ಅಲ್ಲಮರು ಕಂಡ ಬಸವಣ್ಣ

ಅಲ್ಲಮರು ಕಂಡ ಬಸವಣ್ಣ

ಆಯಿತ್ತು ಬಸವಾ ನಿನ್ನಿಂದ
ಗುರುಸ್ವಾಯತವೆನಗೆ,
ಆಯಿತ್ತು ಬಸವಾ ನಿನ್ನಿಂದ
ಲಿಂಗಸ್ವಾಯತವೆನಗೆ,
ಆಯಿತ್ತು ಬಸವಾ ನಿನ್ನಿಂದ
ಜಂಗಮಸ್ವಾಯತವೆನಗೆ,
ಆಯಿತ್ತು ಬಸವಾ ನಿನ್ನಿಂದ
ಪ್ರಸಾದಸ್ವಾಯತವೆನಗೆ,
ಇಂತೀ ಚತುರ್ವಿಧ ಸ್ವಾಯತವನು
ನೀನೆ ಮಾಡಿದೆಯಾಗಿ
ನಮ್ಮ ಗುಹೇಶ್ವರಲಿಂಗಕ್ಕೆ
ವಿಳಾಸವಾದೆಯಲ್ಲಾ ಸಂಗನಬಸವಣ್ಣಾ.

*ಅಲ್ಲಮ ಪ್ರಭುದೇವರ ವಚನ*
ಸವಸಂ : 2, ವಚನ-908 ಪುಟ-271.

ಆಯಿತ್ತು ಬಸವಾ ನಿನ್ನಿಂದ ಗುರುಸ್ವಾಯತವೆನಗೆ,

ಭಾರತೀಯ ಮತ್ತು ಜಗತ್ತಿನ ಎಲ್ಲಾ ಧಾರ್ಮಿಕ ಆಧ್ಯಾತ್ಮಿಕ ಆಚರಣೆ ತತ್ವ ಸಿದ್ಧಾಂತಗಳಲ್ಲಿ ಗುರು ಎಂಬುದು ಪರಕೀಯ ಶಕ್ತಿ ವ್ಯಕ್ತಿ . ಗುರು ಎಂಬ ಮಾರ್ಗದ ಮೂಲಕ ಶಿಕ್ಷಣ ಪಾಠ ದೀಕ್ಷೆ ಪಡೆಯುವ ವಿಧಾನ ವಿಧಿತವಾಗಿತ್ತು. ಭಾರತೀಯ ಪರಂಪರೆಯಲ್ಲಿ ಗುರುವಿಗೆ ಇರುವ ಸ್ಥಾನ ಮಾನ ಗೌರವ ಇನ್ನೆಲ್ಲಿಯೂ ಕಾಣದು .
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ,ಎತ್ತಾಗಿ ತೊತ್ತಾಗಿ ಹಿತ್ತಲದ ಮರವಾಗಿ ಮತ್ತೆ ಕಾಲದ ಕೆರವಾಗಿ ಗುರುವಿನ ಹತ್ತಿರವಿರೆಂದ ಸರ್ವಜ್ಞ , ಹೀಗೆ ಅನೇಕ ಭಾರತೀಯ ಸಾಧಕರು ಸಹಿತ ಗುರುವನ್ನು ಸಾಧಕನಿಂದ ಸ್ವಲ್ಪ ಶ್ರೇಷ್ಠ ಮತ್ತು ಜೇಷ್ಠ ಸ್ಥಾನದಲ್ಲಿ ನೋಡುವುದು ವಾಡಿಕೆ . ಆದರೆ ಇದಕ್ಕೆ ಸಂಪೂರ್ಣವಾಗಿ ಭಿನ್ನವಾದ ರೀತಿಯಲ್ಲಿ ಬಸವಣ್ಣನವರು ಗುರುವಿನ ವ್ಯಾಖ್ಯಾನ ಮಾಡಿದ್ದಾರೆ .ಅರಿವೇ ಗುರು ಆಚಾರವೇ ಲಿಂಗ ಅನುಭವವೇ ಜಂಗಮ . ತನ್ನ ತಾನರಿದೊಡೆ ತಾನೇ ದೇವಾ . ಗುರು ಲಿಂಗ ಜಂಗಮ ಮುಂತಾದ ಅಷ್ಟಾವರಣಗಳನ್ನು ಕಾಯಗುಣಗಳನ್ನಾಗಿ ನೋಡಿದ್ದಾರೆ ..ಇಂತಹ ಅಪೂರ್ವ ತತ್ವವನ್ನು ಬಸವಣ್ಣನವರಿಂದ ತಿಳಿದುಕೊಂಡ ಅಲ್ಲಮರು .ತಮಗೆ ಗುರು ಜ್ಞಾನ ಗುರುವಿನ ಮಹತ್ವ ಮತ್ತು ಗುರುವಿನ ಪ್ರಜ್ಞೆಯನ್ನು ಬಸವಣ್ಣನವರಿಂದ ಸ್ವಾಯತವಾಯಿತು ಎಂದು ಹೇಳಿದ್ದಾರೆ . ತಾನು ಗುರುವಿಂಗೆ ಮನ ಲಿಂಗಕ್ಕೆ ಧನ ಜಂಗಮಕ್ಕೆ ವಿನಿಯೋಗಿಸುವ ಹೊಸ ಪರಿಯನ್ನು ಬಸವಣ್ಣನವರಿಂದ ಕಂಡುಕೊಂಡೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅಲ್ಲಮರು.

