ಮನದೆರೆದು ಆಲಿಸಿದ ವೈದ್ಯಕೀಯ ಸೇವಾ ಯುವಕರು

ಮನದೆರೆದು ಆಲಿಸಿದ ವೈದ್ಯಕೀಯ ಸೇವಾ ಯುವಕರು

ಇಂದು ಬಸವ ಜಯಂತಿ, ಪ್ರತಿ ವರ್ಷ ಎಲ್ಲಿಯಾದರೂ ಅತಿಥಿಯಾಗಿ ಭಾಷಣ ಮಾಡುತ್ತಿದ್ದೆ. ಆದರೆ ಈ ವರ್ಷ ಬಸವ ಜಯಂತಿಯನ್ನು ತುಂಬಾ ಭಿನ್ನವಾಗಿ ಆಚರಿಸುವ ಅವಕಾಶ ಒದಗಿಸಿದವರು ಸುತ್ತೂರು ಮಠದ ಶಿಕ್ಷಣ ಸಂಸ್ಥೆಯವರು. ಮೈಸೂರಿನಿಂದ ಇಪ್ಪತ್ತೈದು ಕಿಲೋಮೀಟರ್ ಅಂತರದಲ್ಲಿ ಇರುವ ಸುತ್ತೂರು ಮಠದ ನದಿ ತೀರದ ಸುಂದರ ಪರಿಸರದಲ್ಲಿ ಪುನರ್ಮನನ ತರಬೇತಿ ಶಿಬಿರ ಆಯೋಜಿಸಿದ್ದರು. ‌ಪ್ರಥಮ ವರ್ಷದ ಬಿ.ಎ.ಎಮ್.ಎಸ್., ಸ್ಪೀಚ್ ಆಂಡ್ ಹಿಯರಿಂಗ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಶಿಬಿರಾರ್ಥಿಗಳು. ಸುತ್ತೂರು ಶಿಕ್ಷಣ ಸಂಸ್ಥೆ ಶಿಸ್ತು ಮತ್ತು ಗುಣಮಟ್ಟಕ್ಕೆ ಹೆಸರುವಾಸಿ. ತರಬೇತಿಯ ಆಯೋಜನೆ ಕೂಡ ಅದೇ ಮಟ್ಟದಲ್ಲಿ ಇತ್ತು.

ಕೇರಳ, ಆಂದ್ರಪ್ರದೇಶ ಹಾಗೂ ಕನ್ನಡದ ಸುಮಾರು ಎರಡು ನೂರು ವಿದ್ಯಾರ್ಥಿಗಳಿಗೆ ಶರಣ ಫಿಲಾಸಫಿ ಕುರಿತು ಇಂಗ್ಲಿಷಿನಲ್ಲಿ ಮಾತನಾಡುವ ಅನಿವಾರ್ಯತೆ.
ಶರಣ ಫಿಲಾಸಫಿಯಲ್ಲಿ ‘ಆಧುನಿಕ ಜೀವನಶೈಲಿ ಮತ್ತು ಹ್ಯಾಪಿ ಇಂಡೆಕ್ಸ್’ ಹೆಚ್ಚಿಸುವ ಮೌಲ್ಯ ಇದ್ದರೆ, ಈ ಧರ್ಮ ಯಾಕೆ ಇಷ್ಟು ಬೆಳಕಿಗೆ ಬಂದಿಲ್ಲ, ಕೇವಲ ಒಂದು ಧರ್ಮವಾಗಿ ಉಳಿದಿಲ್ಲ? ಎಂಬ ವಿದ್ಯಾರ್ಥಿಯ ಅರ್ಥಪೂರ್ಣ ಪ್ರಶ್ನೆಗೆ ಸೂಕ್ತ ಉತ್ತರ ನೀಡುವ ಜವಾಬ್ದಾರಿ ನನಗಿತ್ತು.

