾಣದಿಂದ ಕದಳಿಗೆ ಬೀಳ್ಕೊಡುವ ಸಂದರ್ಭ, ಕದಳಿ ವನದ ಪ್ರವೇಶ, ಕದಳಿಯ ಪಯಣ, ಅಲ್ಲಿ ಚೆನ್ನಮಲ್ಲಿಕಾರ್ಜುನನ ಹುಡುಕಾಟ, ಮತ್ತೆ ಅವನೊಂದಿಗಿನ ಸಾಕ್ಷಾತ್ಕಾರ, ಆತ್ಮ ತೃಪ್ತಿ, ಇತ್ಯಾದಿ ಹೀಗೆ ಹಂತ ಹಂತವಾಗಿ ವಚನಗಳ ಬೆಳವಣಿಗೆ ಇರುವುದನ್ನು ಗ್ರಹಿಸಬಹುದು. ಅಕ್ಕನ ಪಯಣ ಬಾಹ್ಯವೊ? ಆಂತರಿಕವೊ? ಎನ್ನುವ ಪ್ರಶ್ನೆ ಹುಟ್ಟುತ್ತದೆ. ಆಗ ಥಟ್ಟಂತ ಸಿಗುವ ಉತ್ತರ ಆಂತರಿಕ! ಬಾಹ್ಯ ನೆಪ ಅಷ್ಟೆ, ಕಾಯ ಕದಳಿಯ ಪಯಣ.

ಕಲ್ಯಾಣದ ಬಸವಾದಿ ಶರಣರ ಪ್ರಭಾವ ಬೀರುವುದಕ್ಕಿಂತ ಮೊದಲಿನ ವಚನಗಳಲ್ಲಿರುವ ಉಪಮೆಗಳು ಮತ್ತು ನಂತರದ ಹೋಲಿಕೆಗಳು ಭಿನ್ನವೆನಿಸುತ್ತವೆ. ಮೊದಲಿನ ವಚನಗಳಲ್ಲಿ ಶರಣರ ಆಚಾರ, ವಿಚಾರ, ತತ್ವ, ಸಿದ್ಧಾಂತಗಳು ಕಂಡು ಬರದಿದ್ದರೂ, ಅವು ವೈಚಾರಿಕತೆಯಿಂದ ಕೂಡಿದ್ದು ತನ್ನದೇ ಆದ ಮೆರುಗನ್ನು ಹೊಂದಿವೆ. ಆ ಹಿನ್ನೆಲೆಯಲ್ಲಿ ಮೇಲಿನ ವಚನವು, ಅಕ್ಕಮಹಾದೇವಿಯು ಚೆನ್ನಮಲ್ಲಿಕಾರ್ಜುನನ ಆರಾಧಿಸುವ ಮತ್ತು ಶರಣರ ಪ್ರಭಾವ ಬೀರುವುದಕ್ಕೆ ಮುಂಚಿತವಾದ ಸಂದರ್ಭವಿರಬಹುದು ಎಂಬ ಊಹೆ.

ಅಕ್ಕನ ಅಧ್ಯಾತ್ಮ ಸಾಧನೆಯ ಆರಂಭದ ದಿನಗಳಿಂದ ಚೆನ್ನಮಲ್ಲಿಕಾರ್ಜುನನನ್ನು ಆರಾಧಿಸುವ ತೀವ್ರತೆಯ ಪರಿ ಹಂತಹಂತವಾಗಿ ಮೇಲೇರುತ್ತ, ಗಾಢವಾಗುವುದನ್ನು ಕಾಣಬಹುದು. ಅವಳು ಪರ್ವತದಲ್ಲಿ ನೆಲೆಸಿರುವ ಶಿವನ ಸ್ವರೂಪಿಯಾದ ಚೆನ್ನಮಲ್ಲಿಕಾರ್ಜುನನೇ ತನ್ನ ಗಂಡನೆಂದು ನಿರ್ಧರಿಸಿ, ಅಧ್ಯಾತ್ಮದ ದಾರಿಯಲ್ಲಿ ಸಾಗುತ್ತಿದ್ದವಳು. ಅವಳು ಹಗಲು ರಾತ್ರಿ ಎಡೆಬಿಡದೆ, ಅವನದೇ ನೆನಪು, ಅವನದೇ ಧ್ಯಾನ, ಅವನದೇ ಪೂಜೆಯಲ್ಲಿ ನಿರತಳಾಗಿರುತ್ತಾಳೆ. ಅವಳ ಭಾವ ತೀವ್ರತೆಗೆ ಅವಳೇ ಸಾಟಿ!

