ವ್ಯಕ್ತಿಯೂ ಅಲ್ಲ, ಶಕ್ತಿಯೂ ಅಲ್ಲ, ದಿವ್ಯಜ್ಯೋತಿ ವಿಶ್ವಗುರು ಅಣ್ಣ ಬಸವಣ್ಣ

ವ್ಯಕ್ತಿಯೂ ಅಲ್ಲ, ಶಕ್ತಿಯೂ ಅಲ್ಲ, ದಿವ್ಯಜ್ಯೋತಿ ವಿಶ್ವಗುರು ಅಣ್ಣ ಬಸವಣ್ಣ

ಹನ್ನೆರಡನೆಯ ಶತಮಾನದ ಅಣ್ಣ ಬಸವಣ್ಣನವರು ಮಾಡಿದ ಕ್ರಾಂತಿ, ಬೋಧಿಸಿದ ತತ್ವಗಳು ಸರ್ವಕಾಲಿಕ ಸತ್ಯ ಹಾಗೂ ಪ್ರಸ್ತುತವಾದವಾಗಳು ಎನ್ನಬೇಕು. ಸಮಸಮಾಜದ ಪರಿಕಲ್ಪನೆಯನ್ನಿಟ್ಟುಕೊಂಡು ವಿಶ್ವದ ಮೂಲೆಮೂಲೆಯ ಶರಣರನ್ನು ಬರಮಾಡಿಕೊಂಡು ಕಾಯಕ, ದಾಸೋಹ ಮಹತ್ವಗಳನ್ನು ಎತ್ತಿಹಿಡಿದು ನವಕ್ರಾಂತಿಯನ್ನೆ ಮಾಡಿದರು. ಅಂತಹ ಅಣ್ಣಬಸವಣ್ಣನವರ ೮೯೦ ನೇ ಬಸವ ಜಯಂತಿಯನ್ನು ನಾವಿಂದು ಆಚರಿಸುತ್ತಿದ್ದೆವೆ.

ಜಗತ್ತಿನ ಯಾವ ತತ್ವಜ್ಞಾನಿಯೂ , ಹೇಳಲಾರದಂತ ಮಾತನ್ನು ಬಸವಣ್ಣನವರು ಇಂದಿಗೆ ಒಂಬತ್ತು ನೂರು ವರುಷಗಳ ಹಿಂದೆನೇ ಹೇಳಿದ್ದರು ಎಂಬುದನ್ನು ನೋಡಲಾಗಿ ಅಣ್ಣ ಬಸವಣ್ಣನವರು ಲೋಕವೇ ಮೆಚ್ಚುವಂತ , ಲೋಕಕ್ಕೆ ಅನ್ವಯಿಸುವ ತತ್ವಗಳನ್ನು ಹೇಳುವುದರೊಂದಿಗೆ ನಡೆ-ನುಡಿಯಲ್ಲಿ ಅನುಷ್ಠಾನಕ್ಕೆ ತಂದು ವಿಶ್ವಕ್ಕೆ ಗುರುವೆನಿಸುವ ವ್ಯಕ್ತಿತ್ವ ಹೊಂದಿ ವಿಶ್ವಗುರು ,ಜಗಜ್ಯೋತಿ ಬಸವಣ್ಣ ಅನಿಸಿಕೊಂಡರು.

