(ಪ್ರವಾಸ ಕಥನ)
ಸವದತ್ತಿ ಯಲ್ಲಮ್ಮ…..
ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮ ರಾಜ್ಯದ ಪ್ರಮುಖ ಶಕ್ತಿ ಪೀಠ. ಬೆಳಗಾವಿಯಿಂದ ಸುಮಾರು 78km ದೂರದಲ್ಲಿದೆ. ಸವದತ್ತಿಯಿಂದ ಸುಮಾರು 7km ಅಂತರದಲ್ಲಿ ಸುಪ್ರಸಿದ್ಧ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವಿದೆ. ಹಿಂದೆ ಈ ಪ್ರದೇಶಕ್ಕೆ ಸಿದ್ಧಾಚಲ ಪರ್ವತ ಎನ್ನುತ್ತಿದ್ದರು ಈಗ ಯಲ್ಲಮ್ಮ ಗುಡ್ಡ ಎಂದು ಕರೆಯುತ್ತಾರೆ.ಉತ್ತರ ಕರ್ನಾಟಕದ ಜನರ ಪಾಲಿಗೆ ಆರಾಧ್ಯ ದೈವ. ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬರುತ್ತಾರೆ.
ಒಂದು ವರ್ಷದಲ್ಲಿ ಏಳು ಜಾತ್ರೆಗಳು ನಡೆಯುವದು ಈ ಕ್ಷೇತ್ರದ ವಿಶೇಷ. ಬನದ ಹಾಗೂ ಭಾರತ ಹುಣ್ಣಿಮೆಗಳoದು ನಡೆಯುವ ಜಾತ್ರೆ ಅತಿ ದೊಡ್ಡದು. ಈ ಕ್ಷೇತ್ರಕ್ಕೆ ಸುಮಾರು 3000 ವರ್ಷಗಳ ಇತಿಹಾಸವಿದೆ. ಚಾಲುಕ್ಯ ಹಾಗೂ ರಾಷ್ಟ್ರಕೂಟರ ವಾಸ್ತು ಶೈಲಿ ಯಲ್ಲಿದೆ. ಯಲ್ಲಮ್ಮನಿಗೆ ವೀರಶೈವ ಸಂಪ್ರದಾಯದಂತೆ ನಿತ್ಯ ಪೂಜೆ ನಡೆಯುತ್ತದೆ.ದೇವಾಲಯದಲ್ಲಿ ಪೂಜಿಸುವ ದೇವತೆ….. ಪರಶುರಾಮನ ತಾಯಿ ರೇಣುಕಾ (ಯಲ್ಲಮ್ಮ ) ಜಮದಗ್ನಿ ಋಷಿಯ ಹೆಂಡತಿ. ರೇಣುಕೆಯನ್ನು ಸಪ್ತಮಾತೆಯರಲ್ಲಿ ಒಬ್ಬಳೆoದು ಗೌರವಿಸಲಾಗುತ್ತದೆ.ಮಗನಿಗೆ ನೀಡಿದ ವಾಗ್ದಾನದಂತೆ ತಾಯಿ ರೇಣುಕಾ….. ಯಲ್ಲಮ್ಮಳಾಗಿ 7ಕೊಳ್ಳಗಳು ಇರುವ ಸವದತ್ತಿಗೆ ಬಂದು ಪ್ರತಿಷ್ಠಾಪನೆಗೊಂಡಳು ಎನ್ನುವ ಐತಿಹ್ಯವಿದೆ.
ಸವದತ್ತಿಯಲ್ಲಿ ಜಮದಗ್ನಿ ಋಷಿ, ಪರಶುರಾಮ, ದತ್ತಾತ್ರೇಯ, ಮಾತoಗಿ, ಅನ್ನಪೂರ್ಣೇಶ್ವರಿಯ ದೇವಸ್ಥಾಗಳಿವೆ. ಮಕ್ಕಳು ಇಲ್ಲದವರು ಪರಶುರಾಮನ ತೊಟ್ಟಿಲು ತೂಗುವ ಹರಕೆಯನ್ನು ತೂಗುತ್ತಾರೆ. ಅರಿಶಿಣ ಅಥವಾ ಬಂಡಾರವನ್ನು ಯಲ್ಲಮ್ಮ ತಾಯಿಗೆ ಅರ್ಪಿಸುವದು ಇಲ್ಲಿನ ಮುಖ್ಯ ಸೇವೆ. ಜಾತ್ರೆಯ ವೇಳೆಯಲ್ಲಿ ಗುಡಿಯ ಮೇಲೆ ಭoಡಾರ ಎರಚುತ್ತಾರೆ.
ಈ ಸಂಧರ್ಭದಲ್ಲಿ ಬರುವ ಭಕ್ತರೂ ಭoಡಾರದಲ್ಲಿ ಮುಳಿಗಿರುತ್ತಾರೆ. ಪ್ರತಿದಿನ ದೇವಸ್ಥಾನವು ಬೆಳಗಿನ ನಾಲ್ಕು ಗಂಟೆಗೆ ತೆರೆಯುತ್ತದೆ. ಬೆಳಗಿನ ಪೂಜೆ ನಂತರ ಸಾರ್ವಜನಿಕ ದರ್ಶನ. ಮತ್ತೆ ಸಂಜೆ 4ರಿಂದ 6ರವರೆಗೆ ವಿಶೇಷ ಪೂಜೆ ನಡೆಯುತ್ತದೆ.
