ಪುಸ್ತಕ ಪರಿಚಯ
ಕೃತಿ ಶೀಷಿ೯ಕೆ- ಹೊನ್ಕಲ್ ರ ಶಾಯಿರಿಲೋಕ
ಲೇಖಕರು- ಸಿದ್ದರಾಮ ಹೊನ್ಕಲ್ ೯೯೪೫೯೨೨೧೫೧
ಪ್ರಕಾಶನ….ಗೀತಾಂಜಲಿ ಪುಸ್ತಕ ಪ್ರಕಾಶನ ಶಿವಮೊಗ್ಗ ೯೪೪೯೮೮೬೩೯೦
ಪ್ರಕಟಿತ ವರ್ಷ- ೨೦೨೩. ಬೆಲೆ -ರೂ.೧೦೦/-
ಯಾದಗಿರಿ ಜಿಲ್ಲೆಯ ಶಹಾಪುರದವರಾದ ಪ್ರೊ. ಸಿದ್ದರಾಮ ಹೊನ್ಕಲ್ ಅವರು ವೃತ್ತಿಯಿಂದ ಪ್ರೊಫೆಸರ್ ಆಗಿದ್ದು ಈಗ ನಿವೃತ್ತಿ ಹೊಂದಿದ್ದಾರೆ. ಪ್ರವೃತ್ತಿಯಿಂದ ಇವರು ಸಾಹಿತಿಗಳು. ಕಲ್ಯಾಣ ಕರ್ನಾಟಕದ ಸಾಹಿತಿಗಳೆಂದೇ ಎಲ್ಲರಿಗೆ ಚಿರಪರಿಚಿತರು.
ಈಗಾಗಲೇ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ,ಪ್ರವಾಸ ಕಥನ,ಲಲಿತ ಪ್ರಬಂಧಗಳು, ಕವಿತೆ ,ಗಜಲ್ ,ಹಾಯ್ಕು,ಶಾಯಿರಿ,ಸಂಪಾದನೆ,ಜೀವನಕಥನ,ಶರಣ ಸಾಹಿತ್ಯ ಹೀಗೆ ಎಲ್ಲಾ ಪ್ರಕಾರದಲ್ಲಿ ಸುಮಾರು ೬೦ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ.ಗುಲ್ಬರ್ಗ ವಿಶ್ವ ವಿದ್ಯಾಲಯದ ಕಥಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದು,ಆರು ಸಲ ಸತತ ಕಥಾ ಪುರಸ್ಕಾರ, ಮೂರು ಸಾರಿ ರಾಜ್ಯೋತ್ಸವ ಪ್ರಶಸ್ತಿ ತಮ್ಮ ಕೃತಿಗಳಿಗೆ ಪಡೆದಿದ್ದಾರೆ.
ಜೊತೆಗೆ ಅನೇಕ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ .ತಾಲೂಕ ಹಾಗೂ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಗೊಂಡಿದ್ದಾರೆ.
ಈಗ ಸಿದ್ದರಾಮ ಹೊನ್ಕಲ್ ಅವರು ಒಬ್ಬ ಪ್ರೇಮಕವಿ ಉತ್ತಮ ಗಜಲ್ ಕಾರರು* ಎಂದು ಗುರುತಿಸುವಷ್ಟು ಪ್ರೀತಿ, ಪ್ರೇಮ, ವಿರಹ, ರೋಮಾಂಚನಗೊಳಿಸುವ ಗಜಲ್ ಗಳನ್ನು ರಚಿಸಿ ನಾಡಿನಾದ್ಯಂತ ಹೆಸರು ಮಾಡಿದ್ದಾರೆ. ಅಲ್ಲದೆ ಈಗ ಶಾಯಿರಿಗಳನ್ನು ಬರೆದಿದ್ದು ಕೃತಿ ಶೀರ್ಷಿಕೆ ಹೊನ್ಕಲ್ ರ ಶಾಯಿರಿಲೋಕ* ಎಂಬ ಈ ಸಂಕಲನ ಪ್ರಕಟವಾಗಿದ್ದು ಓದುಗರ ಉಡಿ ತುಂಬಿದ್ದಾರೆ.
