ಗಜಲ್ ( ಮಾತ್ರೆ೨೫)
ಅವನ ಸಿಂಗರಿಸಿ ಪೂಜಿಸುವುದು ನೆಮ್ಮದಿಯಾಗಿದೆ ಮನಕೆ
ಏಕಾಂತದಲಿ ವೀಣೆಯ ನುಡಿಸುವುದು ಹಿತವಾಗಿದೆ ಮನಕೆ
ಹಗಲಲಿ ಕಣ್ಣು ಮಂಜಾಗಿ ಜಗದ ಸೊಬಗು ಕಾಣದಾಗಿದೆ
ಇರುಳಲಿ ನಯನಗಳನು ಮಿಲನಿಸುವುದು ತಂಪಾಗಿದೆ ಮನಕೆ
ತನು ವಿರಹದಿ ಬಳಲಿ ಬೆಂಡಾಗಿ ನರಳುತಿದೆ ಅವನಿಗಾಗಿ
ಪ್ರೀತಿಯಲಿ ಅಧರಗಳ ಚುಂಬಿಸುವುದು ಜೇನಾಗಿದೆ ಮನಕೆ
ವೈಶಾಖದ ಪ್ರಯಣ ನೆತ್ತಿ ಸಿಡಿಯುತಿದೆ ರವಿಯ ಸಂಗದಿ
ರಣ ಬಿಸಿಲಿಗೆ ಅವನು ಕೊಡೆ ಹಿಡಿಯುವುದು ಸುಖವಾಗಿದೆ ಮನಕೆ
ದಿನವೆಲ್ಲಾ ಅವನ ಧ್ಯಾನಿಸುತ ಬದುಕ ಬಂಡಿ ಎಳೆಯುವೆ
ನಿತ್ಯ ಕನಸಲಿ ಅವನನು ಕಾಣುವುದು ಸೊಗಸಾಗಿದೆ ಮನಕೆ
ಬೇಲಿ ಮೇಲಿನ ಸುಮಕೆ ಹಾದಿ ಹೋಗುವವರ ಕಣ್ಣು ಬಹಳ
ಗುಲಾಬಿ ಜೊತೆಗೆ ಮುಳ್ಳು ಬೆಳೆಯುವುದು ರಕ್ಷಣೆಯಾಗಿದೆ ಮನಕೆ
ಮೋಹದ ಬಟ್ಟೆಯಲಿ ನರ ಗಾಣದ ಎತ್ತಾಗಿ ತಿರುಗುತಿದೆ
ಅವನ ಭಜನೆಯಲಿ ಪ್ರಭೆ ಹರಡುವುದು ಅರಿವಾಗಿದೆ ಮನಕೆ
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ.