ಜಂಗಮಕ್ಕೆ ಒಲಿದ ನುಲಿಯ ಚೆಂದಯ್ಯ
ಶಿವಶರಣರಲ್ಲಿ ನಾನಾ ವಿಚಾರಧಾರೆಯವರಿದ್ದರೆಂಬುದಕ್ಕೆ ಜಂಗಮರಾದ ನುಲಿಯ ಚೆಂದಯ್ಯನವರೇ ಉತ್ತಮ ನಿದರ್ಶನವಾಗಿದ್ದಾರೆ. ಗುರುವನ್ನು ನಂಬಿದರೆ ಲಿಂಗದ ಹಂಗು, ಲಿಂಗವನ್ನು ನಂಬಿದರೆ ಗುರುವಿನ ಹಂಗು, ಜಂಗಮವ ನಂಬಿದರೆ ಯಾರ ಹಂಗೂ ಇಲ್ಲವೆಂಬುದು ನುಲಿಯ ಚೆಂದಯ್ಯನವರ ಜೀವನ ಸಿದ್ಧಾಂತ. ಹೇಗೆಂದರೆ ಗುರುವಿಗೂ ಜಂಗಮ ಪಾದೋದಕ ಬೇಕು, ಲಿಂಗಕ್ಕೂ ಜಂಗಮ ಪಾದೋದಕ ಬೇಕು. ಅದಕ್ಕಾಗಿ ಜಂಗಮವನ್ನೇ ಆಶ್ರಯಿಸುವುದು ವಿಹಿತವಲ್ಲವೇ ? ಎಂಬುದು ಅವರ ತರ್ಕ.
ನುಲಿಯ ಚೆಂದಯ್ಯನವರ ಊರು ಬಿಜಾಪುರ ಸಮೀಪದ ಶಿವಣಗಿಯಾಗಿರಬೇಕೆಂದು ನಂಬಲಾಗಿದೆ. ಅಲ್ಲಿಂದ ಕಲ್ಯಾಣಕ್ಕೆ ಬಂದು ಹುಲ್ಲಿನಿಂದ ಹಗ್ಗ ಅಥವಾ ಕಣ್ಣಿ ಮಾಡುವ ಕಾಯಕ ಕೈಕೊಂಡು ಹಗ್ಗವನ್ನು ಮಾರಿಬಂದ ಹಣದಲ್ಲಿ ಜಂಗಮ ದಾಸೋಹ ಮಾಡುವ ಸುಖಾನುಭವದಲ್ಲಿ ಚೆಂದಯ್ಯ ನಿರತರಾಗಿದ್ದರು. ಅವರ ಅನೇಕ ವಚನಗಳಲ್ಲಿ ” ಚೆನ್ನಬಸವಣ್ಣ ಪ್ರಿಯ ಚಂದೇಶ್ವರ ಲಿಂಗ ” ಎಂಬ ಅಂಕಿತ ಬರುವುದರಿಂದ ಷಟಸ್ಥಲ ಜ್ಞಾನಿ ಚೆನ್ನಬಸವಣ್ಣನವರಲ್ಲಿಯೇ ತಮ್ಮ ಮಾನಸಗುರುವನ್ನು ಗುರುತಿಸಿಕೊಂಡಿರಬೇಕು ಎನಿಸುತ್ತದೆ.
