ಮಾಯೆಯ ಧೂಳುಗುಟ್ಟಿದ ಮಾದಾರ ಧೂಳಯ್ಯ

ವಾರದ ವಿಶೇಷ ಲೇಖನ-ವಚನಕಾರ ಪರಿಚಯ ಹಾಗೂ ವಚನ ವಿಶ್ಲೇಷಣೆ

ಮಾಯೆಯ ಧೂಳುಗುಟ್ಟಿದ
ಮಾದಾರ ಧೂಳಯ್ಯ

ಮಾದಾರ ಧೂಳಯ್ಯ ಅವರ ತಂದೆ – ಕಕ್ಕಯ್ಯ , ತಾಯಿ – ನುಲಿದೇವಿ. ಇವರ ಜೀವಿತ ಕಾಲ 1160 ರಲ್ಲಿ ಎಂದು ತಿಳಿಯಲ್ಪಡುತ್ತದೆ. ಇವರ ಹೆಂಡತಿಯ ಹೆಸರು ದಾರುಕಿ. “ಕಾಮಧೂಮ ಧೂಳೇಶ್ವರ ” ಅಂಕಿತದಲ್ಲಿ 106 ವಚನಗಳನ್ನು ರಚಿಸಿದ್ದಾರೆ. ಕಾಯಕದ ಮಹತ್ವ , ಜ್ಞಾನ -ಮೋಕ್ಷಗಳ ಸ್ವರೂಪ, ಭಕ್ತಿಯ ಶ್ರೇಷ್ಠತೆಯನ್ನು ಅವು ತಿಳಿಸುತ್ತವೆ. ವೃತ್ತಿ ಪರಿಭಾಷೆ , ಬೆಡಗಿನ ಭಾಷೆ , ಅಲಂಕಾರಿಕ ಶೈಲಿ ಇವುಗಳ ವಿಶೇಷತೆ ಎನಿಸಿದೆ.

ಮಾದಾರ ಧೂಳಯ್ಯನವರು ಸಂಸ್ಕೃತವನ್ನು ಆಧಾರವಾಗಿ ಕೊಟ್ಟು ತಮ್ಮ ಚಿಂತನೆಗಳನ್ನು ವಿವರಿಸಬಲ್ಲ ವಿದ್ವಾ0ಸ – ವಾಸ್ತವವಾದಿ. ಕಾಯಕದಲ್ಲಿ ನಿರತನಾದ ತನಗೆ ಕೈಲಾಸದ ಅಗತ್ಯವಿಲ್ಲವೆನ್ನುವ ಧ್ಯೇಯವಾದಿ ಈತ. ಅರಿವು -ಮರೆವೆಯ ಬಗೆಗಿನ ಇವರ ಆಲೋಚನೆಗಳು ಚಿಂತನಾರ್ಹವಾಗಿವೆ. ಎನ್ನ ತನುವ, ಮನವ, ಪ್ರಾಣವ ನಿರ್ಮಲ ಮಾಡಿದವರು ಬಸವಣ್ಣ, ಚೆನ್ನಬಸವಣ್ಣ , ಪ್ರಭುದೇವರು , ಎನ್ನುವಲ್ಲಿ ಅವರ ಬಗೆಗಿನ ಗೌರವ ತನಗೆ ತಾನೇ ಪ್ರಕಟಗೊಳ್ಳುತ್ತದೆ. ತಮ್ಮ ಕಾಯಕವನ್ನು ಹೇಳುತ್ತಲೇ ಅದನ್ನು ಬೇರೊಂದು ಅರ್ಥವಲಯಕ್ಕೆ ತೆಕ್ಕೆ ಹಾಕುವ ಗುಣವಿಶೇಷ ಇವರಲ್ಲಿ ಕಂಡುಬರುತ್ತದೆ.

