ವಿಶ್ವ ಗುರು

ಜನಿವಾರ ಹರಿದೊಗೆದು
ಗುರು ಸಂಗನನು ಅರಸಿ
ಸಂಗಮದ ಭವ್ಯ ದಂಡೆಯಲಿ ನಿಂತೆ;
ಅರಿವಿನ ಕುರುಹು
ಇಷ್ಟಲಿಂಗದಿ ತೊಳಗೆ
ಕರಸ್ಥಲದಲೆ ಮೈಮರೆತು ಬಿಟ್ಟೆ..

ಜಾತಿಭೇದವ ತೊಡೆವ
ಶಪಥ ಮನದಲಿ ಹೊಂದಿ
ನಡೆದು ಬಂದೆ ಕಲ್ಯಾಣದೆಡೆಗೆ;
ಇಹದ ವ್ಯಾಪಾರದಲೂ
ಆತ್ಮಲಿಂಗದ ಜ್ಯೋತಿ
ಬೆಳಗಿಸಿದೆ ಜನ-ಮನದ ಗುಡಿಗೆ..

ಭವದೊಳಿದ್ದು ಭವಿಯಲ್ಲ ನೀನು
ಭವನದೊಳಿದ್ದು ಸದುವಿನಯದವನು
ಕಾಯಕದಿ ಕೈಲಾಸ ಕಂಡುಂಡವನು
ಪ್ರಭುವಿನಾಣತಿ ಮಹಾಪ್ರಸಾದವೆಂದವನು
ಅಕ್ಕನ ಚರಣಕೆ ನಮೋಎಂದವನು
ಶರಣನ ಚಮ್ಮಾವುಗೆಯ ಶಿರದಿ ಹೊತ್ತವನು..

ಅಣ್ಣ ನೀ ಶರಣರಿಗೆ ಗುರುವು ನೀ ವಿಶ್ವಕ್ಕೆ
ಕೈದೀವಿಗೆಯು ನೀನು ದಾರಿ ತಪ್ಪಿದವಂಗೆ
ಅಕ್ಷಯ್ಯತೃತೀಯ ಜನ್ಮದಿನ ನಿನಗೆ
ಅಕ್ಷಯದ ನಿಧಿ ನಿನ್ನ ವಚನಗಳ ಬುಗ್ಗೆ
ಹನಿ ಹನಿಯು ಜೀವಾಳ ಮನುಕುಲದ ಏಳ್ಗೆಗೆ..!!!

ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ 🙏

Don`t copy text!