ಅಕ್ಕನೆಡಗೆ- ವಚನ 27 (ವಾರದ ವಿಶೇಷ ವಚನ ವಿಶ್ಲೇಷಣೆ)
ಗುರು ಕೃಪೆಯ ಮಾರ್ಗದಲ್ಲಿ ಅರಿವು
ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ
ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ
ಭವಿಯೆಂಬುದು ತೊಡೆದು ಭಕ್ತೆ ಎಂದೆನಿಸಿದ ಗುರುವೆ ನಮೋ
ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೆ ನಮೋ ನಮೋ.
ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಆಧುನಿಕ ಸಮಾಜ ಕಟ್ಟಿದರು. ಅಂದು ಅವರು ನೆಲೆಸಿದ ಕಲ್ಯಾಣ, ಶರಣ ಸಂಸ್ಕೃತಿಯಿಂದ ಕಂಗೊಳಿಸಿತು. ಪ್ರತಿಯೊಬ್ಬರ ಜೀವನ ಶೈಲಿ ಬದಲಾಗಲಿ ಎನ್ನುವ ಉದ್ದೇಶದಿಂದ ರಾಜಕೀಯ, ಆರ್ಥಿಕ, ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ತಂದರು. ಸಾಹಿತ್ಯಿಕವಾಗಿ ಅಭಿವ್ಯಕ್ತಿ ಸ್ವಾತಂತ್ಯ ನೀಡಿ ಅರಿವಿನ ಹಾದಿ ತೆರೆದರು. ಬಸವಣ್ಣ ಜಂಗಮರನ್ನು ದೂರದೂರುಗಳಿಗೆ ಕಳಿಸಿ ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿ ಪಸರಿಸಿದರು.
ಲಿಂಗವಂತ ಮನೆಯಲ್ಲಿ ಜನಿಸಿದ್ದ ಅಕ್ಕಮಹಾದೇವಿ ಗುರು, ಲಿಂಗ, ಜಂಗಮ, ಕಾಯಕ, ದಾಸೋಹ ರೂಢಿಸಿಕೊಂಡು, ವೈಯಕ್ತಿಕ ಬದುಕಿನ ಸವಾಲುಗಳಿಗೆ ಮುಖಾಮುಖಿಯಾಗಿ ಸಂಘರ್ಷ ಎದುರಿಸುತ್ತಾಳೆ. ಅವುಗಳೆಲ್ಲ ಅವಳನ್ನು ಗಟ್ಟಿಗೊಳಿಸಿ, ಕಲ್ಯಾಣದತ್ತ ಪಯಣಸುವಂತೆ ಮಾಡುತ್ತವೆ.
ಅಕ್ಕಮಹಾದೇವಿಯ ಬಾಲ್ಯದಲ್ಲಿ ಗುರು ಲಿಂಗದೇವರು ಲಿಂಗದೀಕ್ಷೆ ನೀಡಿದರೆಂದು ತಿಳಿದು ಬರುತ್ತದೆ. ಆದರೆ ಈ ವಚನದಲ್ಲಿ ‘ಗುರು‘ ಎಂದರೆ ಬಸವಣ್ಣ. ಇಲ್ಲಿ ‘ನರಜನ್ಮ‘ ಮತ್ತು ‘ಹರಜನ್ಮ‘ ಎರಡು ಮಹತ್ವದ ಶಬ್ದಗಳು. ನರಜನ್ಮ ಎಂದರೆ ಮನುಷ್ಯನಾಗಿ ಹುಟ್ಟುವುದು. ಹರ ಎಂದರೆ ಶಿವ, ಮಹಾದೇವ, ಈಶ್ವರ, ಅಭ್ಯುದಯ, ಏಳಿಗೆ, ಸಂತೋಷ, ಆನಂದ ಎನ್ನುವ ನಾನಾ ಅರ್ಥ ಕೊಡುತ್ತದೆ. ಪೌರಾಣಿಕ ಹಿನ್ನೆಲೆಯಲ್ಲಿ ಗಮನಿಸಿದಾಗ, ಮನುಷ್ಯನಿಗೆ ಮೀರಿದ ಶಕ್ತಿಯ ಸ್ವರೂಪಿಯೇ ಶಿವ. ಲಿಂಗ ಪೂಜೆಯಲ್ಲಿ ನಿರತಳಾಗಿ ಅದರ ಆನಂದವನ್ನು ಅನುಭವಿಸಿ, ಆ ಸಂತೋಷ ಅನುಗ್ರಹಿಸಿದ ಗುರು ಬಸವಣ್ಣನಿಗೆ ಅಕ್ಕ ರುಣಿಯಾಗುತ್ತಾಳೆ.