ಶ್ರೀ ಸಿದ್ಧರಾಮ ಹೊನ್ಕಲ್ ಅವರ ಕೃತಿ ಶೀರ್ಷಿಕೆ ಹೊನ್ಕಲ್ ರ ಶಾಯಿರಿ ಲೋಕ ಸಂಕಲನಕ್ಕೆ ನಾಡಿನ ಖ್ಯಾತ ಶಾಯಿರಿಗಾರರು ಶಾಯರ್ ಶ್ರೀ ಅಸಾದುಲ್ ಬೇಗ್ ಬೆಂಗಳೂರು ಅವರು ಈ ಕೃತಿಗೆ ಅರ್ಥಪೂರ್ಣವಾದ ಮೌಲಿಕ ಮುನ್ನುಡಿಯನ್ನು ಬರೆದಿದ್ದಾರೆ.ಇಟಗಿ ಈರಣ್ಣ ಅವರ ಶಾಯಿರಿಯ ವಾರಸುದಾರ ಎಂದು ಅವರಿಂದಲೇ ಬೆನ್ನು ತಟ್ಟಿಸಿಕೊಂಡ ಡಾ.ಗುರುರಾಜ ಅರಿಕೇರಿ ಶಹಾಪುರ ಅವರು ಬೆಳದಿಂಗಳು ಎಂಬ ಶಿರ್ಷಿಕೆ ಅಡಿಯಲ್ಲಿ ಶ್ರೀ ಸಿದ್ಧರಾಮ ಹೊನ್ಕಲ್ ಅವರ ಶಾಯಿರಿಗಳ ಹಿನ್ನೆಲೆಯಲ್ಲಿ ಬಹು ಮೌಲ್ವಿಕ್ ವಾದ ಶಾಯಿರಿಗಳ ಉಗಮ ಬೆಳವಣಿಗೆ ಕುರಿತು ಈ ಕೃತಿಯಲ್ಲಿ ಬರೆದು ಕೃತಿಯ ಲೇಖಕರ ಮಹತ್ವ ಎತ್ತಿ ತೋರಿದ್ದಾರೆ.
ಶ್ರೇಷ್ಠ ಗಜಲ್ ಕಾತಿ೯ಯಾದ ಶ್ರೀಮತಿ ಪ್ರೇಮ ಹೂಗಾರ ಬೀದರ್ ಅವರು ತುಲನಾತ್ಮಕ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ. ಈ ಕೃತಿ ಪ್ರಕಟನೆಗಿಂತ ಮುಂಚಿತವಾಗಿ ಶಾಯಿರಿಗಳನ್ನು ಓದಿ ಶಾಯಿರಿ ಲೇಖಕರು ಹಾಗೂ ಕರ್ನಾಟಕ ರಾಜ್ಯಮಟ್ಟದ ಚುಟುಕು ಸಾಹಿತ್ಯ ಪರಿಷತ್ ದ ರಾಜ್ಯ ಸಂಚಾಲಕರಾದ ಹಿರಿಯರಾದ ಶ್ರೀ ಕೃಷ್ಣಮೂರ್ತಿ ಕುಲಕರ್ಣಿ ಅವರು ಹಿತ ನುಡಿ ಬರೆದಿದ್ದಾರೆ.
ಇನ್ನೊಬ್ಬ ಹೆಸರುವಾಸಿಯಾದ ಶಾಯಿರಿ ಲೇಖಕರಾದ ಶ್ರೀ ಮರಳುಸಿದ್ದಪ್ಪ ದೊಡ್ಡಮನಿ ಅವರು ಶಾಯಿರಿಗಳನ್ನು ಓದಿ ಖುಷಿಪಟ್ಟು ಇಲ್ಲಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ .ಮುಖಪುಟ ವಿನ್ಯಾಸ ಹಾಗೂ ಒಳ ಚಿತ್ರಗಳನ್ನು ಟಿ ಎಫ್ ಹಾದಿಮನೆಯವರು ಸೊಗಸಾಗಿ ಚಿತ್ರಿಸಿದ್ದಾರೆ. ಹಾಗೂ ಪುಟ ವಿನ್ಯಾಸವನ್ನು ಕೆ ಆರ್ ಹರೀಶ್ ಅವರು ಮಾಡಿದ್ದು ಪುಸ್ತಕದ ಸೊಬಗನ್ನು ಹೆಚ್ಚಿಸಿದ್ದಾರೆ.
