ಸುಜ್ಞಾನವಂಕುರಿಸದನ್ನಕ್ಕರ ಭಕ್ತಿ ಎಲ್ಲಿಯದೋ
ಪ್ರಣತೆಯು ಇದೆ ಬತ್ತಿಯು ಇದೆ
ಜ್ಯೋತಿಯು ಬೆಳಗುವಡೆ ತೈಲವಿಲ್ಲದೆ
ಪ್ರಭೆ ತಾನೆಲ್ಲಿಯದೋ?
ಗುರುವಿದೆ,ಲಿಂಗವಿದೆ ಶಿಷ್ಯನ
ಸುಜ್ಞಾನವಂಕುರಿಸದನ್ನಕ್ಕರ
ಭಕ್ತಿ ಎಲ್ಲಿಯದೋ?
ಸೋಹಂ ಎಂಬುದು ಕೇಳಿ, ದಾಸೋಹವ ಮಾಡದಿದ್ದರೆ
ಅತಿಗಳೆವನು ಗುಹೇಶ್ವರ.
-ಅಲ್ಲಮಫ್ರಭು*
ಮಾನವನಲ್ಲಿ ಅರಿವು ಎನ್ನುವ ತೈಲವು ಪ್ರಣತೆಯಲ್ಲಿ ತುಂಬದೆ ಹೋದರೆ ಜ್ಞಾನ ದೀವಿಗೆ
ಪ್ರಕಾಶಿಸ ಲಾರದು.
ಅರಿವು, ಜ್ಞಾನ ಪ್ರಕಾಶವಾಗದೆ. ಆತ್ಮ ಸಾಕ್ಷಾತ್ಕಾರವಾಗಲಾರದು. ಮಾನವನ ಜನ್ಮ ಸಾರ್ಥಕವಾಗದು.
ಪ್ರಣತೆಯು ಇದೆ ಬತ್ತಿಯು ಇದೆ. ಜ್ಯೋತಿಯ ಬೆಳಗುವಡೆ ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ?
ಒಂದು ಜ್ಯೋತಿಯನ್ನು ಬೆಳಗಿಸಲು ಭೌತಿಕ ವಸ್ತುಗಳಾದ ಕುಂಬಾರನ ಕೈಯಲ್ಲಿ ಸಂಸ್ಕಾರಗೊಂಡ ಮಣ್ಣಿನ ಹಣತೆ ಬೇಕು. ರೈತ ಬೆಳೆದ ಹತ್ತಿಯನ್ನು ಶೃದ್ಧೆಯಿಂದ ಹೊಸೆದು ಮಾಡಿದ ಬುತ್ತಿ ಬೇಕು. ಇದಿಷ್ಟೇ ಇದ್ದರೆ ಜ್ಯೋತಿಯನ್ನು ಬೆಳಗಿಸಲು ಸಾಧ್ಯವಿಲ್ಲ.ಎಣ್ಣೆಕಾಳುಗಳನ್ನು ಗಾಣದಲ್ಲಿ ಸಂಸ್ಕರಿಸಿ ತಯಾರಿಸಿದ ಎಣ್ಣೆ ಬಹು ಮುಖ್ಯವಾಗಿ ಬೇಕು.
ಈ ಎಲ್ಲವುಗಳ ಸಹಯೋಗದಲ್ಲಿ ದೀಪ ಬೆಳಗುತ್ತದೆ. ಸುತ್ತಲಿನ ತಿಮಿರವನ್ನ ಓಡಿಸುತ್ತದೆ.
ಹಾಗೆಯೆ ತಂದೆ ತಾಯಿಗಳ ಕೊಡುಗೆಯಾಗಿ ಬಂದ ಭೌತಿಕ ಶರೀರವಿದೆ.ಮಾನವನು ಆತ್ಮ ಸಾಕ್ಷಾತ್ಕಾರದ ಬೆಳಕನ್ನು ಪಡೆಯಬೇಕಾದರೆ ಜ್ಞಾನ ಎನ್ನುವ ಬುತ್ತಿಯನ್ನು ಆಧ್ಯಾತ್ಮಿಕ ಸಾಧನೆ ಎನ್ನುವ ಶೃದ್ಧೆಯಿಂದ ಹೊಸೆಯಬೇಕು, ತನ್ನ ಸುತ್ತಲಿನ ಪರಿಸರದಿಂದ ಗಳಿಸಿದ ಅನುಭವ ಅಂತಃಶಕ್ತಿಯನ್ನು ಜಾಗೃತಗೊಳಿಸಿದ ಅರಿವು ಎನ್ನುವ ತೈಲವು ಬೇಕು. ಆವಾಗ ಜ್ಞಾನದ ಬೆಳಕನ್ನು ಕಾಣಲು ಸಾಧ್ಯ.
