ಆಂಧ್ರ ಕ್ಯಾಂಪುಗಳಲ್ಲಿ ಕನ್ನಡ ಕಲರವ

 

47 ಸರ್ಕಾರಿ ಶಾಲೆಗಳಲ್ಲಿ 1,846 ವಿದ್ಯಾರ್ಥಿಗಳಿಂದ ಕನ್ನಡ ಕಲಿಕೆ
ಆಂಧ್ರ ಕ್ಯಾಂಪುಗಳಲ್ಲಿ ಕನ್ನಡ ಕಲರವ

e- ಸುುದ್ದಿ, ಮಾನ್ವಿ:
ತಾಲ್ಲೂಕಿನ ಆಂಧ್ರ ಕ್ಯಾಂಪುಗಳಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿದೆ.
ಕ್ಯಾಂಪುಗಳಲ್ಲಿ ನೆಲೆಸಿರುವ ತೆಲುಗು ಭಾಷಿಕರು ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮ ಶಿಕ್ಷಣ ದೊರಕಿಸಲು ಉತ್ಸುಕರಾಗಿರುವುದು ಗಮನಾರ್ಹ. 1953ರಲ್ಲಿ ಮುನಿರಾಬಾದಿನಲ್ಲಿ ತುಂಗಭದ್ರಾ ಜಲಾಶಯ ನಿರ್ಮಾಣವಾದ ನಂತರ ಅಚ್ಚುಕಟ್ಟು ಪ್ರದೇಶಕ್ಕೆ ಆಂಧ್ರ ಪ್ರದೇಶದ ರೈತರು ವಲಸೆ ಬರುವುದು ಸಾಮಾನ್ಯವಾಗಿತ್ತು. 1960ರ ದಶಕದ ಆರಂಭದಲ್ಲಿ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ, ಪಶ್ಚಿಮ ಗೋದಾವರಿ ಜಿಲ್ಲೆ, ವಿಜಯವಾಡ ಮತ್ತಿತರ ಭಾಗಗಳಿಂದ ವಲಸೆ ಬಂದ ರೈತರು ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಕಾಲುವೆ ವ್ಯಾಪ್ತಿಯ ಗ್ರಾಮಗಳ ಪಕ್ಕದ ಕ್ಯಾಂಪ್‍ಗಳಲ್ಲಿ ನೆಲೆಸಿದ್ದಾರೆ. ಕೃಷಿ, ಹೈನುಗಾರಿಕೆ ಕಸುಬಿನಿಂದ ಬದುಕು ಸಾಗಿಸುವ ಮೂಲಕ ಸ್ಥಳೀಯ ಕನ್ನಡಿಗರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಬಹುತೇಕ ಕ್ಯಾಂಪ್‍ಗಳು ಪಕ್ಕದ ಗ್ರಾಮ ಅಥವಾ ಕ್ಯಾಂಪಿಗೆ ಆಗಮಿಸಿದ ಮೊದಲ ವ್ಯಕ್ತಿಯ ಹೆಸರಿನಿಂದ ಕರೆಯಲ್ಪಡುತ್ತಿವೆ. ಈ ಕ್ಯಾಂಪುಗಳಲ್ಲಿ ಆಂಧ್ರ ವಲಸಿಗರ ಜತೆಗೆ ಸ್ಥಳೀಯರು, ಕೂಲಿಕಾರ್ಮಿಕರು ವಾಸಿಸುತ್ತಿದ್ದಾರೆ. ರಾಜ್ಯ ಸರ್ಕಾರ ಈ ಕ್ಯಾಂಪುಗಳಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ ಮತ್ತಿತರ ಸೌಕರ್ಯಗಳನ್ನು ಕಲ್ಪಿಸಿದೆ. ತಾಲ್ಲೂಕಿನ 47 ಆಂಧ್ರ ಕ್ಯಾಂಪುಗಳಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳು ಇವೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸದರಿ ಕ್ಯಾಂಪ್‍ಗಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 1,846ಮಕ್ಕಳು ಪ್ರವೇಶ ಪಡೆದಿದ್ದಾರೆ. ಕನ್ನಡ ಮಾಧ್ಯಮ ಶಿಕ್ಷಣ ಹೊಂದಿರುವ ಈ ಶಾಲೆಗಳ ಅಭಿವೃದ್ಧಿಗೆ ಸ್ಥಳೀಯರು ಕೈ ಜೋಡಿಸಿದ್ದಾರೆ. ಶ್ರೀನಿವಾಸ ಕ್ಯಾಂಪಿನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಿರಂತರ ಸೃಜನಶೀಲ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಮಾದರಿಯಾಗಿದೆ. ಸುಸಜ್ಜಿತ ಕಟ್ಟಡ, ಮೂಲಸೌಕರ್ಯ ಹೊಂದಿರುವ ಈ ಶಾಲೆಯಲ್ಲಿನ ಗುಣಮಟ್ಟದ ಶಿಕ್ಷಣದ ಬಗ್ಗೆ ಎಲ್ಲರ ಮೆಚ್ಚುಗೆ ಇದೆ.
ಈ ಶಾಲೆಯಲ್ಲಿ ಕಲಿತ ಮಕ್ಕಳು ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಆದರ್ಶ ವಿದ್ಯಾಲಯ ಶಾಲೆಗಳಿಗೆ ಆಯ್ಕೆಯಾಗಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಹಲವು ಆಂಧ್ರ ಕ್ಯಾಂಪುಗಳಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಮಕ್ಕಳು ನಂತರ ಶಿಕ್ಷಣ, ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭವಿಷ್ಯ ರೂಪಿಸಿಕೊಂಡಿದ್ದಾರೆ. ಕೆಲವು ಕ್ಯಾಂಪುಗಳ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಕೊಠಡಿಗಳು, ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಕೊರತೆ ಇದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ..

ಮಕ್ಕಳಲ್ಲಿ ಕನ್ನಡ ಕಲಿಕೆಗೆ ಹೆಚ್ಚಿನ ಆಸಕ್ತಿ ಇದೆ. ಶಾಲೆಯ ಅಭಿವೃದ್ಧಿಗೆ ಸ್ಥಳೀಯರು ಕೈಜೋಡಿಸಿದ್ದಾರೆ.
ಗುಂಡಪ್ಪ ಸಾಗರ್, ಮುಖ್ಯ ಶಿಕ್ಷಕ,
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶ್ರೀನಿವಾಸ ಕ್ಯಾಂಪ್


ಅಗತ್ಯ ಶಿಕ್ಷಕರನ್ನು ನೇಮಕ ಮಾಡಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು.
ಈ.ರಾಮು ಎಸ್‍ಡಿಎಂಸಿ ಸದಸ್ಯ, ಶ್ರೀನಿವಾಸ ಕ್ಯಾಂಪ್

ವಿಶೇಷ ಲೇಖನ – ಬಸವರಾಜ ಭೋಗಾವತಿ

ಪೊನ್.ನಂ.98800 13122


ಕ್ಣಣ ಕ್ಷಣದ ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏

Don`t copy text!