ತನಗೆ ಮುನಿದವರಿಗೆ
ತಾ ಮುನಿಯಲೇಕಯ್ಯ ಅವರಿಗಾದಡೇನು ತನಗಾದಡೇನು
ತನುವಿನ ಕೋಪ ತನ್ನ ಹಿರಿಯತನದ ಕೇಡು
ಮನದ ಕೋಪ ತನ್ನ ಅರಿವಿನ ಕೇಡು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆ ಬೇವುದೇ ಕೂಡಲಸಂಗಮದೇವ
– ಬಸವಣ್ಣನವರು
ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯ
ಮುನಿಸು ಮನುಷ್ಯನ ಸಹಜ ಸ್ವಭಾವ. ಒಬ್ಬರು ಇನ್ನೊಬ್ಬರ ಮೇಲೆ ಕೋಪಿಸಿಕೊಳ್ಳಲು ಕಾರಣಗಳು ಚಿಕ್ಕವು ಅಥವಾ ದೊಡ್ಡವು ಆಗಿರಬಹುದು. ದೊಡ್ಡವರು ಚಿಕ್ಕವರ ಮೇಲೆ ಮುನಿಸಿಕೊಂಡರೆ ಅವರನ್ನು ಸರಿದಾರಿಗೆ ತರಬೇಕು ಎನ್ನುವ ಕಕ್ಕುಲಾತಿ ಇರುತ್ತದೆ. ಚಿಕ್ಕವರು ದೊಡ್ಡವರ ಮೇಲೆ ಮುನಿಸಿಕೊಂಡರೆ ಅಲ್ಲೊಂದು ಬೇಡಿಕೆ ಇರುತ್ತದೆ. ಮುನಿಸು ಋಣಾತ್ಮಕ ಸಂವೇಗವಾದರೂ ಅದು ಒಮ್ಮೊಮ್ಮೆ ಪ್ರೀತಿಯ ಸ್ಪಂದನೆಯೂ ಆಗಿರುತ್ತದೆ. ಕೋಪದ ಹಿಂದಿನ ಭಾವವನ್ನ ಅರ್ಥಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಅವರು ಕೋಪಿಸಿಕೊಂಡಿದ್ದಾರೆ ಎನ್ನುವ ಕಾರಣಕ್ಕೆ ನಾವು ಕಾರಣವೇ ಇಲ್ಲದೆ ಅವರ ಮೇಲೆ ಕೋಪಿಸಿಕೊಂಡು
ಕೂಡುವುದು ಸರಿಯಲ್ಲ
ಕೂತರೆ ಅದು ಇಬ್ಬರಿಗೂ ನಷ್ಟ.
ಅವರಿಗಾದಡೇನು ತನಗಾದಡೇನು
ಅದರಿಂದ ಕೋಪಿಸಿಕೊಂಡವನಾಗಲಿ, ಕೋಪಕ್ಕೆ ಗುರಿಯಾದವನಿಗಾಗಲಿ ನೆಮ್ಮದಿ ಇರುವುದಿಲ್ಲ. ಇದು ಮನದ ಶೀತಲ ಸಮರವಾಗುತ್ತದೆ. ಇಬ್ಬರ ನಡುವೆ ಅಹಂನ ಗೋಡೆ ಎದ್ದು ನಿಲ್ಲು ತ್ತದೆ.
ಇಬ್ಬರು ಮನಸ್ಥಿತಿಯೂ ಹಾಳಾಗುತ್ತದೆ.
ತನುವಿನ ಕೋಪ ತನ್ನ ಹಿರಿಯತನದ ಕೇಡು
ಮನದ ಕೋಪ ತನ್ನ ಅರಿವಿನ ಕೇಡು
ಕೋಪಗೊಂಡ ಮನುಷ್ಯ ಆವೇಶ ಭರಿತನಾಗಿ ವರ್ತಿಸುತ್ತಾನೆ. ಇದರಿಂದ ಅವನ ವರ್ತನೆಯಲ್ಲಿ ಒರಟು ನಡವಳಿಕೆಗಳು ಕಂಡುಬರುತ್ತವೆ. ಒರಟು ನಡವಳಿಕೆಯಿಂದ ಅವನ ವ್ಯಕ್ತಿತ್ವಕ್ಕೆ ಕುಂದು ಬರುತ್ತದೆ.
ಕೋಪದಿಂದ ಉದ್ರಿಕ್ತವಾದ ಮನಸ್ಸು ತನ್ನ ವಿವೇಕವನ್ನು ಕಳೆದುಕೊಳ್ಳುತ್ತದೆ. ಸಿಟ್ಟಿನಲ್ಲಿ ಮನುಷ್ಯ ತಾನು ಏನು ಮಾಡುತ್ತಿರುವೆ ಎನ್ನುವುದರ ಅರಿವು ಇರದಂತೆ ವರ್ತಿಸುತ್ತಾನೆ. ಇದು ಅರಿವಿನ ಕೇಡು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆ ಬೇವುದೇ ಕೂಡಲಸಂಗಮದೇವ
ಮನೆಯಲ್ಲಿರುವ ಬೆಂಕಿಯನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ಜಾಗರೂಕರಾಗಿರದಿದ್ದರೆ ಮನೆಗೆ ಅಪಾಯ. ಅದು ಮನೆಯನ್ನೆ ಸುಡುತ್ತದೆ. ನಿಮ್ಮ ಮನೆಯ ಬೆಂಕಿಯಿಂದ ಬೇರೆಯವರ ಮನೆಗೆ ಹಾನಿಯಾಗದು. ನಿಮ್ಮ ಮನದೋಳಗಿನ ರಾಗದ್ವೇಶಗಳನ್ನು
ನಾನೆ ಸರಿಯಗಿ ನಿಭಾಯಿಸಬೇಕು.
ಅದು ನಮ್ಮ ವ್ಯಕ್ತಿತ್ವಕ್ಕೆ ಹಾನಿ ಉಂಟು ಮಾಡುತ್ತಿದೆಯೇ ಹೊರತು ಬೇರೆಯವರಿಗೆ ಹಾನಿ ಉಂಟಾಗುವುದಿಲ್ಲ.
ಕೋಪ ಮುನಿಸು ಮನುಷ್ಯ ಸಹಜ ಸಂವೇಗ. ನಿತ್ಯ ಜೀವನದಲ್ಲಿ ಅದನ್ನು ಸರಿಯಾಗಿ ನಿಭಾಯಿಸಬೇಕು. ಸಾತ್ತ್ವಿಕ ಸಿಟ್ಟು ಧನಾತ್ಮಕ ಪರಿಣಾಮ ಬೀರಿದರೆ, ಸಾತ್ತ್ವಿಕವಲ್ಲದ ಸಿಟ್ಟು ವರ್ತನೆಯ ದೋಷವಾಗಿ ಋಣಾತ್ತಕ ಬೀರುತ್ತದೆ. ಎಂದು ಬಸವಣ್ಣನವರು ಹೇಳಿದ್ದಾರೆ
-ಡಾ. ನಿರ್ಮಲ ಬಟ್ಟಲ