ಅತ್ತಲಿತ್ತ ಹರಿವ ಮನವ ಚಿತ್ತದಲ್ಲಿ ನಿಲ್ಲಿಸಬಲ್ಲಡೆ….
ಸುತ್ತಿ ಸುತ್ತಿ ಬಂದಡಿಲ್ಲ,ಲಕ್ಷಗಂಗೆ
ಮಿಂದಡಿಲ್ಲ,ತುಟ್ಟ ತುದಿಯ
ಮೇರು ಗಿರಿಯ ಮೆಟ್ಟಿ ಕೂಗಿಡದಿಲ್ಲ
ನಿತ್ಯನೇಮದಿಂದ ತನುವ
ಮುಟ್ಟಿ ಕೊಂಡಡಿಲ್ಲ
ನಿಚ್ಚಕ್ಕೆನಿಚ್ಚನೆನೆವ ಮನವ
ಅಂದಂದಿಗೆ ಅತ್ತಲಿತ್ತ ಹರಿವಮನವ
ಚಿತ್ತದಲ್ಲಿ ನಿಲ್ಲಿಸಬಲ್ಲಡೆ,ಬಚ್ಚಬರಿಯ
ಬೆಳಗು ಗುಹೇಶ್ವರ ಲಿಂಗವು
-ಅಲ್ಲಮಪ್ರಭುದೇವ
ಅಲ್ಲಮ್ಮ ಪ್ರಭುಗಳ ಈ ವಚನದಲ್ಲಿ ಮನವನ್ನ ಅತ್ತಲಿತ್ತಲು ಹರಿಯದಂತೆ ನಿಯಂತ್ರಿಸುವುದೇ ಮಹತ್ತರವಾದ ಆಧ್ಯಾತ್ಮಿಕ ಸಾಧನೆ ಎಂದು ಹೇಳಿದ್ದಾರೆ. ಶರಣರು ಆಚರಣೆಗೆ ತಂದಿರುವ ಆಧ್ಯಾತ್ಮಿಕ ಸಾಧನೆ ಅತ್ಯಂತ ಸುಲಭವಾದದ್ದು.
ಮನುಷ್ಯನ ಎಲ್ಲಾ ಬಾಹ್ಯ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸುವುದು ಮನಸ್ಸು. ಮನಸ್ಸು ಎಂದರೆ ಪ್ರಜ್ಞೆ, ಗ್ರಹಿಕೆ, ಯೋಚನೆ, ವಿವೇಚನೆ ಮತ್ತು ನೆನಪು ಸೇರಿದಂತೆ ಗ್ರಹಣ ಶಕ್ತಿಗಳ ಸಮೂಹ. ಇದನ್ನು ಸಾಮಾನ್ಯವಾಗಿ ಒಂದು ಜೀವಿಯ ಯೋಚನೆಗಳು ಮತ್ತು ಪ್ರಜ್ಞೆಯ ಸಾಮರ್ಥ್ಯ ಎಂದು ವ್ಯಾಖ್ಯಾನಿಸಲಾಗುತ್ತದೆ. ಇದು ಕಲ್ಪನೆ, ಗುರುತಿಸುವಿಕೆ ಹಾಗೂ ಮೆಚ್ಚುಗೆಯ ಶಕ್ತಿಯನ್ನು ಹೊಂದಿರುತ್ತದೆ. ಮತ್ತು ಮನೋಭಾವಗಳು, ಕ್ರಿಯೆಗಳಾಗಿ ಪರಿಣಮಿಸುವ ಅನಿಸಿಕೆಗಳು ಹಾಗೂ ಭಾವನೆಗಳನ್ನು ಸಂಸ್ಕರಿಸುವ ಜವಾಬ್ದಾರಿಯನ್ನು ಹೊಂದಿದೆ.
