ಎನ್ನ ಹಣೆಯ ಲಿಖಿತ ತೊಡೆಯಿತ್ತಿಂದು..

ಎನ್ನ ಹಣೆಯ ಲಿಖಿತ ತೊಡೆಯಿತ್ತಿಂದು..

ಅಯ್ಯಾ ನಿಮ್ಮ ಸಜ್ಜನ ಸದಾಚಾರ
ಕಂಡೆನಾಗಿ ಎನ್ನ ಕಂಗಳ ಪಟಲ
ಹರಿಯಿತ್ತಿಂದು
ಅಯ್ಯಾ ನಿಮ್ಮ ಸಜ್ಜನ ಸದ್ಭಾವರ
ಶ್ರೀ ಚರಣಕ್ಕೆಎರಗಿದೆನಾಗಿ
ಎನ್ನ ಹಣೆಯ ಲಿಖಿತ ತೊಡೆಯಿತ್ತಿಂದು
ಚೆನ್ನಮಲ್ಲಿಕಾರ್ಜುನಯ್ಯ,ನಿಮ್ಮ ಶರಣ ಸಂಗನ ಬಸವಣ್ಣನ ಪಾದವ
ಕಂಡು ಮಿಗೆಮಿಗೆ ನಮೊ ಎನುತಿದೆ೯ನು
                                              – ಅಕ್ಕಮಹಾದೇವಿ

ಈ ವಚನದಲ್ಲಿ ಅಕ್ಕಮಹಾದೇವಿಯು ಒಳ್ಳೆಯವರ ಸಂಘ ಮಾಡುವುದರಿಂದ ಆಗುವ ಲಾಭಗಳ ಕುರಿತು ತುಂಬಾ ಮಾರ್ಮಿಕವಾಗಿ ಹೇಳಿದ್ದಾಳೆ.

ಅಯ್ಯಾ ನಿಮ್ಮ ಸಜ್ಜನ ಸದಾಚಾರ
ಕಂಡೆನಾಗಿ ಎನ್ನ ಕಂಗಳ ಪಟಲ
ಹರಿಯಿತ್ತಿಂದು
ಒಳ್ಳೆಯ ಜನರ ಆಚಾರ ವಿಚಾರಗಳಿಂದ ಆಗುವ ಪ್ರಭಾವದಿಂದ ನಮ್ಮ ಕಣ್ಣಿಗೆ ಬಂದಂತಹ ತಪ್ಪು ಕಲ್ಪನೆಯ ಪೊರೆಗಳು ಹರಿದು ದೃಷ್ಟಿ ನಿಚ್ಚಳವಾಗುತ್ತದೆ ದೃಷ್ಟಿ ನಿಚ್ಚಳವಾದಾಗ ಲೋಕವನ್ನು ನೋಡುವ ಅರ್ಥ ಮಾಡಿಕೊಳ್ಳುವ ಬಗ್ಗೆ ವಿಭಿನ್ನವಾಗುತ್ತದೆ ಇಂತಹ ಒಂದು ಅಂತ ಶಕ್ತಿ ಮನುಷ್ಯನಲ್ಲಿ ಬರಬೇಕಾದರೆ ನಾವು ಒಳ್ಳೆಯವರ ಸಂಘ ಮಾಡುವುದರ ಜೊತೆಗೆ ಅವರ ಸದಾಚಾರಗಳನ್ನು ರೂಡಿಸಿಕೊಳ್ಳಬೇಕು ಅಥವಾ ಅವರ ಸದಾಚಾರಗಳ ಪ್ರಭಾವ ನಮ್ಮ ದೃಷ್ಟಿಕೋನಗಳನ್ನ ಬದಲಿಸುತ್ತದೆ ಎನ್ನುವುದು ಮೇಲಿನ ವಾಕ್ಯದ ಅರ್ಥ