ಆರಂಭದಲ್ಲಿ ಅಕ್ಕಮಹಾದೇವಿಗೆ ಈ ಪ್ರಪಂಚದ ನಂಟು ಸಹಜ ಮಾಯೆಯಾಗಿ ಕಾಡುತ್ತದೆ. ಅವಳು ಅದನ್ನು ನಿರಾಕರಿಸಿ ಮುಂದೆ ಸಾಗುವ ಮಾರ್ಗ ಕಂಡುಕೊಳ್ಳಲು ಕಾರಣ ಅವಳೊಳಗಿನ ಆಂತರಿಕ ಶಕ್ತಿ ಮತ್ತು ವಿಸ್ತಾರವಾದ
ಅನುಭಾವ. ಅವಳು ಭವದ ಬಂಧನಕ್ಕೆ ಒಳಗಾಗಲಿಲ್ಲ ಎನ್ನುವುದನ್ನು ಎರಡನೇ ಸಾಲು ಧ್ವನಿಸುತ್ತದೆ. ಲೌಕಿಕದ ಯಾವುದೇ ಆಸೆ, ಆಮಿಷಗಳು ಸೆಳೆಯುವುದಿಲ್ಲ. ಎಲ್ಲಕ್ಕಿಂತ ಭಿನ್ನವಾದ ಲೋಕ ಒಂದಿದೆ, ಅದು ಪಾರಾಮಾರ್ಥಿಕ ಪ್ರಪಂಚ. ಅಲ್ಲಿ ಚೆನ್ನಮಲ್ಲಿಕಾರ್ಜುನನಿದ್ದಾನೆ ಎನ್ನುವ ನಂಬಿಕೆ ಅವಳನ್ನು ಕೈ ಹಿಡಿದು ಮುನ್ನಡೆಸುತ್ತದೆ. ಶಿವಯೋಗದಲ್ಲಿ ನಿರತಳಾಗಿ ಲಿಂಗ ಪೂಜೆಯ ಧ್ಯಾನದಲ್ಲಿ ಪರಮ ಸುಖ ಅನುಭವಿಸಿ, ಆ ಮಾರ್ಗ ತೋರಿದ ಗುರು ಬಸವಣ್ಣನಿಗೆ ನಮೋ ನಮೋ ಎಂದು ಕೃತಜ್ಞತೆ ಸಲ್ಲಿಸುತ್ತಾಳೆ.
ಇಲ್ಲಿ ‘ಭವಿ‘ ಮತ್ತು ‘ಭಕ್ತೆ‘ ಎರಡು ಶಬ್ದಗಳು ಮಹತ್ವದ್ದು. ಭಕ್ತ ಅಥವಾ ಭಕ್ತೆ ಎಂದರೆ ಗುರು ಲಿಂಗ ಜಂಗಮದಲ್ಲಿ ಆಸ್ಥೆ ಇದ್ದವರು. ಭವಿ ಎಂದರೆ ಆಸ್ಥೆ ಇಲ್ಲದವರು ಎಂದರ್ಥ. ಈ ಧರೆಗೆ ಬಸವಣ್ಣ ಭಕ್ತಿಯ ಸ್ವರೂಪನಾಗಿ ಬರುತ್ತಾನೆ. ಮನಸು ಮನಸುಗಳಿಗೆ ಭಕ್ತಿಯ ಮಾರ್ಗ ತೋರುವವನು ಭಕ್ತಿ ಭಂಡಾರಿ ಬಸವಣ್ಣ. ಬಸವಾದಿ ಶರಣರಿಗೆ ಭಕ್ತರಾಗಲು ಇಷ್ಟಲಿಂಗ ಪೂಜೆಯೇ ಮೊದಲಾಯಿತು. ಷಟಸ್ಥಲ ಸಿದ್ಧಾಂತದ ಮೂಲಕ ‘ಅಂಗ’ ಮತ್ತು ‘ಲಿಂಗ’ದ ಸಾಮರಸ್ಯ ಗುಟ್ಟನ್ನು ಕಲಿಸಿದರು. ಹೀಗೆ ಲಿಂಗಾಂಗ ಸಾಮರಸ್ಯ ಸಾಧಿಸಲು ಆರು ಹಂತಗಳು:
ಭಕ್ತ ಸ್ಥಲ
ಮಹೇಶ ಸ್ಥಲ
ಪ್ರಸಾದಿ ಸ್ಥಲ
ಪ್ರಾಣಲಿಂಗಿ ಸ್ಥಲ
ಶರಣ ಸ್ಥಲ
ಐಕ್ಯ ಸ್ಥಲ
ಈ ಆರು ಹಂತಗಳನ್ನು ತಲುಪುವ ಮಾರ್ಗಕ್ಕೆ ಇಷ್ಟಲಿಂಗ ಪೂಜೆಯೇ ಅನುವಾಗುತ್ತದೆ. ವ್ಯಕ್ತಿ ಲೌಕಿಕದಿಂದ ಅಲೌಕಿಕದೆಡೆಗೆ ಸಾಗಬೇಕಾದರೆ ಮೊಟ್ಟ ಮೊದಲ ಮೆಟ್ಟಿಲು ಭಕ್ತನಾಗುವುದು. ಹಾಗೆ ಭಕ್ತನಾಗುವುದೆಂದರೆ:
ಬದುಕಿನಲ್ಲಿ ಪ್ರತಿದಿನವೂ ಸತ್ಯ, ಸದಾಚಾರ ರೂಢಿಸಿಕೊಳ್ಳುವುದು.
