ಬದುಕು ಭಾರವಲ್ಲ 4
ಮಾತು
ಮನುಷ್ಯ ಮೊದಲು ಮಾತು ಕಲಿಯುವುದು ಮಾತೆಯ ಮಡಿಲಲ್ಲಿ ಬಳಿಕ ಮನೆಯಿಂದ
ಆಮೇಲೆ ಸುತ್ತಮುತ್ತಲಿನ ಜನರಿಂದ ವಾಕ್ ಶುದ್ಧಿಯನ್ನು ಪಡೆಯುತ್ತಾನೆ
ಮಾತು ಜೀವನದಲ್ಲಿ ಅತ್ಯುತ್ತಮ ಕ್ರಿಯೆಯಾಗಿದೆ
ಮಾತಿನಲ್ಲಿ ಮೋಡಿ ಸಿಹಿ ಇದೆ ಕಹಿ ಇದೆ .ಮಾತಿನಲ್ಲಿ ಸತ್ಯ ಇದೆ
ಮಾತಿನಲ್ಲಿ ಸಾವೂ ಇದೆ
ಮಾತಿನಲ್ಲಿ ಅಭಿವೃದ್ಧಿ ಇದೆ ಮಾತಿನಲ್ಲಿ ಸಮ್ಮೋಹನಶಕ್ಕಿ ಇದೆ ಏಳು ಬೀಳು ಎಲ್ಲವೂ ಮಾತಿನಲ್ಲಿಯೇ ಇದೆ .
ಅನೇಕ ಶರಣರು ಸಂತರು ದಾಸರು ಹಿರಿಯರು ಮಾತು ಹೇಗೆ ಇರಬೇಕು ಎಂದು ಹೇಳಿದ್ದಾರೆ ಆದರೆ ನಾನು ಹೇಳುವುದು ಮಾತಿನಿಂದ ನಮ್ಮ ಬದುಕು ಬದಲಾಗಬೇಕು .
ನಮ್ಮ ದಿನನಿತ್ಯದ ಎಲ್ಲ ಚಟುವಟಿಕೆಗಳು ಮಾತಿನಿಂದಲೇ ನಡೆಯುತ್ತವೆ .ಮಾತಿನಿಂದ ಪ್ರಾರಂಭವಾಗುವ ನಮ್ಮ ಬದುಕು ಅತ್ಯಂತ ಸುಂದರವಾಗಲು ಮಾತೇ ಕಾರಣ. ಮಾತಿನಿಂದ ಮನೆ ಕಟ್ಟಲು ಆಗದಿದ್ದರೂ ಅರಮನೆಯನ್ನು ಕಟ್ಟಬಹುದು. ಅದು ಹೇಗೆ ಸಾಧ್ಯ ಎನ್ನುವ ವಿಚಾರ ನಿಮಗೆ ಬಂದಿರಲು ಸಾಧ್ಯ.
ನಿಮ್ಮ ನಿಮ್ಮ ಮಾತಿನ ಕಲೆಯನ್ನು ಒಮ್ಮೆ ಬದಲಾಯಿಸಿಕೊಂಡು ನೋಡಿ ಎಲ್ಲರೂ ನಿಮ್ಮ ಮಧುರ ಮಾತುಗಳನ್ನು ಕೇಳಲು ಸಮೀಪ ಬರುತ್ತಾರೆ .
ಮಾತಿನಿಂದ ಅರಮನೆ ಅಲ್ಲ ಅರಮನೆಯಲ್ಲಿ ಇದ್ದವರೆಲ್ಲ ನಮ್ಮ ಮಾತುಗಳನ್ನು ಕೇಳಲು ಬರುವರು ಎಂದರೆ ನಮ್ಮ ಮಾತಿನ ಬೆಲೆ ನಮಗೆ ಆಗಬೇಕು .
ಇಡೀ ವಿಶ್ವವನ್ನೇ ನಾವು ಗೆಲ್ಲಬಹುದು. ಅಂತಹ ಶಕ್ತಿ ನಮ್ಮ ಮಾತಿಗಿದೆ .
ಸ್ವಾಮಿ ವಿವೇಕಾನಂದರ ಮಧುರ ಮಾತು
ಬಸವಣ್ಣನವರ ಮಾತು ಎಲ್ಲ ಶಿವ ಶರಣರ ಮಾತುಗಳು ನಮ್ಮ ಬದುಕನ್ನೇ ಬದಲಿಸಿವೆ. ಬದಲಿಸುತ್ತಿವೆ.
ಬಿಜಾಪುರ ದ ಶ್ರೀ ಸಿದ್ಧೇಶ್ವರ ಸ್ವಾಮಿಜಿಯವರು ಇವರು ನಮ್ಮ ಜೊತೆ ಇವತ್ತು ಇಲ್ಲ .ಆದರೆ ಆವರ ಮಾತುಗಳನ್ನು ಕೇಳದವರು ಒಮ್ಮೆ ಕೇಳಿ ನೋಡಿ .
ಹೇಗೆ ನಮ್ಮ ಬದುಕು ಬದಲಾವಣೆ ಆಗುತ್ತದೆಂದು .
ಒಬ್ಬೊಬ್ಬ ರ ಮಾತುಗಳನ್ನು ಕೇಳುತ್ತಿದ್ದರೆ ಹಾಗೇ ಕೇಳುತ್ತ ಕೂಡಬೇಕು ಎನಿಸುತ್ತದೆ .ಇನ್ನೂ ಕೆಲವರು ಇರುವರು ನಾವು ಕೇಳದಿದ್ದರೂ ಪಕ್ಕದಲ್ಲಿದ್ದವರನ್ನು ಬಡಿದು ತಮ್ಮ ಮಾತುಗಳನ್ನು ಕೇಳಲು ಹೇಳುತ್ತಾರೆ .
ಭಾರವಾದ ಮನದಲ್ಲಿ ತುಸು ಮಾತುಗಳ ಸಿಂಚನ ಸಿಡಿಸಿದರೆ ಅವರ ಮನಸ್ಸೇ ಬದಲಾಗುತ್ತದೆ .
ಅಂತಹ ದಿವ್ಯ ಮತ್ತು ಅಗಾಧವಾದ ಶಕ್ತಿ ಈ ಮಾತಿಗಿದೆ .
ನಾನು ದಿನ ಎದ್ದು ಬಾಗಿಲಿಗೆ ರಂಗೋಲಿ ಹಾಕಬೇಕಾದರೆ ನನ್ನನ್ನು ನೋಡಿದ ಅಕ್ಕ ಪಕ್ಕ ಮನೆಯವರು ಎದ್ರೀ ಮೆಡಂ ,ಚಹಾ ಆಯಿತ್ರೀ. ಊಟ ಆತ್ರೀ ಕಾಲೇಜಿಗೆ ಹೊಂಟಿರಿ
ಈಗ ಬಂದ್ರೀ ಹೀಗೆ ಕೇಳಿದಾಗ ಎಷ್ಟು ಸಂತೋಷ ಆಗುತ್ತದೆ ನೋಡಿ .
ನಾನು ಅಂತಿರುತ್ತೇನೆ ನಮ್ಮ ಯಜಮಾನರಿಗೆ ಹಾಸ್ಯ ಮಾಡಿ ನೀವು ಕೇಳುವುದಿಲ್ಲ ದಿನ ನೋಡ್ರಿ ನನ್ನ ಬಗ್ಗೆ ಹೊರಗಿನ ಜನ ಎಷ್ಟು ಕಾಳಜಿ ಮಾಡುತ್ತಾರೆ ಎಂದು .
ಇದೆಲ್ಲ ನಿಮ್ಮ ಜೀವನದಲ್ಲಿ ಆಗೇ ಆಗಿರುತ್ತದೆ .ನಿಜ ತಾನೇ ?