 

ಅದು ಸಹಜವಾಗಿ ಎಲ್ಲರಿಗೂ ಕಾಡುವ ಪ್ರಶ್ನೆ, ವಚನಗಳ ವೈಚಾರಿಕತೆ ಮತ್ತು ವೈಜ್ಞಾನಿಕ ವಿಚಾರಧಾರೆಗಳನ್ನು ಯಾಕೆ ತಲುಪಿಸಲು ಸಾಧ್ಯವಾಗಿಲ್ಲ? ಇದನ್ನು ಅರ್ಥ ಮಾಡಿಸಲು ಯಾರು ವಿಫಲರಾದರು ಎಂಬ ಚರ್ಚೆಯಾಚೆಗೆ, ಬಸವ ಧರ್ಮೀಯರು ಕೊಂಚ ಉದಾರಿಗಳಾಗುವ ಅಗತ್ಯವಿದೆ. ವಚನಗಳು ಕೇವಲ ಧಾರ್ಮಿಕ ಶ್ಲೋಕಗಳ ಆಚರಣೆಗೆ ಮೀಸಲಾಗಿಲ್ಲ. ಅಲ್ಲಿರುವ ವೈಜ್ಞಾನಿಕ ತಾಕತ್ತನ್ನು ಅರಿತು ಯುವಕರಿಗೆ ವಿವರಿಸುವ ಜವಾಬ್ದಾರಿ ಇದೆ, ಅದೂ ಇತರ ಭಾಷೆಗಳಲ್ಲಿ!

ಬಸವಣ್ಣನ ವಾಸ್ತವವಾದ, ಅಲ್ಲಮನ ಬಯಲ ಬೆಳಕು, ಚೆನ್ನಬಸವಣ್ಣನ ಕರಣ ಹಸಿಗೆ ಎಂಬ ಅನಾಟಮಿ, ಪುಣ್ಯಸ್ತ್ರೀಯರ ಕಾಯಕ ಸಂಸ್ಕೃತಿ, ಅಕ್ಕಮಹಾದೇವಿಯ ಮನೋವಿಜ್ಞಾನವನ್ನು ಆಧುನಿಕ ಅಧ್ಯಯನ ಶಿಸ್ತಿಗೆ ಒಳಪಡಿಸಬೇಕಾಗಿದೆ. ವಚನ ಶಾಸ್ತ್ರದ ಅಧ್ಯಯನದ ಮೂಲಕ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಆರೋಗ್ಯದ ಕುರಿತು ಹೇರಳ ಸೂತ್ರಗಳಿವೆ ಆದರೆ ಅವುಗಳನ್ನು ಸರಳೀಕರಿಸಿ ಯುವ ವಿದ್ಯಾರ್ಥಿಗಳಿಗೆ, ಇತರ ಆಧುನಿಕ ವಿಜ್ಞಾನದ ಹೋಲಿಕೆ ನೀಡಿ ಕನ್ನಡೇತರ ಯುವಕರಿಗೆ ತಲುಪಿಸುವ ಜಾಣತನ ಇಂದಿನ ಅತ್ಯಗತ್ಯ. ಆ ವಿವರಣೆ ಕೇವಲ ಯಾವದೋ ಸಮಾಜದ ಧಾರ್ಮಿಕ ವಿಧಿವಿಧಾನ ಎನಿಸಬಾರದು. ಅಷ್ಟಾವರಣ, ಪಂಚಾಚಾರಗಳನ್ನು ಸರಳೀಕರಿಸಿ, ‘ಕಾಯಕ-ದಾಸೋಹ-ಅನುಭಾವ’ ಗಳ ಹಿನ್ನೆಲೆಯಲ್ಲಿ ಗಂಭೀರವಾಗಿ ಅವಲೋಕಿಸಿ, ಅಲ್ಲಿ ಹುದುಗಿರುವ ಪ್ರಜಾಸತ್ತಾತ್ಮಕ, ವಿಶಾಲ ವಿಚಾರಧಾರೆಗಳನ್ನು ಯುವಕರಿಗೆ ಪರಿಚಯಿಸಿದಾಗ ಅವರು ಬೆರಗಾಗುತ್ತಾರೆ ಎಂಬುದನ್ನು ನಾನು ಇತ್ತೀಚಿನ ತರಬೇತಿಗಳಲ್ಲಿ ಅರ್ಥ ಮಾಡಿಕೊಂಡಿದ್ದೇನೆ.