ಆಯಿತ್ತು ಬಸವಾ ನಿನ್ನಿಂದ ಲಿಂಗಸ್ವಾಯತವೆನಗೆ,

ಚರ ಮತ್ತು ಸ್ಥಾವರ ಲಿಂಗದ ಉಪಾಸನೆ ಪೂಜೆ ಭಾರತೀಯ ಪರಂಪರೆಯ ಅತ್ಯಂತ ಪ್ರಾಚೀನ ಆಚರಣೆಯಲ್ಲೊಂದು .ಹರಪ್ಪ ಮೊಹಂಜೋದಾರ ಸಂಸ್ಕೃತಿಯಲ್ಲಿಯೂ ಕೂಡಾ ಸ್ಥಾವರ ಲಿಂಗಗಳ ಅವಶೇಷಗಳನ್ನು ಕಾಣುತ್ತೇವೆ . ಹೀಗಾಗಿ ಇಷ್ಟಲಿಂಗದ ಪರಿಕಲ್ಪನೆಯನ್ನು ತಾವು ಬಸವಣ್ಣನವರಿಂದಲೇ ತಿಳಿದುಕೊಂಡೆನು. ಇಷ್ಟಲಿಂಗವು ಚೈತನ್ಯದ ಕುರುಹು ಅರಿವಿನ ಸಂಕೇತ ಕಾಣಬಾರದ ಲಿಂಗವು ಎಂಬೆಲ್ಲ ನೀತಿಗಳೊಂದಿಗೆ ಲಿಂಗ ತತ್ವವನ್ನು ಅಲ್ಲಮರು ಬಸವಣ್ಣನವರಿಂದ ತಿಳಿದುಕೊಳ್ಳುತ್ತಾರೆ .ಅಂಗ ಲಿಂಗ ಒಂದಾದ ಮೇಲೆ ಲಿಂಗದ ಹಂಗು ಹರಿಯಬೇಕು. ಎರೆದರೆ ನೆನೆಯದು ಮರೆದರೆ ಬಾಡದು ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು ಕೂಡಲ ಸಂಗಮದೇವ ಎಂದು ಹೇಳಿದ ಬಸವಣ್ಣನವರ ತತ್ವಕ್ಕೆ ಮಾರು ಹೋದರು ಅಲ್ಲಮರು . ಲಿಂಗ ಪೂಜಿಸಿ ಫಲವೇನು ಸಮರತಿ ಸಮಕಳೆ ಸಮಸುಖವ ಅರಿಯದನ್ನಕ್ಕ ನದಿಯೊಳಗೆ ನದಿಯು ಬೆರೆಸಿದಂತೆ ಎಂಬ ವಚನದಲ್ಲಿಯೂ ಕೂಡ ಸಮಗ್ರ ಪ್ರಗತಿ ಅಭಿವೃದ್ಧಿ ಮತ್ತು ಜೈವಿಕ ವಿಕಾಸವೇ ಮುಖ್ಯ ಹೊರತು ಲಿಂಗ ಪೂಜೆ ಅಲ್ಲ ಎಂಬ ಅಂಶವನ್ನು ಬಸವಣ್ಣನವರಿಂದ ತಿಳಿದ ಅಲ್ಲಮರು ಆಯಿತ್ತು ಬಸವಾ ನಿನ್ನಿಂದ ಲಿಂಗಸ್ವಾಯತವೆನಗೆ, ಎಂದಿದ್ದಾರೆ .ಲಿಂಗ ಜ್ಞಾನ
ಲಿಂಗ ತತ್ವಗಳನ್ನು ಸಾರ್ವಕಾಲಿಕ ಸಮಾನತೆ ಪ್ರೀತಿ ಸಮತೆ ಶಾಂತಿಯ ಸಾಧನೆಗೆ ಬಳಸುವ ಅರುವಿನೊಂದಿಗೆ ನಿರಂತರವಾಗಿ ನಡೆಸುವ ಅನುಸಂಧಾನ .