ಶಾಯಿರಿ ಎಂಬುವುದು ಉರ್ದು ಕಾವ್ಯ ಸಾಹಿತ್ಯ ಪ್ರಕಾರದಲ್ಲಿ ಒಂದು ಪ್ರೇಮ ಕಾವ್ಯ ವೆಂದು ಹೇಳಬಹುದು. ಈ ಕಾವ್ಯ ರಚನೆಗೆ ಛಂದಸ್ಸಿನ ಬಂಧನವಿಲ್ಲ.ಕವಿಯಾದವನು ಪ್ರೇಮಿಯ ಹೃದಯದ ವೇದನೆಯನ್ನು, ಪ್ರಿಯತಮೆಯ ಅಂದ,ಚಂದ,ಚೆಲುವು, ಶೃಂಗಾರವನ್ನು ವರ್ಣಿಸುತ್ತಾ ವಿರಹದ ಮಧುರ ಯಾತನೆಯನ್ನು ಕೆಲವೇ ಸಾಲುಗಳಲ್ಲಿ ವ್ಯಕ್ತಪಡಿಸುವ ಹನಿಗವನವೆಂದು ಹೇಳಬಹುದು. ಕನ್ನಡದಲ್ಲಿ ಅನೇಕರು ಶಾಯಿರಿಗಳನ್ನು ಬರೆದಿದ್ದರು. ಶ್ರೀ ಈರಣ್ಣ ಇಟಗಿ ಅವರ ಕನ್ನಡ ಶಾಯಿರಿಗಳು ಜನಮನ ಗೆದ್ದು ಅನೇಕ ಯುವಕರಿಗೆ ಹುಚ್ಚು ಹಿಡಿಸಿದ್ದು, ಹೊನ್ಕಲ್ ಅವರು ಇಟಗಿಯವರ ಹಾದಿಯಲ್ಲಿಯೇ ಮುನ್ನಡೆಯುತ್ತಾ ಕನ್ನಡ ಶಾಯರಿಗಳನ್ನು ರಚಿಸಿದ್ದು ಓದುಗರ ಗಮನ ಸೆಳೆಯುತ್ತವೆ.
ಪ್ರೇಮ ಚಂದ್ರಮ ಕೈಗೆ ಸಿಗುವುದೇ ಹೇಳೇ ತಂಗಾಳಿ “ಎಂದೆನ್ನುವಂತೆ ಹೊನ್ಕಲ್ ಅವರು ಪ್ರಿಯತಮೆಯನ್ನು, *ಆತ್ಮಸಖಿ ಯನ್ನು ಹುಡುಕುತ್ತಾ ಗಜಲ್ ಲೋಕದಿಂದ ಕಲ್ಪನಾ ಕುದುರೆ ಏರಿ ಶಾಯಿರಿ ಲೋಕವನ್ನು ಪ್ರವೇಶಿಸಿ ಚಂದ್ರಲೋಕದಲ್ಲಿ ವಿಹರಿಸುತ್ತಾ, ಆತ್ಮ ಸಂಗಾತಿಯೊಂದಿಗೆ ಪ್ರೇಮ ಚಂದ್ರಿಕೆಯಲ್ಲಿ ರಾಸ ಕ್ರೀಡೆ ಆಡುತ್ತಾ ಅನುರಾಗದಲ್ಲಿ ಮೀಯುತ್ತ ಓದುಗರನ್ನು ಪ್ರೀತಿಯ ಸಾಗರದಲ್ಲಿ ತೇಲಿಸುವ ವಿರಹದ ಮಧುರ ಯಾತನೆಯಲ್ಲಿ ಮುಳುಗಿಸುವ ಶಾಯಿರಿ ಗಳನ್ನು ರಚಿಸಿದ್ದಾರೆ. ಈ ಮೂಲಕ ಓದುಗರ ಕಲ್ಪನಾ ಲೋಕಕ್ಕೆ ಲಗ್ಗೆ ಇಟ್ಟಿದ್ದಾರೆ. ಓದುಗರನ್ನು ಮಧುರಲೋಕಕ್ಕೆ ಈ ಕೃತಿ ಕೊಂಡೊಯ್ಯಲಿದೆ.