ಇಂದು ಸುದೀರ್ಘ ತೊಂಬತ್ತು ನಿಮಿಷಗಳ ಮಾತುಗಳನ್ನು ವಿದ್ಯಾರ್ಥಿಗಳು ಬರೀ ಕೇಳಲಿಲ್ಲ, ಅಷ್ಟೇ ಗಂಭೀರವಾಗಿ ಆಲಿಸಿ, ಉಪಯುಕ್ತ ಪ್ರಶ್ನೆಗಳನ್ನು ಎತ್ತಿದರು.
ಆಧುನಿಕ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಹೇಳಿದಷ್ಟೇ ಪರಿಣಾಮಕಾರಿಯಾಗಿ ಅಕ್ಕ ಮನೋವಿಜ್ಞಾನದ ವಿಷಯಗಳನ್ನು ತನ್ನ ವಚನಗಳಲ್ಲಿ ಪ್ರಸ್ತಾಪಿಸಿದ್ದಾಳೆ.

ವರ್ತಮಾನವನ್ನು ನಾವು ‘ಜ್ಞಾನದ ಯುಗ’ ಎಂದು ಹೊಗಳುತ್ತೇವೆ. ಇದನ್ನು ಅಲ್ಲಮ ಆಗಲೇ ‘ಜ್ಞಾನವೆಂಬುದು ನಿನ್ನೊಡವೆ’ ಎಂದಿದ್ದಾನೆ. ಮನೋಬಲ ಮತ್ತು ವಾಸ್ತವವಾದ ಆಧುನಿಕ ಹ್ಯುಮನ್ ರಿಸೋರ್ಸ್ ಸಂಗತಿಗಳನ್ನು ಅಕ್ಕ ‘ಹೆದರದಿರು ಮನವೆ, ಬೆದರಿದರು ತನುವೆ’ ಎಂಬ ವಚನದಲ್ಲಿ ಹೇಳಿರುವುದನ್ನು ಗ್ರಹಿಸುವ ವಿಧಾನ ಭಿನ್ನವೂ, ಆಧುನಿಕವೂ ಆಗಿರಬೇಕು. ಲಿಂಗಾಯತರು ಇದೆಲ್ಲಾ ತುಂಬಾ ಕಠಿಣಾಚರಣೆ ಎಂಬ ಭೀತಿ ಹುಟ್ಟಿಸಬಾರದು.

ಕಮ್ಯೂನಿಕೇಶನ್ ಯುಗದಲ್ಲಿ ಭಾಷೆ ಮತ್ತು ಅದರ ಸೌಂದರ್ಯವನ್ನು ರೂಢಿಸಿಕೊಳ್ಳಬೇಕಾಗಿದೆ. ‌ನುಡಿದರೆ ಮುತ್ತಿನ ಹಾರ, ಸ್ಪಟಿಕದ ಸಲಾಕೆಯ ಹಿರಿಮೆಯನ್ನು ಆಧುನೀಕರಿಸಿಕೊಳ್ಳಬೇಕು.‌ ವರ್ತಮಾನ ತುಂಬಾ ಮುಂದೆ ಸಾಗಿದೆ, ಮುಖ್ಯವಾಗಿ ಹುಡುಗಿಯರಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಅಗತ್ಯವಿರುವ ಸ್ವಾತಂತ್ರ್ಯವೂ ಲಭಿಸಿದೆ. ಆದರೆ ಅವರಿಗೆ ಈಗ ಲಿಂಗಾಯತ ವಚನ ಸಂಸ್ಕಾರದ ಅಗತ್ಯವಿದೆ ಅದೂ ಜಾತಿ, ಧರ್ಮಗಳಿಗೆ ಮೀರಿದ್ದಾಗಿದೆ ಎಂಬ ಭಾವ ಉಂಟಾಗುವ ಹಾಗೆ!