ಯಾವುದು ಮನಸಿನ ಘಟಕವಾಗಿರುತ್ತದೆ ಮತ್ತು ಅದರ ವಿಶಿಷ್ಟವಾಗಿರುವ ಗುಣಲಕ್ಷಣಗಳೇನು ಎಂಬ ಬಗ್ಗೆ ತತ್ವಶಾಸ್ತ್ರ, ಧರ್ಮ, ಮನೋವಿಜ್ಞಾನ ಮತ್ತು ಜ್ಞಾನ ಗ್ರಹಣ ವಿಜ್ಞಾನದಲ್ಲಿ ಸುಧೀರ್ಘ ಪರಂಪರೆ ಇದೆ. ಅದರ ಸ್ವರೂಪ ಏನೇ ಇದ್ದರೂ ಮನಸೆಂದರೆ ಒಂದು ಜೀವಿಗೆ, ತನ್ನ ಪರಿಸರದ ಕಡೆಗೆ ವ್ಯಕ್ತಿನಿಷ್ಠ ಜಾಗೃತಿ ಹಾಗೂ ಉದ್ದೇಶಪೂರ್ವಕತೆ ಹೊಂದಿರುವುದು. ಯಾವುದೋ ರೀತಿಯ ಸಾಧನದಿಂದ ಉದ್ದೀಪನಗಳನ್ನ ಗ್ರಹಿಸುವುದನ್ನ ಮತ್ತು ಅವಕ್ಕೆ ಪ್ರತಿಕ್ರಿಯಿಸುವುದನ್ನು ಮತ್ತು ವಿಚಾರ ಹಾಗೂ ಅನಿಸಿಕೆ ಸೇರಿದಂತೆ ಪ್ರಜ್ಞೆ ಹೊಂದುವುದನ್ನು ಸಾಧ್ಯವಾಗಿಸುವಂಥದ್ದು ಎಂದು ಸಾಮಾನ್ಯವಾಗಿ ಒಪ್ಪಲಾಗಿದೆ. ಚಂಚಲ ಸ್ವರೂಪವನ್ನು, ಗಾಳಿಗಿಂತಲೂ ವೇಗವಾಗಿ ಓಡುವ ಗುಣವನ್ನು ಹೊಂದಿರುವ ಮನವನ್ನ ಹಿಡಿತದಲ್ಲಿ ಇಟ್ಟುಕೊಂಡದ್ದೆ ಆದರೆ ಅಲ್ಲಿಯೇ ಮಹಾಬೆಳಗು ಗುಹೇಶ್ವರ ಲಿಂಗವನ್ನು ಕಾಣಬಹುದು ಎಂಬುದನ್ನ ಹೇಳುತ್ತಾರೆ.
ಸುತ್ತಿ ಸುತ್ತಿ ಬಂದಡಿಲ್ಲ
ನಮಗೆ ಬೇಕಾದದ್ದನ್ನು ಸಿದ್ಧಿಸಿಕೊಳ್ಳಲು ಅಥವಾ ದೇವರ ಕೃಪೆಗೆ ಪಾತ್ರರಾಗಲು, ಭಕ್ತಿಯ ಕೆಲವು ಆಚರಣೆಗಳನ್ನು ನಾವು ರೂಢಿಸಿಕೊಂಡಿದ್ದೇವೆ. ಗುಡಿ ಗುಂಡಾರಗಳಿಗೆ ಪ್ರದಕ್ಷಿಣೆ ಹಾಕುವುದು.ದೀರ್ಘ ದಂಡ ನಮಸ್ಕಾರಗಳನ್ನ ಹಾಕುವುದು. ಬನ್ನಿ ಮರ, ಆಲದ ಮರಗಳಿಗೆ ಸುತ್ತು ಹಾಕುವುದು . ಪುಣ್ಯಕ್ಕೆ ಕ್ಷೇತ್ರಗಳೆಂದು ನಂಬಿರುವ ಕಾಶಿ, ಕೇದಾರ ,ಬದರಿ ಮತ್ತು ದ್ವಾರಕ ಕ್ಷೇತ್ರಗಳಿಗೆ ತೀರ್ಥಯಾತ್ರೆಗಳನ್ನ ಕೈಗೊಳ್ಳುವುದು. ಅದರಿಂದ ಜೀವನ ಸಾರ್ಥಕವಾಗುತ್ತದೆ ಅಥವಾ ಪಾವನವಾಗುತ್ತದೆ ಎನ್ನುವ ನಂಬಿಕೆ. ತೀರ್ಥ ಯಾತ್ರೆ ಮಾಡುವುದೆ ಜೀವನದ ಪರಮೋಚ್ಚ ಗುರಿ ಎಂದು ನಂಬಿ ಇಂಥಹ ಆಚರಣೆಗಳನ್ನು ಮಾಡುತ್ತೇವೆ.
