ಶರಣ ಕೊಂಡೆಯ ಮಂಚಣ್ಣನ ಸತಿ
ಲಕ್ಷ್ಮಮ್ಮನ ವೈಚಾರಿಕತೆ….
12ನೇ ಶತಮಾನದಲ್ಲಿ ಶರಣರು ತಮ್ಮ ಅನುಭವದ ಮೂಲಕ ರಚಿಸಿದ ವಚನಗಳು 21ನೇ ಶತಮಾನದಲ್ಲಿಯೂ ಸಹ ಇಡೀ ವಿಶ್ವಕ್ಕೆ ಮಾರ್ಗದರ್ಶನ ಮಾಡುವ ಶಕ್ತಿ ಹೊಂದಿವೆ. ಸಮ ಸಮಾಜದ ನಿರ್ಮಾಣದ ಕನಸು ಹೊತ್ತಿದ್ದ ಬಸವಾದಿ ಶರಣರು ವೈಚಾರಿಕ ಕ್ರಾಂತಿ ನಡೆಸುತ್ತಲೇ ಪರೋಕ್ಷವಾಗಿ ವೈಚಾರಿಕ ಕ್ರಾಂತಿಗೆ ಕಾರಣರಾದರು.
ಭಕ್ತರು ಉಳಿಯಬೇಕು. ಕಪಟ, ವಂಚನೆ, ಮೋಸಗಳಿಂದ ಮುಕ್ತರಾಗಿರಬೇಕೆಂಬ ಕಳಕಳಿಯನ್ನು ತೋರಿ, ಮತೀಯ ಆದರ್ಶಗಳ ಪ್ರದರ್ಶನಕ್ಕಿಂತಲೂ, ಸಾಮಾಜಿಕ ಆದರ್ಶಗಳ, ನೀತಿ ನೆಲೆಗಟ್ಟಿನ ಅಂಶಗಳ ಕಡೆ ಗಮನ ಸೆಳೆದ ಶರಣೆ ಲಕ್ಷ್ಮಮ್ಮ.
ಸರ್ವ ಕ್ಷೇತ್ರಗಳಲ್ಲೂ ವೈಚಾರಿಕ ಕ್ರಾಂತಿಯ, ಸ್ವತಂತ್ರ ವಿಚಾರಶೀಲತೆಯ ಬೀಜವನ್ನು ಬಿತ್ತಿ ಸಮಗ್ರ ಸುಧಾರಣೆಯ ಫಲವನ್ನು ಪಡೆದು, ಸ್ವಯಂ ಸಂಪೂರ್ಣ ಸಮಾಜವನ್ನು ಕಟ್ಟಿದವರು ಶರಣರು, ಇಂಥ ಶರಣ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದ ಶರಣೆಯೇ ಲಕ್ಷ್ಮಮ್ಮ. ತಾನು ಹುಟ್ಟಿದ ಧರ್ಮದಲ್ಲಿ ಈಡೇರಿಸಿಕೊಳ್ಳಲು ಇಲ್ಲದ ಎಲ್ಲ ಬಯಕೆಗಳನ್ನು ಶರಣರ ಸಂಸ್ಕಾರ ವಿಶೇಷದಿಂದ ಗುಪ್ತವಾಗೇ ಸಂಪಾದಿಸಿಕೊಂಡವಳು.
ಬಸವಣ್ಣನವರ ಬಗೆಗೆ ಬಿಜ್ಜಳ ದೊರೆಯಲ್ಲಿ ಚಾಡಿ ಹೇಳಿ, ಕಲ್ಯಾಣ ಕ್ರಾಂತಿಗೆ ಕಾರಣಿಕರ್ತನಾದವ ಕೊಂಡೆಯ ಮಂಚಣ್ಣ ಎಂದು ಪ್ರಾಚೀನ ಚರಿತ್ರೆಯಿಂದ ತಿಳಿದು ಬರುವುದು.ಅಂತಹ ಪಿಸುಣಿಗ ಮಂಚಣ್ಣನ ಸತಿ ಲಕ್ಷ್ಮಮ್ಮ ಶರಣೆ, ವಚನಗಾರ್ತಿ. ಲಕ್ಷ್ಮಮ್ಮನ ಜೀವನ ಚರಿತ್ರೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
ಲಕ್ಷ್ಮಮ್ಮನೂ ಅವಳ ಗಂಡನಾದ ಕೊಂಡೇ ಮಂಚಣ್ಣನೂ ಬಸವ, ಚನ್ನಬಸವಣ್ಣನ ವಿರೋಧಿಗಳೆಂದು ಶರಣರ ಚರಿತ್ರೆಯಲ್ಲಿ ಕಂಡು ಬರುತ್ತದೆ. ನಿಜವಾಗಿ ಅವರು ಶರಣರಿಗೆ ವಿರೋಧಿಗಳಾಗಿರದೆ, ಅವರಿಗೆ ಗುಪ್ತವಾಗಿ ಸಹಾಯ ಮಾಡುತ್ತಿದ್ದರೆಂದು ಕಂಡು ಬರುತ್ತದೆ ಎಂದು ಡಾ.ಫ.ಗು.ಹಳಕಟ್ಟಿಯವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅವರು ಶರಣರಿಗೆ ಸಹಾಯ ಮಾಡಿದ ಬಗೆಗೆ ವಿವರಗಳೇನೂ ದೊರೆಕಿರುವುದಿಲ್ಲ.
ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರದಲ್ಲಿ ಉಲ್ಲೇಖ ಸಿಗುತ್ತದೆ. ಆ ಪ್ರಕಾರ ಬಿಜ್ಜಳನ ಆಸ್ಥಾನದಲ್ಲಿ ಚಾಡಿ ಹೇಳುವ ಕಾಯವನ್ನು ಕೈಗೊಂಡು ಮಂಚಣ್ಣ ಬಸವವಿರೋಧಿ ಆಗಿರಲಿಲ್ಲವೆಂದು ತಿಳಿದುಬರುತ್ತದೆ. ಬದಲಾಗಿ ಇವನು ಗುಪ್ತ ಶಿವಭಕ್ತನಾಗಿದ್ದು, ಬಹಿರಂಗದಲ್ಲಿ ವೈಷ್ಣವ ಭಕ್ತನಂತೆ ನಟಿಸುತ್ತ ಬಸವ ಮೆರೆಯಲು ಪರೋಕ್ಷವಾಗಿ ಸಹಾಯ ಮಾಡುತ್ತಿದ್ದ, ಗುಪ್ತ ಭಕ್ತನಾದುದರಿಂದ ಈತನಿಗೆ ಗುಪ್ತ ಮಂಚಣ್ಣ ಎಂದೂ, ಧೂಪದಿಂದ ಶಿವನನ್ನು ಅರ್ಚಿಸುತ್ತಿದ್ದುದರಿಂದ ಧೂಪದ ಮಂಚಣ್ಣನೆಂದೂ, ಬಹಿರಂಗದಲ್ಲಿ ಚಾಡಿ ಹೇಳುತ್ತಿದ್ದುದರಿಂದ ಕೊಂಡೆಯ ಮಂಚಣ್ಣನೆಂದೂ ಕರೆಯಿಸಿಕೊಳ್ಳುತ್ತಿದ್ದ. ಹೀಗಾಗಿ ಕೊಂಡೆ ಮಂಚಣ್ಣ, ಗುಪ್ತ ಮಂಚಣ್ಣ, ಧೂಪದ ಮಂಚಣ್ಣ ಈ ಮೂವರೂ ಬೇರೆ ಬೇರೆ ವ್ಯಕ್ತಿಗಳಲ್ಲ ಒಬ್ಬನೇ ವ್ಯಕ್ತಿಯ ನಾಮಾಂತರಗಳು. ಈತನು ಸಹ ಒಬ್ಬ ವಚನಕಾರನಾಗಿ ನಾರಾಯಣಪ್ರಿಯ ರಾಮನಾಥ ಅಂಕಿತದಲ್ಲಿ ವಚನ ಬರೆದಿದ್ದಾನೆ. ಇವನ ಪುಣ್ಯ ಸತಿಯೇ ಲಕ್ಷ್ಮಮ್ಮ.
ಕಾಲ ಕ್ರಿ.ಶ ಸುಮಾರು 1160 ಎಂದು ಗುರುತಿಸಿದ್ದು ಈಕೆಯ ಒಂದು ವಚನ ಮಾತ್ರ ದೊರೆತಿದ್ದು, ಅಂಕಿತ ಅಗಜೇಶ್ವರಲಿಂಗ ಎಂದಿದೆ.
ಆಯುಷ್ಯ ತೀರಲು ಮರಣ
ವ್ರತ ತಪ್ಪಲು ಶರೀರ ಕಡೆ
ಮೇಲು ವ್ರತವೆಂಬ ತೂತರ ಮೆಚ್ಚ
ನಮ್ಮ ಅಗಜೇಶ್ವರಲಿಂಗವು.