ಬಸವಪುರಾಣದ ಭೀಮಕವಿ, ರಾಘವಾಂಕ ಚರಿತ್ರೆಯ ಸಿದ್ಧ ನಂಜೇಶ ಕವಿ , ವೃಷಭೇ0ದ್ರ ವಿಜಯದ ಷಡಕ್ಷರದೇವ ಮುಂತಾದ ಕವಿಗಳು ಮಾದಾರ ಧೂಳಯ್ಯನವರು ಒಬ್ಬ ಮಹಾತ್ಮ, ಕಾಯಕ ಜೀವಿ ಎಂಬುದನ್ನು ಉಲ್ಲೇಖಿಸಿ ಇವರ ಅಂಗೋದಕದ ಮಹಾತ್ಮೆಯನ್ನು ಪ್ರಾಸಂಗಿಕವಾಗಿ ಎತ್ತಿ ಹೇಳಿದ್ದಾರೆ. ಮೇಲೆ ಉಲ್ಲೇಖಿಸಲಾದ ಕಾವ್ಯಗಳಲ್ಲಿಯಲ್ಲದೆ ಏಳು ನೂರಾ ಎಪ್ಪತ್ತು ಅಮರಗಣ0ಗಳ ಚರಿತ್ರೆಯಲ್ಲಿಯೂ ಮತ್ತು ತ. ಸು. ಶಾಮರಾಯರ ಶಿವಶರಣರ ಕಥಾ ರತ್ನ ಕೋಶದಲ್ಲಿಯೂ ಮಾದಾರ ಧೂಳಯ್ಯನವರ ಜೀವನ ವಿವರ ಕಂಡುಬರುತ್ತದೆ.

ಮೆಟ್ಟುಗಳನ್ನು ಹೊಲಿಯುವ ಸತ್ಯ ಶುದ್ಧ ಕಾಯಕದಿಂದ ಜೀವಿಸುತ್ತಿದ್ದ ಧೂಳಯ್ಯ ಪ್ರತಿ ನಿತ್ಯ ತಪ್ಪದೆ ಅಲ್ಲಮ ಪ್ರಭುಗಳ ಅಧ್ಯಕ್ಷತೆಯಲ್ಲಿ ಜರುಗುತ್ತಿದ್ದ ಅನುಭವ ಮಂಟಪದ ಆಧ್ಯಾತ್ಮಿಕ ಗೋಷ್ಠಿಯಲ್ಲಿ ಮೂಕ ಪ್ರೇಕ್ಷಕನಾಗಿ ಭಾಗವಹಿಸುತ್ತಿದ್ದನು. ತನ್ನ ಅನಿಸಿಕೆಗಳನ್ನು ಅಂತರಾತ್ಮಕ್ಕೆ ಹೇಳಿಕೊಳ್ಳುತ್ತಿದ್ದನೇ ವಿನಃ ತೊತ್ತಿಗೇಕಯ್ಯಾ ತತ್ವಾರ್ಥದ ಚಿಂತೆ ಎಂದು ಬಾಯಿ ಬಿಟ್ಟು ಏನೂ ನುಡಿಯುತ್ತಿರಲಿಲ್ಲ. ಮತ್ತಿನ್ನೆಲ್ಲರೂ ತತ್ವ ಕೋವಿದರು, ವಿಜ್ಞಾನ ವಿಶಾರದರು. ತಾನೊಬ್ಬ ಕಾಯಕ ಜೀವಿ ಎಂಬುದೇ ಮಾದಾರ ಧೂಳಯ್ಯನವರ ಅಚಲ ನಿಲುವಾಗಿತ್ತು. ಭಾವನೆಗಳು ಉಕ್ಕಿ ಉಕ್ಕಿ ಬಂದಾಗ ತುಸುಹೊತ್ತು ಚಪ್ಪಲಿ ಹೊಲಿಯುವುದನ್ನು ನಿಲ್ಲಿಸಿ ತಾಳೋಲೆ ಗರಿಗಳ ಮೇಲೆ ಕಂಠ ಪತ್ರ ಹಿಡಿದು ತಮ್ಮ ವಿಚಾರಗಳನ್ನು ಅಕ್ಷರಗಳಲ್ಲಿ ಮೂಡಿಸಿ ಸಂತೃಪ್ತಿ ಪಡುತ್ತಿದ್ದರು. ಯಾರಿಗೂ ತಮ್ಮ ರಚನೆಗಳನ್ನು ತೋರಿಸಲು ಹೋಗುತ್ತಿರಲಿಲ್ಲ. ಯಾರ ಮುಂದೆಯೂ ತಮ್ಮ ವಚನಗಳ ಬಗ್ಗೆ ಚರ್ಚಿಸಲು ಹೋಗುತ್ತಿರಲಿಲ್ಲ. ಗುಪ್ತವಾಗಿ ಬರೆದಿಟ್ಟ ಮಾದಾರ ಧೂಳಯ್ಯನವರ ವಚನಗಳು ಇಂದು ಒಂದು ನೂರಾ ಆರು ಸಂಖ್ಯೆಯಲ್ಲಿ ಉಪಲಭ್ದ ಇವೆ. “ಕಾಮಧಾಮ ಧೂಳೇಶ್ವರ ” ಎಂಬ ಇವರ ವಚನಾ0ಕಿತದ ಅರ್ಥ… ಕಾಮವೆಂದರೆ ಕಾಣುವುದು , ಧೂಮವೆಂದರೆ ಕಾಣುವುದರಿಂದು0ಟಾಗುವ ತಮ. ಇವೆರಡನ್ನು ಕುಟ್ಟಿ ಪುಡಿ ಮಾಡಿದುದರಿಂದ ಧೂಳೇಶ್ವರ.