ಇಲ್ಲಿ ‘ಅಯ್ಯಾ’ ಅಂದರೆ ಚೆನ್ನಮಲ್ಲಿಕಾರ್ಜುನೆಂಬ ಆತ್ಮ ಸಂಗಾತಿ. ಅವಳು ಪ್ರತಿ ದಿನ ಅವನಿಗಾಗಿ ಹಾಡುತ್ತಲೇ ಇದ್ದಾಳೆ. ಅದಕ್ಕೆ ಅವಳ ನಿಷ್ಟುರವಾದ ಮಾತೇನೆಂದರೆ, ‘ಅಯ್ಯಾ ನಾನು ನಿನಗಾಗಿ ಹಾಡುತ್ತಿರುವೆ. ನೀನು ಕೇಳಿದರೆ ಕೇಳು, ಇಲ್ಲವಾದರೆ ಬಿಡು, ನಾನು ನಿನಗಾಗಿ ಹಾಡದೆ ಸುಮ್ಮನಿರಲಾರೆ. ಹಾಡಿಯೇ ಹಾಡುತ್ತೇನೆ ಎನ್ನುವ ಹಟ.

ಅಕ್ಕ ದಿನಾಲು ಚೆನ್ನಮಲ್ಲಿಕಾರ್ಜುನನಿಗಾಗಿ ಹಾಡನ್ನು ಹೇಳುತ್ತ ಅವನನ್ನೇ ನೋಡುತ್ತ ಮೈ ಮರೆಯುತ್ತಾಳೆ. ಒಂದಲ್ಲ ಒಂದು ದಿನ ಅವನು ಕಣ್ಣು ಬಿಟ್ಟು ತನ್ನೆಡೆಗೆ ಕೃಪೆ ತೋರುತ್ತಾನೆ ಎನ್ನುವ ಅಚಲವಾದ ನಂಬಿಕೆ ಮತ್ತು ವಿಶ್ವಾಸದಿಂದ ಕಾಯುತ್ತಾಳೆ. ಅವನು ಕಣ್ಣೇ ತೆರೆಯದಿದ್ದಾಗ ಮುನಿಸಿನಿಂದ ಹೇಳುತ್ತಾಳೆ, ‘ಅಯ್ಯಾ ನೀನು ನೋಡಿದರೆ ನೋಡು, ಇಲ್ಲವಾದರೆ ಬಿಡು. ನಾನು ನಿನ್ನನ್ನು ನೋಡಿ ತೃಪ್ತಿ ಪಡುತ್ತೇನೆ. ನಿನ್ನ ಹಾಗೆ ನೋಡದೆ ಇರಲು ನನ್ನಿಂದ ಸಾಧ್ಯವಿಲ್ಲ. ನಿನ್ನನ್ನು ನೋಡಿ ಸಂತೋಷಪಟ್ಟು ಹಾರೈಸದೆ ಸುಮ್ಮನಿರಲಾರೆ ಎಂದು ಹೇಳುತ್ತಾಳೆ.

ಅಕ್ಕ ಮುಂದುವರಿದು ಹೇಳುತ್ತಾಳೆ, ‘ನೀನು ಮೆಚ್ಚಿದರೆ ಮೆಚ್ಚಿಕೊ, ಇಲ್ಲದಿದ್ದರೆ ಬಿಡು, ನಾನು ಮಾತ್ರ ನಿನ್ನನ್ನು ಮೆಚ್ಚಿ ಅಪ್ಪಿಕೊಳ್ಳದೆ ಸುಮ್ಮನಿರಲಾರೆನು. ನೀನು ನನಗೆ ಒಲಿದರೆ ಒಲಿ, ಇಲ್ಲದಿದ್ದರೆ ಬಿಡು. ನಾನು ನಿನ್ನನ್ನು ಪೂಜಿಸಿ ನನ್ನವನನ್ನಾಗಿ ಮಾಡಿಕೊಳ್ಳುವೆ. ಅದನ್ನು ಮಾತ್ರ ಯಾರಿಂದಲೂ ತಡೆಯಲಾಗುವುದಿಲ್ಲ. ಚೆನ್ನಮಲ್ಲಿಕಾರ್ಜುನಯ್ಯಾ ನಾನು ನಿಮ್ಮನ್ನು ಪೂಜಿಸಿ ಸಂತೋಷದಿಂದ ಸಂಭ್ರಮಿಸುವೆನು.’

ಈ ಇಡೀ ವಚನವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅಕ್ಕಮಹಾದೇವಿಯು ತನ್ನ ಆರಾಧ್ಯ ದೈವ ಚೆನ್ನಮಲ್ಲಿಕಾರ್ಜುನನನ್ನು ಆಗಾಧವಾಗಿ ಪ್ರೀತಿಸುತ್ತಾಳೆ, ಹಾಗೆಯೇ ಅಪಾರ ಭಕ್ತಿಯಿಂದ ಪೂಜಿಸುತ್ತಾಳೆ ಎನ್ನುವುದು ಮನಸ್ಸಿಗೆ ವೇದ್ಯವಾಗುತ್ತದೆ.

ಇಲ್ಲಿ ಪೂಜಿಸುವುದು, ಆರಾಧಿಸುವುದು, ಸಂತೋಷಪಡುವುದು, ಹಾರೈಸುವುದು, ಮೆಚ್ಚಿಕೊಳ್ಳುವುದು, ಅಪ್ಪಿಕೊಳ್ಳುವುದು, ಆನಂದದಿಂದ ಓಲಾಡುವುದು, ಇವುಗಳೆಲ್ಲ ಅಕ್ಕನೊಳಗಿನ ‘ಭಕ್ತಿ’, ‘ಪ್ರೀತಿ’ ಮತ್ತು ‘ಶ್ರದ್ಧೆ’ ಯ ಪ್ರತೀಕ.
ಕೇಳದಡೆ ಮಾಣು, ನೋಡದಡೆ ಮಾಣು, ಮಚ್ಚದಡೆ ಮಾಣು, ಒಲಿಯದಡೆ ಮಾಣು, ಹೀಗೆ ಹೇಳುವ ರೀತಿ ಅವಳಲ್ಲಿರುವ ನಿರ್ಣಾಯಕ ಗುಣ, ತೀರ್ಪು ನೀಡುವ ಸಾತ್ವಿಕ ಹಟದ ದರ್ಶನವಾಗುತ್ತದೆ.

‘ಅಯ್ಯಾ ನೀನು’ ಮತ್ತು ‘ಮಾಣು’ ಶಬ್ದಗಳ ಪುನರುಚ್ಛಾರವು ಕಾವ್ಯದ ಮೆರುಗನ್ನು ಹೆಚ್ಚಿಸುವುದಲ್ಲದೆ ಗೇಯತೆ, ಲಾಲಿತ್ಯ ಇಮ್ಮಡಿಗೊಳಿಸಿ ಆಲಿಸಲು ಪ್ರಿಯವಾಗಿಸುತ್ತವೆ. ಸಂಗೀತದ ಲಯ, ತಾಳ, ಏಕತಾನತೆ ಇಲ್ಲಿರುವುದರಿಂದ, ಅಕ್ಕನ ಕಾವ್ಯ ರಚನಾ ಶಕ್ತಿ, ಸಾಮರ್ಥ್ಯದ ಅನನ್ಯತೆಯನ್ನು ಗಮನಿಸಬಹುದು. ಈ ವಚನವನ್ನು ಲಯಬದ್ಧವಾಗಿ ಹಾಡಲು ಸಾಧ್ಯ ಎಂದು ಅನೇಕ ಸಂಗೀತಗಾರರು ನಿರೂಪಿಸಿರುವುದೇ ಅದಕ್ಕೆ ಸಾಕ್ಷಿ.