ಈ ವಚನದಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಸಾಯಲೇಬೇಕು. ವ್ರತದಲ್ಲಿ ಪ್ರಾಣದಷ್ಟೇ ಪ್ರೀತಿಯನ್ನು ಹೊಂದಿದವರಾಗಿರಬೇಕು. ಆ ನೇಮದಲ್ಲಿ ತಪ್ಪಿದಾಗ ಪ್ರಾಣವನ್ನೇ ಕಳಿದುಕೊಂಡಂತೆ ಹಾಗೇ ಮಾಡದೇ ಭಂಡ ಬದುಕನ್ನು ಬದುಕುವವರೇ ಹೆಚ್ಚು ಅಂಥವರನ್ನು (ವೇಷಗಾರರು) ಎಂದು ವಿಡಂಬಿಸಿದ್ದಾಳೆ. ಸಾವಿನ ಬಗೆಗೆ ಚಿಂತೆ ಬೇಡ, ಭಯಬೇಡ, ಆಯುಷ್ಯ ತೀರುವವರೆಗೆ ಮರಣವಿಲ್ಲ ಎಂದು ಜನ ಸಾಮಾನ್ಯರಿಗೆ ಧೈರ್ಯ ತುಂಬುವ ಸಂದೇಶವನ್ನು ನೀಡಿದ್ದಾಳೆ. ಆಯುಷ್ಯ ತೀರುವವರೆಗೆ ನಿಶ್ಚಿಂತೆಯಿಂದ ಬದುಕಿ ಬಾಳಬೇಕು. ವ್ರತ ಪ್ರಾಣಕ್ಕೆ ಸಮಾನ ಅದು ತಪ್ಪಿದರೆ ಯಾವ ಪ್ರಾಯಶ್ಚಿತವೂ ಇಲ್ಲ. ಶರೀರವೆ ಕಡೆ. ಭಕ್ತನಿಗೆ ನಿಷ್ಠೆ ಮುಖ್ಯ. ಅದು ತಪ್ಪಿದರೆ ಪ್ರಾಣ ಇದ್ದೂ ಇಲ್ಲದಂತೆ ಎಂದು ಭಕ್ತನಾದವನ ಬಗೆಗೆ ಸೂಕ್ಷ್ಮ ಸಂವೇದನಾಶೀಲ ಮನೋಭಾವವನ್ನು ವಚನದಲ್ಲಿ ವ್ಯಕ್ತಪಡಿಸಿದ್ದಾಳೆ.
ಮಂಚಣ್ಣ ಒಂದು ದಿನ ಗುಪ್ತಲಿಂಗದ ಭಕ್ತಿಯಲ್ಲಿ ತೊಡಗಿಕೊಂಡಿದ್ದ, ಲಿಂಗಪೂಜೆಗೆ ಬಳಸಿದ ಧೂಪದ ಹೊಗೆ ಬೆಳಕಿಂಡಿಯಿಂದ ಬರುವುದನ್ನು ಕಂಡ ಒಬ್ಬ ಧೂರ್ತ ವೈಷ್ಣವ ಸಂಶಯದಿಂದ ಅವನ ಮನೆಯ ಬೆಳಕಿಂಡಿಯಿಂದ ನೋಡಲು ಅದು ನಿಜವಾಯಿತು. ಮಂಚಣ್ಣ ದಂಪತಿಗಳ ಗುಪ್ತ ಭಕ್ತಿ ಬಯಲಾಯಿತು. ಈ ಭಕ್ತಿಯೆಂಬ ವ್ರತದಲ್ಲಿ ನಿರತರಾದ ತಮ್ಮ ಗುಟ್ಟು ರಟ್ಟಾಯಿತಲ್ಲ ಎಂದು ಆ ಲಿಂಗದಲ್ಲೇ ತಮ್ಮ ಪ್ರಾಣದ ಕಳೆಯನ್ನು ಒಂದಾಗಿಸಿದರು ಎಂದು ತಿಳಿದು ಬರುತ್ತದೆ.
-ಡಾ ವಿಜಯಲಕ್ಷ್ಮಿ ಪುಟ್ಟಿ
ಕುಲಸಚಿವರು ಮೌಲ್ಯಮಾಪನ
ಹಾವೇರಿ ವಿಶ್ವವಿದ್ಯಾಲಯ
ಹಾವೇರಿ