ಕನ್ನಡ ಸಾಹಿತ್ಯ ಚರಿತ್ರೆಯ ಹೃದಯದ, ಮಾನವೀಯ ಭಾಗವಾಗಿರುವ ವಚನ ಅಧ್ಯಯನ, ವಿಮರ್ಶೆ ಹಾಗೂ ವಿಶ್ಲೇಷಣೆ ವಿಭಿನ್ನವಾಗಿ ಇರಬೇಕು. ವಚನಗಳ ಭಾವಾರ್ಥ ಮತ್ತು ಧಾರ್ಮಿಕ ಆಚರಣೆಗಳಾಚೆ ಇರುವ ಆಧುನಿಕ ಹೂರಣದ ಹೋಳಿಗೆ ಉಣ ಬಡಿಸುವ ಅಗತ್ಯ ಅರಿಯಬೇಕು.

ಕಳೆದ ಕೆಲವು ವರ್ಷಗಳಿಂದ ವಚನಗಳು ನನ್ನನ್ನು ಅಲುಗಾಡಿಸಿ ಚಿಂತನೆಗೆ ದೂಡಿವೆ. ಆಧುನಿಕ ಮಾಧ್ಯಮವಾದ ಯ್ಯೂ ಟ್ಯೂಬ್ ಮತ್ತು ಇತರ ತಂತ್ರಜ್ಞಾನದ ಬಳಕೆ ಮಾಡಿಕೊಂಡು ನಾವೂ ‘ಅಪ್‌ಡೇಟ್’ ಆಗಬೇಕು. ನಮ್ಮ ವಚನಾಧ್ಯಯನ ವಿಧಿ ವಿಧಾನಗಳ ಆಚರಣೆಯಲ್ಲಿ ಕಳೆದು ಹೋಗಿ, ಮಂಕಾಗಬಾರದು.

ಮುಖ್ಯವಾಗಿ ಪದವಿ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪಿಬೇಕು ಎಂಬುದನ್ನು ಸುತ್ತೂರು ಶಿಕ್ಷಣ ಸಂಸ್ಥೆ ಮತ್ತು ಪರಮಪೂಜ್ಯ ಜಗದ್ಗುರು ಶಿವರಾತ್ರಿ ದೇಶಿಕೇಂದ್ರರು ಅರಿತವರಾಗಿದ್ದಾರೆ. ನನಗೆ ನೀಡಿದ ಜವಾಬ್ದಾರಿಯನ್ನು ಜಾಗರೂಕತೆಯಿಂದ ನಿರ್ವಹಿಸಿದೆ ಎಂಬುದನ್ನು ಪಾಲ್ಗೊಂಡ ಯುವಕರ ಉತ್ಸಾಹ ಸಾಬೀತು ಮಾಡಿತು.
ಸಾವಿರಾರು ಕಿಲೋಮೀಟರ್ ಪಯಣದ ಆಯಾಸ ಮಾಯವಾಗಿ ಒಂದು ಅರ್ಥಪೂರ್ಣ ಬಸವ ಜಯಂತಿಗೆ ಸಾಕ್ಷಿಯಾದೆ. ಇದಕ್ಕೆ ಕಾರಣರಾದ ಪೂಜ್ಯರಿಗೆ ಹಾಗೂ ಸಂಸ್ಥೆಗೆ‌ ಶರಣು ಶರಣಾರ್ಥಿ.

-ಪ್ರೊ.ಸಿದ್ದು ಯಾಪಲಪರವಿ. ಕಾರಟಗಿ.

Don`t copy text!