ನುಲಿಯ ಚೆಂದಯ್ಯನವರು ಕ್ರಿ. ಶ 1140 ರ ಸುಮಾರಿನಲ್ಲಿ ಹುಟ್ಟಿ ಕಲ್ಯಾಣದಲ್ಲಿ ಕಾಯಕಜೀವಿಗಳಾಗಿ ಕ್ರಿ. ಶ. 1190 ರವರೆಗೆ ಬಾಳಿದರು. ವಚನಗಳ ಸಂರಕ್ಷಣಾರ್ಥ ಅವರು ಶರಣರ ಸೇನೆಯಲ್ಲಿ ಕಾದಾಡುತ್ತ ಹೋದರು, ಉಳುವೆ ಮುಟ್ಟುವವರೆಗೆ ಚೆನ್ನಬಸವಣ್ಣನವರ ಬೆಂಗಾವಲಾಗಿ ಇದ್ದರು. ಚೆನ್ನಬಸವಣ್ಣನವರ ಐಕ್ಯದ ನಂತರ ಮಹಾತಾಯಿ ಅಕ್ಕನಾಗಮ್ಮನವರ ಜೊತೆಗೂಡಿದರು. ಅಕ್ಕನಾಗಮ್ಮನವರು ಆಗ ವಚನಕಟ್ಟುಗಳನ್ನು ವೀರಶೈವ ಮಠಗಳಲ್ಲಿ ಅಡಗಿಸಿಡುವ ಮಹಾನ್ ಕಾರ್ಯದಲ್ಲಿ ತೊಡಗಿದ್ದರು. ಅವರ ಜೊತೆ ಶಿವಮೊಗ್ಗ , ಚಿಕ್ಕಮಗಳೂರು ಮೊದಲಾದ ಕಡೆಗೆಲ್ಲ ಸಂಚರಿಸಿದ ನುಲಿಯ ಚೆಂದಯ್ಯನವರು ಎಣ್ಣಿ ಹೊಳೆ ಸಮೀಪ ಅಕ್ಕನಾಗಮ್ಮನವರು ಐಕ್ಯರಾದ ನಂತರವೂ ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಹಾಸನ ಜಿಲ್ಲೆಯ ಸಕಲೇಶಪುರಕ್ಕೆ ನಂತರ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಪದ್ಮಾವತಿ ಎಂಬ ಊರಿಗೆ ತೆರಳುತ್ತಾರೆ. ಆ ಭಾಗವನ್ನು ಆಳುತ್ತಿದ್ದ ದುಮ್ಮಿರಾಯ ಮತ್ತು ಪದ್ಮಾವತಿ ಎಂಬ ಪಾಳೆಗಾರರು ನುಲಿಯ ಚೆಂದಯ್ಯನವರ ಶಿಷ್ಯರಾಗುತ್ತಾರೆ. ಪದ್ಮಾವತಿ ರಾಣಿಯ ಹೆಸರಿನಲ್ಲಿಯೇ ಪದ್ಮಾವತಿ ಗ್ರಾಮ ನಿರ್ಮಾಣವಾಗಿತ್ತು. ಅಲ್ಲಿ ನುಲಿಯ ಚೆಂದಯ್ಯನವರು ಬಹಳ ದಿವಸ ನೆಲೆಸಿದ್ದುದರಿಂದ ನುಲಿಯಯ್ಯನೂರು ಎಂಬ ಅಭಿದಾನ ಪಡೆದು ಅದು ಈಗ ನುಲೇನೂರು ಆಗಿದೆ.
ದೊಡ್ಡ ಬಳ್ಳಾಪುರ ತಾಲೂಕಿನ ಹಿರೇನಂದಿಗೂ , ತರಿಕೆರೆ ತಾಲೂಕಿನ ನಂದಿ ಗ್ರಾಮಕ್ಕೂ, ಹೊಳಲ್ಕೆರೆ ತಾಲೂಕಿನ ಮುರುಕುನಂದಿ ಗ್ರಾಮಕ್ಕೂ ನುಲಿಯ ಚೆಂದಯ್ಯನವರ ಸಂಬಂಧ ಕಲ್ಪಿಸಲಾಗುತ್ತಿದೆ.
ಚೆಂದಯ್ಯನವರ ಹೆಸರಿನಲ್ಲಿ ನಲ್ವತ್ತೆ0ಟು ವಚನಗಳು ಲಭಿಸಿವೆ. ಅವರ ವಚನಾ0ಕಿತ ” ಚಂದೇಶ್ವರ ಲಿಂಗ “.
