ಹೃದಯಶುದ್ಧವಾಗಿ ಶರಣೆಂದಡೆ
ಅದು ಬೇಕು ಇದು ಬೇಕೆಂಬರು
ಎದೆಗುದಿಹಬೇಡ ಸುದೈವನಾದಡೆ ಸಾಕು
ಪಡಿಪದಾರ್ಥ ತಾನಿದ್ದೆಡೆಗೆ ಬಹುದು
ನಿಧಿ ನಿಕ್ಷೇಪಂಗಳಿದ್ದೆಡೆಗೆ ಬಹವಯ್ಯಾ ಹೃದಯಶುದ್ಧವಾಗಿ ಸಕಳೇಶ್ವರಾ ಶರಣೆಂದಡೆ ನಿಜಪದವನೀವ
– ಸಕಳೇಶ ಮಾದರಸ
ಮನುಷ್ಯನ ಆಸೆಗಳಿಗೆ ಮಿತಿಯೇ ಇಲ್ಲ. ಯಾವಾಗಲೂ ಅವನು ಅದು ಬೇಕು ಇದು ಬೇಕು ಎಂದು ಸಕಲ ಸಂಪತ್ತು ಭೋಗ ಭಾಗ್ಯ ತನ್ನದಾಗಬೇಕು ಎಂದು ಬಯಸುತ್ತಾನೆ .ತೃಪ್ತಿಯೇ ಇರುವುದಿಲ್ಲ. ಒಂದು ದೊರೆತರೆ ಇನ್ನೊಂದು ಬೇಕೆನ್ನುವ ಆಸೆ ಮೊಳಕೆ ಒಡೆಯುತ್ತದೆ. ಹೀಗೆ ಆಸೆ ಪಡುವವನು ಯಾವಾಗಲೂ ಮನೋವಕುಲಕ್ಕೆ ಒಳಗಾಗಿರುತ್ತಾನೆ ಅವನ ಮನಸ್ಸು ಸೀಮಿತದಲ್ಲಿ ಇರುವುದಿಲ್ಲ ದುಃಖ ತುಂಬಿದ ಮನಸ್ಸಿನಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಮನಸ್ಸಿನ ಆಸೆ ಆಕಾಂಕ್ಷೆಗಳನ್ನು ಹೊರಹಾಕಿ ಮನಸ್ಸನ್ನು ಶುದ್ಧವಾಗಿಟ್ಟುಕೊಂಡರೆ ಅಂಥವನೇ ಸುದೈವಿ ಎಂದು ಸಕಲೇಶ ಮಾದರಸ ಸಮಲೋಚಕ ರೀತಿಯಲ್ಲಿ ಈ ವಚನವನ್ನು ಹೇಳಿರುವನು.
ಅದು ಬೇಕು ಇದು ಬೇಕೆಂಬರು
ಎದೆಗುದಿಹಬೇಡ ಸುದೈವನಾದಡೆ ಸಾಕು
ಶರಣರು ಅಲ್ಪತೃಪ್ತರು. ಮೂಲಭೂತ ಅವಶ್ಯಕತೆಗಳಿಂಗಿತ
ಹೆಚ್ಚಿನದನ್ನು ಬಯಸದವರು. ಸಂಪತ್ತಿನ ಕ್ರೂಡೀಕರಣದ ವಿರೋಧಿಗಳು. ನಿತ್ಯ ಕಾಯಕವನ್ನು ಮಾಡಿ ಬಂದದ್ದರಲ್ಲಿ ದಾಸೋಹವನ್ನು ಮಾಡಿ ಜೀವನ ನಡೆಸುವಂತಹವರು. ಇಂದಿಗೆ ನಾಳೆಗೆ ಎಂದು ಯೋಚಿಸದರು. ಶರಣನಾದವನು ಸಾಮಾನ್ಯ ಮನುಷ್ಯನಂತೆ ಅದು ಬೇಕು ಇದು ಬೇಕು ಎಂದು ಭಾವಿಯ ಪ್ರಪಂಚಕ ಆಸೆಗಳಿಗೆ ಮರುಳಾಗದೆ ಬಯಸದೆ ಇರುವವನು. ಅದು ಬೇಕು ಇದು ಬೇಕು ಎಂದು ಕಂಡದ್ದನ್ನು ಬಯಸಿದರೆ ಅದು ಸಿಗುತ್ತದೋ ಇಲ್ಲೋ ಎನ್ನುವ ಎದೆಗುದಿ ಪ್ರಾರಂಭವಾಗುತ್ತದೆ ಎದೆಗುದಿ ಎಂದರೆ ಮನೋವಕುಲತೆ ಮಾನಸಿಕ ಚಿಂತೆ ಮಾನಸಿಕ ತುಮುಲ ದುಃಖ. ಶರಣನಾದವನು ಈ ರೀತಿಯ ಆಸೆಗಳಿಗೆ ಬಲಿಯಾಗಿ ಮನೋವಕುಲಕ್ಕೆ ಒಳಗಾಗಬಾರದು
ಈ ಆಸೆಬುರಕುತನವನ್ನು ಬಿಟ್ಟರೆ ಸುದೈವಿಯಾಗುತ್ತಾನೆ. ಸುದೈವಿ ಎಂದರೆ ಅದೃಷ್ಟವಂತ. ಸಾಮಾನ್ಯರ ದೃಷ್ಟಿಯಲ್ಲಿ ಸಕಲ ಸೌಭಾಗ್ಯವನ್ನು ಹೊಂದಿದವನು. ಆದರೆ ಶರಣರ ದೃಷ್ಟಿಯಲ್ಲಿ ಆಸೆಗಳನ್ನು ತೊರೆದವನು.
ಪಡಿಪದಾರ್ಥ ತಾನಿದ್ದೆಡೆಗೆ ಬಹುದು
ನಿಧಿ ನಿಕ್ಷೇಪಂಗಳಿದ್ದೆಡೆಗೆ
ಬಹವಯ್ಯ
ಸುದೈವಿ ಮನುಷ್ಯನ ಬಳಗೆ ತಾನಾಗಿಯೇ ಅವನಿಗೆ ಬೇಕಾದಂತಹ ಪಡಿ ಪದಾರ್ಥಗಳು ನಿಧಿ ನಿಕ್ಷೇಪಗಳು ಬರುತ್ತವೆ. ನಿಧಿ ನಿಕ್ಷೇಪಗಳು ಎಂದರೆ ಅರಿವು ಮತ್ತು ಜ್ಞಾನ. ಅರಿವು ಮತ್ತು ಜ್ಞಾನವೇ ಶರಣನ ನಿಜವಾದ ನಿಧಿ ನಿಕ್ಷೇಪಗಳು.
ಹೃದಯಶುದ್ಧವಾಗಿ ಸಕಳೇಶ್ವರಾ ಶರಣೆಂದಡೆ ನಿಜಪದವನೀವ
ಶರಣನ ನಿಜವಾದ ಆಧ್ಯಾತ್ಮಿಕ ಸಾಧನೆ ಎಂದರೆ ತಾನು ನಂಬಿದ ದೇವರನ್ನು ಸಾಕ್ಷಾತ್ಕಾರ ಗೊಳಿಸಿಕೊಳ್ಳುವುದು. ದೇವರನ್ನ ಸಾಕ್ಷಾತ್ಕಾರಗೊಳಿಸಿಕೊಳ್ಳಲು ಜಪ ಕರೆದರೆ ತಪ ನೇಮ ನಿತ್ಯಗಳನ್ನು ಮಾಡುವ ಅವಶ್ಯಕತೆ ಇಲ್ಲ. ಹೃದಯ ಶುದ್ಧವಾಗಿ ನಿಷ್ಕಲ್ಮಶ ಮನಸ್ಸಿನಿಂದ
ಶರಣಾದರೆ ನಮಗೆ ಬೇಕಾದ ಶರಣ ಪದವಿಯನ್ನ ,ಮುಕ್ತಿಯನ್ನ ಸಕಲೇಶ್ವರನು ನೀಡುತ್ತಾನೆ ಎನ್ನುವ ಸಂದೇಶವನ್ನು ಈ ವಚನದಲ್ಲಿ ಸಕಳೇಶ ಮಾದರಸ ಸರಳವಾಗಿ ಹೇಳಿದ್ದಾನೆ.
–ಡಾ. ನಿರ್ಮಲ ಬಟ್ಟಲ