ಹೊನ್ಕಲ್ ಅವರು ತಮ್ಮ ಆತ್ಮ ಸಂಗಾತಿಗೆ, ಪ್ರಿಯತಮೆಗೆ ಹಲವಾರು ರೂಪಗಳನ್ನು ಕೊಟ್ಟು ಅವಳೊಂದಿಗೆ ಅಂತರಂಗದ ಪ್ರೀತಿ, ನೋವು, ವಿರಹ, ಮನದ ತಳಮಳವನ್ನು ಹಂಚಿಕೊಂಡಿದ್ದಾರೆ. ಅವಳನ್ನು ಮುದ್ದಿಸುತ್ತಾ, ರಮಿಸುತ್ತಾ, ಕೋಪಿಸುತ್ತಾ, ಅವಳ ಒಲವು ಪಡೆಯಲು ಪ್ರಯತ್ನಿಸಿದ್ದಾರೆ. ಅವರ ಶಾಯಿರಿ ಗಳು ಓದುಗರಿಗೆ ಮುದ ನೀಡುತ್ತವೆ. ವಿರಹದಲ್ಲಿಯೂ ಕವಿ ಒಂದು ಮಧುರ ಯಾತನೆಯನ್ನು ವ್ಯಕ್ತಪಡಿಸಿದ್ದಾರೆ. ಓದುಗರ ಹೃದಯದಲ್ಲಿ ಶಾಯಿರಿಗಳು ನೆಲೆಸುತ್ತವೆ.
ಶ್ರೀ ಹೊನ್ಕಲ್ ಅವರು ಮತ್ತೆ ಹದಿನಾರರ ತಾರುಣ್ಯದ ದಿನಗಳನ್ನು ಮೆಲಕು ಹಾಕುತ್ತಾ ಶಾಯಿರಿಗಳನ್ನು ರಚಿಸಿದ್ದಾರೆ. ದೇಹಕ್ಕೆ ಮುಪ್ಪಾದರು ಮನಸ್ಸಿಗೆ ಮುಪ್ಪಿಲ್ಲ ಎಂಬ ಹಿರಿಯರ ಮಾತನ್ನು ಇಲ್ಲಿ ಸತ್ಯ ಮಾಡಿ ತೋರಿಸಿದ್ದಾರೆ. *ಹೊನ್ಕಲ್ ರ ಶಾಯಿರಿ ಲೋಕದ* ಸಂಕಲನದ ಶಾಯಿರಿಗಳು ಹದಿಹರೆಯದ ಯುವಕರಿಗೆ ಪ್ರೀತಿಯ ಹುಚ್ಚು ಹಿಡಿಸಿ ರೋಮಾಂಚನ ಗೊಳಿಸುತ್ತವೆ. ವಯಸ್ಕರರಿಗೆ ತಮ್ಮ ಕಳೆದ ಆ ಪ್ರೇಮದ ದಿನಗಳನ್ನು ಮೆಲುಕು ಹಾಕಿಸುತ್ತವೆ.