ಗುರುವಿದೆ ಲಿಂಗವಿದೆ ಶಿಶ್ಯನ ಸುಜ್ಞಾನವಂಕುರಿಸದನ್ನಕ್ಕರ
ಭಕ್ತಿ ಎಲ್ಲಿಯದೋ?
ಸನ್ಮಾರ್ಗನನ್ನು ತೋರಿಸುವ ಗುರು,
ಮನಸ್ಸಿನ ಏಕಾಗ್ರತೆಯನ್ನು ಸಾಧಿಸಲು ಲಿಂಗವಿದ್ದರೂ ಶಿಷ್ಯನಾದವನಿಗೆ
ಸುಜ್ಞಾನ ಜಾಗೃತವಾಗದೆ ಹೋದರೆ
ಅರಿವು ಆಚಾರಗಳ ಮಹತ್ವವನ್ನು ಅರಿಯಲಾರ. ಅರಿವು ಆಚಾರಗಳ ಮಹತ್ವವನ್ನು ಅರಿಯಲಾರದವನಲ್ಲಿಯ ಭಕ್ತಿಯು ಭಗವಂತನನ್ನು ಕಾಣುವುದಾಗಿರುವುದಿಲ್ಲ,
ಗುರು ಅಂದರೆ ಅರಿವು ಮತ್ತು ಲಿಂಗ ಎಂದರೆ ಆಚಾರ ಇವುಗಳನ್ನು ತನ್ನಲ್ಲಿ ಜಾಗೃತಗೊಳಿಸಿಕೊಂಡವನು, ಜಿಜ್ಞಾಸು ಭಕ್ತನಾಗಿ ಭಗವಂತನನ್ನು ಅರಸುವುದೆ ಜೀವನದ ಪರಮೋಚ್ಚ ಗುರಿ ಎಂದುಕೊಳ್ಳುವವನಾಗಿರುತ್ತನೆ. ಸುಜ್ಞಾನ ಅವನಲ್ಲಿ ಅಂಕುರಿಸಬೇಕು. ಅಂಕುರಿಸದೆ ಹೋದರೆ ಭಕ್ತನಾಗಲಾರ.ಅಂಥವನಲ್ಲಿ ಭಕ್ತಿಯನ್ನು ಕಾಣಲಾಗದು.
ಸೋಂಹ ಎಂದು ಹೇಳಿ
ದಾಸೋಹವ ಮಾಡದಿದ್ದರೆ ಅತಿಗಳೆವನು ಗುಹೇಶ್ವರ
ಸೋಹಂ ಎಂದರೆ ನಾನೇ ಅದು ಎಂದು ಅರ್ಥ
ಅಂದರೆ ಭಗವಂತ ಬೇರೆ ಅಲ್ಲ ನಾನು ಬೇರೆಯಲ್ಲ. ಮನುಷ್ಯ ಸಾಮಾನ್ಯತ್ವದಿಂದ ದೈವತ್ವಕ್ಕೆ ಬದಲಾದವನು. ಜೀವನದ ಅಂತಿಮ ಸುತ್ಯವನ್ನು ಅರಿತವನು. ದೇವನನ್ನು ತನ್ನಲ್ಲಿಗೆ ಕಂಡುಕೊಳ್ಳುವವನು. ರಾಗದ್ವೇಶಗಳಿಲ್ಲದ ಸ್ಥಿತಿಪ್ರಜ್ಞ.
ಅಂಥವನು ದಾಸೋಹವನ್ನು ಮಾಡದೆ ಹೋದರೆ, ಅಂದರೆ ಸಮಾಜದ ಹಿತಕ್ಕಾಗಿ ತನು ,ಮನ, ಧನವನ್ನು ನೀಡಿದೆ ಹೋದಲ್ಲಿ, ತತ್ವವನ್ನು ಕೇವಲ ಮಾತಿನಲ್ಲಿ ಹೇಳಿ ಕೃತಿಯಲ್ಲಿ ತರದಿದ್ದರೆ,
ಗುಹೇಶ್ವರ ಅಂಥವರನ್ನು ಮೆಚ್ಚನು ಎಂದು ಅಲ್ಲಮ ಪ್ರಭುಗಳು ಈ ವಚನದಲ್ಲಿ ಹೇಳಿದ್ದಾರೆ.
–ಡಾ. ನಿರ್ಮಲ ಬಟ್ಟಲ