ಮಾನ್ಯರೇ

ಡಾ.ನಿರ್ಮಲ ಬಟ್ಟಲ ಅವರು ಕವಯತ್ರಿ. ಹಾಗೂ ವಚನ ಸಾಹಿತ್ಯ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತು ವಿಶೇಷ ಲೇಖನ ಬರೆಯುವ ಮೂಲಕ e-ಸುದ್ದಿ ಓದುಗರಿಗೆ ಚಿರಪರಿಚಿತ.  ಇಂದಿನಿಂದ ಪ್ರತಿದಿನ ವಚನ ವಿಶ್ಲೇಷಣೆ ಮಾಡಲಿದ್ದಾರೆ. ಓದುಗರು ಎಂದಿನಂತೆ ಸ್ವಾಗತಿಸಿ ಮತ್ತು ಚರ್ಚಿಸಿ

-ಸಂಪಾದಕ

ಅಂತರಂಗದ ಅರಿವು….

ಅಂತರಂಗದ ಅರಿವು, ಬಹಿರಂಗದ ಕ್ರಿಯೆ
ಈ ಉಭಯಸಂಪುಟ ಒಂದಾದ ಶರಣಂಗೆ
ಹಿಂಗಿತ್ತು ತನುಸೂತಕ, ಹಿಂಗಿತ್ತು ಮನಸೂತಕ
ಕೂಡಲಚೆನ್ನಸಂಗಯ್ಯನಲ್ಲಿ
ಸಂಗವಾದುದು ಸರ್ವೇಂದ್ರಿಯ
                                      -ಚೆನ್ನಬಸವಣ್ಣ

ಅಂತರಂಗದ ಅರಿವು, ಬಹಿರಂಗದ ಕ್ರಿಯೆ
ಈ ಉಭಯಸಂಪುಟ ಒಂದಾದ ಶರಣಂಗೆ
ಮನುಷ್ಯನ ಭಾವವಲಯಕ್ಕೂ ಅಂದರೆ ಅಂತರಂಗ ಮತ್ತು ಕ್ರೀಯಾವಲಯಕ್ಕೂ ಅಂದರೆ ಬಹಿರಂಗ ಒಂದಕ್ಕೊಂದು ಸಂಬಂಧವಿದೆ.
ಅರಿವು ಎಂದರೆ ಮನಶಾಸ್ತ್ರ ಮತ್ತು ತತ್ವಶಾಸ್ತ್ರಗಳಲ್ಲಿ ಮನಸ್ಸಿನ ಒಂದು ಸ್ಥಿತಿ ಅಥವಾ ಗುಣ ಎಂದು ಪರಿಗಣಿಸಲಾಗುತ್ತದೆ.
ಅರಿವು: ಎಂದರೆ ತಿಳಿವು, ಜ್ಞಾನ ಎಂದು ಸಾಮಾನ್ಯವಾದ ಅರ್ಥ. ಮನಶ್ಶಾಸ್ರ್ತದ ಪ್ರಕಾರ ,ಅರಿವು ಸಂವೇದನೆ, ಭಾವನೆ, ಅನುಭೂತಿ ಸಂಕಲ್ಪ ಇಚ್ಛಾಶಕ್ತ, ಪ್ರೇರಣೆ ಇವು
ಪ್ರಜ್ಞೆಯ ಅಂತಿಮಕ್ರಿಯೆಗಳು. ಜೀವನದಲ್ಲಿ ಇವನ್ನು ಪ್ರತ್ಯೇಕವಾಗಿ ಕಾಣುವುದು ಕಷ್ಟ. ಎಲ್ಲ ಕಡೆಯೂ ಇವು ಒಟ್ಟಿಗೇ ಕೆಲಸ ಮಾಡುತ್ತವೆ.
ಈ ಎಲ್ಲಾ ಮಾನವನ ಬೌದ್ಧಿಕ ಮತ್ತು ಮಾನಸಿಕ ಆಂತರಿಕ ಸಾಮರ್ಥ್ಯಗಳು,
ಮನೋಕ್ರಿಯಾಜನ್ಯ ಸಾಮರ್ಥ್ಯ ಗಳೊಂದಿಗೆ(ದೈಹಿಕ ಚಟುವಟಿಕೆಗಳು) ನೇರವಾದ ಸಂಬಂಧವಿರುತ್ತದೆ. ಆಂತರಿಕ ಸಾಮರ್ಥ್ಯ ಮತ್ತು ಬಾಹ್ಯ ಕ್ರಿಯೆ
ಸಮ್ಮಿಳಿತವಾಗಿ ಇರುವ ವ್ಯಕ್ತಿ ಚಟುವಟಿಕೆಗಳು ಶುದ್ಧವಾಗಿರುತ್ತವೆ. ಮತ್ತು ಪ್ರಜ್ಞಾಪೂರ್ವಕವಾಗಿ ಇರುತ್ತವೆ. ಇದನ್ನ ಚೆನ್ನಬಸವಣ್ಣ ನವರು, ಅಂತರಂಗದ ಅರಿವು ಬಹಿರಂಗದ ಕ್ರಿಯೆ ಎಂದಿದ್ದಾರೆ.
ಈ ಉಭಯ ಸಂಪುಟಗಳು ಒಂದಾಗಿ ಕಾರ್ಯ ನಿರ್ವಹಿಸು ಮನಸ್ಥಿತಿಯನ್ನು ಹೊಂದಿದ ಶರಣನಿಗೆ