@
ನಿನ್ನ ನೆನಪು ಆದರ ಸಾಕು
ಬ್ಯಾಸಿಗ್ಯಾಗ ಎ.ಸಿ.ಚಾಲು
ಮಾಡಿದಾಂಗ ಮೈ ಮನ
ಎಲ್ಲ ತಣ್ಣಗೆ ಆಗುತ್ತಿತ್ತು
ನಿನ್ ಬಗ್ಗೆ ನೀನೇ ಒಂದಷ್ಟು
ಕಲ್ಪನೆ ಮಾಡಿ ಹೇಳು
ದಿಗ್ಗನೇ ನೀನೇ ಎದರು ಬಂದರೆ
ಮನೆ ಮನ ಎಷ್ಟು ಖುಷಿ ಪಡುತ್ತಿತ್ತು.(೧೩)
@
ಬೇಡಿದ್ದೆಲ್ಲ
ಸಿಕ್ಕರೆ ನಾ ಹಿಂಗ್ಯಾಕ
ಮನಸಿನ್ಯಾಗ
ದೇವದಾಸ ಆಗಿ
ತಿರುಗಾಡುತಿದ್ಧ್ಯಾ
ಬೇಡಿದ್ದು
ಸಿಗಲಾರದ್ದಕ್ಕ
ಈ ಜಗತ್ತಿನ್ಯಾಗ
ಹುಚ್ಚಾಗಿ ಸತ್ತವರ
ಸಾಲಿನ್ಯಾಗ ಸೇರತಿದ್ಯಾ…(೧೯)
ಮೇಲಿನ ಎರಡು ಶಾಯಿರಿಗಳನ್ನು ಓದಿದಾಗ ಭಗ್ನ ಪ್ರೇಮಿಯ ಮನದ ತಳಮಳ ಎದ್ದು ಕಾಣುತ್ತದೆ. ನಿನ್ನ ನೆನಪೆ ನನಗೆ ಖುಷಿ ಕೊಡುತ್ತದೆಂದು ಹೇಳುತ್ತಾ, ನೀನೆ ಎದುರಿಗೆ ಬಂದರೆ ನನ್ನ ಮನೆ ಮನಕೆ ಎಷ್ಟು ಖುಷಿ ಕೊಡುತ್ತಿತ್ತು ಎಂದು ಹೇಳುವ ಕವಿ ಬೇಡಿದೆಲ್ಲಾ ಸಿಕ್ಕರೆ ಈ ಜಗತ್ತಿನಾಗ ಎಲ್ಲರೂ ಖುಷಿಯಾಗಿ ಇರುತ್ತಿದ್ದರು.ನೀ ಸಿಗದೆ ನಾನು ಹುಚ್ಚನಾಗಿ ಪ್ರೇಮ ಜಗತ್ತಿನ ದೇವದಾಸನಾಗಿ ನಾನು ಸತ್ತು ಅಮರವಾಗುತಿದ್ದೇನೆಂದು ಕವಿ ಇಲ್ಲಿ ಪ್ರಿಯತಮೆಗೆ ಹೇಳುತ್ತಾನೆ.
@
ಕೊಲ್ಲಂಗಿದರ
ಒಮ್ಮೆ ಕೊಂದಬಿಡು
ಖುಷಿಯಿಂದ ನಿನ್ನ
ಕಣ್ತುಂಬಾ ನೋಡಿಕೆಂತ
ಜೀವ ಬಿಡೋನ
ಮರಿಬ್ಯಾಡ
ಕೊಲ್ಲಂಗು ಇಲ್ಲ
ಕೂಡಂಗು ಇಲ್ಲಂತ
ಒಣ ಮಾತಿನ್ಯಾಗ
ವ್ಯಾಳೆ ಹಾಳಮಾಡಿ
ದಿನಾ ಇಟೀಟೇ
ಜೀವಾ ತೆಗಿಬ್ಯಾಡ. (೧೬)
