ಎಂಥ ದಾನ…
ರಕ್ತದಾನಕ್ಕಿಂತ ಇನ್ನು ದಾನವಿಲ್ಲ
ನೇತ್ರದಾನಕ್ಕಿಂತ ಮಿಗಿಲು ದಾನವಿಲ್ಲ
….ಎಂಬ ಸ್ಲೋಗನ್ನುಗಳೆ
ರಾಶಿ ಭಿತ್ತಿ ಪತ್ರಗಳೆ
ಮೈಕುಗಳ ಗಂಟಲಲಿ
ಕೂಗುವ ಧ್ವನಿಗಳೆ…ಕೇಳಿ..
ಕುಡಿದು ಬಿಟ್ಟಿಹರಲ್ಲ ನಮ್ಮ ನೆತ್ತರವನು
ಕಿತ್ತು ಬಿಟ್ಟಿಹರಲ್ಲ ನಮ್ಮ ನೇತ್ರಗಳನು
ಮೋಸ ವಂಚನೆಯ ರಾಜ್ಯಾಧಿಕಾರಿಗಳು
ದೇಶಭಕ್ತರ ಹುಸಿ ಮುಖವಾಡ ಧರಿಸಿದವರು…
ಹಗಲುಗಳ್ಳರು ಕಾಳಧನಿಕರು
ಹಸಿದವರ ಕೈ ತುತ್ತು ಕಸಿದುಕೊಂಡವರು
ಗೇಣುಬಟ್ಟೆಯನೂ ಎಳೆದುಕೊಂಡವರು…
ನಿಂತ ನೆಲವನೆ ಬಗೆದು ಅಗೆದುಕೊಂಡವರು
ಪ್ರಾಣವನು ಹಣಕಾಗಿ ಪಣವ ಇಡಿಸಿಹರು
ತ್ರಾಣವನು ತೃಣವಾಗಿ ಸೂಡು ಕಟ್ಟಿಹರು…
ನಮ್ಮದೇನಿದೆ ಇಲ್ಲಿ ನಮ್ಮದೆಂದು…?
ಮೈಯಕಣದಲಿ ಇಲ್ಲ ಒಂದು ಜಲಬಿಂದು
ಇನ್ನೆಂಥ ನೇತ್ರ..? ಇನ್ನೆಂಥ ನೆತ್ತರ..?
ಕೊಡಲೇನು ಉಳಿದಿದೆ ನಮ್ಮ ಹತ್ರ…?????
ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