ಸಾಯಲು ಹೋಗುವವರು ಕೂಡಾ ಮಾತಿನಿಂದ ಬದುಕುಳಿದು ಬದುಕು ಬದಲಾಯಿಸಿಕೊಂಡವರು ಇದ್ದಾರೆ …
ಕೊಲ್ಲಲು ಕತ್ತಿಯನ್ನೇ ಮೇಲೆತ್ತಿರುವ ಶತ್ರೂ ವೂ ಕೂಡಾ ಸೊಗಸಾದ ಮಾತನ್ನು ಕೇಳಿದೊಡನೆಯೇ ಪ್ರಸನ್ನನಾಗಿ ಬಿಡುವುದು ಖಂಡಿತ. ಮಾತುಗಳಲ್ಲಿ ವ್ಯಂಗ್ಯದ ಮಾತು ,ಕಟ್ಟೆ ಮಾತು,ಗಾಳಿ ಮಾತು,ಹಾರಿಕೆ ಮಾತು ಹೀಗೆ ಬೇಕಾದಷ್ಷಿವೆ.
ಸುಂದರವಾದ ಆಕರ್ಷಕವಾದ ಮಾತು ಚೆಲುವಿಗೆ ಮೆರಗು ನೀಡುತ್ತದೆ
ಮಾತನಾಡುವಾಗ ನಾವು ಕೆಲವೊಂದು ಅಂಶಗಳನ್ನು ಗಮನಿಸಲೇ ಬೇಕಾಗು ತ್ತದೆ
ಮಾತನಾಡುವಾಗ ನಾವು ಬಳಸುವ ಪದಗಳತ್ತ ಗಮನ ಇರಬೇಕು.
ಮಾತನಾಡುವಾಗ ಭಾವೋದ್ವೆಗಕ್ಕೆ ಒಳಗಾಗಬಾರದು.
ಮಾತನಾಡುವವರ ಮಧ್ಯ ಮಧ್ಯ ಹೋಗಿ ಮಾತನಾಡಬಾರದು .
ತಮ್ಮ ಮಾತಿನ ಸರದಿ ಬಂದಾಗ ಮಾತ್ರ ಮಾತನಾಡಬೇಕು.
ಮಾತನಾಡುವಾಗ ಗಂಟಲು ಏರಿಸಿ ಏರು ಧ್ವನಿಯಲ್ಲಿ
ಮಾತನಾಡಬಾರದು.
ಮಾತನಾಡುವಾಗ ಇನ್ನೊಬ್ಬರನ್ನು ಟೀಕೆ ಮಾಡುತ್ತ ಪಕ್ಕದಲ್ಲಿ ಕುಳಿತವರನ್ನು ಹೊಡೆಯುತ್ತಾ ಮಾತನಾಡಬಾರದು.
ಮಾತನಾಡುವಾಗ ಸ್ವಗತದಲ್ಲಿ ಒಬ್ಬೊಬ್ಬರೇ ಮಾತನಾಡಬಾರದು .
ನಿಮ್ಮ ಜೊತೆಗೆ ಯಾರಾದರೂ ಮಾತನಾಡಿಸುತ್ತಿದ್ದರೆ ನಿಂತು ಅವರಿಗೆ ಉತ್ತರ ನೀಡಿ ಆಮೇಲೆ ನಿಮ್ಮ ಕೆಲಸಕ್ಕೆ ನೀವು ಹೋಗಿ .
ಮಾತನಾಡುವಾಗ ಎದುರಿಗಿರುವ ವ್ಯಕ್ತಿ ಉದ್ದೇಶ ಪೂರ್ವ ಕ ವಾಗಿ ಜಗಳಕ್ಕೆ ಬಂದಿದ್ದರೆ ಸ್ವಲ್ಪ ಮೌನ ವಾಗಿ ಇಲ್ಲವೇ ನೀವು ಇದ್ದ ಸ್ಥಳ ಬದಲಾಯಿಸಿ .
ಸುಳ್ಳು ಸುಳ್ಳು ಮಾತನಾಡಿ ಮಾತನ್ನು ತಿರುಚಿ ಮಾತನಾಡಬಾರದು .ನೇರ ಸತ್ಯವಾದ ಮಾತುಗಳನ್ನೇ ಆಡಬೇಕು.
ಮಾತನಾಡುವ ಮಾತುಗಳನ್ನು ನಿಧಾನವಾಗಿ ಕೇಳಿಸಿಕೊಂಡಿರಬೇಕು.
ಮಾತನಾಡುವಾಗ ಆಯಾ ಸ್ಥಳ ನಾವು ಯಾರ ಜೊತೆಗೆ ಮಾತನಾಡುತಿರುವೆವು ಆ ವ್ಯಕ್ತಿ ಯ ಬಗ್ಗೆ ಮತ್ತು ಸಮಯ ವನ್ನು ಅರಿತು ಕೊಂಡು ಮಾತನಾಡಬೇಕು.
ನಾವು ಹೀಗೆ ಪ್ರವಾಸಕ್ಕೆ ಹೋಗುತ್ತಿದ್ದೆವು .ಟ್ರೇನ್ ನಲ್ಲಿ ಹೋಗುವಾಗ ಹೊಸ ಗಂಡ ಹೆಂಡತಿಯರಿಬ್ಬರೂ ಅಂದರೆ ಅವಾಗ ತಾನೆ ಮದುವೆ ಆಗಿರಬಹುದೇನೋ ಅವರಾಡುವ ಮಾತುಗಳನ್ನು ನಾನು ಗಮನಿಸುತ್ತಿದ್ದೆ .ಪಾಪ ಗಂಡನಿಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ ವೇನೋ ಹೆಂಡತಿಗೆ ಸರಿಯಾಗಿ ಮರಾಠಿ ಭಾಷೆ ಅರ್ಥ ವಾಗುತ್ತಿರಲಿಲ್ಲ. ಟ್ರೇನ್ ನಿಂತಿತು ಗಂಡ ಕೇಳಿದ ಹೆ ಕುಟ್ಲ ಸ್ಟೇಶನ್ ಆಲ ಎಂದು ಹೆಂಡತಿಯು ಏನ್ರೀ ಅಂದಳು ಆತ ತಿಳಿದುಕೊಂಡ ಓ ಇದು ಏನ್ರೀ ಸ್ಟೇಶನ್ ಎಂದು ಮತ್ತೆ ಮುಂದಿನ ಸ್ಟೇಶನ್ ಬಂತು ಮತ್ತೂ ಹಾಗೆ ಕೇಳಿದ ಮತ್ತು ಹಾಗೆ ತಿಳಿದುಕೊಂಡು ಸುಮ್ಮನೇ ಕುಳಿತುಕೊಂಡು ಸ್ವಲ್ಪ ದೂರ ಹೋದ ಮೇಲೆ ಮತ್ತೊಂದು ಸ್ಟೇಶನ್ ಬಂದಿತು ಟ್ರೇನ್ ನಿಂತಿತು .
ಮತ್ತೆ ಕೇಳಿದ ಹೇ ಕುಟ್ಲ್ ಸ್ಟೇಶನ್ ಆಲ ಅಂದ ಅವಾಗ ಹೆಂಡತಿ ಏನ್ರೀ ಎಂದಾಗ ಗಂಡನಿಗೆ ತುಂಬ ಸಿಟ್ಟು ಬಂದಿತು ಕಿವಿಯನ್ನು ಜೋರಾಗಿ ಹಿಂಡಿದ ಬಿಡ್ರಿ ಬಿಡ್ರಿ ಎಂದಳು. ಅವಾಗ ತಿಳಿದುಕೊಂಡ ಓ ಇದು ಬಿಡ್ರೀ ಸ್ಟೇಶನ್ ನಾ ಎಂದು ತಿಳಿದುಕೊಂಡ. ಇದು ಝೋಕಾದರೂ ಇಬ್ಬರೂ ಭಾಷೆಯನ್ನು ಅರಿತಿಲ್ಲ. ಪದಗಳನ್ನು ಅರಿತಿಲ್ಲ.ಎನ್ನುವುದು ನನಗೆ ಗೊತ್ತಾಗಿ ಇಳಿದು ಊರಿಗೆ ಬಂದೆವು.