ಪ್ರೇಮ ಎಂಬುದು ಎರಡು ಹೃದಯಗಳನ್ನು ಕೂಡಿಸುತ್ತದೆ.ಜೀವ ತುಂಬಿ ರಂಗಿನ ಕನಸು ತೋರಿಸುತ್ತದೆ. ಅದೇ ಪ್ರೀತಿಸಿದ ಜೀವಿಗಳು ದೂರಾವಾದಾಗ ಪ್ರೇಮ ಹೃದಯದ ಭಾವನೆಗಳನ್ನು ಕೊಲ್ಲುತ್ತದೆ.ಬದುಕಿದ್ದರೂ ಜೀವಂತ ಶವವಾಗಿ ಬಾಳುತ್ತಿರುತ್ತಾರೆ.ಕೆಲವು ಸಾರಿ ಪ್ರೇಮಿಗಳು ಕೇವಲ ಮಾತಿನಲ್ಲಿಯೇ ಇರುಳು ಕಳೆದು ಬಿಟ್ಟಿರುತ್ತಾರೆ. ಅಗಲಿಕೆಯ ಸಮಯ ಬಂದಾಗ ಹಳಹಳಿಸುತ್ತಾ, ಕೇವಲ ಮಾತಿನಲ್ಲಿಯೇ ನಾವು ಸಮಯ ಕಳೆದೆವೆಂದು ಹೀಗೆ ಒಣ ಮಾತುಗಳನ್ನು ಆಡಿ ಪ್ರಾಣ ತೆಗಿಯ ಬೇಡವೆಂದು ಒಬ್ಬರಿಗೊಬ್ಬರು ಹೇಳಿ ಕೊಳ್ಳುತ್ತಾರೆ.
@
ಇಡೀ ಊರಿಗೆ
ತಿಳಿದಿದ್ದು ಈ
ನನ್ ಚೆಲುವಿಗಿ
ಯಾಕ ತಿಳವಲ್ದು
ಅಂತನಿ:
ನಾ ಅವಳಿಗೆ
ಹುಚ್ಚಾದದ್ದು
ತಿಳದೈತೋ ಇಲ್ಲೋ
ಅಂತ ತಲಿಮ್ಯಾಗ
ಕೈ ಹೊತ್ತು ಕುಂತಿನಿ. (೩೩)
ಪ್ರೀತಿಯೆಂಬ ಹುಚ್ಚಾಟ ಮುಚ್ಚಿ ಇಡಲು ಆಗುವುದಿಲ್ಲ. ಅದರ ಗಮಲು ಹರಡಿ ಎಲ್ಲರಿಗೂ ಗೊತ್ತಾಗುತ್ತದೆ.ಪ್ರೇಮಿಗಳು ಪ್ರೀತಿಸಿದ್ದ ಸುದ್ದಿ ಊರಿಗೆಲ್ಲ ಗೊತ್ತಾಗಿ ಜನರ ಬಾಯಲ್ಲಿ ಹರಿದಾಡುತ್ತದೆ. ಆದರೆ ಪ್ರಿಯತಮೆ ಅದು ತನಗೆ ಸಂಬಂಧವಿಲ್ಲದಂತೆ ತನ್ನಷ್ಟಕ್ಕೆ ತಾನೇ ಇರುತ್ತಾಳೆ.ಆದರೆ ಇವಳು ಯಾಕೆ ಹೀಗೆ ಮಾಡ್ತಾಳೆಂದು ಗೊತ್ತಾಗುವುದಿಲ್ಲವೆಂದು ಪ್ರಿಯತಮ ಅವಳಿಗಾಗಿ ತಾ ಹುಚ್ಚಾಗಿದ್ದು ಆಕೆಗೆ ಗೊತ್ತಾಗಿಲ್ಲ.ಯಾಕೆ ಹೀಗೆ ಕುಳಿತಿದ್ದಾಳೆಂದು ಪ್ರಿಯಕರ ಚಿಂತೆ ಮಾಡುತ್ತಾನೆ.