ಅದಕ್ಕೆ ಅಲ್ಲಮಪ್ರಭುಗಳು ಇಂತಹ ಆಚರಣೆಗಳು ಅವಶ್ಯಕತೆ ಇಲ್ಲ ಎಂದಿದ್ದಾರೆ.
ಲಕ್ಷಗಂಗೆ ಮಿಂದಡಿಲ್ಲ
ಪಾಪವನ್ನು ಪರಿಹಾರ ಮಾಡಲಿಕ್ಕೊಸಗೊ. ಅಥವಾ ಜನ್ಮವನ್ನ ಪಾವನ ಮಾಡಿಕೊಳ್ಳಲು ಗಂಗೆಯಲ್ಲಿ ಸ್ನಾನ ಮಾಡುವುದು ಒಂದು ಆಚರಣೆ. ಏಳು ಜನ್ಮಗಳಲ್ಲಿಮಾಡಿದ ಪಾಪ ಕರ್ಮಗಳೆಲ್ಲ ಗಂಗೆಯಲ್ಲಿ ಸ್ನಾನ ಮಾಡುವುದರಿಂದ, ತೊಳೆದು ಹೋಗುತ್ತವೆ.ಜನ್ಮ ಪವಿತ್ರ ವಾಗುತ್ತದೆ. ಎನ್ನುವ ನಂಬಿಕೆ ಜನಮಾನಸದಲ್ಲಿ ಬಲವಾಗಿವೆ.ಲಕ್ಷ ಬಾರಿ ಗಂಗಾನದಿಯಲ್ಲಿ ಸ್ನಾನ ಮಾಡಿದರೆ,ಪಾಪ ಪರಿಹಾರವಾಗಲಾರವು. ಪುಣ್ಯ ಪ್ರಾಪ್ತಿಯಾಗಲಾರದು ಎನ್ನುವ ನಿಲುವನ್ನ ಈ ಸಾಲು ಸ್ಪಷ್ಟಪಡಿಸುತ್ತದೆ.
ಪುಟ್ಟ ತುದಿಯ ಮೇರು ಗಿರಿಯ ಮೆಟ್ಟಿ ಕೂಗಿದಡಿಲ್ಲ
ಮೇರು ಪರ್ವತವು (ಸುಮೇರು, ಮಹಾಮೇರು) ಹಿಂದೂ, ಜೈನ ಮತ್ತು ಬೌದ್ಧ ವಿಶ್ವವಿಜ್ಞಾನದ ಪವಿತ್ರ ಐದು ಶಿಖರಗಳ ಪರ್ವತ. ಇದನ್ನು ಎಲ್ಲ ಭೌತಿಕ, ತತ್ವ ಮೀಮಾಂಸೆ ಹಾಗೂ ಆಧ್ಯಾತ್ಮಿಕ ಬ್ರಹ್ಮಾಂಡಗಳ ಕೇಂದ್ರವೆಂದು ಪರಿಗಣಿಸಲಾಗುತ್ತದೆ.
ಭೌಗೋಳಿಕವಾಗಿ ಮೇರು ಪರ್ವತವು ಭೂಮಿಯ ಮಧ್ಯದಲ್ಲಿ ಜಂಬೂದ್ವೀಪದಲ್ಲಿ ಸ್ಥಿತವಾಗಿದೆ ಎಂದು ಸೂರ್ಯಸಿದ್ಧಾಂತವು ಹೇಳುತ್ತಿದೆ.