ಹಿಂಗಿತ್ತು ತನುಸೂತಕ, ಹಿಂಗಿತ್ತು ಮನಸೂತಕ.

ಅಂತರಂಗ ಬಹಿರಂಗ ಎರಡು ಒಂದಾದ ಶರಣನಿಗೆ ಯಾವುದೇ ರೀತಿಯ ಸೂತಕಗಳು ತಾಗುವುದಿಲ್ಲ. ಸೂತಕವೆಂದರೆ ಹೊಲೆ, ಮೈಲಿಗೆ, ಅಥವಾ ಅಶೌಚ್ಯ ಎಂದು ಅರ್ಥ. ಜನನ, ಮರಣ, ಜಾತಿ,ಪ್ರೇತ ಮತ್ತು ಉಚ್ಛೀಷ್ಟ ಮುಂತಾದ ಪಂಚ ಸೂತಕಗಳು ಅಂತರಂಗ ಬಹಿರಂಗ ಒಂದಾದ ಶರಣನಿಗೆ ತಾಕುವುದಿಲ್ಲ .
ಮನದ ಸೂತಕವೆಂದರೆ ಅಹಂಕಾರ,ಮೇಲರಿಮೆ, ಕೀಳರಿಮೆ ಆಲಶ್ಯ.
ಇನ್ನೊಬ್ಬರ ಕುರಿತಾಗಿ ಕೆಟ್ಟದಾಗಿ ಆಲೋಚನೆ ಮಾಡುವ, ಮೋಸ ಮಾಡುವ ಮತ್ತು ವಿಷಯದಿಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸೂತಕಗಳು ಕಾಡುವುದಿಲ್ಲ
ಕೂಡಲಚೆನ್ನಸಂಗಯ್ಯನಲ್ಲಿ
ಸಂಗವಾದುದು ಸರ್ವೇಂದ್ರಿಯ
ಹೀಗೆ ಅಂತರಂಗ ಬಹಿರಂಗ ಒಂದಾದ ಶರಣನ ಸರ್ವ ಇಂದ್ರಿಯಗಳು ಕೂಡಲ ಚನ್ನಸಂಗಯ್ಯನ ಸ್ನೇಹ ಮಾಡುತ್ತದೆ ಅವನ ಒಡನಾಟದಲ್ಲಿ ಇರುತ್ತವೆ. ಪಂಚೇಂದ್ರಿಯಗಳಾದ ಕಣ್ಣು ಕಿವಿ ಮೂಗು ನಾಲಿಗೆ ತ್ವಚೆಯು ಚೆನ್ನಸಂಗಯ್ಯನಲ್ಲಿ ಒಂದಾಗಿ ಒಳ್ಳೆಯದನ್ನೇ ನೋಡುತ್ತವೆ. ಒಳ್ಳೆಯದನ್ನೇ ಕೇಳುತ್ತವೆ ಒಳ್ಳೆಯ ನುಡಿಗಳನ್ನು ಮಾತನಾಡುತ್ತವೆ ಸಾತ್ವಿಕವಾದಂತ ರುಚಿಯನ್ನು ಸವೆಯುತ್ತವೆ.ಪರಿಮಳವನ್ನೇ ಆಘ್ರಣಿಸುತ್ತವೆ. ಅಂದರೆ ಜಗದ ಜಂಜಡಗಳನ್ನು ಮೀರಿ ಪರಿಪೂರ್ಣತೆಯಡೆಗೆ ಸಾಗುತ್ತಾನೆ.
ಎಂದು ಚೆನ್ನಬಸವಣ್ಣನವರು ಶರಣನಾಗುವವನ ಲಕ್ಷಣ, ಶರಣನಾಗುವುದರಿಂದ ಆಗುವ ಪರಿಣಾಮಗಳನ್ನು ಹೇಳುತ್ತಾರೆ.


ಡಾ.ನಿರ್ಮಲಾ ಬಟ್ಟಲ

Don`t copy text!