ಬ ಎಂಬಲ್ಲಿ ಎನ್ನ ಭವ ಹರಿಯಿತು

ಅಂತರಂಗದ ಅರಿವು ಮಾಲಿಕೆ-೪

ಬ ಎಂಬಲ್ಲಿ ಎನ್ನ ಭವ ಹರಿಯಿತು
ಸ ಎಂಬಲ್ಲಿ ಸರ್ವಜ್ಞನಾದೆನು
ವ ಎಂದು ವಚಿಸುವಡೆ ವಸ್ತು ಚೈತನ್ಯಾತ್ಮಕವಾದೆನು
ಇಂತಿ ಬಸವಾಕ್ಷರವೆನ್ನ ಮನದಲ್ಲಿ
ತೊಳಗಿ ಬೆಳಗುವುದು ಕಂಡು
ಆನು ನೀನು ಬಸವ ಬಸವಾ ಎನುತಿರ್ದೆವು ಕಾಣಾ
ಗುಹೇಶ್ವರಾ
                                         – ಅಲ್ಲಮ ಪ್ರಭುಗಳು
ಶೂನ್ಯ ಪೀಠಾಧಿಪತಿ ಅನುಭವ ಮಂಟಪದ ಅಧ್ಯಕ್ಷ ಅಲ್ಲಮ ಪ್ರಭುಗಳು. ಅನುಭವ ಮಂಟಪದ ಅನುಭಾವ ಗೋಷ್ಠಿಗಳಲ್ಲಿಯ ಶರಣರ ವಿಚಾರಗಳನ್ನು ಬಂಗಾರವನ್ನು ಒರೆಗಲ್ಲಿಗೆ ಹಚ್ಚಿ ಪ್ರಾಮಾಣಿಕರಿಸುವ ಅಕ್ಕಸಾಲಿಗನಂತೆ, ಪ್ರಮಾಣಿಕರಿಸುವವರು ಅಲ್ಲಮಪ್ರಭುಗಳು. ಅವರು ಬಸವಣ್ಣನವರ ವ್ಯಕ್ತಿತ್ವ ಮೆಚ್ಚಿ
ತನ್ನ ಇಷ್ಟದೈವವಾದ ಬಸವಣ್ಣನವರ ಕುರಿತು ಹೇಳಿರುವ ಪ್ರಮಾಣೀಕೃತ ನುಡಿಗಳು.
ಬ ಎಂಬಲ್ಲಿ ಎನ್ನ ಭವ ಹರಿಯಿತು
ಭಾವ ಹರಿಯುವುದು ಎಂದರೆ
ಲೌಕಿಕ ಬಂಧನಗಳಿಂದ ಮುಕ್ತಿ.ಇನ್ನೊಂದು ಅರ್ಥದಲ್ಲಿ
ಪುನರ್ಜನ್ಮದಿಂದ ಮುಕ್ತಿ. ಬಸವ ಎನ್ನುವ ಶಬ್ದದ ಒಂದು ಅಕ್ಷರಕ್ಕೆ ಇಷ್ಟೊಂದು ಶಕ್ತಿ ಇದೆ ಎಂದರೆ ಬಸವಣ್ಣನವರ ಆಧ್ಯಾತ್ಮಿಕ ಸಾಧನೆ ಎಂಥಹದು ಎಂದು ಅರ್ಥವಾಗುತ್ತದೆ.

ಸ ಎಂಬಲ್ಲಿ ಸರ್ವಜ್ಞನಾದೆನು
ಸರ್ವಜ್ಞ ಎಂದರೆ ಎಲ್ಲ ಬಲ್ಲವನು
ಜ್ಞಾನಿಯಾದ ಬಸವಣ್ಣನ ಹೆಸರಿನ ಒಂದಕ್ಷರ ಸ್ಮರಿಸಿದರೆ.ಅಜ್ಞಾನಿಯ ಸುಜ್ಞಾನ ಪಡೆಯುತ್ತಾನೆ.ಅಂದರೆ ಜ್ಞಾನವನ್ನು ಧಾರೆ ಎರೆಯುವ ಮಹಾಜ್ಞಾನಿ. ಜ್ಞಾನದ ಪರುಷ ಬಸವಣ್ಣನಾದ್ದಾನೆ.

ವ ಎಂದು ವಚಿಸುವಡೆ ವಸ್ತು ಚೈತನ್ಯಾತ್ಮಕವಾದೆನು
ವ ಎನ್ನುವ ಅಕ್ಷರವನ್ನು ನುಡಿದರೆ
ಇಡೀ ದೇಹವು ಚೈತನ್ಯ ಮಾಯವಾಗುತ್ತದೆ.
ಚೈತನ್ಯದ ಅರ್ಥ ‘ಪ್ರಾಣ,ಚೇತನ,ಜೀವ’ ಅಥವಾ ‘ ‘ಸಂವೇದನೆ’. ಇದು ಪರಿಶುದ್ಧ ಪ್ರಜ್ಞೆ ಅಥವಾ ಬ್ರಹ್ಮಾಂಡೀಯ ಬುದ್ಧಿಶಕ್ತಿ, ಅಂದರೆ ತನ್ನನ್ನು ತಿಳಿದುಕೊಂಡಿರುವ ಮತ್ತು ಇತರರನ್ನು ಕೂಡ ತಿಳಿದುಕೊಂಡಿರುವ ಪ್ರಜ್ಞೆ. ತನ್ನ ತಾನರಿಯುವುದರ ಜೊತೆಗೆ ಇತರರನ್ನು ಅರಿಯುವ ಗುಣವುಳ್ಳ ಬಸವಣ್ಣನವರದು ಅಂತಃಕರಣವುಳ್ಳ ವ್ಯಕ್ತಿತ್ವ.

ಇಂತಿ ಬಸವಾಕ್ಷರವೆನ್ನ ಮನದಲ್ಲಿ
ತೊಳಗಿ ಬೆಳಗುವುದು ಕಂಡು
ಇಂಥಹ ಬಸವ ಎನ್ನುವ ಅಕ್ಷರಗಳು
ನನ್ನ ಒಳಗನ್ನು ಪ್ರಕಾಶಿಸಿದವು ಎಂದು ಹೇಳುತ್ತಾರೆ.

ಆನು ನೀನು ಬಸವ ಬಸವಾ ಎನುತಿರ್ದೆವು ಕಾಣಾ
ಗುಹೇಶ್ವರಾ

ಅಲ್ಲಮರ ಆರಾಧ್ಯದೈವ ಗುಹೇಶ್ವರ ಮತ್ತು ಅಲ್ಲಮರು ಬಸವಾ ಬಸವಾ ಎಂದು ಬಸವ ನಾಮಸ್ಮರಣೆಯನ್ನ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ ಅಂದರೆ ಬಸವಣ್ಣನವರು ಅಲ್ಲಮರು ಮೇಲೆ ಬೀರಿದ ಪ್ರಭಾವ ಎಂಥದು ಎಂಬುದು ತಿಳಿಯುತ್ತದೆ.

ಡಾ. ನಿರ್ಮಲ ಬಟ್ಟಲ

Don`t copy text!