ತನು, ಮನ, ಧನ ‘ತ್ರಿವಿಧ’ ದಾಸೋಹ ಗೈಯುವುದು.
ಶರಣರ ಸಂಗದಲ್ಲಿ ಸಂತೃಪ್ತಿಯ ಪರಮಾನಂದ ಹೊಂದುವುದು.
ಈ ಮೂರು ಅಂಶಗಳನ್ನು ತಿಳಿಯಲು ಚೆನ್ನಬಸವಣ್ಣನ ಈ ವಚನ ಕಾರಣವಾಗುತ್ತದೆ.
“ಭಕ್ತರಾದೆವೆಂದು ಯುಕ್ತಿಗೆಟ್ಟು ನುಡಿವರು, ಭಕ್ತಸ್ಥಲವೆಲ್ಲರಿಗೆಲ್ಲಿಯದೊ?
ಗುರುವಿನಲ್ಲಿ ತನುವಂಚನೆ, ಲಿಂಗದಲ್ಲಿ ಮನ ವಂಚನೆ,
ಜಂಗಮದಲ್ಲಿ ಧನವಂಚನೆ!
ಇಂತೀ ತ್ರಿವಿಧವುಳ್ಳನಕ್ಕರ ಭಕ್ತನೆ?
ಗುರುವಿನಲ್ಲಿ ಚಾರಿತ್ರ್ಯವ
ಲಿಂಗದಲ್ಲಿ ಲಕ್ಷಣವ
ಜಂಗಮದಲ್ಲಿ ಜಾತಿಯನರಸುವನಕ್ಕರ ಭಕ್ತನೆ?
ಅಲ್ಲ ದೋಷಾರ್ಥಿ!
ಗುರುಲಿಂಗ ಜಂಗಮದ್ವೇಷೀ ಹೋ ನರಸ್ಸ ದುರಾತ್ಮ ಕಃ
ಇದು ಕಾರಣ, ಕೂಡಲ ಚೆನ್ನಸಂಗಮದೇವಾ
ಭಕ್ತಸ್ಥಲವೆಲ್ಲರಿಗೆಲ್ಲಿಯದೊ?”
ಲಿಂಗ, ವಿಭೂತಿ, ರುದ್ರಾಕ್ಷಿ ಧರಿಸಿ, ಕೇವಲ ಲಾಂಚನ ಧರಿಸಿ ತೋರಿಕೆಯ ಭಕ್ತ ಎನಿಸಿಕೊಳ್ಳುವುದಲ್ಲ. ತನುವನ್ನು ಗುರುವಿಗರ್ಪಿಸಿ, ಮನವನ್ನು ಲಿಂಗಕರ್ಪಿಸಿ, ಧನವನ್ನು ಜಂಗಮಕ್ಕರ್ಪಿಸಬೇಕು. ಈ ತರಹದ ತನು, ಮನ, ಧನವೆಂಬ ತ್ರಿವಿಧ ದಾಸೋಹಿಯಾದವನು ಭಕ್ತನೆನಿಸಿಕೊಳ್ಳುತ್ತಾನೆ. ಭಕ್ತನಾದವನು ನಿಜಾರ್ಥದ ಆಚಾರವನ್ನು ಮಾಡಬೇಕು. ಇನ್ನೊಬ್ಬರ ಮುಂದೆ ಹೇಳಿಕೊಳ್ಳುವುದಲ್ಲ. ಭಕ್ತ ಎಂದು ಹಾಗೆ ಹೇಳಿದ್ದೇ ಆದರೆ ಅದು ಭ್ರಮೆ.
ಇದೇ ಭಾವವಿರುವ ಬಸವಣ್ಣನವರ ಸರಳ ವಚನ ಹೀಗಿದೆ,
“ಒಳಗೆ ಕುಟಿಲ ಹೊರಗೆ ವಿನಯವಾಗಿ
ಭಕ್ತರೆನಿಸಿಕೊಂಬವರ ಬಲ್ಲ ನೊಲ್ಲನಯ್ಯ ಲಿಂಗವು
ಅವರು ಸತ್ ಪಥಕ್ಕೆ ಸಲ್ಲರು ಸಲ್ಲರಯ್ಯಾ!