ವಚನ ವಿಶ್ಲೇಷಣೆ

ಅಟ್ಟಿಯ ಚುಚ್ಚುವ ಉಳಿಯ ಮೊನೆಯಲ್ಲಿ
ಪ್ರತ್ಯಕ್ಷವಾದ ಪರಮೇಶ್ವರನ ಕಂಡು
ಇತ್ತಲೇಕಯ್ಯಾ ? ಕಾಯದ ತಿತ್ತಿಯ ಹೊತ್ತಾಡುವನ ಮುಂದೆ !
ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಅವರ ಮುಕ್ತಿಯ ಮಾಡು
ನೀ ಹೊತ್ತ ಬಹುರೂಪದಿ ತಪ್ಪದೆ ರಜತ ಬೆಟ್ಟದ ಮೇಲಕ್ಕೆ ಹೋಗು
ಕಾಮಧೂಮ ಧೂಳೇಶ್ವರನ ಕರುಣದಿಂದ ನೀನೇ ಬದುಕು

ಮೆಟ್ಟುಗಳನ್ನು ಮಾಡುವ ಕಾಯಕದ ಧೂಳಯ್ಯ ಬಹಳ ಸ್ವಾರಸ್ಯಕರವಾದ ವಚನಗಳನ್ನು ಬರೆದಿದ್ದಾನೆ. ಪರಮೇಶ್ವರನು ಪ್ರತ್ಯಕ್ಷನಾದರೂ ಲಕ್ಷಿಸದ ಧೂಳಯ್ಯನ ಕಾಯಕ ನಿಷ್ಠೆ ಅದ್ಭುತವಾದುದು. ಹಗಲು ಚಪ್ಪಲಿಗಳನ್ನು ಹೊಲಿದು ಸಾಯಂಕಾಲ ಅನುಭವ ಮಂಟಪದ ಸದ್ಗೋಷ್ಠಿ ಅಥವಾ ಶಿವಾನುಭವ ಚಿಂತನದಲ್ಲಿ ಭಾಗವಹಿಸುತ್ತಿದ್ದ ಅಸ್ಪೃಶ್ಯ ಜನಾಂಗಕ್ಕೆ ಸೇರಿದ್ದ ಧೂಳಯ್ಯ ಅನುಭವ ಮಂಟಪದ ನಿರ್ಣಯಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದುದು ಕುತೂಹಲಕರ ಸಂಗತಿಯಾಗಿದೆ.

ಕಾಯಕದಲ್ಲಿ ನಿರತನಾದಡೆ ಗುರುದರುಶನವಾದಡೂ ಮರೆಯಬೇಕು ; ಲಿಂಗಪೂಜೆಯಾದಡೂ ತೊರೆಯಬೇಕು ; ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು ; ಕಾಯಕವೇ ಕೈಲಾಸವಾದ ಕಾರಣ ” ಎಂಬ ಅನುಭವ ಮಂಟಪದ ಇತ್ಯರ್ಥಕ್ಕೆ ಬದ್ಧನಾಗಿ ಧೂಳಯ್ಯ , ತಾನು ಕೊಯ್ಯುವ ಚರ್ಮದ ಉಳಿಯ ಮೊನೆಯಲ್ಲಿ ಸಾಕ್ಷಾತ್ ಶಿವ ಪ್ರತ್ಯಕ್ಷನಾಗಿ ಬಂದರೂ ಇತ್ತಲೇಕೆ ಬಂದೆಯಯ್ಯಾ ಎಂದು ಕೇಳುತ್ತಿದ್ದಾನೆ. ನಿಜವಾಗಲೂ ಕಲ್ಯಾಣದ ಶಿವ ಶರಣರು ಶಿವನಿಗೆ ಶರಣು ಹೋದರೂ ಶಿವನೇ ಸರ್ವಸ್ವವೆಂದು ಭಾವಿಸಿದವರಲ್ಲ. ಶಿವನನ್ನೂ ಮೀರಿ ಸರ್ವಜನ ಹಿತಾಯ , ಸರ್ವಜನ ಸುಖಾಯವಾದ ತತ್ವವಿದೆಯೆ0ಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದರು.