ದೇವಸ್ಥಾನದ ಹಿಂಭಾಗದಲ್ಲಿ ಮೂರು ನೀರಿನ ಕೊಳ್ಳಗಳಿವೆ. ಇಲ್ಲಿ ಜೋಗುಳ ಬಾವಿ ಕೂಡ ಇದ್ದು ಈ ನೀರು ಚರ್ಮ ರೋಗಗಳನ್ನು ಗುಣ ಪಡಿಸುತ್ತದೆ ಎಂದೂ ನಂಬಲಾಗಿದೆ.
ಸವದತ್ತಿ ಕ್ಷೇತ್ರಕ್ಕೆ ಬರುವ ಭಕ್ತರಿಗಾಗಿ ಸಾಕಷ್ಟು ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಸಾಕಷ್ಟು ಪವಾಡ ಗಳನ್ನು ಸೃಷ್ಟಿಸಿ ಇಲ್ಲಿನ ಜನರಿಗೆ ಆಸರೆಯಾಗಿರುವ, ಮಹಿಮೆ ಹೊಂದಿರುವ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರವು ಭಕ್ತರ ಪಾಲಿಗೆ ವರವ ಕರುಣಿಸಿ ಕಾಪಾಡುವ ಕ್ಷೇತ್ರ. ಈ ದೇವಾಲಯಕ್ಕೆ ಎಲ್ಲಾ ಜಾತಿ, ಮತ, ಪಂಥ ದವರು ಬರುವದು ವಿಶೇಷ. ಹೊಸ ಭಕ್ತರೂ ಬರುವದು ಮತ್ತೊಂದು ವಿಶೇಷ. ಯಾವ ದಿನ ದೇವಾಲಯಕ್ಕೆ ಹೊಸ ಭಕ್ತರು ಬರುವದಿಲ್ಲವೋ ಅಂದು ತಾನಿಲ್ಲಿ ಇರುವದಿಲ್ಲ ಎಂದೂ ತಾಯಿ ಹೇಳಿದ್ದಾಳೆoದು ಹೇಳಲಾಗುತ್ತದೆ.
ಅಶ್ವಿಜ ಮಾಸ ಶುಕ್ಲ ಪಕ್ಷ ದೇವಸ್ಥಾನದಲ್ಲಿ ಮಹಾನವಮಿ ಕಾರ್ಯಕ್ರಮ ಜರುಗಿ ಗುಡಿಯಲ್ಲಿ ನಂದಾದೀಪ. ಘಟ ಸ್ಥಾಪನೆ ಜರಗುತ್ತದೆ. ವಿಶೇಷ ಅಲಂಕಾರ ಒoಬತ್ತು ದಿನಗಳವರೆಗೆ ನಡೆದು ನಿತ್ಯ ಸಂಗೀತ ಕಚೇರಿ ಮಾಡುತ್ತಾರೆ. ಹತ್ತನೆಯ ದಿನ ಶ್ರೀದೇವಿಗೆ ಪೂಜೆಯನ್ನು ಖಂಡೆ ಆಯುಧಗಳೊಂದಿಗೆ ಮಾಡಿ ಬನ್ನಿ ಮಂಟಪಕ್ಕೆ ಹೋಗಿ ಬನ್ನಿ ಮೂಡಿಯುವ ಸಂಪ್ರದಾಯವಿದೆ.
ಭಕ್ತಾದಿಗಳು ಕಷ್ಟ ಪರಿಹಾರಕ್ಕಾಗಿ ಶೀಗಿಹುಣ್ಣಿಮೆಯಿಂದ ಮುಂದಿನ ನಾಲ್ಕು ಹುಣ್ಣಿಮೆ ತಪ್ಪದೇ ದೇವಿ ದರ್ಶನ ಪಡೆಯುತ್ತಾರೆ. ಹುಣ್ಣಿಮೆಯ ಸಂಜೆ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ.ಹೊಸ್ತಿಲ ಹುಣ್ಣಿಮೆಯoದು ಕೂಡ ವಿಶೇಷ ಪೂಜೆ ನಡೆಯುತ್ತದೆ.