ವಚನ ವಿಶ್ಲೇಷಣೆ
ಕಂದಿಸಿ , ಕುಂದಿಸಿ, ಬಂಧಿಸಿ, ನೋಯಿಸಿ , ಕಂಡ ಕಂಡವರ ಬೇಡಿ ತಂದು
ಗುರುಲಿಂಗ ಜಂಗಮಕ್ಕೆ ಮಾಡಿಹೆನೆಂಬ ದಂದುಗದ ಮಾಟ ನೈವೇದ್ಯಕ್ಕೆ ಸಲ್ಲದು.
ತನುಕರಗಿ , ಮನಕರಗಿ , ಬಂದ ಧನದ ಅನುವರಿದು
ಸಂದು ಸಂಶಯವಿಲ್ಲದೆ ಗುರುಲಿಂಗ ಜಂಗಮಕ್ಕೆ ಮಾಡುವ ಮಾಟ ದಾಸೋಹ.
ಕಾರೆಯ ಸೊಪ್ಪಾದರೂ ಕಾಯಕದಿಂದ ಬಂದುದು ಅರ್ಪಿತವಲ್ಲದೆ
ದುರಾಶೆಯಿಂದ ಬಂದುದು ಅನರ್ಪಿತ
ಇದು ಕಾರಣ ಸತ್ಯ ಶುದ್ಧ ಕಾಯಕದ
ನಿತ್ಯ ದ್ರವ್ಯವಾದರೆ
ನಮ್ಮ ಚಂದೇಶ್ವರ ಲಿಂಗಕ್ಕೆ ನೈವೇದ್ಯ ಸಂದಿತ್ತು ಕಾಣಿರಯ್ಯ.
ಕಲ್ಯಾಣದ ಶಿವಶರಣರಲ್ಲಿ ಆಯ್ದಕ್ಕಿ ಮಾರಯ್ಯ , ಆಯ್ದಕ್ಕಿ ಲಕ್ಕಮ್ಮ ಮತ್ತು ನುಲಿಯ ಚೆಂದಯ್ಯ ಶ್ರೇಷ್ಠ ಕಾಯಕ ಮೂರ್ತಿಗಳೆನಿಸಿದ್ದಾರೆ. ಅವರು ಪ್ರತಿಪಾದಿಸಿದ ಕಾಯಕ ತತ್ವಗಳನ್ನು ಮತ್ತು ಅವರು ಪರಿಪಾಲಿಸಿದ ಕಾಯಕ ಸೂಕ್ಷ್ಮಗಳನ್ನು ನಾವೆಲ್ಲರೂ ಗಮನಿಸಬೇಕಾದ ವಿಷಯ. ಕಾಯಕ ಎಂಬ ಮೂರಕ್ಷರದ ಶಬ್ದ ದಲ್ಲಿ ಮೂರು ಲೋಕಗಳ ವ್ಯಾಪ್ತಿಯ ಅರ್ಥ ತುಂಬಿದೆಯೆನಿಸುತ್ತದೆ.
ಕಾಯಕ ಜೀವಿಯಲ್ಲಿ ಅತ್ಯಾಶೆ ಇರಬಾರದು. ಕಾಯಕ ಜೀವಿಗಳು ಮೈಗಳ್ಳರಾಗಿರಬಾರದು. ಮತ್ತೊಬ್ಬರ ಮನಸ್ಸು ನೋಯಿಸುವವರು ಕಾಯಕ ಜೀವಿಗಳಲ್ಲ, ಕಾಯಕದಲ್ಲಿ ಸಮರ್ಪಣ ಭಾವ ಇರಬೇಕು. ಕಾಯಕದಿಂದ ಬಂದುದು ತನ್ನೊಬ್ಬನದಲ್ಲ, ಎಲ್ಲರಿಗೂ ಸೇರಿದುದು. ಕೇವಲ ನೂರು ವರ್ಷಗಳ ಪೂರ್ವದಲ್ಲಿ ನಾಲ್ವತ್ವಾಡದ ವೀರೇಶ್ವರ ಶರಣರು ಸೊಲ್ಲಾಪುರದಲ್ಲಿ ಹೆಂಡತಿ ಮತ್ತು ಮಗಳೊಡನೆ ಕಾಯಕ ಜೀವಿಯಾಗಿ ಬದುಕಿದ ನಿದರ್ಶನವಿದೆ.