ಆಯಿತ್ತು ಬಸವಾ ನಿನ್ನಿಂದ ಜಂಗಮ ಸ್ವಾಯತವೆನಗೆ,
ಜಂಗಮ ಪದವು ಒಂದು ಜನಾಂಗವನ್ನು ಸೂಚಿಸುವ ಕಾಲವೊಂದಿತ್ತು. ಬಸವಣ್ಣನವರು ಜಂಗಮವೆಂದರೆ ಜ್ಞಾನ ಜಂಗಮ ಚಲನಶೀಲತೆ ಜಂಗಮ ಸಮಾಜವೆಂಬ ಹೊಸ ವ್ಯಾಖ್ಯಾನಕ್ಕೆ ಮುಂದಾಗಿ ದಾನವನ್ನು ವಿರೋಧಿಸಿ ದಾಸೋಹವನ್ನು ಅನುಷ್ಠಾನಗೊಳಿಸಿದರು. ಜಂಗಮವ ವ್ಯವಸ್ಥೆಯನ್ನು ಜಾತಿ ವ್ಯವಸ್ಥೆಯಿಂದ ಬೇರ್ಪಡಿಸಿ “ಮರಕ್ಕೆ ಬಾಯಿ ಬೇರೆಂದು ತಳೆಯಿಂಕೆ ನೀರೆರೆದಡೆ ಮೇಲೆ ಪಲ್ಲವಿಸಿತ್ತು ನೋಡಾ ,ಲಿಂಗದ ಬಾಯಿ ಜಂಗಮವೆಂದು ಪಡಿ ಪದಾರ್ಥವ ನೀಡಿದಡೆ ಮುಂದೆ ಸಕಳಾರ್ಥವನಿವನು .ಆ ಜಂಗಮ ಹರನೆಂದು ಕಂಡು ,ನರನೆಂದು ಭಾವಿಸಿದೊಡೆ ನರಕ ತಪ್ಪದು ಕಾಣಾ ,ಕೂಡಲ ಸಂಗಮದೇವ . ಇಲ್ಲಿ ನರನಲ್ಲಿ ಹರನನ್ನು ಕಾಣುವ ಸುಂದರ ಜಂಗಮ ತತ್ವವನ್ನು ಅಲ್ಲಮರು ಬಸವಣ್ಣನವರಿಂದ ತಿಳಿದ ಕಾರಣ ಆಯಿತ್ತು ಬಸವಾ ನಿನ್ನಿಂದ ಜಂಗಮಸ್ವಾಯತವೆನಗೆ,. ಜಂಗಮ ಜ್ಞಾನ ತತ್ವದ ನೈಜ ಅರಿವು ಪರಿಚಯ ತಮಗೆ ಬಸವಣ್ಣನವರಿಂದ ಗೊತ್ತಾಯಿತು ಎಂದು ಅಲ್ಲಮರು ಹೇಳಿದ್ದಾರೆ .ಶರಣರ ಜಂಗಮ ಪರಿಕಲ್ಪನೆ ಅತ್ಯಂತ ವೈಚಾರಿಕ ತತ್ವ ನಿಷ್ಠವಾದ ಜೇಷ್ಠತೆ ಶ್ರೇಷ್ಠತೆ ಧಿಕ್ಕರಿಸಿದ ಅವಿರಳ ಜ್ಞಾನ ತತ್ವವು.