@
ನಿನ್ನ ಒಲವಿನ
ಚಿಂತೆಯಲಿ
ಹಗಲಿರುಳು ಮುಳಗಿ
ಉಳಿದ ಕೆಲಸ
ಮರೆತುಂಕುಂತಿನಿ;
ನೀ ನನ್ನ ಸಂಗಡ ಇದ್ದು
ಸಾಥ ಕೊಡುವ
ಮಾತು ಕೊಟ್ಟರೆ
ನಿನಗಾಗಿ
ಏನೆಲ್ಲಾ ಮಾಡಲು
ಸಿದ್ಧನಿದ್ದೀನಿ. (೬೧)
ಪ್ರೇಮಿ ಪ್ರಿಯತಮೆಯನ್ನು ನೆನೆಯುತ್ತಾ ಅವಳ ಧ್ಯಾನದಲ್ಲಿ ಹಗಲು ರಾತ್ರಿ ಮುಳುಗಿ ಯಾವ ಕೆಲಸ ಮಾಡದೆ ಸೋಮಾರಿಯಾಗಿ ಇರುತ್ತಾನೆ. ಅವಳು ಇವನ ಜೊತೆ ಸಾಥ ಕೊಟ್ಟರೆ ಅಥವಾ ಸಾಥ ಕೊಡುವೆನೆಂದು ಮಾತು ಕೊಟ್ಟರೆ ಪ್ರೇಮಿಯೂ ಉತ್ಸಾಹದಿಂದ ಎಲ್ಲಾ ಕೆಲಸವನ್ನು ಮಾಡಲು ಸಿದ್ಧವೆಂದು ಹೇಳುತ್ತಾನೆ. ಪ್ರೀತಿಯಲ್ಲಿ ಅಂತಹ ಶಕ್ತಿ ಇರುತ್ತದೆ.
@
ನೀನೇ ಹುಟ್ಟಿಸಿದ
ಕನಸುಗಳಿಗೆ
ನೀನೇ ಕೊಳ್ಳಿ
ಹಚ್ಚಬೇಕಿತ್ತೇ ಸಖಿ
ತಂತಿ ಹರಿದ
ವೀಣೆಯಾಗಿದೆ ಮನ
ಹೇಗೆ ಹಾಡ
ಹಾಡಿಸಲೀಗ ಸಖಿ (೭೮)
ಪ್ರೇಮಿಗಳು ಪ್ರೀತಿಯಲ್ಲಿ ಹತ್ತಾರು ಕನಸುಗಳನ್ನು ಕಾಣುತ್ತಿರುತ್ತಾರೆ.ಪ್ರಿಯತಮೆ ಪ್ರೇಮಿಗೆ ಮೋಸ ಮಾಡಿದಾಗ ಪ್ರಿಯತಮನ ಕನಸುಗಳು ಕರಗಿ ಹೋಗುತ್ತವೆ.ಪ್ರಿಯತಮೆಗೆ ಯಾಕೆ ಹೀಗೆ ನಮ್ಮ ಪ್ರೀತಿಯ ಕನಸುಗಳಿಗೆ ಕೊಳ್ಳಿ ಹಚ್ಚಿದೆ.ನೀನೇ ತೋರಿಸಿದ ಆ ಸುಂದರ ಕನಸು ಅವು, ನನ್ನ ಹೃದಯ ಈಗ ತಂತಿ ಹರಿದ ವೀಣೆಯಾಗಿದೆ ಅದು ಈಗ ಸಂತಸದಲ್ಲಿ ಹಾಡುವುದಿಲ್ಲವೆಂದು ಅಪಾರ ವೇದನೆಯಲ್ಲಿ ಭಗ್ನ ಪ್ರೇಮಿ ಹೇಳುತ್ತಾನೆ.