ಸ್ಥಳ ಪುರಾಣಗಳ ಕಥೆ ಪ್ರಕಾರ..ಪರಶುರಾಮನ ತಂದೆ ಜಮದಗ್ನಿ ಮಹರ್ಷಿ. ತಾಯಿ ರೇಣುಕಾದೇವಿ ಇಲ್ಲಿ ಆಶ್ರಮವಾಸಿಗಳಾಗಿದ್ದರು. ಪ್ರತಿನಿತ್ಯ ಯಾಗಕ್ಕೆ ನೀರು ತರಲು ಹೋಗುತ್ತಿದ್ದ ರೇಣುಕೆ ಮರಳಿನ ಮಡಕೆ ಮಾಡಿ, ಹಾವನ್ನೇ ಸಿಂಬೆ ಯಾಗಿ ನೀರು ತರುತ್ತಿದ್ದಳಂತೆ ಅಂಥ ಪಾತಿವೃತ್ಯ ಶಕ್ತಿ ಇತ್ತಂತೆ. ಒಂದುದಿನ ನೀರು ತುಂಬಿಸುವಾಗ್… ಆಕಾಶ ಮಾರ್ಗದಲ್ಲಿ ಹೋಗುತ್ತಿದ್ದ ಯಕ್ಷರ ಸರಸದ ಬಿಂಬ ನೀರಿನಲ್ಲಿ ಕಾಣಿಸಿ ಇದನ್ನು ನೋಡಿ ರೇಣುಕೆ ಮೋಹಪರವಶಲಾದಳಂತೆ, ಆಗ ಮರಳಿನ ಮಡಕೆ ನೀರಿನಲ್ಲಿ ಕರಗಿತ್ತಂತೆ ಮತ್ತೆ ಪ್ರಯತ್ನಿಸಿದರು ಮಡಕೆ ಆಗಲಿಲ್ಲವಂತೆ.ಇದೆಲ್ಲ ನೋಡಿದ ಜಮದಗ್ನಿ ಪತ್ನಿಗೆ ಶಾಪನೀಡಿದನಂತೆ.
ಶಾಪಗ್ರಸ್ತೇಯಾದ ರೇಣುಕೆಗೆ ತೊನ್ನು ಆವರಿಸಿತoತೆ. ಹೀಗೆ ಪತಿಯಿಂದ ಪರಿತ್ಯಕ್ತೇಯಾಗಿ ರೇಣುಕೆ ಸವದತ್ತಿಯ ಜೋಗುಳ ಬಾವಿಗೆ ಬಂದು.. ಎಕ್ಕಯ್ಯ. ಜೋಗಯ್ಯ ಎಂಬ ಸಿದ್ಧರ ದರ್ಶನಮಾಡಿ ಅವರ ಆಣ ತಿಯಂತೆ ಜೋಗುಳ ಬಾವಿಯಲ್ಲಿ ಸ್ನಾನ ಮಾಡಿ ಮೈಗೆ ಅರಿಶಿಣ ಭoಡಾರ ಲೆಪಿಸಿಕೊಂದಾಗ ತೊನ್ನು ಮಾಯವಾಗಿ ರೋಗಮುಕ್ತಳಾದಳಂತೆ. ಶಾಪ ಮುಕ್ತಳಾಗಿ ಆಶ್ರಮಕ್ಕೆ ಆಗಮಿಸಿದ ರೇಣುಕೆಯನ್ನು ಕಂಡು ಕೋಪದಿಂದ ಜಮಾದಗ್ನಿ ತನ್ನ ಮಗ ಪರಶುರಾಮನಿಗೆ ತಾಯಿಯ ತಲೆ ಕತ್ತರಿಸುವಂತೆ ಹೇಳಿದರಂತೆ. ತಂದೆಯ ಹೇಳಿಕೆಯಂತೆ ಪರಶುರಾಮ ತಾಯಿಯ ರುಂಡವನ್ನು ಕತ್ತರಿಸಿದರಂತೆ. ನಂತರ ತಂದೆಯಿಂದ ವರ ಕೇಳಿ ತಾಯಿಯನ್ನು ಬದುಕಿಸಿದರಂತೆ.
ಮುಂದೆ ರೇಣುಕೆ ಯಲ್ಲಮ್ಮಳಾಗಿ ನೆಲಿಸಿ ಭಕ್ತರನ್ನು ಕಾಪಾಡುತ್ತಿದ್ದಾಳೆ. ಭಕ್ತರು ಭoಡಾರ ಅರ್ಪಿಸುವದು ಪ್ರಮುಖ ಸೇವೆಯಾಯಿತು.
“ಉಧೋ ಉಧೋ ಯಲ್ಲಮ್ಮ ನಿನಾಲ್ಕ ಉಧೋ ಎನ್ನುವ ಜೈಕಾರ ಸದಾ ಮೊಳಗುತ್ತಿರುತ್ತದೆ.”
ಕಾರ್ತಿಕಮಾಸದಲ್ಲಿ ಲಕ್ಷ ದೀಪೋತ್ಸವ ನಡೆಸಲಾಗುತ್ತದೆ.ಯಲ್ಲಮ್ಮ ದೇವಿಯ ಕಾಳಿ ಅಂಶ ಎನ್ನಲಾಗುತ್ತದೆ.ಉತ್ತರ ಕರ್ನಾಟಕ ಜನರು ಭಕ್ತಿಯಿಂದ, ಶ್ರದ್ಧೆಯಿಂದ ಆರಾಧಿಸುವ ಶಕ್ತಿ ಪೀಠ. ಕೋಟ್ಯಂತರ ಭಕ್ತರ ನಂಬಿಕೆಯ ತಾಣ. ಭಕ್ತಿಯ ಕೇಂದ್ರ.