ಅಸ್ತಿತ್ವದಲ್ಲಿರುವ ಹಿಂದೂ ಪಠ್ಯಗಳಲ್ಲಿ ವಿಶ್ವವಿಜ್ಞಾನದ ಹಲವಾರು ನಿರೂಪಣೆಗಳು ಇವೆ. ಅವುಗಳಲ್ಲಿ ಒಂದರಲ್ಲಿ, ಬ್ರಹ್ಮಾಂಡೀಯವಾಗಿ, ಮೇರು ಪರ್ವತವು ಪೂರ್ವದಲ್ಲಿ ಮಂದರಾಚಲ ಪರ್ವತದಿಂದ, ಪಶ್ಚಿಮದಲ್ಲಿ ಸುಪಸರ್ವ ಪರ್ವತದಿಂದ, ಉತ್ತರದಲ್ಲಿ ಕುಮುದ ಪರ್ವತದಿಂದ ಮತ್ತು ದಕ್ಷಿಣದಲ್ಲಿ ಕೈಲಾಸಪರ್ವತದಿಂದ ಸುತ್ತುವರಿಯಲ್ಪಟ್ಟಿದೆ ಎಂದೂ ವರ್ಣಿಸಲಾಗಿದೆ. ಅಂಥಹ ಮೇರು ಪರ್ವತದ ತುಟ್ಟ ತುದಿಗೆ ಹೋಗಿ ಕೂಗ ಹಾಕುವುದರಿಂದ ಜನ್ಮ ಸಾರ್ಥಕವಾಗುವುದುದಿಲ್ಲ. ಅದು ಜ್ಞಾನದ ಸಂಪಾದನೆಯ ಮಾರ್ಗವು ಅಲ್ಲ.
ನಿತ್ಯ ನಿಯಮದಿಂದ ತನುವ ಮುಟ್ಟಿಕೊಂಡಡಿಲ್ಲ
ಪ್ರತಿ ದಿನವೂ ನಿಯಮದಂತೆ ದೇಹವನ್ನು ದಂಡಿಸುವುದಾಗಲಿ.ಕಷ್ಟಕರವಾದ ರೂಢಿ ಪದ್ಧತಿಗಳನ್ನು ಅಥವಾ ದೇಹಕ್ಕೆ ಶಿಸ್ತಿನ ನಿಯಮಗಳನ್ನ ರೂಢಿಸುವುದರಿಂದಾಗಲಿ, ಸಾಧನೆಯನ್ನು ಮಾಡಲು ಸಾಧ್ಯವಿಲ್ಲ. ದೇಹವು ಸದೃಢವಾಗಿರಬೇಕು.
ನಿಚ್ಚಕ್ಕೆ ನಿಚ್ಚನೆನೆವ ಮನವ ಅಂದಂದಿಗೆ ಹರಿವ ಮನವ ಚಿತ್ತದಲ್ಲಿ ನಿಲ್ಲಿಸಬಲ್ಲಡೆ ಬಚ್ಚವರಿಯ ಬೆಳಗುಹೇಶ್ವರ ಲಿಂಗವು
ಗುಹೇಶ್ವರ ಲಿಂಗ ಎನ್ನುವಂತಹ ಜ್ಞಾನದ ಬೆಳಕು ಅರಿವು ಪುಣ್ಯಪ್ರಾಪ್ತಿ ಯಾಗಬೇಕಾದರೆ ನಿತ್ಯವು ಮನಸ್ಸನ್ನ ಅತ್ತಲಿತ್ತ ಹರಿಯದಂತೆ ಅಂದರೆ ಪ್ರಾಪಂಚಿಕ ವಿಷಯಗಳಾದ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಮುಂತಾದವುಗಳಿಗೆ ಹರಿಯದಂತೆ ನಿತ್ಯವೂ ಮನವನ್ನ ಹಿಡಿತದಲ್ಲಿಟ್ಟುಕೊಳ್ಳುವುದೇ ಮಹತ್ ಸಾಧನೆಯಾಗಿದೆ.
