ತ್ರಿಪದಿಗಳು

ತ್ರಿಪದಿಗಳು

1….

ಮಂದಿ ಮಕ್ಕಳದಾಗ ಚಂದಾಗಿ ಇರಬೇಕ/
ಮಾತೊಂದ ಬರದ್ಹಾಂಗ ನಡೀಬೇಕ / ನನ ಮಗಳ/
ಮುತ್ತಿನ ಸರದ್ಹಾಂಗ ಇರಬೇಕ //

2….

ಎದ್ದಾಗ ಬಿದ್ದಾಗ ಗುರುವನ್ನ ನೆನೀಬೇಕ/
ಸದ್ದು ಮಾಡದಲೆ ಮನದಾಗ/ ನನ ಮಗಳ/
ಕರಗಿ ಹೋಗ್ಯಾವ ಬಲು ಕಷ್ಟ//

3….

ಹಸಿರು ಗಿಡದ ಮ್ಯಾಲ ಇಬ್ಬನಿ ಸುರಿದಾವ/
ಮುತ್ತಿನ ಮಣಿ ಹಂಗ ಹೊಳದಾವ/ ಗೆಳತೆವ್ವ/
ಎಳಿಬಿಸಿಲ ನೋಡಿ ನಕ್ಕಾವ //

4….

ಗಿಣಿಯ ಹಸಿರು ಚಂದ ನವಿಲ ಗರಿಯು ಚಂದ/
ಗುಬ್ಬೀಯ ಕಾಡಿಗಿ ಕಣ್ಣು ಚಂದ/ನನ ಮಗಳ/
ಗುಳಿ ಬಿದ್ದ ಗಲ್ಲದ ನಗೆ ಚಂದ//

5….

ಕಲ್ಲಾಗ ಹುಲ್ಲಾಗ ನೀರಾಗ ನೆಲೆಸ್ಯಾನ/
ಬಯಲ ಮರಡ್ಯಾಗ ಮಲಗ್ಯಾನ/ ಮಲ್ಲಯ್ಯ/
ನೆನೆದರ ಮನದಾಗ ಇರುತಾನ//

6….

ಕಾಲಾಗ ಕಾಲ್ಗಡಗ ಮುಂಗೈಯ ಮಣಿಗುಂಡ/
ಸೊಂಟದ ಬೆಳ್ಳಿಯ ಉಡದಾರ/ ಕಂದನ/
ಕುಂಚಿಗಿ ಗೊಂಡೆ ಹೊಳದಾವ//

🌿 ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ. 🙏

Don`t copy text!