ಹನ್ನೆರಡನೆ ಶತಮಾನದಲ್ಲಿದ್ದ ಜಾತಿ,ವರ್ಣ, ವರ್ಗ ವ್ಯವಸ್ಥೆಯನ್ನು ತೊಡೆದುಹಾಕಿ ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿದರು. ದಲಿತರು, ಶೋಷಿತರು, ಉಪೇಕ್ಷಿತರನ್ನು ಸಮಾಜ್ಯೋಧಾರ್ಮಿಕವಾಗಿ ಮುನ್ನಲೆಗೆ ತಂದರು. ಅನೇಕ ಶಿವಶರಣರೊಡಗೂಡಿ ಮಾನವ ಕಲ್ಯಾಣ, ಲೋಕಕಲ್ಯಾಣ, ಸಮಾಜಕಲ್ಯಾಣ ಮಾಡುವ ಮೂಲಕ ಹೊಸತನ್ನು ಬಿತ್ತಿದರು. ಬಸವಣ್ಣನವರ ವಿಚಾರಧಾರೆಯ ಪ್ರಭೆಯಲ್ಲಿ ಅನೇಕ ಶರಣ- ಶರಣೆಯರು ಕಿರಣಗಳಂತೆ ಕಂಗೊಳಿಸಿದರು.

ವಿಜಯಪೂರ ಜಿಲ್ಲೆಯ ಇಂಗಳೇಶ್ವರದಲ್ಲಿ ಶರಣದಂಪತಿಗಳಾದ ಮಾದರಸ ಮಾದಲಾಂಬಿಕೆಯರ ಮಗನಾಗಿ ಜನಿಸಿದರು. ಅಣ್ಣನವರು ತಮ್ಮ ಎಂಟನೇಯ ವಯಸ್ಸಿನಲ್ಲಿ ಸಮಾನತೆಯ ಕಿಡಿಯನ್ನು ಹೊತ್ತಿಸಿದವರು. ಉಪನಯನ ಎಂಬ ಧಾರ್ಮಿಕ ಸಂಸ್ಕಾರವನ್ನು ತನಗಿಂತ ದೊಡ್ಡವಳಾದ ಅಕ್ಕನಿಗೆ ( ಅಕ್ಕನಾಗಮ್ಮ) ಕೊಡಿ ಎನ್ನುವ ಮೂಲಕ ಲಿಂಗತಾರತಮ್ಯತೆಯನ್ನು ಪ್ರಶ್ನಿಸುವ ಮೂಲಕ, ಅಕ್ಕನಿಗಿಲ್ಲದ ಸಂಸ್ಕಾರ ತನಗೂ ಬೇಡವೆಂದು ತಿರಸ್ಕರಿಸಿ ಹೊರಟುನಿಂತವರು.

ಸಮಾನತೆ, ಸಮಸಮಾಜ ಅವರ ಧ್ಯೇಯವಾಗಿತ್ತು. ಅದರ ಸಾಕಾರಕ್ಕಾಗಿ ಕೂಡಲಸಂಗಮದತ್ತ ನಡೆದು ಶಿಕ್ಷಣ ಪಡೆದು, ಸಂಗಮನಾಥನ ಆಶಯದಂತೆ ಮಂಗಳವೇಡದತ್ತ ಪಯಣಿಸಿ ನೀಲಗಂಗಾಳನ್ನು ವಿವಾಹವಾಗಿ, ಬಿಜ್ಜಳನ ಆಸ್ಥಾನದಲ್ಲಿ ಕರಣಿಕನಾಗಿ, ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದರು. ಮುಂದೆ ಕಲ್ಯಾಣಕ್ಕೆ ತೆರಳಿ ಅನುಭವಮಂಟಪವನ್ನು ಸ್ಥಾಪಿಸಿ ಜಗತ್ತಿನ ಮೊಟ್ಟಮೊದಲ ಸಂಸತ್ ಭವನ ದ ಪರಿಕಲ್ಪನೆ ಕೊಟ್ಟರು. ಈ ಅನುಭವಮಂಟಪದಲ್ಲಿ ಅಕ್ಷರ ಕ್ರಾಂತಿಯೇ ನಡೆಯಿತೆನ್ನಲಾಗುತ್ತಿದೆ. ಸುಮಾರು ೩೬ ಕ್ಕೂ ಹೆಚ್ಚು ಮಹಿಳೆಯರು ಅಕ್ಷರ ಕಲಿತು ವಚನಸಾಹಿತ್ಯವನ್ನು ರಚಿಸಿದರು. ಒಂದೇ ಸ್ಥಳದಲ್ಲಿ ಇಷ್ಟೊಂದ ಜನ ಮಹಿಳೆಯರು ಏಕಕಾಲಕ್ಕೆ ಸಾಹಿತ್ಯ ರಚನೆ ಮಾಡಿದ ಇತಿಹಾಸ ಬೇರೆಲ್ಲೂ ಇಲ್ಲ. ಇವರು ಬರಿ ಸಾಹಿತ್ಯ ರಚಿಸಿದವರಲ್ಲ, ವೈಚಾರಿಕ ಜ್ಞಾನದ ಖಣಿಗಳಾದರು. ಈ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ.