ಹನ್ನೆರಡನೇ ಶತಮಾನದ ಬಸವಾದಿ ಶರಣರು ದೇವರ ಪರಿಕಲ್ಪನೆ ಮತ್ತು ಪೂಜೆಯ ಸ್ವರೂಪಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡವರು. ಏಕದೇವೋಪಾಸನೆ, ಲಿಂಗಪೂಜೆ ಮತ್ತು ಅರಿವೇ ಗುರು ಎನ್ನುವುದನ್ನು ಸಮರ್ಥಿಸಿದವರು.’ಕಾಯಕವೇ ಕೈಲಾಸ’ ವೆಂದು ದುಡಿಮೆಯಲ್ಲಿಯೇ ಸ್ವರ್ಗ, ದೇವರು, ಲಿಂಗ ಇತ್ಯಾದಿ ಕಂಡವರು.

ಆ ಹಿನ್ನೆಲೆಯಲ್ಲಿ ಮೇಲಿನ ವಚನ ಗಮನಿಸಿದ್ದೇ ಆದರೆ, ನಾವು ಮಾಡುವ ಕೆಲಸ ಎಂದರೆ ಚೆನ್ನಮಲ್ಲಿಕಾರ್ಜುನನ ಪೂಜೆಗೆ ಸಮಾನ. ಅದನ್ನು ಮನಃಪೂರ್ವಕವಾಗಿ, ಶ್ರದ್ಧೆ, ಭಕ್ತಿಯಿಂದ ಮಾಡಿದರೆ ಮಾತ್ರ ನಮಗೆ ಸಮಾಧಾನವಾಗಲು ಸಾಧ್ಯ. ಅದರಿಂದ ಬದುಕಿಗೆ ಸುಖ, ಶಾಂತಿ, ಸಂತೋಷ, ನೆಮ್ಮದಿ ಪಡೆಯಬಹುದು. ನಮ್ಮೊಳಗಿನ ಆತ್ಮ ತೃಪ್ತ ಆಗದ ಹೊರತು ಯಾವ ಕೆಲಸವನ್ನೂ ಪರಿಪೂರ್ಣವಾಗಿ ಮಾಡಿ ಮುಗಿಸಲು ಸಾದ್ಯವಾಗುವುದಿಲ್ಲ ಎನ್ನುವ ಸತ್ಯದ ಅರಿವನ್ನು ಮೂಡಿಸುವ ವಚನವಿದು. ಮನುಷ್ಯನ ಬದುಕಿಗೆ ನಿಜಾರ್ಥದ ಸಾರ್ಥಕತೆ ದೊರಕ ಬೇಕಾದರೆ ಕಾಯಕ ಮಾಡಲೇ ಬೇಕು. ಕಾಯಕವನ್ನು ನಾವು ಪ್ರೀತಿಸಿದರೆ, ಬದುಕುವ ಪ್ರೀತಿಯೂ ದ್ವಿಗುಣವಾಗುತ್ತ, ಜೀವನೋತ್ಸಾಹ ವೃದ್ಧಿ.

ಅನುಭಾವಿ ಅಕ್ಕಮಹಾದೇವಿ, ಅಲ್ಲಮ, ಚೆನ್ನಬಸವಣ್ಣ, ಸಿದ್ಧರಾಮ ತಮ್ಮ ಅಲೌಕಿಕದ ಹಾದಿ ಹಿಡಿದು ಸಾಗಿದರೂ. ಅವರ ಆತ್ಮ ವಿದ್ಯೆಯನ್ನು ಅರಿಯುವ ಪ್ರಯತ್ನವನ್ನು ನಾವು ಮಾಡಬಹುದು. ಅದು ನಮ್ಮ ಬದುಕಿಗೆ ದಾರಿ ದೀಪವಾಗುವುದರಲ್ಲಿ ಸಂದೇಹವಿಲ್ಲ.

ಸಿಕಾ

Don`t copy text!