ಇಂಥ ದಿಟ್ಟತನಕ್ಕನುಗುಣವಾಗಿಯೇ ಪ್ರಸ್ತುತ ವಚನದಲ್ಲಿ ಧೂಳಯ್ಯನು ತನ್ನ ಕಾಯಕದ ಉಳಿಯ ಮೊನೆಯಲ್ಲಿ ಕಾಣಿಸಿಕೊಂಡ ಪರಮಾತ್ಮನಿಗೆ ಇತ್ತಲೇಕೆ ಬಂದೆಯಯ್ಯಾ , ಕಾಯದ ತಿತ್ತಿಯ ಹೊತ್ತಾಡುವವನ ಮುಂದೆ ? ಎಂದು ತನ್ನ ಮನದ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾನೆ. ಇಲ್ಲಿ ಧೂಳಯ್ಯನ ಕಾಯಕ ನಿಷ್ಠೆಯನ್ನು ಪರೀಕ್ಷಿಸಲು ದೇವರು ಬಂದಾಗ ಧೂಳಯ್ಯ ಸಾಮಾನ್ಯನಾದ ನನ್ನ ಮುಂದೆ ಯಾಕೆ ಬಂದಿರಿ ? ನಾನೇನು ನಿಮ್ಮನ್ನು ಬಯಸಿ ವ್ರತ ಮಾಡಿದ್ದೆನೇ ? ಪರ್ವ ಮಾಡಿದ್ದೆನೇ ? ಧ್ಯಾನ – ತಪಸ್ಸು ಮಾಡಿದ್ದೆನೇ ? ನಿನ್ನ ಭಕ್ತರಿದ್ದಲ್ಲಿಗೆ ಹೋಗಿ ಅವರನ್ನು ಮುಕ್ತರನ್ನಾಗಿ ಮಾಡು ಎಂದು ನಿಷ್ಠುರವಾಗಿ ಹೇಳುತ್ತಿದ್ದಾನೆ.

ಮೆಟ್ಟುಗಳನ್ನು ಹೊಲಿಯುವ ಕಾಯಕದಲ್ಲಿ ನಿರತನಾದ ಧೂಳಯ್ಯನಲ್ಲಿಗೆ ದೇವರು ಒಲಿದು ಬರಲು ಮುಖ್ಯ ಕಾರಣವೆಂದರೆ ಆತನ ನಿರ್ಮಲ ಮನಸ್ಸು . ದೇವರಿಗೆ ಧೂಳಯ್ಯ ಬೇಕಾಗಿದ್ದನೆ ವಿನಃ ಧೂಳಯ್ಯನಿಗೆ ದೇವರು ಬೇಕಾಗಿಲ್ಲ.

ಮಾದಾರ ಧೂಳಯ್ಯ ಕೇವಲ ಕಲ್ಯಾಣದ ಒಬ್ಬ ಚಪ್ಪಲಿ ಮಾಡಿ ಮಾರಿ ಬದುಕುವ ನರಮನುಷ್ಯನಾಗಿರಲಿಲ್ಲ. ತನ್ನ ಸಾಧನೆ ಸಿದ್ಧಿಗಳಿಂದ ನಿಸ್ವಾರ್ಥ ಕಾಯಕ ಪರಿಶ್ರಮದಿಂದ ಉಚ್ಚಕುಲದವರ ಪೂಜೆಗೂ ಭಾಜನನಾಗಿ ಬಾಳಿದನೆಂಬುದು ಅವರ ಜೀವನದ ಮರ್ಮ.

ಸುಧಾ ಪಾಟೀಲ್
ಬೆಳಗಾವಿ

One thought on “ಮಾಯೆಯ ಧೂಳುಗುಟ್ಟಿದ ಮಾದಾರ ಧೂಳಯ್ಯ

Comments are closed.

Don`t copy text!