“ವೈಚಾರಿಕ ಅರಿವು ಬಸವಾ”
ಬಸವನೆಂದರೆ ಪಾಪ ದೆಸೆಗೆಟ್ಟು ಓಡುವದು
ಬಸವ ನಾಮವು ಭುವಿಯಲಿ ಮೆರೆಯುವದು
ಬಸವ ನಾಮಕೆ ಬೆದರಿ ಬಡತನವು ಓಡುವದು
ಜಗದಲ್ಲಿ ಬಸವಾ ನಿನ್ನ ಹೆಸರು ಬೆಳಗುವದು ||
ಮನದ ಭಿತ್ತಿಯಲಿ ಬಸವನ ಹೆಸರಿಹುದು
ಚಿತ್ತದಲಿ ಚೈತನ್ಯ ಚರಿಸದೆ ನಿಲ್ಲುವದು
ಸಾತ್ವಕ ಚಿತ್ಕಳೆ ಲಿಂಗದಲಿ ಕಾಣುವದು
ಜಗದಲ್ಲಿ ಬಸವಾ ನಿನ್ನ ಹೆಸರು ಬೆಳಗುವದು ||
ಅಜ್ಞಾನ ಕಳೆದು ಸುಜ್ಞಾನ ನೀಡುವದು
ಸನ್ನಡತೆ ಸನ್ಮಾರ್ಗ ನಿಜದಿ ತೋರುವದು
ಸಜ್ಜನರ ಸಂಗದಿ ಸವಿಜೇನ ನೀಡುವದು
ಜಗದಲ್ಲಿ ಬಸವಾ ನಿನ್ನ ಹೆಸರು ಬೆಳಗುವದು ||
ಸಮತೆ ಸ್ವಾತಂತ್ರ್ಯವನು ಜಗವೆಲ್ಲ ಹಾಡುವದು
ಅರಿವಿನ ಅಭಿವ್ಯಕ್ತಿ ಅನುಭಾವ ನೀಡುವದು
ಕಾಯಕ ದಾಸೋಹ ಮಂತ್ರ ಜಪಿಸುವದು
ಜಗದಲ್ಲಿ ಬಸವಾ ನಿನ್ನ ಹೆಸರು ಬೆಳಗುವದು ||
ಸತ್ಯ ಶರಣರ ಸಂಗ ನಿತ್ಯದಲಿ ಸ್ಮರಿಸುವದು
ಸಂತೃಪ್ತಿ ಸದ್ಭಾವ ಮನದಿ ಮೂಡುವದು
ವೈಚಾರಿಕತೆ ತುಂಬಿ ಅರಿವು ನೀಡುವದು
ಜಗದಲ್ಲಿ ಬಸವಾ ನಿನ್ನ ಹೆಸರು ಬೆಳಗುವದು ||
–ಸವಿತಾ ಮಾಟೂರ ಇಲಕಲ್ಲ