ಕಂಸ ಮತ್ತೆ ಹುಟ್ಟಿ ಬಂದಿದ್ದಾನೆ…..

ಕಂಸ ಮತ್ತೆ ಹುಟ್ಟಿ ಬಂದಿದ್ದಾನೆ…..

ಕಂಸ ಮತ್ತೆ ಹುಟ್ಟಿ ಬಂದಿದ್ದಾನೆ
ಕೃಷ್ಣನನ್ನು ಕೊಲ್ಲಲು
ದೇವಕಿಯ ಗರ್ಭದ ಕುಡಿಗಳನು
ಗೋಡೆಗಪ್ಪಳಿಸಿ ಕೊಂದು
ಗಹಗಹಿಸಿ ನಕ್ಕ ಕಂಸ
ಮತ್ತೆ ಹುಟ್ಟಿ ಬಂದಿದ್ದಾನೆ
ಮುರಾರಿಯ ಮುಗಿಸಲು…

ಮಥುರೆ ಗೋಕುಲಗಳ ಬೀದಿಯಲಿ
ಯಮುನಾ ತೀರದಲಿ, ಗೋವುಗಳ ಹಿಂಡಿನಲಿ
ಗೋಪಿಕೆಯರ ಕಿಲಕಿಲ ನಗುವಿನಲಿ
ಗೋವಿಂದನನು ಹುಡುಕುತ ಕಂಸ
ಬಳಲಿ ಬಸವಳಿದು ಬೆಂಡಾದ…

ಎಲ್ಲಿ ಆ ಕೃಷ್ಣ..ಮಾಯಗಾರ ಗೊಲ್ಲ..
ಎಲ್ಲಿ..ಎಲ್ಲಿ..ಎಲ್ಲಿ….?

ರಾಜ್ಯ ಗದ್ದುಗೆಗಳ ನೋಡಿದ ಕಂಸ
ಅಲ್ಲೊಬ್ಬ ಪ್ರತಿ ಕಂಸ..
ಹೊಲ ಗೋದಾಮುಗಳಲಿ
ಇನ್ನೊಬ್ಬ ಪ್ರತಿಕಂಸ..
ಕೆರೆ ಬಾವಿ ನದಿಗಳಲಿ ಇಣುಕಿದ
ಮತ್ತೊಬ್ಬ ಪ್ರತಿಕಂಸ…
ಮಣ್ಣ ಬಗೆದು ಗಣಿ ತೋಡಿದಲ್ಲಿ
ಮಗದೊಬ್ಬ ಪ್ರತಿಕಂಸ…

ಬಸ್ಸು, ರಸ್ತೆ, ಆಫೀಸು, ಆಸ್ಪತ್ರೆಯಲಿ
ನ್ಯಾಯಾಲಯ, ದೇವರ ಗುಡಿಯಲಿ
ಸ್ನೇಹ ಪ್ರೀತಿ ವಿಶ್ವಾಸಗಳಲಿ..
ಎಲ್ಲೆಲ್ಲೂ, ಎತ್ತ ನೋಡಿದತ್ತ
ಕಂಸ ಕಂಡ..ಲಕ್ಷ ಲಕ್ಷ ಪ್ರತಿ ಕಂಸರು…!

ಭಯದಿಂದ ಬೆವೆತು
ಗಂಟಲೊಣಗಿ ಬಿಕ್ಕಳಿಸಿ,
ಕುಸಿದು ಕೆಳಗೆ ಬಿದ್ದ ಕಂಸ
ನೋಡಿದ ಆಕಾಶದತ್ತ…
ಅಲ್ಲಿ…ನಿರುಮ್ಮಳಾಗಿ
ಸತ್ಯರೂಪದಿ ನೀತಿಯ
ಕೊಳಲು ಕೈಯಲಿ ಹಿಡಿದು
ಬೈ..ಬೈ.. ಎಂದು ಕೈ ಆಡಿಸಿ
ನಗುತ ನಿಂತಿದ್ದ ಕೃಷ್ಣ…!

ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ 

Don`t copy text!