@
ಸಖಿ,
ಮತ್ಯಾಕೆ
ಹಚ್ಚುವೆ
ಆ ಮೊಂಬತ್ತಿ
ಬೆಳಗಾನ ಉರಿಸು
ನಿನ್ನ ಕಣ್ಣ ಕಾಂತಿ* (೯೧)
ಪ್ರೇಮಿಗಳಿಗೆ ಇರುಳು ಬಹಳ ಇಷ್ಟವಾದದ್ದು. ಇರುಳಿನ ಕತ್ತಲದಲ್ಲಿಯೇ ಇರ ಬಯಸುತ್ತಾರೆ. ಅದಕ್ಕಾಗಿ ಪ್ರಿಯತಮ ತನ್ನ ಪ್ರೇಮಿಗೆ ಹೇಳುತ್ತಾನೆ.ನೀನು ಮೊಂಬತ್ತಿ ಬೆಳಕು ಮಾಡಬೇಡ. ನಿನ್ನ ಕಣ್ಣ ಕಾಂತಿಯನ್ನು ಉರಿಸು ಬೆಳಗಾಗುವವರೆಗೆ ಎಂದು ನಾವು ಹೀಗೆ ಜೊತೆಯಾಗಿ ಇರೋಣವೆಂದು ತನ್ನ ಮನದ ಆಸೆಯನ್ನು ಬಿತ್ತರಿಸುತ್ತಾನೆ.
@
ಆಗ ಹುಡುಕುತ್ತಾ ಇದ್ದೆ
ಕಳೆದು ಕೊಂಡವಳ
ಕಣ್ಣ ಭಾಷೆಯನ್ನು
ಕಾಣುವ ಕಣ್ಣು
ಕಣ್ಣುಗಳಲ್ಲೆಲ್ಲಾ..
ಈಗಲೂ ಹುಡುಕುತ್ತೇನೆ
ಕಳೆದು ಕೊಂಡ
ಆ ಪ್ರೀತಿ ಪ್ರೇಮವನ್ನು
ದೂರವಾದ ಕಲ್ಲು
ಹೃದಯಗಳಲ್ಲಿಯಲ್ಲಾ…(೧೩೯)
ಪ್ರೇಮಿ ತಾರುಣ್ಯದಲ್ಲಿ ಕಳೆದುಕೊಂಡ ಅವಳ ಕಣ್ಣ ಭಾಷೆಯನ್ನು ಪ್ರತಿ ಕಣ್ಣಲ್ಲಿ ಹುಡುಕುತ್ತಿದ್ದ. ಈಗ ಭಗ್ನ ಪ್ರೇಮಿಗೆ ಜೀವನದ ಕೊನೆವರೆಗೂ ಆ ಕಳೆದು ಹೋದ ಕಣ್ಣುಗಳು ಸಿಗದೇ ಆ ಪ್ರೀತಿಗಾಗಿ ಆ ಕಣ್ಣ ಭಾಷೆಗಾಗಿ ಚಡಪಡಿಸುತ್ತಾ ಬದುಕು ಸಾಗಿಸುತ್ತಾನೆ. ಹೃದಯ ಕಲ್ಲು ಮಾಡಿಕೊಂಡು…
ಶ್ರೀ ಸಿದ್ದರಾಮ ಹೊನ್ಕಲ್ ಅವರ *ಹೊನ್ಕಲ್ ರ ಶಾಯಿರಿ ಲೋಕ* ಸಂಕಲನದಲ್ಲಿ ಇಂಥ ಅನೇಕ ಭಗ್ನ ಪ್ರೇಮಿಗಳ ಕನವರಿಕೆಗಳಿದ್ದು ಓದಿಸಿಕೊಂಡು ಹೋಗುತ್ತವೆ. ಕೆಲವು ಶಾಯಿರಿಗಳು ಚಿಂತನೆ ಹಚ್ಚಿದರೆ, ಕೆಲವು ಶಾಯಿರಿಗಳು ತರುಣರಿಗೆ ಹುಚ್ಚು ಹಿಡಿಸುತ್ತವೆ. ಹೊನ್ಕಲ್ ಅವರಿಂದ ಇನ್ನು ಅನೇಕ ಉತ್ತಮ ಕನ್ನಡ ಶಾಯಿರಿಗಳು ಹುಟ್ಟಿ ಕನ್ನಡ ಶಾಯಿರಿ ಸಾಹಿತ್ಯ ಲೋಕವನ್ನು ಸಮೃದ್ಧಿ ಪಡಿಸಲೆಂದು ಶುಭ ಹಾರೈಸುತ್ತಾ ನನ್ನ ಬರಹಕ್ಕೆ ವಿರಾಮ ಕೊಡುವೆ.
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