ಬಸವಣ್ಣನವರು ಒಬ್ಬ ವ್ಯಕ್ತಿಯಲ್ಲ, ಶಕ್ತಿಯೂ ಅಲ್ಲ , ಅವರೊಂದು ದಿವ್ಯ ಜ್ಯೋತಿ. ಅವರ ವ್ಯಕ್ತಿತ್ವ ನೋಡಲಾಗಿ ಅವರೊಬ್ಬ ಸಾಧಕ, ಶ್ರೇಷ್ಠ ಆಡಳಿತಗಾರ,ಸಂಸಾರಿ, ಸಂಘಟಕ , ಸಮಾಜ ಸುಧಾರಕ, ಚಿಂತಕ, ಕ್ರಾಂತಿಕಾರಿ , ಆಧುನಿಕ ಸಮಾಜ ನಿರ್ಮಾಪಕ, ಮಹಾಜ್ಞಾನಿ, ದಾರ್ಶನಿಕ, ಅನುಭಾವಿ, ಹೊಸ ಧರ್ಮಸ್ಥಾಪಕ ಹೀಗೆ ಅನೇಕ ದೃಷ್ಟಿಯಲ್ಲಿ ಕಂಡುಬರುವುದರಿಂದ ಅವರನ್ನು ವ್ಯಕ್ತಿ ಅಥವಾ ಶಕ್ತಿ ಎನ್ನಲಾದಿತೇ? ಅವರೊಬ್ಬ ದಿವ್ಯಜ್ಯೋತಿ.

ಬಸವಣ್ಣನವರು ವಚನಗಳನ್ನು ನೋಡಲಾಗಿ ಅವರ ಒಂದು ವಚನ ಸಾಕು ಜೀವನ ಸಾರ್ಥಕತೆಗೆ ಎನಿಸುವುದು.
” ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನೊಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ , ಇದಿರು ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ”

ಈ ವಚನದಲ್ಲಿ ಆದರ್ಶ ಜೀವನದ ಸಪ್ತ ಸೂತ್ರಗಳು ಇವೆ. ಎಂಟು ಶಾಸ್ತ್ರಗಳನ್ನು ಹೇಳುವುದರೊಂದಿಗೆ ವಿಶ್ವ ಮಾನವ ಕಲ್ಯಾಣ ತತ್ವವನ್ನು ಹೇಳಿರುವುದನ್ನು ಕಂಡುಕೊಳ್ಳುತ್ತೇವೆ. ಅವರ ಒಂದೊಂದು ವಚನ ಅಷ್ಟೇ ಅಲ್ಲ ವಚನದ ಒಂದೊಂದು ಸಾಲು ಕೂಡ ಮೌಲಿಕ ಸಂದೇಶ ಸಾರುತ್ತವೆ. ‘ಅಯ್ಯಾ ಅಂದರೆ ಸ್ವರ್ಗ, ಎಲವೋ ಎಂದರೆ ನರಕ’ , ‘ ದಯವೇ ಧರ್ಮದ ಮೂಲವಯ್ಯ’, ‘ ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ’ , ” ದೇಹವೇ ದೇಗುಲ’ ಹೀಗೆ ಸಾವಿರಾರು ಸಾಲುಗಳು ಸಾರ್ಥಕತೆ ಮೆರೆದಿವೆ.

” ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ ” ಎನ್ನುವ ಮೂಲಕ ಜಾತಿಯ ಗೋಡೆಗಳನ್ನು ಕಟ್ಟುವುದನ್ನು ತಡೆದರು. ” ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ” ಎನ್ನುವಲ್ಲಿ ನಡೆನುಡಿ ಒಂದೇ ಆಗಿರಬೇಕೆಂದರು. ಹೀಗೆ ಅನೇಕ ಉದಾಹರಣೆಗಳನ್ನು ನೋಡಬಹುದು. ಇಂತಹ ವಿಶ್ವಮಾನ್ಯ ತತ್ವವುಳ್ಳ ವಚನ ಸಾಹಿತ್ಯವನ್ನು ಪ್ರಕಟಿಸಲು ಕ್ರಿಶ್ಚಿಯನ್ ಮಷಿನರಿ ಮುಂದೆ ಬರಲಿಲ್ಲ.

ಬಸವಣ್ಣನವರ ಘನ ವ್ಯಕ್ತಿತ್ವವನ್ನು ನಮ್ಮ ರಾಷ್ಟ್ರಕವಿ ಕುವೆಂಪು ಅವರು ” ಕಾರ್ತಿಕ ಕತ್ತಲೆಯಲ್ಲಿ ಆಕಾಶದೀಪವಾಗಿ ಮೂಡಿಬಂದೆ ಎಂದಿದ್ದಾರೆ. ಬಸವಣ್ಣನವರನ್ನು ನಮ್ಮವರು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರಿಂದ ವಿಶ್ವಕ್ಕೆ ತಡವಾಗಿ ಪರಿಚಿತರಾದರು. ನಮ್ಮವರೇ ಆದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಕೂಡ ಬಸವಣ್ಣ ತಮಗೆ ತಡವಾಗಿ ಪರಿಚಿತರಾದರು ಎಂದು ಬೇಸರಿಸಿಕೊಂಡಿದ್ದಾರೆ. ಈಗೀನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಸವಣ್ಣನವರ ಅಗಾಧ ಪ್ರತಿಭೆಯನ್ನು ಮೆಚ್ಚಿ ಬಣ್ಣಿಸಿದ್ದಾರೆ.

ಇಂತಹ ಮೇರುವ್ಯಕ್ತಿತ್ವದ ಬಸವಣ್ಣನವರನ್ನು ಹಿಂದೆಲ್ಲ ಮಣ್ಣೆತ್ತಿನ ಪೂಜೆ ಮಾಡುತ್ತ, ಎತ್ತುಗಳ ಮೆರವಣಿಗೆ ಮಾಡುತ್ತ ಬಸವ ಜಯಂತಿ ಆಚರಿಸುತ್ತಿದ್ದರು. ಇದನ್ನು ತೊಡೆದು ಹಾಕಲು ವಚನ ಪಿತಾಮಹ ಹರ್ಡೇಕರವಮಂಜಪ್ಪನವರು ,ಮೃತ್ಯುಂಜಯ ಸ್ವಾಮಿಗಳು ಕೂಡಿಕೊಂಡು ೧೯೧೩ ರಲ್ಲಿ ದಾವಣಗೇರಿಯಲ್ಲಿ ಪ್ರಥಮ ಬಾರಿಗೆ ಬಸವಣ್ಣನವರ ತತ್ವ ಚಿಂತನೆ ನಡೆಸುವ ಮೂಲಕ ಬಸವ ಜಯಂತಿಯನ್ನು ಆಚರಿಸಿದರು. ಇದೀಗ ೮೯೦ ನೇ ಬಸವಜಯಂತಿಯನ್ನು ಆಚರಿಸುತ್ತಿದ್ದು ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು💐💐

ಲೇಖಕಿ: ರೋಹಿಣಿ ಯಾದವಾಡ
ಅಥಣಿ

Don`t copy text!