ಮನಸ್ಸಿನ ಸ್ಥಿರತೆಯನ್ನು ಕಾಪಾಡುವುದೇ ಸಾಧನೆ ಯಾಗಿದೆ ಎಂದು ಅಲ್ಲಮಪ್ರಭುಗಳು ಈ ವಚನದಲ್ಲಿ ತಿಳಿಸಿದ್ದಾರೆ.
ವತನಕಾರರು ಆದರ್ಶವಾದಕ್ಕಿಂತ ವಾಸ್ತವಿಕವಾದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿರುವುದನ್ನು ಗಮನಿಸಬಹುದು.
ಪುಣ್ಯ ಕ್ಷೇತ್ರಗಳಿಗೆ ದರ್ಶನ ನೀಡುವುದು, ಮೇರು ಪರ್ವತವನ್ನು ಏರುವುದು. ದೇಹವನ್ನು ದಂಡಿಸುವಂತಹ ಕಾರ್ಯಗಳಿಂದ ಆಧ್ಯಾತ್ಮಿಕ ಸಾಧನೆ ಮಾಡಲು ಎಲ್ಲರಿಂದಲೂ ಸಾಧ್ಯವಿಲ್ಲ . ಆದರೆ ನಿತ್ಯ ಜೀವನದಲ್ಲಿದ್ದುಕೊಂಡು ಕ್ಷಣ ಕ್ಷಣ ಪ್ರತಿ ದಿನ ಬದಲಾಗುವ ಮನಸನ್ನು ಹಿಡಿತದಲ್ಲಿಟ್ಟುಕೊಂಡರೆ ಅದೇ ದೊಡ್ಡ ಆಧ್ಯಾತ್ಮಿಕ ಸಾಧನೆ ಎಂದು ಹೇಳಿದ್ದಾರೆ.ಅದನ್ನು ಸಾಧಿಸಬೇಕು
ಜ್ಞಾನದ ಬೆಳಕನ್ನು ಕಾಣಬೇಕೆಂದು ಬಯಸುವ ಶರಣನು ನಿತ್ಯವೂ ತನ್ನ ಮನಸ್ಸನ್ನ ಒಳ್ಳೆಯ ವಿಷಯಗಳ ಕಡೆಗೆ ಕೇಂದ್ರೀಕರಿಸಿ ಬೇಕು ಕೆಟ್ಟ ವಿಷಯಾದಿಳಿಂದ ಅದನ್ನು ದೂರವಾಗಿಸಿ ಮನಸನ್ನು ಸದೃಢ ಗೊಳಿಸಬೇಕು ಅದೇ ಸಾಧನೆ. ಮನಸೆಂಬ ಮರ್ಕಟವನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವುದು. ಮನಸ್ಸಿನ ನಿಗ್ರಹ ಅಥವಾ ಮನಸನ್ನು ನಮಗೆ ಬೇಕಾದಂತೆ ನಮ್ಮ ಹತೋಟಿಯಲ್ಲಿಟ್ಟುಕೊಳ್ಳುವುದು ಎಲ್ಲ ಸಾಧನೆಗಳಿಗೂ ಮುಖ್ಯವಾಗಿದೆ
ಎನ್ನುವ ಮಹತ್ವದ ಸಂದೇಶವನ್ನು ಈ ವಚನ ಸಾರುತ್ತದೆ
-ಡಾ ನಿರ್ಮಲ ಬಟ್ಟಲ
ಬೆಳಗಾವಿ
ಅಲ್ಲಮರ ವಿಚಾರಗಳನ್ನು ತುಂಬಾ ಸರಳ ರೀತಿಯೆಲ್ಲಿ ತಿಳಿಸಿದ್ದೀರಾ ಮೇಡಮ್ 🙏🏻👌🏻☺️