ಊರಿಗೆ ಬರುವಾಗ ನನಗೆ ಪರಿಚಯ ಇದ್ದವರು ತಡೆದು ಏನ್ ಬಿಡವ್ವಾ ನೀನು ಮೊನ್ನೆಯ ದಿವಸ ಮಾತನಾಡಿದರೂ ಕೇಳಿಸಿ ಕೊಳ್ಳಲಿಲ್ಲ ಹಂಗ ಹೊಂಟ ಬಿಟ್ಟಿ ಈಗ ಪ್ರೀನ್ಸಿಪಾಲ ಆಗಿ ನಮ್ಮನ್ನ ಮಾತನಾಡಿಸದ ಬಿಟ್ಟಿ ಅಂದರು .
ನಿಜಕ್ಕೂ ನಾನು ಕೇಳಿಸಿಕೊಂಡಿರಬಹುದು ಅಥವಾ ಕೇಳಿಸಿಕೊಂಡಿರಲಿಕ್ಕಿಲ್ಲ .ಯಾವ ಯಾವುದಕ್ಕೋ ನಮ್ಮನ್ನು ಹೋಲಿಸಿಕೊಂಡು ಮಾತಿನಿಂದ ಕತ್ತಿಯ ಹಾಗೆ ತಿವಿಯುತ್ತಾರೆ ಅವಾಗ ತುಂಬಾ ಮನಸ್ಸಿಗೆ ನೋವಾಗುತ್ತದೆ .ಪ್ರತಿಯೊಬ್ಬರ ಜೀವನದಲ್ಲಿ ಮಾತಿನಿಂದ ಏನೇನು ಆಗಿವೆ ಎಂದು ಸ್ವಲ್ಪ ಮೆಲಕು ಹಾಕಿ ನೋಡಿ .ನಿಮಗೂ ಗೊತ್ತಾಗುತ್ತದೆ.
ತುಂಬಾ ನೋವಾದ ಮನಸ್ಸಿಗೆ ಅಮೃತಕ್ಕೆ ಸಮಾನವಾದ ಸಮಾಧಾನದ ಪ್ರೋತ್ಸಾಹಕ ಒಂದೇ ಒಂದು ಮಾತು ಆ ಮನವನು ಅರಳಿಸುತ್ತದೆ .ಮಾಡುವ ಕೆಲಸದಲ್ಲಿ ಉತ್ಸಾಹ ಚಿಮ್ಮಿಸುತ್ತದೆ.
ಇದನ್ನೇ ನಾವು ಬಸವಾದಿ ಶಿವಶರಣರಲ್ಲಿ ಕಾಣುತ್ತೇವೆ .
ನಿಜವಾದ ಮಾನವೀಯ ಗುಣ ಇರುವವರು ಸದಾ ನಮ್ಮ ಬಗ್ಗೆ ಕಾಳಜಿ ಇರುವವರು ಒಳಗೊಂದು ಹೊರಗೊಂದು ಭೇದ ಭಾವ ಇಲ್ಲದಿರುವವರ ಮಾತುಗಳು ನಿಜಕ್ಕೂ ಸತ್ಯ ಹಾಗೂ ಶುದ್ಧ ವಾಗಿರುತ್ತವೆ .
ಇಂಥಹ ಸತ್ಯ ಶುದ್ಧವಾದ ಮನಸ್ಸಿನಿಂದ ಎಲ್ಲರ ಜೊತೆಗೆ ಒಳ್ಳೆಯದನ್ನು ಮಾತನಾಡಿ ಅವರ ಹೃದಯಕ್ಕೆ ಹತ್ತಿರ ಆಗೋಣ ನೀವೇನಂತಿರಿ…
ಮುಂದುವರೆಯುತ್ತದೆ .
-ಡಾ ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು
ಕರ್ನಾಟಕ ಪಬ್ಲಿಕ್ ಸ್ಕೂಲ್
ಮೇಡಮ್ “”ಮಾತು “” ಲೇಖನ ತುಂಬಾ ನೇ ಸೊಗಸಾಗಿದೆ 👌👍🙏
ಮೇಡಮ್ “”ಮಾತು ” ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌👍💐🙏