ಆಯಿತ್ತು ಬಸವಾ ನಿನ್ನಿಂದ ಪ್ರಸಾದಸ್ವಾಯತವೆನಗೆ,
ಧರ್ಮ ದೇವರು ಆಧ್ಯಾತ್ಮ ಭಕ್ತಿ ಪರವಶ ಮುಗ್ಧ ಜನರಿಗೆ ಪುರೋಹಿತರು ಖೋಬ್ಬರಿ ಕಲ್ಲು ಸಕ್ಕರಿ ಮುಂತಾದ ಖಾದ್ಯ ಪದಾರ್ಥಗಳನ್ನು ಪ್ರಸಾದವೆಂದು ಕೊಟ್ಟು ಅವರನ್ನು ಒಂದು ಉನ್ಮಾದಕ್ಕೆ ಒಳಪಡಿಸಿ ಸುಲಿಗೆ ಶೋಷಣೆ ಮಾಡುವ ಪದ್ಧತಿ ಇತ್ತು. ಪ್ರಸಾದದ ಅರ್ಥವನ್ನು ಶರಣರು ಬಸವಣ್ಣ ಅತ್ಯಂತ ವಿಭಿನ್ನವಾಗಿ ಮಾಡಿದ್ದಾರೆ . ಪ್ರಸನ್ನತೆಯನ್ನು ಉಂಟುಮಾಡುವ ಪದಾರ್ಥವಲ್ಲದ ಪರಮೋಚ್ಚ ಭಾವವೇ ಪ್ರಸಾದವಾಯಿತು . ಪ್ರಸನ್ನತೆ ಸಂತಸ ಮುಕ್ತ ವಾತಾವರಣ ಉಂಟುಮಾಡುವ ಸರಳ ಸಹಜವಾದ ಕ್ರಿಯೆ ಪ್ರಸಾದವಾಯಿತು .ಏನು ಬಂದಿರಿ ಹದುಳವಿದ್ದಿರಿ ಎಂದರೆ ನಿಮ್ಮ ಮೈ ಸಿರಿ ಹಾರು ಹೋವುದೇ ಕುಳ್ಳಿರಿ ಎಂದರೆ ನೆಲ ಕೂಲಿ ಹೋವುದೇ ? ಎಂದು ಪ್ರಶ್ನೆ ಮಾಡಿದ್ದಾರೆ . ನುಡಿದರೆ ಮುತ್ತಿನ ಹಾರ ಮಾಣಿಕ್ಯದ ದೀಪ್ತಿ ಸ್ಪಟಿಕದ ಸಲಾಕೆ ಹೀಗೆ ನಡೆ ನುಡಿಗಳಲ್ಲಿ ಸಮನ್ವಯತೆ ತಂದು ಸಾಮರಸ್ಯ ಬದುಕಿಗೆ ನಾಂದಿ ಹಾಡುವ ಬಸವಣ್ಣನವರ ಪ್ರಯತ್ನ ಅತ್ಯಂತ ಶ್ಲಾಘನೀಯವಾದದ್ದು . ಅಂತೆಯೇ ಆ ಕಾರಣದಿಂದ ಅಲ್ಲಮರು ತಮಗೆ ಪ್ರಸಾದದ ನೈಜ ಅರ್ಥ ಗೊತ್ತಾಗಿದ್ದು ಅಂಗ ಲಿಂಗಕ್ಕೆ ಸಾಯತವಾಗಿದ್ದು ಬಸವಣ್ನನವರ ಮಾರ್ಗದರ್ಶನದಿಂದ ಎಂದು ಹೇಳಿದ್ದಾರೆ .

ಇಂತೀ ಚತುರ್ವಿಧ ಸ್ವಾಯತವನು ನೀನೆ ಮಾಡಿದೆಯಾಗಿ
ಗುರು ಲಿಂಗ ಜಂಗಮ ಪ್ರಸಾದವೆಂಬ ಘನ ತತ್ವಗಳನ್ನು ಸಾಧಕನಿಗೆ ತಿಳಿಸಿಕೊಟ್ಟ ಅರ್ಥೈಸಿದ ಮಹಾಮಣಿಹ ಸಂಗನಬಸವಣ್ಣಾ ಇವುಗಳ ಅರ್ಥ ಮತ್ತು ಅರಿವನ್ನು ಕಾಯಗುಣಕ್ಕೆ ಪೂರಕವಾಗುವ ರೀತಿಯಲ್ಲಿ ಚತುರ್ವಿಧ ಗುಣ ಸಂಪನ್ನತೆಯನ್ನು ಬಸವಣ್ಣನವರಿಂದಲೇ ಆಯಿತು ಎನ್ನುವದರಲ್ಲದೆ ಇವುಗಳ ಸ್ಥಾಪಕನು ಬಸವಣ್ಣನವರೇ ಎಂದಿದ್ದಾರೆ .

