ಸಂಜೆ ಒಂಟಿಯಾಗಿದೆ
ಸೂರ್ಯ ಜಾರಿಹೋದ
ದಿನದ ಕೆಲಸ ಮುಗಿಸಿದ
ಇರುಳು ಮರುಕಳಿಸಿತು
ಮಬ್ಬುಗತ್ತಲೆ ಕವಿಯಿತು.
ದಿನದಿ ದುಡಿದ ಪ್ರಕೃತಿ
ದಣಿದು ದಿವಿನಾಗಿ ಮಲಗಿತು
ಪಶುಪಕ್ಷಿಗಳು ಗೂಡ ಸೇರಿದವು.
ಹರಿವ ನೀರು ಮಂದವಾಯಿತು.
ನಾವಿಕನಿಲ್ಲದ ದೋಣಿ
ತೀರ ಸೇರಿ ನಿಂತಿತು.
ಮತ್ತೆ ಮರುದಿನಕಾಗಿ ಕಾಯುತ
ದಣಿದು ವಿರಮಿಸಿತು ವಿರಾಗಿಯಾಗಿ
ಬಿರುಬಿಸಿಲಲಿ ಬೆಂಡಾದ ಮರಗಳೆಲ್ಲ
ಸಂಜೆಯ ಸೋನೆ ಮಳೆಗೆ ನವಿಲಾದವು
ತಂಗಾಳಿಯ ಸೂಸುತ ತವರಾದವು
ನದಿಯ ನೀರಿನ ಬಿಂಬವಾದವು
ಕಲ್ಮಶವಿಲ್ಲದ ಕಾನನ ಕೆನೆಗಟ್ಟಿತು
ಜಗದ ಜಂಜಡದಿ ವಿರಮಿಸಿತು
ತಿಂಗಳ ಬೆಳಕಿನಲಿ ಬೆರೆಯಿತು
ತಾರೆಗಳೆಲ್ಲ ಪತರಗುಟ್ಟಿದವು ಬಾನಚಂದಿರನಂದದಿ.