ಅಂಕಣ : ಅಂತರಂಗದ ಅರಿವು- ೫
ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು
ಗರ್ವದಿಂದ ಮಾಡುವ
ಭಕ್ತಿ ದ್ರವ್ಯದ ಕೇಡು
ನಡೆಯಿಲ್ಲದ ನುಡಿ
ಅರಿವಿಂಗೆ ಹಾನಿ
ಕೊಡದೆ ತ್ಯಾಗಿ ಎನಿಸಿಕೊಂಬುದು
ಮುಡಿಯಿಲ್ಲದ ಶೃಂಗಾರ
ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ ಮಾರಯ್ಯಪ್ರಿಯ
ಅಮರೇಶ್ವರಲಿಂಗವ
ಮುಟ್ಟದ ಭಕ್ತಿ
-ಆಯದ ಅಕ್ಕಿ ಲಕ್ಕಮ್ಮ
ಈ ವಚನದಲ್ಲಿ ಭಕ್ತಿಯ ಕುರಿತಾಗಿ ಆಯ್ದಕ್ಕಿ ಲಕ್ಕಮ್ಮ ತನ್ನ ಅಭಿಪ್ರಾಯವನ್ನು ಹೀಗೆ ಮಂಡಿಸಿದ್ದಾಳೆ.
ಗರ್ಭದಿಂದ ಮಾಡುವ ಭಕ್ತಿ ದ್ರವ್ಯದ ಕೇಡು
ಭಕ್ತಿ ಎನ್ನುವುದು ದೇವನಲ್ಲಿ ಪರಿಶುದ್ಧ ಶರಣಾಗತಿ. ನಾನು ನನ್ನದು ಎನ್ನುವ ಅಹಂ ಭಾವದಿಂದ ಭಕ್ತಿಯನ್ನು ಮಾಡಲಾಗದು.
ಭಕ್ತನಾದವನು ಗರ್ವಿಷ್ಟನಾಗಿರಬಾರದು. ಗರ್ವದಿಂದ ಮಾಡಿದ ಭಕ್ತಿಯಿಂದ ಧನ ಸಂಪತ್ತು ಹಾಳಾಗುತ್ತದೆ. ಆಡಂಬರದ ಪೂಜೆ ಡಂಬಾಚಾರಗಳು ಭಕ್ತಿಯಾಗಲಾರದು. ನಾನು ಅನ್ನುವ ಗರ್ವ ಭಕ್ತಿ ಭಾವವನ್ನು ಹುಟ್ಟಿಸುವುದಿಲ್ಲ. ಕೆಲವರು
ಗುಡಿ ಕಟ್ಟಿಸುವುದು.ಬೆಳ್ಳಿ ಬಂಗಾರದ ಮೂರ್ತಿಗಳನ್ನು ಮಾಡುವುದು. ನೂರಾರು ಜನರಿಗೆ ಅನ್ನ ಪ್ರಸಾದ ಹಾಕಿಸುವುದನ್ನು ಮಾಡುವುದರ ಮೂಲಕ ತಾವು ಭಕ್ತ ಎಂದು ಗುರುತಿಸಿಕೊಳ್ಳ ಬಯಸುತ್ತಾರೆ. ಆದರೆ ಇದು ಗರ್ವದ ಭಕ್ತಿ.
ಇಂತಹ ಭಕ್ತಿಯಿಂದ ದೇವನಿಗೆ ಹತ್ತಿರವಾಗಲು ಸಾಧ್ಯವಿಲ್ಲ ಇದು ವ್ಯರ್ಥ ಪ್ರಯತ್ನ ಎನ್ನುತ್ತಾಳೆ.
ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ
ನಡೆ-ನುಡಿ ಒಂದಾಗಿರಬೇಕು ನಡೆಯೇ ಬೇರೆ ನುಡಿಯೇ ಬೇರೆ ಎಂದಾದರೆ ಅದು ಆ ವ್ಯಕ್ತಿ ಹೊಂದಿದ ಅರಿವನ್ನ ನಾಶ ಮಾಡುತ್ತದೆ. ಅರಿವು ಆಚಾರಗಳು ಒಂದಾಗಿರಬೇಕು.ಆಡುವುದೊಂದು ಮಾಡುವುದೊಂದು ಆದರೆ ಅದು ಮನುಷ್ಯನ ಅಂತರ ಪ್ರಜ್ಞೆ ಬಾಹ್ಯ ಚಟುವಟಿಕೆಗಳ ನಡುವೆ ಹೊಂದಾಣಿಕೆ ಇಲ್ಲದೆ ಹೋದರೆ.ಅರಿವು ನಾಶವಾಗುತ್ತದೆ.
ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿ ಇಲ್ಲದ ಶೃಂಗಾರ
ಪರೋಪಕಾರ ಮಾಡಿದವನು ತನ್ನನ್ನು ತಾನು ತ್ಯಾಗಿ ಎಂದು ಕರೆದುಕೊಂಡರೆ ಅದು ಅಪಹಾಸ್ಯಕ್ಕೆ ಗುರಿಯಾಗುತ್ತದೆ.
ಎಲ್ಲವನ್ನು ತೊರೆದವನನ್ನ ತ್ಯಾಗಿ ಎನ್ನುತ್ತೇವೆ.ಉದಾರ ಮನಸು ದಿನ ನೀಡಿ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಬೇಕು. ತ್ಯಾಗ ಉದಾತ್ತ ಮೌಲ್ಯ.ಅದನ್ನು ಅಳವಡಿಸಿಕೊಳ್ಳದೆ.
ಬಾಯಿ ಮಾತಿನಲ್ಲಿ ತನ್ನಷ್ಟಕ್ಕೆ ತಾನೇ ತ್ಯಾಗಿ ಎಂದುಸಕೊಳ್ಳುವುದು ಮುಡಿ ಇಲ್ಲದ ಶೃಂಗಾರ. ಎಷ್ಟೇ ಚೆನ್ನಾಗಿ ನಾವು ಶೃಂಗಾರ ಮಾಡಿಕೊಂಡರು ತಲೆಯಲ್ಲಿ ಕೂದಲು ಇಲ್ಲದಿದ್ದರೆ ಆ ಶೃಂಗಾರಕ್ಕೆ ಮೆರಗುಬಾರದು. ಹಾಗೆಯೇ ತ್ಯಾಗಿ ಎನಿಸಿಕೊಳ್ಳುವವನು ದಾನಮಾಡಬೇಕು.
ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಬದಲ್ಲಿ ಸುಜಲವ ತುಂಬ ತುಂಬಿದಂತೆ
ಭಕ್ತಿ ಯು ಭಾವವು ಚಂಚಲವಾಗಬಾರದು ಒಳಗಾಗಬಾರದು. ಭಕ್ತನಾದವನಿಗೆ ತಾನು ಆಚರಿಸುತ್ತಿರುವ ತತ್ವ, ಸಿದ್ಧಾಂತಗಳ ಬಗೆಗೆ ನಂಬಿಕೆ ಇರಬೇಕು. ಮತ್ತು ಅವಕ್ಕೆ ಬದ್ಧನಾಗಿರಬೇಕು.ತಾನು ನಡೆಯುತ್ತಿರುವ ಆಧ್ಯಾತ್ಮಿಕ ಸಾಧನೆಯ ಪತದ ಬಗ್ಗೆ ಅರಿವಿರಬೇಕು. ಗೊಂದಲಕ್ಕೆ ಒಳಗಾಗಬಾರದು.
ತನು ಮನ ತನ್ನ ನಡೆ-ನುಡಿಯಲ್ಲಿ ದೃಢ ಸಂಕಲ್ಪವನ್ನು ಹೊಂದಿರಬೇಕು ದೃಢ ಸಂಕಲ್ಪವಿಲ್ಲದವನ ಭಕ್ತಿ ತಳ ಒಡೆದ ಮಡಿಕೆಯಂತೆ ಆ ಮಡಿಕೆಯಲ್ಲಿ ಒಳ್ಳೆಯ ಜಲವನ್ನ ತುಂಬಲಾಗದು ತುಂಬಿದರು ಅದು ಸೋರಿ ಹೋಗುತ್ತದೆ
ಮಾರಯ್ಯಪ್ರಿಯ ಅಮರೇಶ್ವರ ಲಿಂಗವ ಮುಟ್ಟದ ಭಕ್ತಿ
ಅಂತಹ ಭಕ್ತಿಯಿಂದ ಅಮರೇಶ್ವರ ಲಿಂಗವನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಡಾಂಬಿಕ ಭಕ್ತಿಯ ಕುರಿತು ವಿಡಂಬನೆಯನ್ನು ಮಾಡುತ್ತಾಳೆ.
-ಡಾ. ನಿರ್ಮಲ ಬಟ್ಟಲ