ನಮ್ಮ ಗುಹೇಶ್ವರಲಿಂಗಕ್ಕೆ ವಿಳಾಸವಾದೆಯಲ್ಲಾ ಸಂಗನಬಸವಣ್ಣಾ.
ಗುರು ಲಿಂಗ ಜಂಗಮ ಪ್ರಸಾದವೆಂಬ ಘನ ತತ್ವಗಳನ್ನು ಸಾಧಕನಿಗೆ ತಿಳಿಸಿಕೊಟ್ಟ ಅರ್ಥೈಸಿದ ಮಹಾಮಣಿಹ ಬಸವಣ್ಣ .ಇವರ ಸಾಧನೆ ನಿರಂತರ ಕಠಿಣ ಪ್ರಯತ್ನ ದೊಡ್ಡದು . ದೇವರು ಭಕ್ತಿ ಧರ್ಮವೆಂದು ಕುರುಡರಾಗಿ ಪೌರೋಹಿತ್ಯರಿಗೆ ದಾಸರಾಗುವ ಜನರನ್ನು ಎಚ್ಚರಿಸಿ ದೇವರನು ಹರನಲ್ಲಿ ಕಾಣುವ ಮತ್ತು ಮುಕ್ತಿ ಮೋಕ್ಷವೆಂಬ ಪದಗಳಿಗೆ ಪರ್ಯಾಯವಾಗಿ ಕಾಯಕ ದಾಸೋಹದಲ್ಲಿ ದಾರಿದೋರಿದ ಶಿವ ಪಥಿಕ ಬಸವಣ್ಣ . ದೇವರೆಂದು ಕಲ್ಲು ಮಣ್ಣು ಲೋಹ ಗುಡ್ಡ ಬೆಟ್ಟ ತಿರುಗಿ ಸಮಯ ಹಣ ಮತ್ತು ಶಕ್ತಿ ವ್ಯರ್ಥ ಮಾಡುವವರನ್ನು ಸಾಧಕರನ್ನು ದೇವರನ್ನು ಮಾಡಿದ ಹೆಗ್ಗಳಿಕೆ ಬಸವಣ್ಣನವರಿಗೆ ಸಲ್ಲಬೇಕು. ಪಂಚ ಮಹಾಭೂತಗಳನ್ನು ಪಂಚೇದ್ರಿಗಳ ಮೂಲಕ ಆಸ್ವಾಧಿಸಿ ಕಾಯಗುಣವನ್ನು ಅಂಗ ಗುಣವನ್ನು ಲಿಂಗ ಗುಣವನ್ನಾಗಿ ಮಾಡುವ ಲಿಂಗ ಯೋಗವು ಅದ್ಭುತ ಮತ್ತು ಆನಂದಮಯವಾಗಿರುತ್ತದೆ . ದೇವರಿಗೆ ವಿಳಾಸವಿಲ್ಲ ಆತನು ಸರ್ವ ವ್ಯಾಪಿ ನಿರಾಕಾರ ಅಗಮ್ಯ ಅಗೋಚರ ಅಪ್ರತಿಮ ಅಪ್ರಮಾಣವಾದ ದೇವರನ್ನು ದೇವರ ಅರಿವಿನ ಕುರುಹನ್ನು ಕರಸ್ಥಲಕ್ಕೆ ಇಷ್ಟಲಿಂಗವಾಗಿ ಕಲ್ಪಿಸಿ ದೇವರಿಗೂ ವಿಳಾಸವದನು ನಮ್ಮ ಬಸವಣ್ಣನವರು ಎಂದು ಹೆಮ್ಮೆಯಿಂದ ಹೇಳಿದ್ದಾರೆ ಅಲ್ಲಮರು . ನನಗೆಯು ಗುರು ನಿನಗೆಯು ಗುರು ಜಗಕೆಲ್ಲ ಗುರು ಕಾಣಾ ಗುಹೇಶ್ವರ ಎನ್ನುವಲ್ಲಿ ನಾವು ಬಸವಣ್ಣನವರ ಹಿರಿತ ಘನತೆಯನ್ನು ಕಾಣಬಹುದು .

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!