ಪ್ರಸ್ತುತ ವಚನದಲ್ಲಿ ಶಿವಶರಣ ನುಲಿಯ ಚಂದಯ್ಯನವರು ಒಬ್ಬರನ್ನು ಕಾಡಿಸಿ , ಪೀಡಿಸಿ , ಕಂದಿಸಿ ,ನಿಂದಿಸಿ, ಕಾಡಿ ಬೇಡಿ ಗಳಿಸುವುದು ಕಾಯಕವೇ ಅಲ್ಲ, ಮತ್ತು ಹಾಗೆ ಗಳಿಸಿದ ಗಳಿಕೆಯೂ ಗುರು -ಲಿಂಗ – ಜಂಗಮಕ್ಕೆ ಸಲ್ಲುವುದಿಲ್ಲ ಎಂಬ ಮಾತನ್ನು ಹೇಳುತ್ತಿದ್ದಾರೆ. ” ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದು, ನಾಯ ಮೊಲೆ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದು “ಇಂಥ ಆಶೆಬುರುಕರು, ಮೋಸಗಾರರು , ಮೈಗಳ್ಳರು ಗಳಿಸಿದ ಮನೆಯಲ್ಲಿ ಯಾವುದೇ ಸಂದರ್ಭದಲ್ಲಿ ಆಹಾರ – ಪಾನೀಯ ಸೇವಿಸಬಾರದು. ಅದಕ್ಕಾಗಿ ಏನೇ ಗಳಿಸಲಿ , ಸತ್ಯ ಶುದ್ಧ ಕಾಯಕದಿಂದ ಗಳಿಸಬೇಕು, ನ್ಯಾಯಮಾರ್ಗದಿಂದ ಗಳಿಸಬೇಕು
ಕೊಡುವವರು ಹಿಗ್ಗಿನಿಂದ ಕೊಡುವಂತೆ ಗಳಿಸಬೇಕು. ಒಬ್ಬರ ಬಾಯಲ್ಲಿ ಮಣ್ಣು ಹಾಕಿ , ಇನ್ನೊಬ್ಬರ ಕಣ್ಣಿನಲ್ಲಿ ಮಣ್ಣೆರಚಿ ಗಳಿಸಿದ ಧನ ನಿಜವಾಗಿಯೂ ವ್ಯರ್ಥ, ಅದರ ಸಾರ್ಥಕ್ಯವೇ ಇಲ್ಲ.
ತನು ಕರಗಿ, ಮನ ಕರಗಿ , ತನು ಬಳಲಿ ಮಾಡುವ ಕಾಯಕವೇ ನಿಜವಾದ ಕಾಯಕ. ತನುಕರಗಬೇಕು ಎಂದರೆ ದುಡಿತದ ಬೆವರಿನಿಂದ ಮೈ ತೊಯ್ಯಬೇಕು. ಅದೇ ಮಹಾಮಜ್ಜನ. ಮನಕರಗಿ ಎಂದರೆ ಪಾಪ -ಪುಣ್ಯಗಳ ಅಂತರವರಿದು ಕಾಯಕ ಮಾಡಬೇಕು. ಒಬ್ಬ ಹಸಿದವನಿಗೆ ಅನ್ನವಿಕ್ಕುವುದು ನೂರು ಜಂಗಮರಿಗೆ ಉಣಿಸಿದಷ್ಟು ಪುಣ್ಯ ಕಾರ್ಯ. ಯಾವುದೇ ಪುಣ್ಯ ಕಾರ್ಯ ಡ0ಭಾಚಾರಕ್ಕೆ ಮಾಡಿದರೆ ವ್ಯರ್ಥ, ಅನುಕಂಪದಿಂದ ಮಾಡಿದರೆ ಸಾರ್ಥಕ. ಹೀಗೆ ಸತ್ಯ ಶುದ್ಧ ಕಾಯಕ ಮಾಡಿದಾಗ ಗಳಿಕೆ ಆದರೆ ಆಯಿತು , ಹೋದರೆ ಹೋಯಿತು. ಕಾರೆ ಸೊಪ್ಪಿನ ನೈವೇದ್ಯವನ್ನೂ ಹರ್ಷದಿಂದ ಸ್ವೀಕರಿಸಲು ಪರಮಾತ್ಮನು ಸಿದ್ಧನಿರುವಾಗ ನಮಗೇಕೆ ಒಣ ಪ್ರತಿಷ್ಠೆ ? ಮಾದಾರ ಚೆನ್ನಯ್ಯನ ಅಂಬಲಿಯನ್ನು ಶಿವನು ಹಿಗ್ಗಿನಿಂದ ಸೇವಿಸಿಲ್ಲವೆ ?