ಅಯ್ಯಾ ನಿಮ್ಮ ಸಜ್ಜನ ಸದ್ಭಾವರ
ಶ್ರೀ ಚರಣಕ್ಕೆಎರಗಿದೆನಾಗಿ
ಎನ್ನ ಹಣೆಯ ಲಿಖಿತ ತೊಡೆಯಿತ್ತಿಂದು
ಸಾಮಾನ್ಯವಾಗಿ ಬ್ರಹ್ಮ ಲಿಖಿತವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎನ್ನುವ ಕಲ್ಪನೆಯನ್ನು ಅಥವಾ ನಂಬಿಕೆಯನ್ನು ಅಕ್ಕ ಈ ಮೇಲಿನ ವಾಕ್ಯದಲ್ಲಿ ತೊಡೆದು ಹಾಕುತ್ತಾಳೆ. ಒಂದು ವೇಳೆ ನಾವು ಸಜ್ಜನರ ಸಹವಾಸ ಮಾಡಿದುದರಿಂದ, ಸಜ್ಜನರ ಸದ್ಗುಣಗಳಿಗೆ ಶರಣಾಗುವುದರಿಂದ, ನಮ್ಮ ವಿಧಿ ಲಿಖಿತ ಬದಲಾಗುತ್ತದೆ. ಒಂದು ವೇಳೆ ನಾವು ಶರಣಾಗುವುದರೆ, ತಲೆಬಾಗುವುದಿದ್ದರೆ ಒಳ್ಳೆಯವರ ವಿಚಾರಗಳಿಗೆ ಸಿದ್ಧಾಂತಗಳಿಗೆ ತಲೆಬಾಗಬೇಕು. ಆವಾಗ ನಮ್ಮ ಹಣೆಬರಹವೇ ಬದಲಾಗುತ್ತದೆ. ಮೂಲಭೂತವಾಗಿ ಬದಲಾಯಿಸಲಾಗದ ಹಣೆಬರಹವನ್ನು ಅಕ್ಕ ಸಜ್ಜನರ ಸಹವಾಸದಿಂದ ಬದಲಾಯಿಸಲು ಸಾಧ್ಯ ಸಜ್ಜನರ ಸಹವಾಸಕ್ಕೆ ಸಜ್ಜನರ ಪಾದ ಸ್ಪರ್ಶಕ್ಕೆ ಅಂತಹ ಒಂದು ಶಕ್ತಿ ಇದೆ ಎನ್ನುವ ಸವಾಲನ್ನು ಎಸೆಯುತ್ತಾಳೆ.

ಚೆನ್ನಮಲ್ಲಿಕಾರ್ಜುನಯ್ಯ,ನಿಮ್ಮ ಶರಣ ಸಂಗನ ಬಸವಣ್ಣನ ಪಾದವ
ಕಂಡು ಮಿಗೆಮಿಗೆ ನಮೋ ಎನುತಿದೆ೯ನು
ಅಕ್ಕ ತಾನು ಒಡನಾಡಿದ ಸಜ್ಜನರ ಸಂಘದಲ್ಲಿ ಶರಣ ಬಸವಣ್ಣನನ್ನು ಕಂಡು ತನ್ನಲ್ಲಿ ಏನೋ ಒಂದು ಆನಂದ ಉಂಟಾಗುತ್ತದೆ ಹಾಗಾಗಿ ತಾನು ಹೆಚ್ಚು ಹೆಚ್ಚು ಬಾರಿ ಬಸವಣ್ಣನಿಗೆ ನಮೋ ನಮೋ ಎಂದು ಶರಣು ಹೇಳುತ್ತಿದ್ದೇನೆ ಎನ್ನುತ್ತಾಳೆ.
ಬ್ರಹ್ಮ ಲಿಖಿತವನ್ನು ಬದಲಾಯಿಸುವ, ವ್ಯಕ್ತಿಯ ದೃಷ್ಟಿಕೋನವನ್ನು ಬದಲಾಯಿಸುವ ಸಜ್ಜನ ಯಾರು ಎಂದರೆ ಬಸವಣ್ಣನವರು. ಬಸವಣ್ಣನವರಿಗೆ ಅಂಥ ಒಂದು ಅಂತ ಶಕ್ತಿ ಇದೆ ಸಾಮಾಜಿಕ ವ್ಯವಸ್ಥೆಯನ್ನ ಬದಲಾಯಿಸಿ. ಸಾಮಾಜಿಕ ಮೇಲೂ ಕೀಳುಗಳನ್ನ ತೊಡೆದುಹಾಕಿ ಎಲ್ಲರೂ ಸಮಾನರು ಎನ್ನು ಸಿದ್ದಾಂತವನ್ನು ಸಮಾಜದಲ್ಲಿ ರೂಪಿಸಿದ್ದರಿಂದ ದೀನದಲಿತರ ಬ್ರಹ್ಮ ಲಿಖಿತವನ್ನು ಬದಲಾಯಿಸಿದರು ಮಾನಸಿಕ ಸ್ಥಿತಿಗತಿಗಳಿಗೆ ಸತ್ಯವನ್ನ ಅರಿವಿ ಜ್ಞಾನವನ್ನು ನೀಡಿ ಸಮಾಜದ ದೃಷ್ಟಿಕೋನವನ್ನು ಬದಲಾಯಿಸಿದರು ಎನ್ನುವಂತಹ ಅದ್ಭುತವಾದಂತಹ ವಿಚಾರವನ್ನು ಬಸವಣ್ಣನವರ ಕುರಿತಾಗಿ ಅಕ್ಕ ಈ ವಚನದಲ್ಲಿ ಹೇಳುತ್ತಾಳೆ.

ಡಾ. ನಿರ್ಮಲಾ ಬಟ್ಟಲ

 

Don`t copy text!