ಒಳಹೊರಗೊಂದಾದವರಿಗೆ ಅಳಿಯಾಸೆದೋರಿ
ಬೀಸಾಡುವನವರ ಜಗದೀಶ ಕೂಡಲಸಂಗಮದೇವ”
ವ್ಯಕ್ತಿ ಮೇಲ್ನೋಟಕ್ಕೆ ವಿನಯತೆಯಿಂದ ಇದ್ದರೆ, ‘ಭಕ್ತ’ ಎನಿಸಿಕೊಳ್ಳುವುದಿಲ್ಲ. ಅಂತರಂಗ ಮತ್ತು ಬಾಹ್ಯ ಎರಡೂ ಒಂದಾಗಿದ್ದವರನ್ನು ಮಾತ್ರ ಲಿಂಗ ಗುರುತಿಸುತ್ತದೆ. ಉಳಿದವರನ್ನು ಈ ಲೌಕಿಕದ ಜಗತ್ತಿಗೆ ಬೀಸಿ ನೂಕುವನು ಆ ದೇವ ಜಗದೀಶ ಎಂದು ಬಸವಣ್ಣ ಹೇಳುತ್ತಾನೆ. ಅಕ್ಕ ಭವಿಯಿಂದ ಭಕ್ತೆಯಾಗಿಸಿದ ಗುರು ಬಸವಣ್ಣನಿಗೆ ನಮಿಸುತ್ತಾಳೆ.
ಅಕ್ಕನಿಗೆ ಇದ್ದದ್ದು ಒಂದೇ ಒಂದು ಗುರಿ. ತನ್ನ ತಾನರಿಯುವ ಮಾರ್ಗದಲ್ಲಿ ಚೆನ್ನಮಲ್ಲಿಕಾರ್ಜುನನ ಹುಡುಕಾಟ. ಆ ಹುಡುಕಾಟವೇ ಅವಳನ್ನು ಕಲ್ಯಾಣದೆಡೆಗೆ ಸೆಳೆದೊಯ್ಯುತ್ತದೆ. ಅವರ ಸಂಗದಲ್ಲಿ ಆ ಅನುಭಾವ ಪಡೆದ ಧನ್ಯತೆ ವ್ಯಕ್ತಪಡಿಸುತ್ತಾಳೆ. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯದ ಹಂತ ತಲುಪುವ ಗುಟ್ಟನ್ನು ಇಷ್ಟಲಿಂಗ ಪೂಜೆಯಲ್ಲಿ ಕಂಡುಕೊಳ್ಳುತ್ತಾಳೆ. ‘ಅರಿತ ಮೇಲೆ ಆಡಬಾರದು ನೋಡಾ’ ಎಂದು ಹೇಳುವ ಅಕ್ಕನ ಮಾತಿನ ಆಳ ಅರಿತು ಮೌನವಾಗಬೇಕಷ್ಟೆ.
ಅಂತಿಮವಾಗಿ ಬಸವಾದಿ ಶರಣರು ಮತ್ತು ಅಕ್ಕ ಹೇಳುವುದು ಈ ದೇಹ, ಮನಸು ಮತ್ತು ಭಾವನೆಗಳ ಕುರಿತ ಅನನ್ಯತೆ. ‘ಕಾಯವೆಂಬ ಕದಳಿಯ ಶ್ರೀ ಗಿರಿಯನೇರಿದೆ’ ಎಂದು ಅಕ್ಕ ಹೇಳುವ ಹಂತವನ್ನು ತಲುಪುದು ಸುಲಭದ ಮಾತಲ್ಲ. ಚೆನ್ನಮಲ್ಲಿಕಾರ್ಜುನನೆಂದರೆ ಲಿಂಗ, ಲಿಂಗ ಅರಿವಿನ ಕುರುಹು ಆಗಿ, ತನ್ನೊಳಗಿನ ಅರಿವೇ ಗುರುವಾಗುವ ಪ್ರಕ್ರಿಯೆ. ಅಕ್ಕನ ವಚನಗಳನ್ನು ಅರಿಯುವ ಮಾರ್ಗದಲ್ಲಿ, ನಾನೇರಿದೆತ್ತರಕ್ಕೆ ನೀ ಏರಬಲ್ಲೆಯಾ? ಎಂದು ಅಕ್ಕನೇ ಸಾವಾಲು ಹಾಕಿದಂತೆ ಭಾಸವಾಗುತ್ತದೆ.
ಸಿಕಾ