ನುಲಿಯ ಚೆಂದಯ್ಯ ಹೇಳಿದ ನಿತ್ಯ ದ್ರವ್ಯದ ಕಲ್ಪನೆ ಬಹಳ ಮುಖ್ಯವಾದುದು. ಅಂದಿನ ಗಳಿಕೆ ಅಂದೇ ವ್ಯಯವಾಗಬೇಕು. ಆಶೆಯಿಂದ ಹಣ ಕೂಡಿಟ್ಟರೆ ಹಳಸಲಾಗುತ್ತದೆ. ಅದು ನೈವೇದ್ಯಕ್ಕೆ ಸಲ್ಲುವುದಿಲ್ಲ. ಇಷ್ಟೆಲ್ಲ ಸೂಕ್ಷ್ಮ ವಿಚಾರಗಳಿರುವಾಗ ಜನರು ಕಾಯಕ ತತ್ವ ತಿಳಿಯದೆ ಗಳಿಸಿ , ಉಳಿಸಿ , ವ್ಯಯಿಸಿ ನರಕ ಭಾಜನರಾಗಿ ಹೋಗುವರು ಎಂದೆನಿಸುತ್ತದೆ. ಗಳಿಸುವ ಸ್ಪರ್ಧೆಗೆ ಇಳಿದು ಹೇರಳ ಧನ -ಸಂಪತ್ತು ಶೇಖರಿಸಿದರೆ ಇರುವೆ ಹುತ್ತನ್ನು ನಿರ್ಮಿಸಿ ಹಾವುಗಳಿಗೆ ಆಶ್ರಯ ಕೊಟ್ಟಂತಾಗುತ್ತದೆ. ತಾನಿರುವುದು ಸಣ್ಣ ಜೀವಿ. ಹಗಲಿರುಳು ಇರುವೆ ದುಡಿದು ದೊಡ್ಡ ಮನೆ ಕಟ್ಟಿದರೆ ವಿಷಜಂತುಗಳಿಗೆ ಆಸ್ಪದವಾಗುವುದಿಲ್ಲವೆ ? ಶ್ರೀಮಂತರ ದುರ್ಲೊಭದ ಮತ್ತು ದುರ್ಮೋಹದ ಹಣೆಯ ಬರಹವೂ ಇಷ್ಟೆಯೇ. ಒಬ್ಬರ ಗೋಣು ಮುರಿದು ಮತ್ತೊಬ್ಬರ ರಕ್ತ ಹೀರಿ ಗಳಿಸಿದ ಸಂಪತ್ತನ್ನು ಅಪಮಾರ್ಗಗಳಲ್ಲಿ ದುಂದುವೆಚ್ಚ ಮಾಡಲು ಮಕ್ಕಳಾದರೂ ಹುಟ್ಟುತ್ತಾರೆ, ಮೊಮ್ಮಕ್ಕಳಾದರೂ ಹುಟ್ಟುತ್ತಾರೆ. ತಾವು ಕೆಟ್ಟ ಹೆಸರು ಪಡೆದು ಉಳಿಸಿ, ಮಕ್ಕಳು ಅಡ್ಡ ದಾರಿಗೆ ಬೀಳುವಂತೆ ಮಾಡುವುದರ ಸಾರ್ಥಕ್ಯವಾದರೂ ಏನು ?
–ಸುಧಾ ಪಾಟೀಲ್
ಬೆಳಗಾವಿ